ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು 'ಗಂಧೀಬಾತ್' ಪೋಸ್ಟರ್
ಗಂಧೀಬಾತ್ ವೆಬ್ ಸಿರೀಸ್ನಲ್ಲಿ ಲಕ್ಷ್ಮೀ ದೇವಿಯನ್ನು ಅವಮಾನ ಮಾಡುವ ಪೋಸ್ಟರ್ ವೈರಲ್ ಆಗುತ್ತಿದ್ದು, ದೇವಿಯನ್ನು ಅವಮಾನ ಮಾಡಿರುವ ಬಗ್ಗೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದೆ.
ಪ್ರಖ್ಯಾತ ಬಾಲಾಜಿ ಟೆಲಿಫಿಲಮ್ಸ್ ಏಕ್ತಾ ಕಪೂರ್ (Ekta Kapoor) ಒಡತಿಯಾಗಿರುವ ಏಕ್ತಾ ಕಪೂರ್ ಅವರದ್ದು ಕಿರುತೆರೆಯಲ್ಲಿ ಬಹುದೊಡ್ಡ ಹೆಸರು. ವೈಭವೋಪೇತ ಧಾರಾವಾಹಿ, ಭಿನ್ನ ಕತೆ, ದೊಡ್ಡ ನಟರನ್ನು ಪರಿಚಯಿಸಿದವರು ಏಕ್ತಾ ಕಪೂರ್. ಕಸೌಟಿ ಜಿಂದಗಿ ಕೀ, ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಬಡೇ ಅಚೇ ಲಗ್ತೇ ಹೈ, ಕಸಮ್ ಸೇ, ಪವಿತ್ರ ರಿಶ್ತಾ, ಕುಂಕುಮ್ ಭಾಗ್ಯ, ನಾಗಿನ್ ಮುಂತಾದ ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ. ಇವರ ಒಂದು ವಿಶೇಷತೆ ಎಂದರೆ, ಇವರ ಹಲವಾರು ಧಾರಾವಾಹಿಗಳು ಕ ಅಕ್ಷರದಿಂದ ಪ್ರಾರಂಭವಾಗುವಂಥದ್ದು. ಏಕ್ತಾ ಕಪೂರ್ ಈವರೆಗೆ 134 ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. 38 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 28 ವೆಬ್ ಸರಣಿಗಳನ್ನು (Web Series) ನಿರ್ಮಾಣ ಮಾಡಿದ್ದಾರೆ. ಕಿರುತೆರೆ ಮಾತ್ರವಲ್ಲದೇ ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿಯೂ ಛಾಪು ಮೂಡಿಸಿದ್ದಾರೆ. ಆದರೆ ಕಳೆದ ವರ್ಷ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ‘XXX’ ಎಂಬ ವೆಬ್ ಸರಣಿಯಿಂದ ಬಹಳ ವಿವಾದಕ್ಕೆ ಸಿಲುಕಿದ್ದು ನೆನಪಿರಬಹುದು. ಈ ವೆಬ್ಸಿರೀಸ್ನ ಹಲವು ದೃಶ್ಯಗಳಲ್ಲಿ ಸೈನಿಕರನ್ನು ಮತ್ತು ಅವರ ಕುಟುಂಬದವರನ್ನು ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕೆ ಇವರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು.
ಇದೀಗ ಏಕ್ತಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಎದುರಾಗಿದೆ. ಈ ಬಾರಿ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿರುವ ಆರೋಪ ಈಕೆಯ ಮೇಲೆ ಬಂದಿದೆ. ಹೌದು. ಈ ಬಾರಿ ಲಕ್ಷ್ಮಿ ದೇವಿಯನ್ನು ಹೋಲುವ ಮಹಿಳೆಯನ್ನು ಅತ್ಯಂತ ಕೆಟ್ಟದ್ದಾಗಿ ಬಿಂಬಿಸಿರುವ ಆರೋಪ ಈಕೆಯ ಮೇಲಿದೆ. ಗಂಧೀ ಬಾತ್ನ (Gandii Baat) 6ನೇ ಸರಣಿಯ ಪೋಸ್ಟರ್ ಬಗ್ಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಪೋಸ್ಟ್ನಲ್ಲಿ ತನ್ನ ಸೊಂಟದ ಬಳಿ ಕಮಲದ ಹೂವು ಮತ್ತು ಎರಡು ಬದಿಗಳಲ್ಲಿ ನವಿಲುಗಳೊಂದಿಗೆ ಬಾಯಿ ಮೇಲೆ ಬೆರಳಿಟ್ಟು ಹುಶ್ ಎಂದು ಹೇಳುತ್ತಿರುವ ಭಂಗಿಯಲ್ಲಿ ಭಾರತೀಯ ಉಡುಪನ್ನು ಧರಿಸಿರುವ ಮಹಿಳೆಯ ಚಿತ್ರವಿದೆ. ಆದರೆ ಇದು ಥೇಟ್ ಲಕ್ಷ್ಮಿದೇವಿಯನ್ನು ಹೋಲುವ ಚಿತ್ರವೆಂದು ನೆಟ್ಟಿಗರ ಅಭಿಮತ.
Happy Birthday: ಮದುವೆಯಾಗದ್ದಕ್ಕೆ ಅಪ್ಪ ಜಿತೇಂದ್ರರನ್ನೇ ದೂಷಿಸಿದ ಏಕ್ತಾ ಕಪೂರ್!
ಸಾಮಾನ್ಯವಾಗಿ ಎಲ್ಲಾ ಪೋಸ್ಟರ್ಗಳಲ್ಲಿ ಲಕ್ಷ್ಮಿದೇವಿ (Lakshmi Devi) ಹೇಗೆ ಕಮಲ ಮತ್ತು ನವಿಲಿನ ಬಳಿ ಇರುತ್ತದೆಯೋ ಅದೇ ರೀತಿ ಈ ಪೋಸ್ಟರ್ ಅನ್ನೂ ಬಿಂಬಿಸಲಾಗಿದ್ದು, ಆದರೆ ಧಾರ್ಮಿಕ ಭಾವನೆಗೆ ಕುಂದು ತರುವ ರೀತಿಯಲ್ಲಿ ದುರುದ್ದೇಶಪೂರ್ವಕವಾಗಿ ಚಿತ್ರೀಕರಿಸಲಾಗಿದೆ ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೊಳಕು ಮಹಿಳೆಯನ್ನು ಕಮಲದ ಮೇಲೆ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಇದು ಲಕ್ಷ್ಮೀ ದೇವಿಗೆ ಮಾಡಿ ಅಪಮಾನವಾಗಿದೆ. ನನಗೆ ಮಾತ್ರ ಇದು ಆಕ್ಷೇಪಾರ್ಹವೆಂದು ತೋರುತ್ತದೆಯೇ ಅಥವಾ ನಿಮ್ಮೆಲ್ಲರಿಗೂ ಆಕ್ಷೇಪಣೆಗಳಿವೆಯೇ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದು, ಅದಕ್ಕೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಮಪ್ರಚೋದಕತೆಯನ್ನು ಅನ್ವೇಷಿಸುವ ಕಥಾಹಂದರವನ್ನು ಗಂಧೀ ಬಾತ್ ಒಳಗೊಂಡಿದ್ದು, ಇದರಲ್ಲಿ ಲಕ್ಷ್ಮಿದೇವಿಗೆ ಮಾಡಿರುವ ಅವಮಾನವನ್ನು ಸಹಿಸುವುದಿಲ್ಲ ಎಂದು ಹಲವರು ಹೇಳುತ್ತಿದ್ದಾರೆ.
ಇನ್ನು ಇದೇ ಸಮಯದಲ್ಲಿ ವಿವಾದಾತ್ಮಕ ಮತ್ತು ಜನಪ್ರಿಯವಾಗಿರುವ ಗಂಧೀ ಬಾತ್ ಸರಣಿಯು ಪ್ರಸ್ತುತ ತನ್ನ ಏಳನೇ ಸೀಸನ್ ಅನ್ನು ಸ್ಟ್ರೀಮ್ ಮಾಡುತ್ತಿದೆ ಮತ್ತು ಅದನ್ನು ಸಚಿನ್ ಮೋಹಿತೆ ಎಂಬುವರು ನಿರ್ದೇಶಿಸಿದ್ದಾರೆ. ಈ ಸರಣಿಯ ಪ್ರತಿಯೊಂದು ಸಂಚಿಕೆಯು ಗ್ರಾಮೀಣ ಭಾರತದ ಕಾಮಪ್ರಚೋದಕ ವಿಷಯದ ಕಥೆಯನ್ನು ಒಳಗೊಂಡಿದೆ. ಇದು ಜಿಯೋ ಸಿನಿಮಾದಲ್ಲೂ ಸ್ಟ್ರೀಮ್ ಆಗುತ್ತದೆ. ಆಲ್ಟ್ ಬಾಲಾಜಿ ಒಟಿಟಿ ವೇದಿಕೆ ಏಕ್ತಾ ಕಪೂರ್‌ಗೆ ಸೇರಿದ್ದಾಗಿದ್ದು, ಅದರಿಂದ ಇಂಥ ಪೋಸ್ಟರ್ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಈ ವರ್ಷದ ಆರಂಭದಲ್ಲೇ ಏಕ್ತಾ ಕಪೂರ್ ಆಲ್ಟ್ ಬಾಲಾಜಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ್ದಾರೆ ಎಂದು ವರದಿಯಾಗಿದೆ. ವಿವೇಕ್ ಕೋಕಾ (Vivek Koka) ಅವರನ್ನು ಹೊಸ ಮುಖ್ಯ ವ್ಯವಹಾರ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಕಂಪನಿ ಪ್ರಕಟಿಸಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ.
ನಕಲಿ 'ಪ್ರಿಯಾಂಕಾ ಚೋಪ್ರಾ' ನೋಡಿ ಪತಿ ಸುಸ್ತು! ಮಮ್ಮಾ ಎಂದ ಮಗಳು...