ಕರ್ನಾಟಕದ ಅಳಿಯ ಬಾಲಿವುಡ್ ನಟ ವಿವೇಕ್ ಒಬೆರಾಯ್ ಚಿತ್ರರಂಗದಲ್ಲಿ ನಡೆಯುವ ಕೆಲವೊಂದು ಸತ್ಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಯಾರಿಗೂ ಅಂಜದ ಈ ವಿವೇಕ್‌ ಇತ್ತೀಚಿಗೆ ಕೆಲವರಿಗೆ 'Ostrich Syndrome' ಬಂದಿರುವುದಾಗಿ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ಪ್ರತಿಯೊಬ್ಬ ವ್ಯಕ್ತಿಗೂ, ಒಂದು ಉದ್ಯಮಕ್ಕೂ ಒಳ್ಳೆ ಮುಖ ಹಾಗೂ ಕೆಟ್ಟ ಮುಖಗಳು ಇರುತ್ತವೆ. ನಮ್ಮಲ್ಲಿ ಎಷ್ಟು ತಪ್ಪಿವೆ, ಎಷ್ಟು ತಪ್ಪು ಬೇಕೆಂದೇ ಮಾಡಿದ್ದೇವೆ? ಎಷ್ಟು ಅನ್ಯಾಯ ಮಾಡಿದ್ದೇವೆ, ಎಷ್ಟು ಕೊರತೆ ಇದೆ ಎಂದು ನಾವೇ ಗುರುತಿಸಿಕೊಳ್ಳಬೇಕು ಹಾಗೂ ತಪ್ಪನ್ನು ಒಪ್ಪಿಕೊಳ್ಳಬೇಕು. ಕಳೆದ ವರ್ಷ ಸುಶಾಂತ್ ಸಿಂಗ್ ಘಟನೆ ಆದಾಗಲೂ ಅಷ್ಟೆ, ನಮ್ಮ ಚಿತ್ರರಂಗದಲ್ಲಿ ವ್ಯವಸ್ಥೆಯಲ್ಲಿಯೇ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳಲು ಯಾರೂ ತಯಾರಿರಲಿಲ್ಲ. ಇದೊಂದು ಸಾಮಾನ್ಯ ಘಟನೆ ಎಂಬ ರೀತಿಯಲ್ಲಿ ವರ್ತಿಸಿ ಮರೆತುಬಿಟ್ಟರು. ನಮ್ಮಲ್ಲಿ ಕೆಲವರಿಗೆ ಆಸ್ಟ್ರಿಚ್ ಸಿಂಡ್ರೋಮ್ ಇದೆ. ಹೀಗಾಗಿ ಕೆಟ್ಟ ವ್ಯವಸ್ಥೆ ಹೀಗೆಯೇ ಮುಂದುವರೆದಿದೆ' ಎಂದು ವಿವೇಕ್ ಮಾತನಾಡಿದ್ದಾರೆ. 

ವ್ಯಾಲೆಂಟೈನ್ಸ್ ಡೇ ರೊಮ್ಯಾಂಟಿಕ್ ಬೈಕ್ ರೈಡ್‌ - ವಿವೇಕ್ ಒಬೆರಾಯ್‌ಗೆ ದಂಡ! 

ವಿವೇಕ್‌ಗೆ ಕಮಲ್ ಸಾಥ್:
ನಟ ವಿವೇಕ್ ಸಂದರ್ಶನ ವೈರಲ್ ಆಗುತ್ತಿದ್ದಂತೆ, ನಟ ಕಮಲ್ ಬಿ ಖಾನ್ ಟ್ಟೀಟ್ ಮಾಡಿದ್ದಾರೆ.  'ಅದ್ಭುತವಾಗಿ ಮಾತನಾಡಿದ್ದೀರಿ. ಇದೇ ಸತ್ಯ' ಎಂದಿದ್ದಾರೆ.  'ನನ್ನ ಬಾಲಿವುಡ್ ಗೆಳೆಯರೇ, ಚಿತ್ರರಂಗದಲ್ಲಿ ನಡೆಯುತ್ತಿರುವ ಬಾಯ್ ಗಿರಿ ಬಗ್ಗೆ ನಿಮಗೆ ಬೇಸರವಿದ್ದರೆ, ದಯವಿಟ್ಟು ಮಾತನಾಡಿ ಹೆದರಿಕೊಳ್ಳಬೇಡಿ. ಯಾರಿಂದಲೂ ನಿಮ್ಮ ವೃತ್ತಿ ಜೀವನ ನಾಶ ಮಾಡಲು ಆಗುವುದಿಲ್ಲ.ಅವರ ಕೆಲಸದ ಬಗ್ಗೆ ಅವರೇ ನಂಬಿಕೆ ಕಳೆದುಕೊಂಡಿರುವಾಗ ಹೇಗೆ ನಿಮ್ಮ ಕೆಲಸ ಹಾಳು ಮಾಡಲು ಸಾಧ್ಯ?' ಎಂದು ಟ್ಟೀಟ್ ಮಾಡುವ ಮೂಲಕ ಬಾಲಿವುಡ್ ನಟ ಸಲ್ಮಾನ್ ಖಾನ್‌ ಅವರನ್ನು ಎದುರು ಹಾಕಿಕೊಂಡಿದ್ದಾರೆ. ಸಲ್ಮಾನ್ ಈ ಹಿಂದೆ ಕಮಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. 

ವಿವೇಕ್ ಕರ್ನಾಟಕ ಅಳಿಯ ಆಗಿರುವುದರಿಂದ ಕನ್ನಡಿಗರಿಗೆ ಕೊಂಚ ಹತ್ತಿರವಾಗುತ್ತಾರೆ. ದಿವಂಗತ ಜೀವರಾಜ್ ಆಳ್ವರ ಪುತ್ರಿ ಪ್ರಿಯಾಂಕಾರನ್ನು ವಿವೇಕ್ ಮದುವೆಯಾಗಿದ್ದಾರೆ.  ಶಿವರಾಜ್‌ಕುಮಾರ್ ಅಭಿನಯದ 'ರುಸ್ತುಂ' ಚಿತ್ರದಲ್ಲಿಯೂ ವಿವೇಕ್ ಅಭಿನಯಿಸಿದ್ದಾರೆ.

ನಟಿ ಕಂಗನಾ ರಣಾವತ್ ಬಳಿ ತೆರಿಗೆ ಕಟ್ಟಲು ಹಣವಿಲ್ಲ!

ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎಂ.ಎಸ್.ಧೋನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದರು. ಅದ್ಭುತ ಪ್ರತಿಭೆ, ದೊಡ್ಡ ಕನಸನ್ನು ಹೊಂದಿದ್ದ ಸುಶಾಂತ್ ಸಾವು ಬಾಲಿವುಡ್‌ನಲ್ಲಿ ಇರುವ ಸ್ವಜನಪಕ್ಷಪಾತದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಹಲವರು ಈ ಬಗ್ಗೆ ಧ್ವನಿ ಎತ್ತಿದ್ದರೂ, ಮತ್ತೆ ಕೆಲವರು ಮೌನವಾಗಿಯೇ ಉಳಿದರು. ಕೆಲವು ದಿನಗಳ ಕಾಲ ಈ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದವು. ಅದರಲ್ಲಿಯೂ ವಿಶೇಷವಾಗ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ಕಟು ಮಾತುಗಳಿಂದ ಕರಣ್ ಜೋಹಾರ್ ಸೇರಿ ಹಲವನ್ನು ಎದುರು ಹಾಕಿಕೊಂಡು ಸುದ್ದಿಯಾದರು. ಆದರೆ, ವ್ಯವಸ್ಥೆ ಅಷ್ಟು ಸುಲಭವಾಗಿ ಸರಿ ಹೋಗುವುದು ಕಷ್ಟ ಎಂದು ಇದೀಗ ವಿವೇಕ್ ಮಾತಿನಿಂದ ಸಾಬೀತಾದಂತೆ ಆಗಿದೆ.