ಡೆಡ್ಲಿ ಕೊರೋನಾ ವೈರಸ್‌ ಮೂರನೇ ಹಂತ ತಲುಪುವ ಮುನ್ನವೇ ಭಾರತ ಸರ್ಕಾರ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದೆ. ಇದರ ಪರಿಣಾಮ ಚಿತ್ರೀಕರಣವಿಲ್ಲದೆ ತಾರೆಯರು ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಹೇಗಾದರೊ ದಿನ ಕಳೆಯಬೇಕೆಂದು ವರ್ಕೌಟ್‌ ಮಾಡುತ್ತಿದ್ದರೆ, ಇತ್ತ ಅದನ್ನು ವೀಕ್ಷಿಸಿ ನಿರ್ದೇಶಕಿಯೊಬ್ಬರು ಕಿಡಿಕಾಡಿದ್ದಾರೆ!

ಚಿತ್ರೀಕರಣ ಹಾಗೂ ಖಾಸಗಿ ಕಾರ್ಯಕ್ರಮಗಳು ಸಂಪೂರ್ಣವಾಗಿ ರದ್ದಾಗಿರುವ ಕಾರಣ ಸಿನಿ ತಾರೆಯರು ಮನೆಯಲ್ಲಿ ವಿಭಿನ್ನ ಕೆಲಸಗಳನ್ನು ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವು ತಾರೆಯರು ತಮ್ಮ ಮುಖದ ಸೌಂದರ್ಯದ ಬಗ್ಗೆ ಹಾಗೂ ಫಿಟ್ನೆಸ್‌ ಬಗ್ಗೆ ಹೆಚ್ಚಿನ ನಿಗಾ ಇಡುತ್ತಿದ್ದಾರೆ.

ತಮ್ಮ ನೆಚ್ಚಿನ ಸಿನಿಮಾ ಸ್ಟಾರ್ ಏನು ಮಾಡುತ್ತಿದ್ದಾರೆ, ಹೇಗೆ ಟೈಂ ಪಾಸ್‌ ಮಾಡುತ್ತಿದ್ದಾರೆ ಎಂದು ಕುತೂಹಲದಲ್ಲಿ ಸೋಷಿಯಲ್‌ ಮೀಡಿಯಾ ಹುಡುಕುತ್ತಿರುವ ನೆಟ್ಟಿಗರಿಗೆ ಉತ್ತರ ಸಿಕ್ಕಿದ್ದು ಒಂದೇ ಅದು ವರ್ಕೌಟ್‌. ಹೌದು! ಅದರಲ್ಲೂ ಬಾಲಿವುಡ್‌ ಸೆಲೆಬ್ರಿಟಿಗಳು ವರ್ಕೌಟ್‌ ಮಾಡುವ ಮೂಲಕ ಟೈಂ ಪಾಸ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ತಮ್ಮ ಅಭಿಮಾನಿಗಳು ನೋಡಲಿ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. 

ಕೋವಿಡ್19 ವಿರುದ್ಧ ಹೋರಾಟ: ಮನೆಯನ್ನೇ ಆಸ್ಪತ್ರೆ ಮಾಡಲು ಕಮಲ್ ನಿರ್ಧಾರ!

ಕೊರೋನಾ ವೈರಸ್‌ ಬಗ್ಗೆ ಚಿಂತೆ ಇಲ್ಲದೇ, ಹೀಗೆ ಮಾಡುತ್ತಿದ್ದಾರೋ ಇಲ್ವೋ ಗೊತ್ತಿಲ್ಲ. ಆದರೆ ಇದರ ಬಗ್ಗೆ ಖ್ಯಾತ ನಿರ್ದೇಶಕಿ ಫರಾಹ್‌ ಖಾನ್‌ ವಿಡಿಯೋ ಮಾಡಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. 'ಇದು ನನ್ನ ಹಂಬಲ್‌ ರಿಕ್ವೆಸ್ಟ್‌ . ಎಲ್ಲಾ ಸೆಲೆಬ್ರಿಟಿಗಳು ಹಾಗೂ ಸ್ಟಾರ್‌ಗಳು ದಯವಿಟ್ಟು ವರ್ಕೌಟ್‌ ಮಾಡುತ್ತಿರುವ ವಿಡಿಯೋಗಳನ್ನು ಶೇರ್ ಮಾಡುವುದನ್ನು ಮೊದಲು ನಿಲ್ಲಿಸಿ. ಇಡೀ ದೇಶವೇ ಏನು ಮಾಡುವುದು, ಹೇಗೆ ಕೊರೋನಾ ಹೊಗಲಾಡಿಸುವುದು ಎಂದು ಚಿಂತಿಸುತ್ತಿದ್ದರೆ, ನೀವು ನಿಮ್ಮ ಫಿಗರ್‌ ಬಗ್ಗೆ ತೆಲೆ ಕೆಡಿಸಿಕೊಂಡಿದ್ದೀರಾ? ನಿಮ್ಮಗಿಲ್ಲದಿದ್ದರೂ ನಮ್ಮಂಥ ಎಷ್ಟೋ ಜನರಿಗೆ ಅದರ ಬಗ್ಗೆ ಚಿಂತೆ ಇದೆ. ನೀವು ವಿಡಿಯೋ ಅಪ್ಲೋಡ್‌ ಮಾಡುವುದನ್ನು ನಿಲ್ಲಿಸಿಲ್ಲ ಅಂದ್ರೆ ನಾನು ನಿಮ್ಮನ್ನು ಎನ್‌ಫಾಲೋ ಮಾಡುತ್ತೇನೆ. ಆಗ ನೀವು ಬೇಜಾರು ಮಾಡಿಕೊಳ್ಳಬಾರದು,' ಎಂದು ಮಾತನಾಡಿದ್ದಾರೆ.

View post on Instagram

ಈಗಾಗಲೇ ಭಾರತದೆಲ್ಲೆಡೆ ಕೊರೋನಾ ಸೋಂಕು700ಕ್ಕೆ ತಲುಪಿದೆ. ಸಾವಿನ ಸಂಖ್ಯೆ 16 ಮುಟ್ಟಿದೆ. ಈ ಚಿಂತೆ ಇಲ್ಲದೆ ತಮ್ಮದೇ ಲೋಕದಲ್ಲಿ ಕಾಲ ಕಳೆಯುತ್ತಿರುವ ಸ್ಟಾರ್‌ಗಳಿಗೆ ಫರಾಹ್‌ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ ಎಂಬುದು ನೆಟ್ಟಿಗರ ಮಾತು. ಆದರೆ, ಇವರು ಏನು ಹೇಳಲು ಇಚ್ಛಿಸುತ್ತಿದ್ದಾರೆಂಬುವುದು ಸ್ಪಷ್ಟವಾಗಿಲ್ಲ. ಮನೆಯಲ್ಲಿಯೇ ಕೂತು, ದೇಹ ಜಡ ಹಿಡಿಯೋ ಮುನ್ನ ವರ್ಕ್ ಔಟ್ ಮಾಡಿ, ತಮ್ಮ ಶರೀರ ಹಾಗೂ ಮಾನಸಿಕ ಆರೋಗ್ಯವನ್ನು ಸ್ವಸ್ಥವಾಗಿಡುವುದು ಈಗಿನ ತುರ್ತು. ಕೂತಲ್ಲೇ ಕೂರುವುದಕ್ಕಿಂತ ಏನಾದರೂ ಮಾಡುವುದು ಒಳಿತು. 

ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕ ಬಲ ತುಂಬಿದ ಪವನ್ ಕಲ್ಯಾಣ್

ಆದರೆ, ಪರಾಹ್ ಅವರು ಸೆಲೆಬ್ರಿಟಿಗಳಿಂದ ಸರ್ಕಾರಕ್ಕೆ ಆರ್ಥಿಕ ಸಹಾಯ ನೀಡುವ ಸಂಬಂಧ ಏನೋ ಹೇಳುತ್ತಿರಬಹುದು ಎನಿಸುತ್ತೆ. ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಪವನ್ ಕಲ್ಯಾಣ್, ಪ್ರಭಾಸ್ ಸೇರಿ ಹಲವು ತಾರೆಯರು ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡಿಲು ಮುಂದಾಗಿದ್ದಾರೆ. ಇದೇ ಔದಾರ್ಯವನ್ನು ಎಲ್ಲರೂ ತೋರಿದರೆ ಒಳಿತು.