ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಕ್ಷಯ್ ಕುಮಾರ್ ತಾಯಿ. ಲಂಡನ್‌ನಲ್ಲಿ ಶೂಟಿಂಗ್‌ನಲ್ಲಿದ್ದ ನಟ ಮರಳಿ ತವರಿಗೆ.

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್, ಪ್ರತಿ ವರ್ಷವೂ ಫೋಬ್ಸ್ ಸಿರಿವಂತ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಆರೋಗ್ಯ ಹದಗೆಟ್ಟ ಕಾರಣದಿಂದ ಲಂಡನ್‌ನಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದ ಅಕ್ಷಯ್ ಮುಂಬಯಿಗೆ ಮರಳಿದ್ದಾರೆ. 

ಈ ಕಾರಣಕ್ಕೆ ಸಿನಿಮಾವನ್ನೇ ತೊರೆದ ಅಕ್ಷಯ್‌ಕುಮಾರ್‌ ಪತ್ನಿ ಟ್ವಿಂಕಲ್‌!

ವರದಿಗಳ ಪ್ರಕಾರ ಅರುಣಾ ಭಾಟಿಯಾ ಮುಂಬೈನ ಹಿರಾನಂದಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಕೆಲವು ದಿನಗಳಿಂದ ಅರುಣಾ ಭಾಟಿಯಾ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈಗ ಮುಂಬೈನ ಹಿರಾನಂದಾನಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಕ್ಷಯ್ ಅವರಿಗೆ ತಾಯಿ ಕಂಡ್ರೆ ಪ್ರಾಣ. ಅವರ ಆರೋಗ್ಯ ಬಗ್ಗೆ ತಿಳಿಯುತ್ತಿದ್ದಂತೆ ,ಭಾರತಕ್ಕೆ ವಾಪಸ್ ಬಂದಿದ್ದಾರೆ,' ಎಂದು ಅಕ್ಷಯ್ ಆಪ್ತರೊಬ್ಬರು ಮಾತನಾಡಿದ್ದಾರೆ.

'ಸಿಂಡ್ರೆಲ್ಲಾ' ಸಿನಿಮಾ ಚಿತ್ರೀಕರಣಕ್ಕೆಂದು ಅಕ್ಷಯ್ ಕುಮಾರ್ ಕೆಲವು ದಿನಗಳಿಂದ ಲಂಡನ್‌ನಲ್ಲಿದ್ದಾರೆ. ತಾಯಿ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆ ಭಾರತಕ್ಕೆ ಹಿಂದಿರುಗಿದ್ದಾರೆ. ನಮ್ಮ ಅವಶ್ಯಕತೆ ಇಲ್ಲದ ಸೀನ್‌ಗಳ ಚಿತ್ರೀಕರಣ ಮಾಡಿಕೊಳ್ಳುವಂತೆ ತಂಡಕ್ಕೆ ಹೇಳಿದ್ದಾರಂತೆ. ಈ ಹಿಂದೆ ತಾಯಿ ಜೊತೆ ಸಮಯ ಕಳೆಯುತ್ತಿರುವುದರ ಬಗ್ಗೆ ಅಕ್ಷಯ್ ಪೋಸ್ಟ್ ಹಂಚಿಕೊಂಡಿದ್ದರು.

'ಲಂಡನ್‌ನಲ್ಲಿ ತಾಯಿಯ ಜೊತೆಗೆ ಕೆಲವು ಸಮಯ ಕಳೆಯಲು ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದೇನೆ. ನೀವು ಎಷ್ಟೇ ಬ್ಯುಸಿಯಾಗಿರಬಹುದು, ಎಷ್ಟೇ ಎತ್ತರಕ್ಕೆ ಬೆಳೆಯುತ್ತಿರಬಹುದು. ನಿಮ್ಮ ತಂದೆ ತಾಯಿಗೂ ಕೂಡ ವಯಸ್ಸಾಗುತ್ತಿದೆ ಎಂಬುದನ್ನು ಮರೆಯಬೇಡಿ. ಬಿಡುವು ಮಾಡಿಕೊಂಡು ನಿಮ್ಮ ತಂದೆ ತಾಯಿ ಜೊತೆಗೆ ಕಾಲ ಕಳೆಯಿರಿ,' ಎಂದು ಅಕ್ಷಯ್ ಬರೆದುಕೊಂಡಿದ್ದರು.