ಕಂಗನಾ ಅವರಿಗೆ ಭದ್ರತೆ ನೀಡುವ ವಿಷಯವನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಪ್ರಕಟಿಸಿತು. ಇದಕ್ಕೆ ಧನ್ಯವಾದ ಹೇಳಿರುವ ಕಂಗನಾ, ‘ನನ್ನ ದೇಶಭಕ್ತಿಯನ್ನು ಯಾರೂ ಹೊಸಕಿ ಹಾಕಲು ಸಾಧ್ಯವಿಲ್ಲ. ನನಗೆ ಭದ್ರತೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.

ಕಂಗನಾ ಅವರು ಈಗ ಹಿಮಾಚಲದ ತವರೂರಿನಲ್ಲಿದ್ದು, ಸೆ.9ರಂದು ಮುಂಬೈಗೆ ಭೇಟಿ ನೀಡುವವರಿದ್ದಾರೆ. ಆದರೆ ಶಿವಸೇನೆಯಿಂದ ಬೆದರಿಕೆ ಇರುವ ಕಾರಣ ಭದ್ರತೆ ಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಿದ್ದರು. ಈ ನಡುವೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಮಾಚಲ ಮುಖ್ಯಮಂತ್ರಿ ಜೈರಾಂ ಠಾಕೂರ್‌, ‘ರಾಜ್ಯವು ಕಂಗನಾ ಅವರ ತವರೂರಿನ ನಿವಾಸ ಹಾಗೂ ಅವರ ತಂದೆ-ತಾಯಿಗೆ 24 ಗಂಟೆಯೂ ಭದ್ರತೆ ನೀಡಲಿದೆ’ ಎಂದಿದ್ದಾರೆ.

 

ಬಿಜೆಪಿ ಮುಖಂಡ ರಾಮ ಕದಂ ಅವರು, ‘ಬಾಲಿವುಡ್‌ ಡ್ರಗ್ಸ್‌ ಮಾಫಿಯಾ ಬಯಲಿಗೆಳೆದಿರುವ ಕಂಗನಾ ಅವರಿಗೆ ಮಹಾರಾಷ್ಟ್ರ ಸರ್ಕಾರ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದ್ದರು. ಇದಕ್ಕೆ ಕಂಗನಾ ಪ್ರತಿಕ್ರಿಯಿಸಿ, ‘ಮುಂಬೈ ಪೊಲೀಸರು ಮೂವಿ ಮಾಫಿಯಾಗಿಂತ ಮಿಗಿಲು. ನನಗೆ ಹಿಮಾಚಲ ಅಥವಾ ಕೇಂದ್ರದ ಭದ್ರತೆ ಬೇಕು’ ಎಂದಿದ್ದರು.

'ಮುಂಬೈಗೆ ಬಂದಿಳಿಯುತ್ತಿದ್ದೇನೆ, ಧಮ್ ಇದ್ರೆ ತಡೀರಿ'

ಇದರಿಂದ ಕ್ರುದ್ಧರಾಗಿದ್ದ ಶಿವಸೇನೆ ನಾಯಕ ಸಂಜಯ ರಾವುತ್‌, ‘ಕಂಗನಾ ಅವರು ಮುಂಬೈಗೆ ಬರಬಾರದು ಎಂದು ಕೋರುತ್ತೇವೆ. ಅವರ ಹೇಳಿಕೆ ಮುಂಬೈ ಪೊಲೀಸರಿಗೆ ಅವಮಾನ’ ಎಂದಿದ್ದರು. ಇದಕ್ಕೆ ಕಂಗನಾ ಪ್ರತಿಕ್ರಿಯಿಸಿ, ‘ಮುಂಬೈ ಇಂದು ಪಾಕ್‌ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ.’ ಎಂದು ರಾವುತ್‌ಗೆ ತಿರುಗೇಟು ನೀಡಿದ್ದರು. ಅಂದಿನಿಂದ ಕಂಗನಾ ವಿರುದ್ಧ ಶಿವಸೈನಿಕರು ಪ್ರತಿಭಟನೆ ಆರಂಭಿಸಿದ್ದರು.