ಕಿನ್ನರ ಅಖಾಡದ ಸಂಸ್ಥಾಪಕ ಋಷಿ ಅಜಯ್ ದಾಸ್ ಅವರು ಮಹಾಮಂಡಲೇಶ್ವರ ಸ್ಥಾನದಿಂದ ಮಮತಾ ಕುಲಕರ್ಣಿಯನ್ನು ವಜಾಗೊಳಿಸಿದ್ದಾರೆ ಮತ್ತು ಅಖಾಡದಿಂದಲೂ ಹೊರಹಾಕಿದ್ದಾರೆ.

ಪ್ರಯಾಗ್‌ರಾಜ್: ಮಹಾಕುಂಭ ಮೇಳ ನಡೆಯುತ್ತಿರುವ ಸಂದರ್ಭದಲ್ಲಿ ಕಿನ್ನರ ಅಖಾಡ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕಿನ್ನರ ಅಖಾಡದ ಸಂಸ್ಥಾಪಕರಾಗಿರುವ ಋಷಿ ಅಜಯ್ ದಾಸ್ ಅ ಅವರು ಮಹಾಮಂಡಲೇಶ್ವರ ಸ್ಥಾನದಿಂದ ಮಮತಾ ಕುಲಕರ್ಣಿಯನ್ನು ವಜಾಗೊಳಿಸಿದ್ದಾರೆ. ಇಷ್ಟು ಮಾತ್ರವಲ್ಲ ಮಮತಾ ಕುಲಕರ್ಣಿಯನ್ನು ಅಖಾಡದಿಂದಲೂ ಹೊರಗೆ ಹಾಕಲಾಗಿದೆ. ಶೀಘ್ರದಲ್ಲಿಯೇ ಕಿನ್ನರ ಅಖಾಡಕ್ಕೆ ಹೊಸ ಮಹಾಮಂಡಲೇಶ್ವರ ಸಿಗಲಿದ್ದು, ಹೊಸ ಅಖಾಡವನ್ನು ಪುನರ್‌ ಸಂಘಟನೆ ಮಾಡಲಾಗುವುದು ಎಂದು ಋಷಿ ಅಜಯ್ ದಾಸ್ ಹೇಳಿದ್ದಾರೆ. 

ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಸನ್ಯಾಸತ್ವ ತೆಗೆದುಕೊಳ್ಳುತ್ತಿರೋದಾಗಿ ಘೋಷಣೆ ಮಾಡಿದ್ದರು. ಮಹಾಕುಂಭದಲ್ಲಿ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಡಾ. ಲಕ್ಷ್ಮೀ ನಾರಾಯಾಣ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ಬಳಿಕ ಸಂಗಮ ಕ್ಷೇತ್ರದಲ್ಲಿ ಪಿಂಡ ಪ್ರದಾನ ಮಾಡಿದ್ದರು. ಆನಂತರ ಕಿನ್ನರ ಅಖಾಡದಲ್ಲಿ ಮಮತಾ ಕುಲಕರ್ಣಿ ಅವರಿಗೆ ರಾಜ್ಯಾಭಿಷೇಕ ಮಾಡಲಾಗಿತ್ತು. ಸನ್ಯಾಸತ್ವ ಸ್ವೀಕರಿಸಿದ ಬಳಿಕ ಮಮತಾ ಕುಲಕರ್ಣಿ ಅವರಿಗೆ 'ಶ್ರೀ ಯಮಯಿ ಮಮತಾ ನಂದ ಗಿರಿ' ಎಂದು ಹೆಸರಿಡಲಾಗಿತ್ತು. ನಂತರ ಕಿನ್ನರ ಅಖಾಡದ ಮಹಾಮಂಡಲೇಶ್ವರ ಸ್ಥಾನಕ್ಕೆ ನಿಯೋಜನೆ ಮಾಡಲಾಗಿತ್ತು. 

ಮಮತಾ ಕುಲಕರ್ಣಿ ಅವರಿಗೆ ಮಹಾಮಂಡಲೇಶ್ವರ ಸ್ಥಾನ ನೀಡಿದ್ದಕ್ಕೆ ಕಿನ್ನರ ಅಖಾಡದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು ಮತ್ತು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಬಾಬಾ ರಾಮದೇವ ಅವರು ಸಹ ಮಮತಾ ಕುಲಕರ್ಣಿಗೆ ಮಹಾಮಂಡಲೇಶ್ವರ ಪದವಿ ನೀಡಿರೋದನ್ನು ಪ್ರಶ್ನೆ ಮಾಡಿದ್ದರು. ಕೆಲವರು ನಿನ್ನೆಯವರೆಗೂ ಸಾಂಸಾರಿಕ ಸುಖದಲ್ಲಿದ್ದರು. ಸನ್ಯಾಸತ್ವ ಸ್ವೀಕರಿಸಿದ ಒಂದೇ ದಿನದಲ್ಲಿಯೇ ಮಹಾಮಂಡಲೇಶ್ವರ ಅಂತಹ ಸ್ಥಾನಮಾನದ ದೊರಕಿದೆ ಎಂದು ಬಾಬಾ ರಾಮದೇವ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಎಲ್ಲಾ ಮುಗಿದ್‌ ಮೇಲೆ ಸನ್ಯಾಸತ್ವದತ್ತ ಮನಸ್ಸು ಮಾಡಿದ್ರ ನಟಿ ಮಮತಾ ಕುಲಕರ್ಣಿ:ಕುಂಭಮೇಳದ ವೀಡಿಯೋ ವೈರಲ್

ಮಹಾಮಂಡಲೇಶ್ಚರ ಸ್ಥಾನದಿಂದ ಮಮತಾ ಕುಲಕರ್ಣಿಯವರನ್ನು ವಜಾಗೊಳಿಸಿರುವ ಅಜಯ್ ದಾಸ್, ಮಹಿಳೆಯರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರನ್ನಾಗಿ ನೇಮಕ ಮಾಡಿರೋದು ನಮ್ಮ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. 

12 ವರ್ಷ ಬ್ರಹ್ಮಚರ್ಯ ಪಾಲನೆ
ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಮಮತಾ ಕುಲಕರ್ಣಿ, ನಾನು ಭಾರತವನ್ನು ತೊರೆಯಲು ಆಧ್ಯಾತ್ಮಿಕತೆ ಕಾರಣ. 1996 ರಲ್ಲಿ, ನಾನು ಆಧ್ಯಾತ್ಮಿಕತೆಯತ್ತ ಒಲವು ತೋರಿದ್ದೆ ಮತ್ತು ಆ ಸಮಯದಲ್ಲಿ ನಾನು ಗುರು ಗಗನ್ ಗಿರಿ ಮಹಾರಾಜರನ್ನು ಭೇಟಿಯಾದೆ. ಅವರ ಆಗಮನದ ನಂತರ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಿತು ಮತ್ತು ನನ್ನ ತಪಸ್ಸು ಪ್ರಾರಂಭವಾಯಿತು. ಆದರೆ,ಬಾಲಿವುಡ್ ನನಗೆ ಖ್ಯಾತಿ ತಂದುಕೊಟ್ಟಿದೆ. ನಾನು ಬಾಲಿವುಡ್ ತೊರೆದು 2000 ರಿಂದ 2012 ರವರೆಗೆ ತಪಸ್ಸು ಮುಂದುವರಿಸಿದ್ದೇನೆ. ದುಬೈನಲ್ಲಿ ಎರಡು ಬೆಡ್‌ರೂಮ್ ಫ್ಲ್ಯಾಟ್‌ನಲ್ಲಿದ್ದ ನಾನು 12 ವರ್ಷ ಬ್ರಹ್ಮಚರ್ಯ ಪಾಲನೆ ಮಾಡಿದ್ದೇನೆ ಎಂದು ಹೇಳಿದ್ದರು. 

ಇದನ್ನೂ ಓದಿ: ಬಾಲಿವುಡ್ ನಟಿ ಮಮತಾ ಕುಲಕರ್ಣಿ ಸಾದ್ವಿ ಮಂಡಲೇಶ್ವರಿ ಆಗಿದ್ದೇಕೆ? ಮತ್ತೆ ಸಿನಿಮಾಗೆ ಬರ್ತಾರಾ?