Natu Natu ಆಸ್ಕರ್ ಪ್ರಶಸ್ತಿ ಗೆಲ್ಲುತ್ತಿದ್ದಂತೆಯೇ ಸುದ್ದಿಯಲ್ಲಿ ಶಾರುಖ್ ಟ್ವೀಟ್...
ಆರ್ಆರ್ಆರ್ ಚಿತ್ರ ಆಸ್ಕರ್ ಪ್ರಶಸ್ತಿ ಪಡೆಯುತ್ತಿದ್ದಂತೆಯೇ ನಟ ಶಾರುಖ್ ಖಾನ್ ಅವರ ಹಳೆಯ ಟ್ವೀಟ್ ಒಂದು ಭಾರಿ ಸದ್ದು ಮಾಡುತ್ತಿದೆ. ಟ್ವೀಟ್ನಲ್ಲಿ ನಟ ಬರೆದಿದ್ದೇನು?
ಅಮೆರಿಕದ ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್ ನಲ್ಲಿ ನಡೆದ 2023ನೇ ಸಾಲಿನ 95ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಭಾರತೀಯರಿಗೆ ಹೆಮ್ಮೆಯ ಕ್ಷಣ. ಜಗತ್ತೇ ಕಾಯುತ್ತಿದ್ದ ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಳು ಘೋಷಣೆಯಾಗಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ (Natu Natu) ಹಾಡಿಗೆ (Song) ಆಸ್ಕರ್ ಪ್ರಶಸ್ತಿ ಸಂದಿದೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡು ವಿಶ್ವಮಟ್ಟದಲ್ಲಿ ಟ್ರೆಂಡ್ ಆಗಿದೆ. ಅನೇಕ ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ‘ನಾಟು ನಾಟು’ ಪ್ರಶಸ್ತಿ ಬಾಚಿಕೊಂಡಿದೆ. ದೇಶಕ್ಕೆ ಕೀರ್ತಿ ತಂದಿದೆ. ಅದೇ ರೀತಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ವಿಷಯ ಪ್ರಶಸ್ತಿ ಭಾರತದ ಪಾಲಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ ‘ದಿ ಎಲಿಫೆಂಟ್ ವಿಸ್ಪರರ್ಸ್’ (The elephant Whisperers) 95 ನೇ ಅಕಾಡೆಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಹಾಗೆ, ಈ ವರ್ಗದಲ್ಲಿ ನಾಮನಿರ್ದೇಶನಗೊಂಡಿದ್ದ ‘ಹಾಲೌಟ್’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’, ‘ಸ್ಟ್ರೇಂಜರ್ ಅಟ್ ದಿ ಗೇಟ್’, ಮತ್ತು ‘ಹೌ ಡು ಯು ಮೆಷರ್ ಎ ಇಯರ್’ ಚಿತ್ರಗಳನ್ನು ಸೋಲಿಸಿ ಈ ವಿಭಾಗದಲ್ಲಿ ಭಾರತದ ಚಿತ್ರ ಗೆದ್ದಿದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಚಲನಚಿತ್ರವಾಗಿದೆ ಮತ್ತು 1969 ಹಾಗೂ 1979 ರಲ್ಲಿ ಕ್ರಮವಾಗಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಸ್ಪರ್ಧಿಸಿದ ‘ದಿ ಹೌಸ್ ದಟ್ ಆನಂದ ಬಿಲ್ಟ್’ ಮತ್ತು ‘ಆನ್ ಎನ್‌ಕೌಂಟರ್ ವಿತ್ ಫೇಸ್‌ಗಳ’ ನಂತರ ನಾಮನಿರ್ದೇಶನಗೊಂಡ ಮೂರನೇ ಚಲನಚಿತ್ರವಾಗಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ವಿವಿಧ ಕ್ಷೇತ್ರಗಳ ದಿಗ್ಗಜರು ಶುಭಾಶಯಗಳ ಹೊಳೆಯನ್ನೇ ಹರಿಸಿದ್ದಾರೆ. ವಿಶ್ವದಾದ್ಯಂತ ಇಡೀ ತಂಡಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. 'ನಾಟು ನಾಟು' ಜನಪ್ರಿಯತೆ ಈಗ ಜಾಗತಿಕವಾಗಿದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡಾಗಿದೆ. ಎಂಎಂ ಕೀರವಾಣಿ, ಸಾಹಿತಿ ಚಂದ್ರಬೋಸ್ ಅವರಿಗೆ ಅಭಿನಂದನೆಗಳು. ಈ ಪ್ರತಿಷ್ಠಿತ ಗೌರವಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ಭಾರತ ಹೆಮ್ಮೆ ಪಡುತ್ತಿದೆ' ಎಂದು ಪ್ರಧಾನಿ ಹೇಳಿದ್ದಾರೆ. 'ದಿ ಎಲಿಫೆಂಟ್ ವಿಸ್ಪರ್ಸ್' ತಂಡಕ್ಕೂ ಅಭಿನಂದನೆ ಸಲ್ಲಿಸಿದ ನರೇಂದ್ರ ಮೋದಿ, 'ದಿ ಎಲಿಫೆಂಟ್ ವಿಸ್ಪರ್ಸ್' ಇಡೀ ತಂಡಕ್ಕೆ ಅಭಿನಂದನೆಗಳು. ಅವರ ಕೆಲಸ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪ್ರಾಮುಖ್ಯತೆಯನ್ನು ಅದ್ಭುತವಾಗಿ ಎತ್ತಿ ತೋರಿಸುತ್ತದೆ' ಎಂದು ಹೊಗಳಿದ್ದಾರೆ.
Oscar Award: ನಾಟು ನಾಟುಗಾಗಿ ನಡೆದಿತ್ತು ಕೋಟಿ ಕೋಟಿಗಟ್ಟಲೆ ಬೆಟ್ಟಿಂಗ್?
ಈ ಮಧ್ಯೆ ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಹಳೆಯ ಟ್ವೀಟ್ ಒಂದು ವೈರಲ್ ಆಗುತ್ತಿದೆ. ಟಾಲಿವುಡ್ ಮೆಗಾಸ್ಟಾರ್ ಅನ್ನು ಟ್ಯಾಗ್ ಮಾಡಿ ಕಿಂಗ್ ಖಾನ್ ಟ್ವೀಟ್ ಮಾಡಿದ್ದರು. ಆಗ RRR ಸಿನಿಮಾದ 'ನಾಟು ನಾಟು' ಹಾಡು ಬೆಸ್ಟ್ ಒರಿಜಿನಲ್ ಕ್ಯಾಟಗರಿಯಲ್ಲಿ ನಾಮ ನಿರ್ದೇಶನಗೊಂಡಿತ್ತು. ಆಗ ರಾಮ್ ಚರಣ್ ಅವರಿಗೆ ಶಾರುಖ್ ಖಾನ್ ಟ್ವೀಟ್ ಮಾಡಿದ್ದರು. ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅದರಲ್ಲಿ ಶಾರುಖ್ ಅವರು, RRR ಆಸ್ಕರ್ ಗೆದ್ದು ಬರುತ್ತೆ ಅನ್ನೋ ನಂಬಿಕೆಯಲ್ಲಿ ಟ್ವೀಟ್ ಮಾಡಿದ್ದರು. ಇದರ ಜೊತೆಗೆ ರಾಮ್ ಚರಣ್ ಅವರಲ್ಲಿ ಒಂದು ಮನವಿ ಕೂಡ ಮಾಡಿಕೊಂಡಿದ್ದರು. ಟ್ವೀಟ್ನಲ್ಲಿ ಶಾರುಖ್ ಅವರು, 'ನನ್ನ ಮೆಗಾ ಪವರ್‌ಸ್ಟಾರ್ ರಾಮ್‌ಚರಣ್‌ಗೆ ಧನ್ಯವಾದಗಳು. ನಿಮ್ಮ RRR ಟೀಮ್ ಆಸ್ಕರ್ ಅನ್ನು ಭಾರತಕ್ಕೆ ತಂದಾಗ, ದಯವಿಟ್ಟು ನನಗೆ ಅದನ್ನು ಸ್ಪರ್ಶಿಸಲು ಅವಕಾಶ ಕೊಡಿ' ಎಂದು ಟ್ವೀಟ್ ಮಾಡಿದ್ದರು. ಇಂಗ್ಲಿಷ್ ಅಷ್ಟೇ ಅಲ್ಲದೆ ತೆಲುಗಿನಲ್ಲೂ ಟ್ವೀಟ್ ಮಾಡಿದ್ದರು.
ಇದೇ ಟ್ವೀಟ್ ಈಗ ವೈರಲ್ ಆಗುತ್ತಿದೆ. ಶಾರುಖ್ ಖಾನ್ ನುಡಿದಂತೆ RRR ಸಿನಿಮಾದ 'ನಾಟು ನಾಟು..' ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ. ವಿಶ್ವದ ಮೂಲೆ ಮೂಲೆಯಿಂದ ಸಿನಿಮಾ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಶಾರುಖ್ ಖಾನ್ RRR ಹಾಗೂ "ಎಲಿಫೆಂಟ್ ವಿಸ್ಪರರ್ಸ್" ವಿಶ್ ಮಾಡಿ ಟ್ವೀಟ್ ಮಾಡಿದ್ದಾರೆ. ಎಲಿಫೆಂಟ್ ವಿಸ್ಪರರ್ಸ್‌ಗಾಗಿ ಗುನೀತ್ ಮೊಂಗ, ಕಾರ್ತಿಕಿ ಗೊನ್ಸಾಲ್ವಿನ್‌ಗೆ (Karthiki Gonsalwin) ಬಿಗಿಯಾದ ಅಪ್ಪುಗೆ. ಹಾಗೇ ಎಂಎಂ ಕೀರವಾಣಿ, ಚಂದ್ರಬೋಸ್ ಅವರಿಗೆ ರಾಜಮೌಳಿ, ರಾಮ್ ಚರಣ್, ಜೂ.ಎನ್‌ಟಿಆರ್‌ಗೆ ನೀವು ಸಾಧಿಸಿ ತೋರಿಸಿದ್ದಕ್ಕೆ ಧನ್ಯವಾದಗಳು. ಎರಡೂ ಆಸ್ಕರ್ ಪ್ರಶಸ್ತಿಗಳು ನಿಜಕ್ಕೂ ಸ್ಫೂರ್ತಿದಾಯಕ ಎಂದು ಶಾರುಖ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.