ಕ್ರಿಕೆಟಿಗ ವಿರಾಟ್​ ಕೊಹ್ಲಿ ಪತ್ನಿ, ಬಾಲಿವುಡ್​ ಬ್ಯೂಟಿ ಅನುಷ್ಕಾ ಶರ್ಮಾ ಆದಾಯ ಎಷ್ಟು ಗೊತ್ತಾ? ಚಿತ್ರ ಕಮ್ಮಿ ಮಾಡಿದ್ರೂ ಇನ್​ಕಮ್​ ಇಷ್ಟೊಂದಾ?

ಇಂದು ಆರ್​ಸಿಬಿ ಹವಾ ಜೋರಾಗಿದೆ. ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಫೈನಲ್ ತಲುಪಿದೆ. ಇಂದು ಅಹಮದಾಬಾದ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟ ನಡೆಲಿದೆ. ಈ ಬಾರಿ ಕೊಹ್ಲಿ ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಸಾಧ್ಯತೆಯಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ರನ್ ಮೆಷಿನ್ ಎಂದೇ ಫೇಮಸ್​​ ಆಗಿರೋ ವಿರಾಟ್ ಕೊಹ್ಲಿ ಈಗ ಐಪಿಎಲ್ ಗೆದ್ದ ನಂತರ ಇದರಿಂದಲೂ ನಿವೃತ್ತರಾಗಬಹುದೇ ಎಂಬ ಮಾತೂ ಕೇಳಿಬರುತ್ತಿದೆ. ಕೊಹ್ಲಿ ಈಗಾಗಲೇ ಟೆಸ್ಟ್ ಜೊತೆಗೆ ಅಂತರಾಷ್ಟ್ರೀಯ ಟಿ20 ಸ್ವರೂಪದಿಂದ ನಿವೃತ್ತರಾಗಿದ್ದಾರೆ. ಸದ್ಯ ಭಾರತಕ್ಕಾಗಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಇವರು ಆಡಲಿದ್ದಾರೆ. ಇವೆಲ್ಲವುಗಳ ನಡುವೆಯೇ, ವಿರಾಟ್​ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಮಾಸಿಕ ಆದಾಯವೂ ಸಕತ್​ ಸೌಂಡ್​ ಮಾಡುತ್ತಿದೆ.

ಅಷ್ಟಕ್ಕೂ ಬಾಲಿವುಡ್‌ನ ಬ್ಯೂಟಿ ಅನುಷ್ಕಾ ಶರ್ಮಾ ಅವರ ಪರಿಚಯ ಅಗತ್ಯವೇ ಇಲ್ಲ ಬಿಡಿ. 1988ರಲ್ಲಿ ಹುಟ್ಟಿರೋ ಅನುಷ್ಕಾ ಕಳೆದ ತಿಂಗಳು ತಮ್ಮ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತಿ ವಿರಾಟ್ ಕೊಹ್ಲಿ ಜೊತೆ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ವಿರಾಟ್​ ಕೊಹ್ಲಿ ಅವರ ಜೊತೆಗೂಡಿ ವಿರುಷ್ಕಾ ಆಗಿದ್ದಾರೆ. ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ ಈ ಜೋಡಿ ಅವರ ಅಪರೂಪದ ಜೋಡಿ 2017 ರ ಡಿಸೆಂಬರ್​ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ವಿರಾಟ್​ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್​ ಜೋಡಿಗೆ 2021ರಲ್ಲಿ ವಾಮಿಕಾ ಎಂಬ ಮಗಳು ಜನಿಸಿದಳು. ಇಂತಿಪ್ಪ ಅನುಷ್ಕಾ ಶರ್ಮಾ ಅವರ ಆದಾಯದ ಮೇಲೆ ಈಗ ನೆಟ್ಟಿಗರ ಕಣ್ಣು ಬಿದ್ದಿದೆ. ಇವರ ಆದಾಯವೆಷ್ಟು? ಅವರ ಆಸ್ತಿ ಎಷ್ಟು ಎಂದು ಲೆಕ್ಕ ಹಾಕಿದ್ದು, ಅದೀಗ ಬಹಿರಂಗಗೊಂಡಿದೆ.

ಅದರಲ್ಲೂ ಈ ದಂಪತಿ ಸೆಲೆಬ್ರಿಟಿಗಳು, ಅನುಷ್ಕಾ ಸಿನಿಮಾ ಕ್ಷೇತ್ರದಲ್ಲಿದ್ದರೆ, ಪತಿ ಕ್ರಿಕೆಟಿಗ. ಇನ್ನು ಕೇಳಬೇಕೆ? ಸಾಲದು ಎಂಬುದಕ್ಕೆ ಜಾಹೀರಾತುಗಳಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತೆ ಈ ಜೋಡಿ. ಜೊತೆಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್​ಗಳಿಗೂ ದುಡ್ಡು ಬರುತ್ತದೆ. ಎಲ್ಲಾ ಮೂಲಗಳಿಂದಲೂ ಆದಾಯ ಬಂದ ಮೇಲೆ ಅದನ್ನು ಲೆಕ್ಕ ಹಾಕುವುದೇ ಬಹುಶಃ ಅವರಿಗೆ ಸವಾಲು ಎನಿಸಬಹುದೇನೋ. ಇನ್ನು ನಟಿ ಅನುಷ್ಕಾ ಕುರಿತು ಮಾತನಾಡುವುದಾದರೆ, ಇವರು ತಮ್ಮ ಪ್ರತಿ ಚಿತ್ರಗಳಿಗೆ 10-15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಆದ್ದರಿಂದ ದುಬಾರಿ ಸಂಭಾವನೆ ಪಡೆಯುವ ನಟಿ ಎಂದೂ ಇವರು ಎನಿಸಿಕೊಂಡಿದ್ದಾರೆ.

ಇದರ ಜೊತೆ, ನಟಿ ಉದ್ಯಮಿಯೂ ಹೌದು. ಅವರು ನಶ್ (Nash) ಎಂಬ ತಮ್ಮದೇ ಆದ ಬಟ್ಟೆ ಅಂಗಡಿ ಹೊಂದಿದ್ದಾರೆ. ಕ್ಲೀನ್ ಸ್ಲೇಟ್ ಫಿಲ್ಮ್ಸ್ ಎಂಬ ನಿರ್ಮಾಣ ಕಂಪೆನಿ ಇವರ ಹೆಸರಿನಲ್ಲಿ ಇದೆ. ಈ ಕಂಪೆನಿಯ ಮೂಲಕ ಇದಾಗಲೇ ಎನ್ಎಚ್ 10, ಫಿಲ್ಲೌರಿ ಮತ್ತು ಪರಿಯಂತಹ ಹಿಟ್ ಚಲನಚಿತ್ರಗಳ ನಿರ್ಮಾಣವಾಗಿದೆ. ಅವರು ಹಲವಾರು ಪ್ರಮುಖ ಬ್ರ್ಯಾಂಡ್ ಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅನುಷ್ಕಾ ಅವರ ಸರಾಸರಿ ಮಾಸಿಕ ಆದಾಯ ಲೆಕ್ಕ ಹಾಕುವುದಾದರೆ ಒಂದು ಕೋಟಿ ರೂಪಾಯಿ ಎನ್ನಲಾಗಿದೆ. ಇದರ ಜೊತೆಗೆ ವಿವಿಧ ಆದಾಯ ಮೂಲಗಳಿಂದ ತಿಂಗಳಿಗೆ 1 ಕೋಟಿ ರೂಪಾಯಿ ಹಣವನ್ನು ಸಂಪಾದಿಸುತ್ತಿದ್ದಾರೆ. ಆದರೆ ಹಲವು ಸೆಲೆಬ್ರಿಟಿಗಳು ಸರ್ಕಾರಕ್ಕೆ ತೆರಿಗೆ ಕಟ್ಟದೇ ವಂಚನೆ ಮಾಡುವ ಘಟನೆಗಳು ನಡೆಯುತ್ತಿವೆ. ಅದೇ ರೀತಿಯ ಒಂದು ಆರೋಪ ಅನುಷ್ಕಾಮೇಲೆಯೂ ಇತ್ತು. ಅದು ಹೈಕೋರ್ಟ್​ ಬಾಗಿಲಿಗೂ ಹೋಗಿತ್ತು. 2012ರಿಂದ 2016ರವರೆಗಿನ ಬಾಕಿ ತೆರಿಗೆ ಪಾವತಿ ಮಾಡುವಂತೆ ತೆರಿಗೆ ಇಲಾಖೆ ಇವರಿಗೆ ನೋಟಿಸ್​ ನೀಡಿತ್ತು. ಈ ಆದೇಶದ ವಿರುದ್ಧ ಅನುಷ್ಕಾ ಶರ್ಮಾ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ 2023ರಲ್ಲಿ ವಜಾ ಮಾಡಿತ್ತು.

ಅನುಷ್ಕಾ ಅವರು ನಡೆಸಿಕೊಡುವ ಕಾರ್ಯಕ್ರಮಗಳು, ಜಾಹೀರಾತುಗಳು ಡ್ಯಾನ್ಸ್ ಶೋಗಳಿಂದ ಪಡೆಯುವ ಆದಾಯಕ್ಕೆ ಅವರು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಇಲಾಖೆ ಹೇಳಿತ್ತು. ಈ ಕುರಿತು 2021–22ರ ಅವಧಿಯಲ್ಲಿ ಅನುಷ್ಕಾ ಅವರಿಗೆ ಬಾಕಿ ಪಾವತಿಸುವಂತೆ ಆದೇಶ ನೀಡಿತ್ತು. ಇಲಾಖೆ ಪ್ರಕಾರ, 2012–13ರ ಅವಧಿಯಲ್ಲಿ ಅವರ ಆದಾಯವನ್ನು 12.3 ಕೋಟಿ ರೂಪಾಯಿ ಎಂದು ಪರಿಗಣಿಸಲಾಗಿದೆ. ಆದರೆ ಅದನ್ನು ಅವರು ಕಟ್ಟಿರಲಿಲ್ಲ. ಈ ಮೊತ್ತದ ತೆರಿಗೆಯು ಬಡ್ಡಿ ಸೇರಿ 1.2 ಕೋಟಿ ರೂ. 2013–14ರ ಅವಧಿಯ ತೆರಿಗೆ 1.6 ಕೋಟಿ ರೂ. ಎನ್ನಲಾಗಿದೆ.