ಕೊರೋನಾ ವಿರುದ್ಧ ಭಾರತದ ಹೋರಾಟಕ್ಕೆ ನೆರವು ನೀಡಲು ನಿಧಿಸಂಗ್ರಹವನ್ನು ಪ್ರಾರಂಭಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಅಪಾರ ಬೆಂಬಲ ಸಿಕ್ಕಿದೆ.

ಕೇವಲ ಒಂದು ದಿನದಲ್ಲಿ ಈ ಜೋಡಿ 3.5 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದ್ದಾರೆ. ಒಟ್ಟು 7 ಕೋಟಿ ರೂ. ಸಂಗ್ರಹಕ್ಕೆ ಇವರು ಗುರಿ ಇರಿಸಿದ್ದರು. ಇದಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿ ಅಭಿಮಾನಿಗಳ ಉದಾರ ಕೊಡುಗೆಗಾಗಿ ಧನ್ಯವಾದ ಹೇಳಿದ್ದಾರೆ.

ಕೋವಿಡ್ ಪರಿಹಾರ ನಿಧಿಗೆ ವಿರುಷ್ಕಾ 2 ಕೋಟಿ ರೂ ದೇಣಿಗೆ, 7 ಕೋಟಿ ಸಂಗ್ರಹಿಸುವ ಗುರಿ

ಇಲ್ಲಿಯವರೆಗೆ ದೇಣಿಗೆ ನೀಡಿದ ಎಲ್ಲರಿಗೂ ಕೃತಜ್ಞತೆ. ನಿಮ್ಮ ಕೊಡುಗೆಗೆ ಧನ್ಯವಾದಗಳು. ನಾವು ಅರ್ಧ ದಾರಿಯನ್ನು ದಾಟಿದ್ದೇವೆ. ಮುಂದುವರಿಯೋಣ ಎಂದು ಅನುಷ್ಕಾ ಬರೆದಿದ್ದಾರೆ.

ವಿರುಷ್ಕಾ ನಿಧಿಸಂಗ್ರಹಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ದೇಶದ ಹೋರಾಟವನ್ನು ಬೆಂಬಲಿಸಲು ಒಟ್ಟು 7 ಕೋಟಿ ರೂ ಸಂಗ್ರಹಿಸಲು ಯೋಜಿಸಿದ್ದಾರೆ.

ಈ ಅಭಿಯಾನವು ಏಳು ದಿನಗಳವರೆಗೆ ನಡೆಯಲಿದ್ದು, ಅದರ ಆದಾಯವು ಎಸಿಟಿ ಗ್ರಾಂಟ್ಸ್‌ಗೆ ಹೋಗುತ್ತದೆ. ಇದು ಆಕ್ಸಿಜನ್, ವ್ಯಾಕ್ಸಿನೇಷನ್ ಜಾಗೃತಿ, ವೈದ್ಯಕೀಯ ಮಾನವಶಕ್ತಿ ಮತ್ತು ಟೆಲಿಮೆಡಿಸಿನ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona