ತಮಿಳು ಸಿನಿಮಾ ಶೂಟಿಂಗ್ ವೇಳೆ ಸ್ಟಂಟ್‌ಮ್ಯಾನ್ ಎಸ್ಎಂ ರಾಜು ನಿಧನದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಹಾಗೂ ಪುರುಷ ಸ್ಟಂಟ್ ಮಾಸ್ಟರ್ಸ್‌ಗೆ ವಿಮೆ ಸೌಲಭ್ಯ ಘೋಷಿಸಿದ್ದಾರೆ. 

ಮುಂಬೈ (ಜು.17) ತಮಿಳು ಸಿನಿಮಾದ ಸ್ಟಂಟ್ ಶೂಟಿಂಗ್ ವೇಳೆ ಸ್ಟಂಟ್‌ಮ್ಯಾನ್ ಎಸ್ಎಂ ರಾಜು ಅಪಘಾತದಲ್ಲಿ ಮೃತಪಟ್ಟ ಘಟನೆ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಆಘಾತ ನೀಡಿತ್ತು. ಕೋಟಿ ಕೋಟಿ ಹಣ ಸುರಿದು ಸಿನಿಮಾ ನಿರ್ಮಾಣ ಮಾಡುವ ಸಂಸ್ಥೆಗಳು ಸ್ಟಂಟ್‌ಮ್ಯಾನ್ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅನ್ನೋ ಕೊರಗು, ನೋವು ದೇಶಾದ್ಯಂತ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಎಸ್ಎಂ ರಾಜು ನಿಧನದ ಬೆನ್ನಲ್ಲೇ ಇದೀಗ ಭಾರತೀಯ ಸಿನಿಮಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರುಷ ಹಾಗೂ ಮಹಿಳಾ ಸ್ಟಂಟ್ ಮಾಸ್ಟರ್ಸ್‌ಗೆ ಇನ್ಶೂರೆನ್ಸ್ ಸೌಲಭ್ಯ ಒದಗಿಸಲು ಅಕ್ಷಯ್ ಕುಮಾರ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಹಲವು ವರ್ಷಗಳಿಂದ ಸಿನಿಮಾ ಸ್ಟಂಟ್ ಮಾಸ್ಟರ್ಸ್‌ಗೆ ವಿಮೆ ಅಗತ್ಯವಿದೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇತ್ತು. ಆದರೆ ಇದುವರೆಗೆ ಸರ್ಕಾರವಾಗಲಿ, ಸಿನಿಮಾ ಮಂಡಳಿಗಳಾಗಲಿ ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಇದೀಗ ಅಕ್ಷಯ್ ಕುಮಾರ್ ಜೀವ ವಿಮೆಯ ಮುಂದಾಳತ್ವ ವಹಿಸಿದ್ದಾರೆ. ಇದೀಗ ಸರಿಸುಮಾರು 650 ರಿಂದ 700 ಸ್ಟಂಟ್ ಮಾಸ್ಟರ್ಸ್ ಭಾರತೀಯ ಸಿನಿಮಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಜೀವ ವಿಮೆ ಸೌಲಭ್ಯವನ್ನು ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಒದಗಿಸಲಾಗುತ್ತದೆ.

5 ರಿಂದ 5.5 ಲಕ್ಷ ರೂ ವರೆಗೆ ವಿಮಾ ಸೌಲಭ್ಯ

ಸ್ಟಂಟ್ ಮಾಸ್ಟರ್ಸ್ ಕೆಲಸ ಅತ್ಯಂತ ಅಪಾಯಕಾರಿಯಾಗಿದೆ. ಜೀವದ ಹಂಗು ತೊರೆದು ಕೆಲಸ ಮಾಡುವ ಸ್ಟಂಟ್ ಮಾಸ್ಟರ್ಸ್‌ಗೆ ಭದ್ರತೆ ಒದಗಿಸಲು, ಅವರ ಕುಟುಂಬಕ್ಕೆ ಭದ್ರತೆ ಒಗಿಸಲು ಜೀವ ವಿಮೆ ಯೋಜನೆ ಆರಂಭಿಸಲಾಗಿದೆ. ಇಲ್ಲಿ ಆರೋಗ್ಯ ಕವರೇಜ್, ಅಫಾಘಾತ ಕವರೇಜ್ ಒಳಗೊಂಡ ವಿಮೆ 5 ರಿಂದ 5.5 ಲಕ್ಷ ರೂಪಾಯಿವರೆಗೆ ಸೌಲಭ್ಯ ನೀಡಲಿದೆ. ಆಸ್ಪತ್ರೆ ಖರ್ಚು ವೆಚ್ಟಗಳು ಕ್ಯಾಶ್‌ಲೆಸ್ ಮೂಲಕ ಕ್ಲೈಮ್ ಆಗುವಂತೆ ಈ ವಿಮಾ ಸೌಲಭ್ಯ ಒದಗಿಸಲಾಗಿದೆ.

ಎಸ್ಎಂ ರಾಜು ಅಪಘಾತ

ಪಾ ರಂಜಿತ್ ನಿರ್ದೇಶನದ ಆರ್ಯ ಅಬಿನಯದ ತಮಿಳು ವೆಟ್ಟುವಂ ಸಿನಿಮಾದ ಶೂಟಿಂಗ್ ವೇಳೆ ಅವಘಡ ನಡೆದಿತ್ತು. ಸ್ಟಂಟ್ ಸೀನ್ ಶೂಟಿಂಗ್ ವೇಳೆ ಅಪಘಡ ನಡೆದಿತ್ತು. ಕಾರನ್ನು ಹಾರಿಸುವ ಸ್ಟಂಟ್ ಸೀನ್‌ಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಇದರಂತೆ ಎಸ್ಎಂ ರಾಜು ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಹಾರಿಸಿದ್ದರು. ಕಾರು ಬಾನೆತ್ತರಕ್ಕೆ ಹಾರಿ ನೆಲಕ್ಕೆ ಬಿದ್ದಿತ್ತು. ಈ ಅಪಾಯಾಕಾರಿ ಸ್ಟಂಟ್ ದೃಶ್ಯದಲ್ಲಿ ರಾಜು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಶೂಟಿಂಗ್ ಮಾಡುತ್ತಿದ್ದ ಸಿಬ್ಬಂದಿಗಳು, ನಿರ್ದೇಶಕರು, ನಟರು ಸ್ಟಂಟ್ ಮಾಸ್ಟರ್ ರಾಜು ಬಳಿ ಧಾವಿಸಿದ್ದಾರೆ. ಕಾರಿನಿಂದ ರಾಜು ಹೊರತೆಗೆದು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ರಾಜು ಬದುಕುಳಿಯಲಿಲ್ಲ.