ನವದೆಹಲಿ(ಆ.28): ‘ನಾನು ದುಡ್ಡಿಗಾಗಿ ಸುಶಾಂತ್‌ ಜೊತೆಗೆ ವಾಸವಿರಲಿಲ್ಲ. ನಾವಿಬ್ಬರೂ ದಂಪತಿಗಳ ರೀತಿಯಲ್ಲೇ ಜೀವನ ಸಾಗಿಸುತ್ತಿದ್ದೆವು’ ಎಂದು ನಟ ಸುಶಾಂತ್‌ ನಿಗೂಢ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರೇಯಸಿ ರಿಯಾ ಚಕ್ರವರ್ತಿ ಬಹಿರಂಗಪಡಿಸಿದ್ದಾರೆ. ತನ್ಮೂಲಕ ಸುಶಾಂತ್‌ರ ಹಣವನ್ನು ಕಬಳಿಸಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಯುರೋಪ್‌ ಪ್ರವಾಸದ ಸಂದರ್ಭದಲ್ಲಿ ಸುಶಾಂತ್‌ರ ವಿಚಿತ್ರ ವರ್ತನೆ ಬಗ್ಗೆಯೂ ಮಾತನಾಡಿದ್ದಾರೆ.

ಸುಶಾಂತ್‌ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಟೀವಿ ವಾಹಿನಿಯೊಂದಕ್ಕೆ ಅವರು ಸಂದರ್ಶನ ನೀಡಿದ್ದಾರೆ. ‘ಎಲ್ಲರೂ ನಾನು ದುಡ್ಡಿಗಾಗಿ ಸುಶಾಂತ್‌ ಹಿಂದೆ ಬಿದ್ದಿದ್ದೆ ಎಂದು ಹೇಳುತ್ತಾರೆ. ಅದು ಶುದ್ಧ ಸುಳ್ಳು. ಸುಶಾಂತ್‌ ನನ್ನ ಮೇಲೆ ಮಾತ್ರ ಹಣ ಖರ್ಚು ಮಾಡುತ್ತಿರಲಿಲ್ಲ. ನಮ್ಮ ಯುರೋಪ್‌ ಪ್ರವಾಸಕ್ಕೂ ಮುನ್ನ ಪುರುಷ ಸ್ನೇಹಿತರ ಜೊತೆ ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಲು 70 ಲಕ್ಷ ರು. ವೆಚ್ಚದಲ್ಲಿ ವಿಶೇಷ ವಿಮಾನವನ್ನೇ ಬುಕ್‌ ಮಾಡಿದ್ದರು. ಅವರು ಇದ್ದಿದ್ದೇ ಹಾಗೆ. ಅವರು ಸ್ಟಾರ್‌ ರೀತಿಯೇ ಬದುಕಲು ಬಯಸಿದ್ದರು’ ಎಂದು ರಿಯಾ ಹೇಳಿದ್ದಾರೆ.

ಮಾತ್ರೆ ಸೇವಿಸಿದ್ದ:

ಜಾಹೀರಾತು ಚಿತ್ರೀಕರಣವೊಂದಕ್ಕಾಗಿ ನಾನು ಪ್ಯಾರಿಸ್‌ಗೆ ಹೊರಟಿದ್ದೆ. ವಿಷಯ ತಿಳಿದ ಸುಶಾಂತ್‌ ತಾನು ಕೂಡ ಬರುವುದಾಗಿ ತಿಳಿಸಿ ನನ್ನ ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ ರದ್ದುಪಡಿಸಿದ್ದರು. ಬಳಿಕ ಫಸ್ಟ್‌ ಕ್ಲಾಸ್‌ ಟಿಕೆಟ್‌ ಖರೀದಿಸಿ ಪ್ರವಾಸದ ಯೋಜನೆ ರೂಪಿಸಿದ್ದರು. ಈ ಪ್ರವಾಸದ ಬಗ್ಗೆ ಬಹಳ ಸಂಭ್ರಮದಲ್ಲಿರುವುದಾಗಿ ಹೇಳಿಕೊಂಡಿದ್ದರು. ಪ್ರವಾಸದ ವೇಳೆ ನೈಜ ಮುಖ ತೋರಿಸುವುದಾಗಿಯೂ ಹೇಳಿದ್ದರು. ಯುರೋಪ್‌ ದೇಶದ ರಸ್ತೆ ರಸ್ತೆಗಳಲ್ಲಿ ನನ್ನ ಕೈಹಿಡಿದು ಕರೆದೊಯ್ಯುವ ಮತ್ತು ಮೋಜಿನ ಭರವಸೆಗಳನ್ನು ನೀಡಿದ್ದರು.

ಸುಶಾಂತ್ ಗ್ರೇಟ್ ಬಾಯ್‌ಫ್ರೆಂಡ್, ಆತನಿಲ್ಲದೆ ಬದುಕೋದು ಕಷ್ಟವಾಗ್ತಿದೆ ಎಂದ ರಿಯಾ

ಆದರೆ ವಿಮಾನ ಏರುವ ಮುನ್ನ ಸುಶಾಂತ್‌, ವೈದ್ಯರ ಸಲಹೆ ಇಲ್ಲದೆಯೇ ಮೊಡಾಫಿನಿಲ್‌ ಎಂಬ ಮಾತ್ರೆ ಸೇವಿಸಿದರು. ಆಗಸದಲ್ಲಿ ಸಂಚಾರದ ವೇಳೆ ಉಂಟಾಗುವ ಭಯಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದರು. ನಾವು ಪ್ಯಾರಿಸ್‌ ತಲುಪಿದ ಮೇಲೆ ಅವರು ಕೋಣೆಯಿಂದ 3 ದಿನ ಹೊರಗೇ ಬರಲಿಲ್ಲ. ಇದು ನನಗೆ ಅಚ್ಚರಿ ಮೂಡಿಸಿತ್ತು. ಆದರೆ ಸ್ವಿಜರ್ಲೆಂಡ್‌ನಲ್ಲಿ ಅವರು ಖುಷಿಯಾಗಿಯೇ ಇದ್ದರು. ಇನ್ನು ಇಟಲಿಗೆ ತೆರಳಿದ ವೇಳೆ ಅಲ್ಲಿ ಗೋಥಿಕ್‌ ಹೋಟೆಲ್‌ನಲ್ಲಿ ನಾವು ಉಳಿದುಕೊಂಡಿದ್ದೆವು. ನಮ್ಮ ರೂಮ್‌ನಲ್ಲಿ ಗೋಪುರದ ರೀತಿಯ ರಚನೆಯೊಂದಿತ್ತು. ಆ ಗೋಪುರದಲ್ಲಿ ಏನೋ ಇದೆ ಎಂದು ಸುಶಾಂತ್‌ ಹೇಳುತ್ತಿದ್ದರು. ಮುಂದೆ ಅವರ ಆರೋಗ್ಯ ಹದಗೆಡುತ್ತಾ ಹೋಯಿತು. ಈ ವೇಳೆ ಅವರು 2013ರಲ್ಲಿ ಡಿಪ್ರೆಶನ್‌ಗೆ ಒಳಗಾಗಿದ್ದ ಸಂಗತಿಯನ್ನೂ ಹೇಳಿದ್ದರು. ಬಳಿಕ ನಾವು ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದೆವು ಎಂದು ರಿಯಾ ಸಂದರ್ಶನದಲ್ಲಿ ಹೇಳಿದ್ದಾಳೆ.

ಕುಟುಂಬಕ್ಕೆ ರಕ್ಷಣೆ ಕೊಡಿ: ರಿಯಾ ಮನವಿ

ಮುಂಬೈ: ನನ್ನ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಭದ್ರತೆ ನೀಡುವಂತೆ ರಿಯಾ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸುಶಾಂತ್‌ ಪ್ರಕರಣ ಸಂಬಂಧ ತನಿಖಾ ಸಂಸ್ಥೆಗಳ ಜೊತೆ ಸಹಕರಿಸಲು ನಾವು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಾವು ಸಾಕಷ್ಟುಕೋರಿಕೆ ಸಲ್ಲಿಸಿದ್ದರೂ, ನಮಗೆ ಮುಂಬೈ ಪೊಲೀಸರು ಯಾವುದೇ ನೆರವು ನೀಡಿಲ್ಲ. ಹೀಗಾದಲ್ಲಿ ನಾವು ಬದುಕುವುದು ಹೇಗೆ ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ರಿಯಾ ಬರೆದುಕೊಂಡಿದ್ದಾರೆ.

ಸುಶಾಂತ್‌ಗೆ ವಿಷವುಣ್ಣಿಸಿ ರಿಯಾ ಕೊಂದಿದ್ದಾರೆ: ತಂದೆ

ನವದೆಹಲಿ: ನನ್ನ ಪುತ್ರನಿಗೆ ಸ್ವತಃ ರಿಯಾ ವಿಷ ಕೊಟ್ಟು ಹತ್ಯೆ ಮಾಡಿದ್ದಾಳೆ. ಆಕೆ ಹಲವು ದಿನಗಳಿಂದ ಆತನಿಗೆ ನಿರಂತರವಾಗಿ ವಿಷ ತಿನ್ನಿಸುತ್ತಾ ಬರುತ್ತಿದ್ದಳು. ಕೂಡಲೇ ಆಕೆಯನ್ನು ಬಂಧಿಸಬೇಕು ಎಂದು ಸುಶಾಂತ್‌ರ ತಂದೆ ಒತ್ತಾಯಿಸಿದ್ದಾರೆ.

ಸುಶಾಂತ್‌ ಡೆಬಿಟ್‌ ಕಾರ್ಡ್‌ ಪಿನ್‌ ಪಡೆದಿದ್ದ ರಿಯಾ

ನವದೆಹಲಿ: ಸುಶಾಂತ್‌ ಹತ್ಯೆಯನ್ನು ಮಾದಕ ವಸ್ತು ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಎನ್‌ಸಿಬಿಯು, ಸುಶಾಂತ್‌ ಖಾತೆಯಿಂದ ರಿಯಾ ಹಣ ಬಳಕೆ ಮಾಡಿಕೊಂಡಿದ್ದನ್ನು ಮತ್ತು ಸುಶಾಂತ್‌ರ ಡೆಬಿಟ್‌ ಕಾರ್ಡ್‌ನ ಪಿನ್‌ ಅನ್ನೂ ಪಡೆದುಕೊಂಡಿದ್ದನ್ನು ಪತ್ತೆಹಚ್ಚಿದೆ.