ಮದುವೆ ಆಗಿ ಎರಡೂವರೆ ವರ್ಷಗಳ ನಂತರ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿ ಮಗಳಿಗೆ ಸ್ವಾಗತ ಕೋರಿದ್ದಾರೆ. ‘ವಾರ್ 2’ ಖ್ಯಾತಿಯ ನಟಿ ಕಿಯಾರಾ ಮಗಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ.
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಮಂಗಳವಾರ (ಜುಲೈ 15 ರ ರಾತ್ರಿ ) ಈ ಹೆರಿಗೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಕಿಯಾರಾ ಆಗಲೀ, ಸಿದ್ದಾರ್ಥ್ ಆಗಲೀ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ವರದಿಗಳ ಪ್ರಕಾರ, ಕಿಯಾರಾ ಮಗಳಿಗೆ ಜನ್ಮ ನೀಡಿದ್ದಾರೆ. ಮದುವೆಯಾಗಿ ಎರಡೂವರೆ ವರ್ಷಗಳ ನಂತರ ಈ ಸಂತೋಷದ ಸುದ್ದಿ ಬಂದಿದೆ. ಮುಂಬೈನ ರಿಲಯನ್ಸ್ ಆಸ್ಪತ್ರೆಯಲ್ಲಿ ಕಿಯಾರಾ ಅವರಿಗೆ ನಾರ್ಮಲ್ ಹೆರಿಗೆಯಾಗಿದೆ ಎಂದು ಹೇಳಲಾಗುತ್ತಿದೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ, ಕಿಯಾರಾ ಮತ್ತು ಸಿದ್ಧಾರ್ಥ್ ಸೋಶಿಯಲ್ ಮೀಡಿಯಾ ಮೂಲಕ ತಾವು ಪೋಷಕರಾಗಲಿದ್ದೇವೆ ಎಂದು ಬಹಿರಂಗಪಡಿಸಿದ್ದರು. ಅವರು ಮಗುವಿನ ಸಾಕ್ಸ್‌ಗಳನ್ನು ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ಕ್ಯಾಪ್ಶನ್‌ನಲ್ಲಿ, "ನಮ್ಮ ಜೀವನದ ಅತ್ಯುತ್ತಮ ಉಡುಗೊರೆ ಶೀಘ್ರದಲ್ಲೇ ಬರಲಿದೆ" ಎಂದು ಬರೆದಿದ್ದರು.
ಮದುವೆ ಆಗಿ ಎರಡೂವರೆ ವರ್ಷ!
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮದುವೆಯಾಗಿ ಎರಡೂವರೆ ವರ್ಷಗಳ ನಂತರ ಪಾಲಕರಾಗಿದ್ದಾರೆ. ಇಬ್ಬರೂ 2020 ರಲ್ಲಿ ಒಬ್ಬರನ್ನೊಬ್ಬರು ಡೇಟ್ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರು 'ಶೇರ್‌ಶಾ' ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಆದಾಗ್ಯೂ, ಅವರು ತಮ್ಮ ಸಂಬಂಧವನ್ನು ಮದುವೆಯ ಮೊದಲು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಫೆಬ್ರವರಿ 7, 2023 ರಂದು ಜೈಸಲ್ಮೇರ್‌ನಲ್ಲಿ ಅವರ ಮದುವೆ ಆಗಿತ್ತು. ಹಿಂದೂ ಸಂಪ್ರದಾಯದ ಪ್ರಕಾರ ಈ ಮದುವೆ ಅದ್ದೂರಿಯಾಗಿ ನಡೆಯಿತು. ಮದುವೆಯಲ್ಲಿ ದಂಪತಿಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಜೊತೆಗೆ ಅವರ ಆಪ್ತ ಮಿತ್ರರು ಭಾಗವಹಿಸಿದ್ದರು.
ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಸಿನಿಮಾಗಳು
ವೃತ್ತಿಪರವಾಗಿ ಹೇಳುವುದಾದರೆ, ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಕೊನೆಯದಾಗಿ 2024 ರಲ್ಲಿ ಬಿಡುಗಡೆಯಾದ 'ಯೋಧ' ಸಿನಿಮಾದಲ್ಲಿ ಕಾಣಬಹುದಿತ್ತು. ಅವರ ಮುಂದಿನ ಸಿನಿಮಾ 'ಪರಮ್ ಸುಂದರಿ', ಈ ವರ್ಷ ಈ ಸಿನಿಮಾ ಬಿಡುಗಡೆಯಾಗಲಿದೆ. ಇದರ ನಂತರ ಅವರು 2026 ರಲ್ಲಿ ಬಿಡುಗಡೆಯಾಗಲಿರುವ Vvan : Force of the Forrest ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಯಾರಾ ಅಡ್ವಾನಿ ಅವರ ಕೊನೆಯ ಸಿನಿಮಾ 'ಗೇಮ್ ಚೇಂಜರ್' ಫ್ಲಾಪ್ ಆಗಿತ್ತು. ಅವರ ಮುಂಬರುವ ಸಿನಿಮಾಗಳಲ್ಲಿ 'ವಾರ್ 2' ಮತ್ತು 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸೇರಿವೆ, ಇವು ಕ್ರಮವಾಗಿ 2025 ಮತ್ತು 2026 ರಲ್ಲಿ ಬಿಡುಗಡೆಯಾಗಲಿವೆ.
ಅಂದಹಾಗೆ ʼಸ್ಟುಡೆಂಟ್ಸ್ ಆಫ್ ದಿ ಇಯರ್ʼ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರ, ವರುಣ್ ಧವನ್, ಆಲಿಯಾ ಭಟ್ ಕೂಡ ನಟಿಸಿದ್ದರು. ವರುಣ್ ಧವನ್-ನತಾಶಾ, ಆಲಿಯಾ ಭಟ್-ರಣಬೀರ್ ಕಪೂರ್ ಅವರಿಗೂ ಹೆಣ್ಣು ಮಗು ಆಗಿದೆ. ಈಗ ಸಿದ್ದಾರ್ಥ್‌ಗೂ ಹೆಣ್ಣು ಮಗು ಆಗಿರೋದು ಕುತೂಹಲಕರ ವಿಷಯ.
