ದುರ್ಗಾ ಪೂಜಾ ಸ್ಥಳಕ್ಕೆ ಶೂ ಧಿರಿಸಿ ಬಂದವರಿಗೆ ನಟಿ ಕಾಜೋಲ್ ಕ್ಲಾಸ್ : ವೀಡಿಯೋ ವೈರಲ್
ದುರ್ಗಾಪೂಜಾ ಪೆಂಡಾಲ್‌ನ ಬಳಿ ಶೂ ಧರಿಸಿ ಬಂದವರಿಗೆ ನಟಿ ಕಾಜೋಲ್ ಕ್ಲಾಸ್ ತೆಗೆದುಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದೆಲ್ಲೆಡೆ ದುರ್ಗಾ ಪೂಜೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರೆವರೆಗೆ ಎಲ್ಲರೂ 9 ದಿನ ಒಂಭತ್ತು ರೂಪಗಳಲ್ಲಿ ತಾಯಿ ದುರ್ಗೆಯನ್ನು ಆರಾಧಿಸುತ್ತಾರೆ. ಅದರಲ್ಲೂ ಪಶ್ಚಿಮ ಬಂಗಾಳ ಹಾಗೂ ಕೋಲ್ಕತ್ತಾದಲ್ಲಿ ನವರಾತ್ರಿ ತುಸು ಹೆಚ್ಚೆ ವಿಜ್ರಂಭಣೆಯಿಂದ ನಡೆಯುತ್ತದೆ. ಹೀಗಾಗಿ ಮೂಲತಃ ಬೆಂಗಾಲಿ ಆಗಿರುವ ಬಾಲಿವುಡ್ ನಟಿ ಕಾಜೋಲ್ ಕೂಡ ಮುಂಬೈನಲ್ಲಿ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಹಲವು ದಿನಗಳಿಂದ ದುರ್ಗಾಪೂಜೆಯ ಸಂಭ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರೇ ಸ್ವತಃ ದುರ್ಗಾದೇವಿಯನ್ನು ಕೂರಿಸಿ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದು, ಬಾಲಿವುಡ್ ಮಂದಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ತಮ್ಮ ಈ ದುರ್ಗಾಪೂಜೆಯ ಪೆಂಡಾಲ್‌ನಲ್ಲಿ ಅವರು ಸ್ವಯಂಸೇವಕಿಯಂತೆ ಓಡಾಡುತ್ತಿರುವ ವೀಡಿಯೋಗಳು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟಿ ಕಾಜೋಲ್, ಪತಿ ಅಜಯ್ ದೇವಗನ್ ಹಾಗೂ ಮಕ್ಕಳು ಕೂಡ ಈ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ವೀಡಿಯೋವೊಂದು ವೈರಲ್ ಆಗಿದೆ. ದುರ್ಗಾಪೂಜಾ ಪೆಂಡಾಲ್‌ನ ಬಳಿ ಶೂ ಧರಿಸಿ ಬಂದವರಿಗೆ ನಟಿ ಕಾಜೋಲ್ ಕ್ಲಾಸ್ ತೆಗೆದುಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುರ್ಗಾ ಪೆಂಡಾಲ್ ನಲ್ಲಿ ಕಾಜೋಲ್ ದರ್ಬಾರ್!
ದುರ್ಗಾಪೂಜಾ ಪೆಂಡಾಲ್ ಬಳಿ ಶೂ ಧರಿಸಿ ಬಂದವರನ್ನು ನೋಡಿ ಕೋಪಗೊಂಡ ಕಾಜೋಲ್ ಕೂಡಲೇ ಶೂ ಧರಿಸಿದವರು ಅಲ್ಲಿಂದ ದೂರ ಹೋಗುವಂತೆ ಸೂಚಿಸಿದ್ದಾರೆ. ನೆರಳೆ ಹಾಗೂ ಪಿಂಕ್ ಬಣ್ಣ ಮಿಶ್ರಿತ ಸೀರೆ ಧರಿಸಿದ ಕಾಜೋಲ್ ಶೂ ಧರಿಸಿ ಪೆಂಡಾಲ್ ಸಮೀಪ ಬಂದವರನ್ನು ಜೋರಾಗಿ ಕೂಗಿ ಆ ಸ್ಥಳದಿಂದ ದೂರ ಹೋಗುವಂತೆ ಕೂಗಾಡಿದ್ದಾರೆ. ಹಲೋ ಹಲೋ ಎಂದು ಚಿಟಿಕೆ ಹೊಡೆದು ಕರೆದ ಕಾಜೋಲ್, ನೀವೆಲ್ಲರೂ ಚಪ್ಪಲಿ ಧರಿಸಿ ಬಂದಿದ್ದೀರಿ ಚಪ್ಪಲಿ ಬಿಟ್ಟು ಬನ್ನಿ ಅಥವಾ ದೂರ ಹೋಗಿ ಎಂದು ಕಾಜೋಲ್ ಸಿಟ್ಟಾಗಿದ್ದಾರೆ.
ಕಾಜೋಲ್ ಅವರ ಕೂಗಾಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಆಕೆ ಮಾಡಿದ್ದು ಸರಿಯಾಗಿಯೇ ಇದೆ. ಪೂಜಾ ಸ್ಥಳಗಲ್ಲಿ ಚಪ್ಪಲಿ ಹಾಕಿ ಏಕೆ ಬರಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಜನರು ಕನಿಷ್ಠ ಪೂಜಾ ಸ್ಥಳಕ್ಕೆ ಚಪ್ಪಲಿ ಹಾಕಿ ಹೋಗಬಾರದು ಎಂಬ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಆಕೆ ಶೂ ಹಾಕೊಂಡು ಬರ್ಬೇಡಿ ಎಂದು ಹೇಳಿದ್ದಾಳೆ ಹಾಗೂ ಆಕೆ ಸರಿಯಾಗಿಯೇ ಹೇಳಿದ್ದಾಳೆ ಎಂದು ಕಾಜೋಲ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಮತ್ತೆ ಕೆಲವರು ಆಕೆಯನ್ನು ಪಪಾರಾಜಿಗಳ ವಿರುದ್ಧ ಸದಾ ಕಿಡಿ ಕಾರುವ ಜಯಾ ಬಚ್ಚನ್‌ಗೆ ಹೋಲಿಕೆ ಮಾಡಿದ್ದಾರೆ.