ನವದೆಹಲಿ(ಆ.01): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ ಸಂಬಂಧ ಆರ್ಥಿಕ ಅಪರಾಧಗಳ ತನಿಖೆ ನಡೆಸುವ ಜಾರಿ ನಿರ್ದೇಶಾಲಯ (ಇ.ಡಿ.) ಕೂಡ ಪ್ರಕರಣ ದಾಖಲು ಮಾಡಿಕೊಂಡಿದೆ.

ಸುಶಾಂತ್‌ ಅವರಿಗೆ ಸೇರಿದ 15 ಕೋಟಿ ರು. ಹಣವನ್ನು ಅವರ ಪ್ರೇಯಸಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಅಕ್ರಮವಾಗಿ ಕಬಳಿಸಿದ್ದಾರೆ ಎಂಬ ಆರೋಪಗಳ ಸಂಬಂಧ ತನಿಖೆ ನಡೆಸಲು ಇ.ಡಿ. ಮುಂದಾಗಿದೆ. ಇದರಿಂದಾಗಿ ರಿಯಾ ಅವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಇ.ಡಿ. ಅಧಿಕಾರಿಗಳು ರಿಯಾ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯೂ ಇದೆ.

ಸುಶಾಂತ್‌ ತಂದೆ ಕೃಷ್ಣ ಕುಮಾರ್‌ ಸಿಂಗ್‌ (74) ಅವರು ರಿಯಾ ಚಕ್ರವರ್ತಿ, ಆಕೆಯ ಕುಟುಂಬ ಸದಸ್ಯರು ಹಾಗೂ ಇತರೆ ಆರು ಮಂದಿ ವಿರುದ್ಧ ಬಿಹಾರದಲ್ಲಿ ನೀಡಿದ್ದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಎಫ್‌ಐಆರ್‌ ಪ್ರತಿ ಪಡೆದುಕೊಂಡಿರುವ ಇ.ಡಿ. ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ಉದಯೋನ್ಮುಖ ಟೀವಿ, ಸಿನಿಮಾ ನಟಿಯಾಗಿರುವ ರಿಯಾ ಚಿತ್ರರಂಗದಲ್ಲಿ ಮತ್ತಷ್ಟುಬೆಳೆಯಲು 2019ರ ಮೇ ತಿಂಗಳಿನಲ್ಲಿ ಸುಶಾಂತ್‌ ಅವರನ್ನು ಪರಿಚಯ ಮಾಡಿಕೊಂಡಿದ್ದರು. ಅವರು ಸುಶಾಂತ್‌ ಸಿಂಗ್‌ ಅವರ ಹಣವನ್ನು ಕಬಳಿಸಿದ್ದಾರೆ ಎಂದು ಕೃಷ್ಣ ಕುಮಾರ್‌ ದೂರು ನೀಡಿದ್ದರು.

ಕರುನಾಡಿನಲ್ಲಿ ನೆಲೆಸಲು ಬಯಸಿದ್ದ ನಟ ಸುಶಾಂತ್‌!

ಸುಶಾಂತ್‌ ಸಿಂಗ್‌ ಅವರ ಹಣ ಹಾಗೂ ಬ್ಯಾಂಕ್‌ ಖಾತೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ಇ.ಡಿ. ಪರಿಶೀಲನೆ ನಡೆಸಲಿದೆ. ಸುಶಾಂತ್‌ ಅವರ ಆದಾಯವನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ನಡೆದಿದೆಯೇ ಹಾಗೂ ಅಕ್ರಮ ಆಸ್ತಿ ಗಳಿಸಲಾಗಿದೆಯೇ ಎಂಬುದರ ಬಗ್ಗೆ ಇ.ಡಿ. ಗಮನ ಕೇಂದ್ರೀಕರಿಸಲಿದೆ. ಸಾವಿನ ಪ್ರಕರಣದ ತನಿಖೆಯನ್ನು ಈಗಾಗಲೇ ಮುಂಬೈ ಪೊಲೀಸರು ನಡೆಸುತ್ತಿದ್ದಾರೆ.

34 ವರ್ಷದ ಸುಶಾಂತ್‌ ಅವರು ಜೂ.14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.