ಮುಂಬೈ(ಆ.01): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರು ಚಿತ್ರೋದ್ಯಮ ತೊರೆದು ಕರ್ನಾಟಕದ ಕೊಡಗಿನಲ್ಲಿ ರೈತನಾಗಿ ನೆಲೆಯೂರಲು ಬಯಸಿದ್ದರು. ಆದರೆ ಅವರ ಪ್ರೇಯಸಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಇದಕ್ಕೆ ಅಡ್ಡಿಪಡಿಸಿದ್ದರು ಎಂದು ಸುಶಾಂತ್‌ ತಂದೆ ಆರೋಪಿಸಿದ್ದಾರೆ.

ಜೂ.14ರಂದು ಮುಂಬೈನ ಫ್ಲ್ಯಾಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುಶಾಂತ್‌ ಸಿಂಗ್‌ ಪತ್ತೆಯಾಗಿದ್ದರು. ಈ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ಸುಶಾಂತ್‌ ತಂದೆ ಕೃಷ್ಣ ಕುಮಾರ್‌ ಸಿಂಗ್‌ ಅವರು ಬಿಹಾರದಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದಾಖಲು ಮಾಡಿಕೊಂಡಿರುವ ಎಫ್‌ಐಆರ್‌ನಲ್ಲಿ ಕೊಡಗಿನ ಉಲ್ಲೇಖವೂ ಇದೆ.

ಸುಶಾಂತ್ ಖಾತೆಯಿಂದ 15 ಕೋಟಿ ವರ್ಗಾವಣೆ! ಇಡಿಯಿಂದ ಕೇಸ್ ದಾಖಲು

ಸುಶಾಂತ್‌ ಸಿಂಗ್‌ ಅವರು ಚಿತ್ರರಂಗ ತೊರೆದು ಕೊಡಗಿನಲ್ಲಿ ರೈತನಾಗುವ ಹೆಬ್ಬಯಕೆ ಹೊಂದಿದ್ದರು. ಅವರ ಆತ್ಮೀಯ ಸ್ನೇಹಿತರಾಗಿದ್ದ ಮಹೇಶ್‌ ಶೆಟ್ಟಿಕೂಡ ಕೊಡಗಿಗೆ ತೆರಳಲು ಮುಂದಾಗಿದ್ದರು. ಆದರೆ ಈ ಯೋಜನೆ ಅರಿತ ರಿಯಾ ಚಕ್ರವರ್ತಿ ಅದಕ್ಕೆ ಅಡ್ಡಿಪಡಿಸಿದ್ದರು. ಈ ವಿಚಾರದಲ್ಲಿ ಮುಂದುವರಿದರೆ ವೈದ್ಯಕೀಯ ವರದಿಗಳನ್ನು ಬಹಿರಂಗಪಡಿಸಿ, ಹುಚ್ಚ ಎಂದು ಸಾಬೀತುಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಸುಶಾಂತ್‌ ತಂದೆ ದೂರಿನಲ್ಲಿ ಹೇಳಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಮಾಹಿತಿ ಇದೆ.

ಸುಶಾಂತ್‌ ಅವರು ತಮ್ಮ ನಿಲುವು ಬದಲಿಸಲು ಒಪ್ಪದೇ ಇದ್ದಾಗ ರಿಯಾ ಹಟಕ್ಕೆ ಬಿದ್ದರು. ಹಣ, ಆಭರಣ, ಕ್ರೆಡಿಟ್‌ ಕಾರ್ಡ್‌, ಲ್ಯಾಪ್‌ಟಾಪ್‌ನೊಂದಿಗೆ ಸುಶಾಂತ್‌ ಮನೆಯನ್ನು ತೊರೆದರು. ಈ ಸಂದರ್ಭದಲ್ಲಿ ಸುಶಾಂತ್‌ ತನ್ನ ಸೋದರಿಗೆ ಕರೆ ಮಾಡಿ, ರಿಯಾ ನನ್ನನ್ನು ಸಿಲುಕಿಸಿಬಿಡುತ್ತಾಳೆ ಎಂದು ಅಲವತ್ತುಕೊಂಡಿದ್ದರು ಎಂದು ಕೆ.ಕೆ. ಸಿಂಗ್‌ ದೂರಿದ್ದಾರೆ.

ನಾಪತ್ತೆಯಾಗಿದ್ದ ರಿಯಾ ಪ್ರತ್ಯಕ್ಷಳಾಗಿ ಕೊಟ್ಟ ಶಾಕಿಂಗ್ ಮಾಹಿತಿ

ರಿಯಾ ಚಕ್ರವರ್ತಿ ಸುಶಾಂತ್‌ ಅವರ ಜೀವನವನ್ನೇ ನಿಯಂತ್ರಿಸುತ್ತಿದ್ದಳು. ತಾನು ಹೇಳಿದ ರೀತಿ ಕೇಳದೇ ಇದ್ದರೆ ವೃತ್ತಿ ಜೀವನವನ್ನೇ ಕೊನೆಗಾಣಿಸುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂದು ಹೇಳಿದ್ದಾರೆ.

ವಿರಾಜಪೇಟೆಯಲ್ಲಿ ಸಾವಯವ ಕೃಷಿಗೆ ಸಿದ್ಧತೆ

ಸುಶಾಂತ್‌ ಸಿಂಗ್‌ ಅವರು ಕೊಡಗು ಜಿಲ್ಲೆಗೆ ತನ್ನ ಗೆಳೆಯ ಮಹೇಶ್‌ನೊಂದಿಗೆ ಕಳೆದ ಕೆಲವು ವರ್ಷಗಳ ಹಿಂದೆ ಪ್ರವಾಸಕ್ಕೆ ಆಗಮಿಸಿ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಚಿತ್ರರಂಗ ತ್ಯಜಿಸಿ ಕೊಡಗಿನಲ್ಲಿ ಸಾವಯವ ಕೃಷಿ ಮಾಡುವ ಯೋಜನೆ ರೂಪಿಸುವ ಸಲುವಾಗಿ ವಿರಾಜಪೇಟೆ ತಾಲೂಕಿನಲ್ಲಿ ಭೂಮಿ ಖರೀದಿ ಸಿದ್ಧತೆ ಮಾಡಿಕೊಂಡಿಕೊಂಡಿದ್ದರು ಎನ್ನಲಾಗಿದೆ.