ನಟ ಜಗ್ಗೇಶ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 38ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ (Wedding Anniversary) ಜಗ್ಗೇಶ್ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್(Jaggesh) ಪಾಲಿಗೆ ಇಂದು (ಮಾರ್ಚ್ 22) ತುಂಬಾ ವಿಶೇಷವಾದ ದಿನ. ಜಗ್ಗೇಶ್ ಜೀವನವನ್ನು ಬದಲಾಯಿಸಿದ ದಿನ. ನವರಸನಾಯಕ ಜಗ್ಗೇಶ್ ಗೆಳತಿ ಪರಿಮಳಾ(Parimala Jaggesh) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿದು. ಹೌದು, ಜಗ್ಗೇಶ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 38ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ (Wedding Anniversary) ಜಗ್ಗೇಶ್ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಜಗ್ಗೇಶ್ ಮತ್ತು ಪರಿಮಳಾ ಅವರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅವರದ್ದು ಪ್ರೇಮ ವಿವಾಹ. ಜಗ್ಗೇಶ್ ಎಲ್ಲರಂತೆ ಅದ್ದೂರಿಯಾಗಿ ಧಾಂ ಧೂಂ ಆಗಿ ಮದುವೆಯಾಗಿಲ್ಲ. ಇವರ ಮದುವೆ ವಿಚಾರ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಹೌದು ಜಗ್ಗೇಶ್ ಲವ್ ಸ್ಟೋರಿ ಯಾವ ಸಿನಿಮಾಗೇನು ಕಮ್ಮಿ ಇಲ್ಲ. ಮಾರ್ಚ್ 22, 1984ರಲ್ಲಿ ಜಗ್ಗೇಶ್ ಗೆಳತಿ ಪರಿಮಳಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ತೆರೆಗೆ ಸಜ್ಜಾಗುತ್ತಿದೆ ಜಗ್ಗೇಶ್ 'ತೋತಾಪುರಿ'!
ಜಗ್ಗೇಶ್ ಮತ್ತು ಪರಿಮಳ ಅವರು ಮೊದಲ ಸಲ ಭೇಟಿಯಾದಾಗ ಜಗ್ಗೇಶ್ ಅವರಿಗೆ ಕೇವಲ 19 ವರ್ಷ ಮತ್ತು ಪರಿಮಳಾ ಅವರಿಗೆ 14 ವರ್ಷ ವಯಸ್ಸು. ಜಗ್ಗೇಶ್ ಮೊದಲ ವರ್ಷದ ಡಿಗ್ರಿ, ಪರಿಮಳ ಒಂಭತ್ತನೇ ತರಗತಿ ಓದುತ್ತಿದ್ದರು. ಪ್ರೀತಿಯನ್ನು ಮನೆಯವರು ಒಪ್ಪದ ಕಾರಣ, 22 ಮಾರ್ಚ್ 1984ರಲ್ಲಿ ಪೋಷಕರ ಕಣ್ತಪ್ಪಿಸಿ ಇಬ್ಬರು ರಿಜಿಸ್ಟರ್ ಮದುವೆ ಆದರು. ಪರಿಮಳಾ ಅವರು ಆಗ ಅಪ್ರಾಪ್ತ ವಯಸ್ಸಿನಲ್ಲಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯ್ತು.
ಜಗ್ಗೇಶ್ ವಿರುದ್ದ ದಾಖಲಾಗಿತ್ತು ಕಿಡ್ನ್ಯಾಪ್ ಕೇಸ್
ಜಗ್ಗೇಶ್, ಪರಿಮಳಾ ಅವರನ್ನು ಮನೆಯಿಂದ ಕರೆದುಕೊಂಡು ಬಂದು ತಾಳಿ ಕಟ್ಟಿದರು. ಬಳಿಕ ಜಗ್ಗೇಶ್ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಾಯ್ತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂದು ಮಾನವೀಯತೆಯ ಆಧಾರದ ಮೇಲೆ, ಜಗ್ಗೇಶ್-ಪರಿಮಳ ಪ್ರೇಮಕ್ಕೆ ಬೆಲೆಕೊಟ್ಟ ಸುಪ್ರೀಂ ಕೋರ್ಟ್ ಸಂವಿಧಾನದ ವಿರುದ್ಧ ಹೋಗಿ ಪ್ರೇಮಿಗಳ ಪರ ತೀರ್ಪು ಕೊಟ್ಟಿತ್ತು. ಅಂದು ಅಪಮಾನ, ಅವಮಾನ ಎದುರಿಸಿ ಹಸೆಮಣೆ ಏರಿದ್ದ ಈ ಜೋಡಿ ಇಂದು ಅನೇಕ ದಂಪತಿಗಳಿಗೆ ಮಾದರಿಯಾಗಿದೆ. ಸ್ಯಾಂಡಲ್ ವುಡ್ ನ ದೊಡ್ಡ ಕಲಾವಿದರಾಗಿ ಬೆಳೆದಿದ್ದಾರೆ. ರಾಜಕೀಯದಲ್ಲೂ ಸಕ್ರೀಯರಾಗಿದ್ದಾರೆ.
ಜಗಣ್ಣ ಈ ವರ್ಷ ಹುಟ್ಟುಹಬ್ಬ ಆಚರಿಸುವುದಿಲ್ಲ, ಅಪ್ಪುಗಾಗಿ ಮಹತ್ವದ ನಿರ್ಧಾರ!
ಇಬ್ಬರು ಗಂಡು ಮಕ್ಕಳು
ಜಗ್ಗೇಶ್ ಅವರಿಗೆ ಇಬ್ಬರು ಗಂಡು ಮಕ್ಕಳು. 1987ರಲ್ಲಿ ಜಗ್ಗೇಶ್ ಮತ್ತು ಪರಿಮಳ ದಂಪತಿ ಮೊದಲ ಮಗ ಗುರುರಾಜ್ ಅವರನ್ನು ಸ್ವಾಗತಿಸಿದರು. 1992ರಲ್ಲಿ ಪರಿಮಳಾ ಎರಡನೇ ಪುತ್ರ ಯತಿರಾಜ್ ಗೆ ಜನ್ಮನೀಡಿರು. 2014ರಲ್ಲಿ ಜಗ್ಗೇಶ್ ಮೊದಲ ಪುತ್ರ ಗುರುರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿದೇಶಿ ಮೂಲದ ಯುವತಿ ಜೊತೆ ಗುರುರಾಜ್ ಮದುವೆಯಾದರು. ಈ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದಾನೆ. ಜಗ್ಗೇಶ್ ಮೊಮ್ಮಗನಿಗೆ ಅರ್ಜುನ್ ಎಂದು ಹೆಸರಿಟ್ಟಿದ್ದಾರೆ. ಮೊಮ್ಮಗನನ್ನು ಅತಿಯಾಗಿ ಪ್ರೀತಿಸುವ ಜಗ್ಗೇಶ್ ಆಗಾಗ ಅರ್ಜುನ್ ಜೊತೆ ಇರುವ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.&
;
ಅಂದಹಾಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಮತ್ತು ಮಕ್ಕಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೀವನದ ಪ್ರತೀ ಪ್ರಮುಖ ಘಟ್ಟಗಳ ಬಗ್ಗೆ ಜಗ್ಗೇಶ್ ವಿಡಿಯೋ ಹಂಚಿಕೊಂಡಿದ್ದಾರೆ. ಜಗ್ಗೇಶ್ ದಂಪತಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ಜಗ್ಗೇಶ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಇಂದಿಗೂ ಜಗ್ಗೇಶ್ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಜಗ್ಗೇಶ್ ಬಳಿ ಅನೇಕ ಸಿನಿಮಾಗಳಿವೆ. ತೋತಾಪುರಿ, ರಂಗನಾಯಕ ಮತ್ತು ರಾಘವೇಂದ್ರ ಸ್ಟೋರ್ ಸಿನಿಮಾಗಳಲ್ಲಿ ಜಗ್ಗೇಶ್ ಬ್ಯುಸಿಯಾಗಿದ್ದಾರೆ. ಈಗಾಗಲೇ ತೋತಾಪುರಿ ಚಿತ್ರೀಕರಣ ಮುಗಿಸಿರುವ ಜಗ್ಗೇಶ್ ಬಿಡುಗಡೆಗೆ ಕಾಯುತ್ತಿದ್ದಾರೆ. ಕೊನೆಯದಾಗಿ ಜಗ್ಗೇಶ್, ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
