ನಟ ಅರ್ಜುನ್ ರಾಮಪಾಲ್ ಮನೆ, ಕಚೇರಿ ಮೇಲೆ ದಾಳಿ!
ಡ್ರಗ್ಸ್: ನಟ ರಾಮಪಾಲ್ ಮನೆ, ಕಚೇರಿ ಮೇಲೆ ದಾಳಿ| ನಾಳೆ ವಿಚಾರಣೆಗೆ ಬರಲು ಎನ್‌ಸಿಬಿ ಬುಲಾವ್
ಮುಂಬೈ(ನ.10): ಬಾಲಿವುಡ್ ಡ್ರಗ್ಸ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮಾದಕವಸ್ತು ನಿಗ್ರಹ ದಳ (ಎನ್‌ಸಿಬಿ) ಸೋಮವಾರ ನಟ ಅರ್ಜುನ್ ರಾಮ್‌ಪಾಲ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ನವೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ರಾಮ್‌ಪಾಲ್‌ಗೆ ಸಮನ್ಸ್ ನೀಡಿದೆ.
ಅಂಧೇರಿ, ಆಖರ್ ಹಾಗೂ ಬಾಂದ್ರಾಗಳಲ್ಲಿರುವ ರಾಮ್‌ಪಾಲ್ ಮನೆ ಮತ್ತು ಕಚೇರಿಗಳ ಮೇಲೆ ಬೆಳಗ್ಗೆ 7 ಗಂಟೆಯಿಂದ 8 ತಾಸುಗಳ ಕಾಲ ಎನ್‌ಸಿಬಿ ತಪಾಸಣೆ ಕೈಗೊಂಡಿದೆ. ರಾಮ್‌ಪಾಲ್ ಮೇಲೆ ಡ್ರಗ್ಸ್ ಕತ್ತಿ ತೂಗುತ್ತಿರುವುದು ಬಾಲಿವುಡ್‌ನಲ್ಲಿ ತಲ್ಲಣ ಸೃಷ್ಟಿಸಿದೆ.
ಭಾನುವಾರವಷ್ಟೇ ನಿರ್ಮಾಪಕ ಫೈರೋಜ್ ನಾಡಿಯಾದ್‌ವಾಲಾ ಮನೆ ಮೇಲೆ ದಾಳಿ ನಡೆಸಲಾಗಿತ್ತು ಹಾಗೂ 10 ಗ್ರಾಂ ಮರಿಜುವಾನಾ ಡ್ರಗ್ಸ್ ಹೊಂದಿದ್ದ ಅವರ ಪತ್ನಿಯನ್ನು ಬಂಧಿಸಲಾಗಿತ್ತು. ಇದಕ್ಕೂ ಮುನ್ನ ರಾಮ್‌ಪಾಲ್‌ರ ಗೆಳತಿ ಗ್ಯಾಬ್ರಿಯೆಲಾ ಅವರ ಸೋದರ ಅಗಿಸಿಲೋಸ್ ಡೆಮೆಟ್ರಿಯಾಡೆಸ್‌ನನ್ನು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈತನಿಗೂ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸಂಪರ್ಕದಲ್ಲಿದ್ದ ಡ್ರಗ್ಸ್ ಡೀಲರ್‌ಗಳಿಗೂ ನಂಟು ಇತ್ತು ಎನ್ನಲಾಗಿದೆ.
ಇದೇ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್‌ಪ್ರೀತ್ ಸಿಂಗ್ ಅವರ ವಿಚಾರಣೆ ಕೂಡ ನಡೆದಿದೆ.