ನಟಿ ಪರಿಣಿತಿ ಹಾಗೂ ಸಂಸದ ರಾಘವ್​ ಚಡ್ಡಾ ಇತ್ತ ಹನಿಮೂನ್​ ಮೂಡ್​ನಲ್ಲಿದ್ದರೆ, ಅತ್ತೆ ಕೋರ್ಟ್​ ಮನೆ ಖಾಲಿ ಮಾಡಲು ಆದೇಶಿಸಿದೆ. ಕಾರಣವೇನು? 

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಸದ್ಯ ಹನಿಮೂನ್​ ಮೂಡ್​ನಲ್ಲಿದ್ದಾರೆ. ಇದೇ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ನಡೆದಿದೆ. ಒಂದು ವಾರದ ಸುದೀರ್ಘ ಮದುವೆಯ ಸಂಭ್ರಮದ ಬಳಿಕ ಸದ್ಯ ರಿಲ್ಯಾಕ್ಸ್​ ಆಗಿರುವ ಜೋಡಿ ಸಂತಸದಲ್ಲಿ ತೇಲಾಡುತ್ತಿದೆ. ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ ಮದುವೆಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದರು. ಎಂಗೇಜ್​ಮೆಂಟ್​ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್​ ಪಿಟಿಕ್​ ಎಂದಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ಇದೀಗ ಮದುವೆಯನ್ನೂ ಆಗಿದ್ದು, ಅದರ ವಿಡಿಯೋಗಳು ಹಂತ ಹಂತವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮದುವೆಯ ದಿನ ಮೊಬೈಲ್‌ ಫೋನ್‌ ಬ್ಯಾನ್‌ ಮಾಡಿದ್ದರಿಂದ ಮದುವೆಯ ದಿನವೇ ಫೋಟೋ, ವಿಡಿಯೋಗಳು ವೈರಲ್‌ ಆಗಿರಲಿಲ್ಲ. ಇದೀಗ ಮದುವೆ ಮುಗಿದ ಮೇಲೆ ಒಂದೊಂದೇ ವಿಡಿಯೋಗಳು ಬರುತ್ತಿವೆ.

ಇದರ ಬೆನ್ನಲ್ಲೇ ರಾಘವ್​ ಚಡ್ಡಾ ಅವರಿಗೆ ದೆಹಲಿ ಕೋರ್ಟ್​ ಮನೆ ಖಾಲಿ ಮಾಡುವ ಶಾಕಿಂಗ್​ ಆದೇಶ ನೀಡಿದೆ. ಅವರಿಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ಕೂಡಲೇ ಖಾಲಿ ಮಾಡಲು ಕೋರ್ಟ್​ ಹೇಳಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಸಂಸದರಾಗಿರುವ ರಾಘವ್ ಚಡ್ಡಾ ಅವರಿಗೆ 2022ರ ಜುಲೈನಲ್ಲಿ ಟೈಪ್ 6 ಬಂಗಲೆಯನ್ನು ನೀಡಲಾಯಿತು. ಈ ವೇಳೆ ರಾಜ್ಯಸಭಾ ಅಧ್ಯಕ್ಷರ ಬಳಿ ರಾಘವ್ ಅವರು ವಿಶೇಷ ಮನವಿ ಮಾಡಿಕೊಂಡು ತಮಗೆ ಟೈಪ್ 7 ಬಂಗಲೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಸಲಿಗೆ ಟೈಪ್-7 ಸರ್ಕಾರಿ ಬಂಗಲೆಗಳನ್ನು ಮಾಜಿ ಸಚಿವರು, ಮುಖ್ಯಮಂತ್ರಿ ಅಥವಾ ಗವರ್ನರ್​ಗಳಿಗೆ ನೀಡಲಾಗುತ್ತದೆ. ಆದರೆ ಇವರು ಸಂಸದರಾಗಿದ್ದಾರೆ.

ಮದ್ವೆಯ ದಿನ ಪರಿಣಿತಿ ಭಾವಿ ಪತಿಗೆ ಹೀಗೆ ಕಂಡೀಷನ್‌ ಹಾಕೋದಾ? ಮುಗೀತು ನಿಮ್‌ ಕಥೆ ಎಂದ ಫ್ಯಾನ್ಸ್‌!

ಅವರ ಮನವಿ ಮೇರೆಗೆ ಟೈಪ್​-7 ಬಂಗಲೆ ನೀಡಲಾಗಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ವಿರೋಧದ ಬೆನ್ನಲ್ಲೇ ಈ ಬಂಗಲೆಯನ್ನು ಖಾಲಿ ಮಾಡಲು ಅವರಿಗೆ ರಾಜ್ಯಸಭಾ ಕಾರ್ಯದರ್ಶಿ ಸೂಚಿಸಿದ್ದರು. ತಮಗೆ ಈ ರೀತಿ ನೀಡಿರುವ ಆದೇಶದ ವಿರುದ್ಧ ರಾಘವ್​ ದೆಹಲಿಯ ಪಟಿಯಾಲಾ ಕೋರ್ಟ್​​ನಲ್ಲಿ ಪ್ರಶ್ನೆ ಮಾಡಿದ್ದರು. ಈ ಹಿಂದೆ ರಾಜ್ಯಸಭೆ ಸೂಚನೆಗೆ ಕೋರ್ಟ್​ ತಡೆ ನೀಡಿತ್ತು. ಇದೀಗ ಅಂತಿಮ ತೀರ್ಪು ಹೊರಬಂದಿದೆ. ರಾಘವ್​ ಚಡ್ಡಾ ವಿರುದ್ಧ ಕೋರ್ಟ್​ ಆದೇಶ ಹೊರಡಿಸಿದೆ. ‘ನಿಮಗೆ ನೀಡಿದ ಸವಲತ್ತುಗಳ ಮೇಲೆ ಸಂಪೂರ್ಣವಾಗಿ ಹಕ್ಕು ಸಾಧಿಸೋಕೆ ಬರಲ್ಲ. ಕೊಟ್ಟಿರುವ ಬಂಗಲೆ ರದ್ದಾದ ನಂತರವೂ ಅದರಲ್ಲಿ ಮುಂದುವರಿಯಲು ನಿಮಗೆ ಹಕ್ಕಿಲ್ಲ’ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುಧಾನ್ಶು ಕೌಶಿಕ್ ಆದೇಶಿಸಿದ್ದಾರೆ. 

ಅಂದಹಾಗೆ ಈ ಬಂಗಲೆ ದೆಹಲಿಯ ಪಾಂಡಾರ ರಸ್ತೆಯಲ್ಲಿದೆ. ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಕೂಡಲೇ ರಾಘವ್​ ಚಡ್ಡಾ ಮನೆಯನ್ನು ಖಾಲಿ ಮಾಡಬೇಕಿದೆ.

ಪರಿಣಿತಿ-ರಾಘವ್​ ಮದ್ವೆಯ ರೋಚಕ ವಿಡಿಯೋ ವೈರಲ್​: ಹನಿಮೂನ್​ ಕ್ಯಾನ್ಸಲ್​!