ರಿಮ್‌ಜಿಮ್ ಗಿರೇ ಸಾವನ್: ಮಳೆ ಮಧ್ಯೆ ಹಿರಿಯ ಜೋಡಿಯ ಡ್ಯುಯೆಟ್ : ವೀಡಿಯೋ ವೈರಲ್
1979ರ ಮಂಜಿಲ್ ಸಿನಿಮಾದ ರಿಮ್ಜಿಮ್ ಗಿರೇ ಸಾವನ್ ಈ ಹಾಡಿಗೆ ಈಗ ಹಿರಿಯ ಜೋಡಿಯೊಂದು ಡ್ಯುಯೆಟ್ ಹಾಡಿದ್ದು ಈ ಹಿರಿಯ ಜೋಡಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಮುಂಗಾರು ಮಳೆ ಬದುಕಿಗೆ ಪ್ರಕೃತಿಗೆ ಹೊಸತನ ನೀಡುತ್ತದೆ. ಕಾದ ಇಳೆಯನ್ನು ತಂಪಾಗಿಸುವ ಮಳೆಯ ಮಧ್ಯೆ ಅನೇಕ ಕವಿಗಳು ಹುಟ್ಟಿದ್ದಾರೆ, ಪ್ರೇಮ ಹಾಗೂ ವಿರಹ ಗೀತೆಗಳನ್ನು ಬರೆದಿದ್ದಾರೆ. ಬಾಲಿವುಡ್ ಸೇರಿದಂತೆ ಹಲವು ಭಾರತೀಯ ಸಿನಿಮಾಗಳು ಸುರಿಯುವ ಮಳೆ ಮಧ್ಯೆ ಪ್ರೇಮದ ಡ್ಯುಯೆಟ್ ಬರೆದಿವೆ. ಮಳೆ ಎಂದ ಕೂಡಲೇ ಬಾಲಿವುಡ್ ಸಿನಿಮಾ ಪ್ರೇಮಿಗಳಿಗೆ ಅದರಲ್ಲೂ 90ರ ದಶಕಕ್ಕಿಂತಲೂ ಹಿಂದಿನ ಜಮಾನದ ಜನರನ್ನು ಸೆಳೆಯುವ ಸಿನಿಮಾ ಹಾಡು ಎಂದರೆ 1979ರ ಮಂಜಿಲ್ ಸಿನಿಮಾದ ರಿಮ್ಜಿಮ್ ಗಿರೇ ಸಾವನ್, ಈ ಹಾಡಿಗೆ ಈಗ ಹಿರಿಯ ವಯಸ್ಕ ಜೋಡಿಯೊಂದು ಡ್ಯುಯೆಟ್ ಹಾಡಿದು ಈ ಹಿರಿಯ ಜೋಡಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ವಾಣಿಜ್ಯ ನಗರಿ, ಮಾಯಾನಗರಿ ಮುಂಬೈನಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಮಳೆಯ ಮಧ್ಯೆ ಈ ಹಿರಿಯ ಜೋಡಿ ತಮ್ಮ ಕಾಲದ ಈ ಹಳೆ ಹಾಡನ್ನು ಮರು ನೆನಪಿಸಿಕೊಂಡಿದ್ದಾರೆ. ಮುಂಬೈನಲ್ಲಿ ಈ ಹಿರಿಯ ಜೋಡಿ ಮಂಜಿಲ್ ಸಿನಿಮಾದ ರಿಮ್ಜಿಮ್ ಗಿರೇ ಸಾವನ್ ಹಾಡಿನ ಪ್ರತಿಯೊಂದು ದೃಶ್ಯವನ್ನು ತಮ್ಮದೇ ರೀತಿಯಲ್ಲಿ ಮರು ಸೃಷ್ಟಿಸಿದ್ದಾರೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಇದರ ಜೊತೆಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಕೂಡ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಿನಗೆ ನಾನು ನನಗೆ ನೀನು... ವೃದ್ಧ ಜೋಡಿಯ ಬಾಂಧವ್ಯದ ವಿಡಿಯೋ ವೈರಲ್
'ಈ ವೀಡಿಯೋ ವೈರಲ್ ಆಗುತ್ತಿರುವುದು ಸಮರ್ಥನೀಯ, ಹಿರಿಯ ದಂಪತಿ ಬಾಲಿವುಡ್ ಜನಪ್ರಿಯ ಗೀತೆ ರಿಮ್ಜಿಮ್ ಗಿರೆ ಸಾವನ್ ಹಾಡು ಚಿತ್ರೀಕರಣಗೊಂದ ಪ್ರತಿ ಸ್ಥಳಕ್ಕೂ ಹೋಗಿ ಆ ಹಾಡನ್ನು ಮರು ಸೃಷ್ಟಿಸಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು. ನೀವು ನಿಮ್ಮ ಕಲ್ಪನೆಯನ್ನು ಬಿಚ್ಚಿಟ್ಟರೆ ನೀವು ಬಯಸಿದಂತೆ ಜೀವನವನ್ನು ಸುಂದರಗೊಳಿಸಬಹುದು ಎಂಬುದನ್ನು ಈ ಜೋಡಿ ನಮಗೆ ಹೇಳುತ್ತಿದ್ದಾರೆ' ಎಂದು ಆನಂದ್ ಮಹೀಂದ್ರ ಬರೆದಿದ್ದಾರೆ.
ರಿಮ್‌ಜಿಮ್ 1979ರ ದಶಕದಲ್ಲಿ ತೆರೆ ಕಂಡ ಮಂಜಿಲ್ (Manzil) ಸಿನಿಮಾದ ಸೂಪರ್ ಹಿಟ್ ಹಾಡಾಗಿದೆ. ಈ ಹಾಡಿನಲ್ಲಿ ಅಮಿತಾಭ್ ಬಚ್ಚನ್ ಹಾಗೂ ಮೌಸಮಿ ಚಟರ್ಜಿ ಅವರು ಅವರು ನಟಿಸಿದ್ದಾರೆ. ಸುರಿಯುತ್ತಿರುವ ಮಳೆಯ ಮಧ್ಯೆ ಮುಂಬೈನ ಪ್ರಸಿದ್ಧ ಸ್ಥಳಗಳಲ್ಲಿ ಈ ಹಾಡಿನ ಶೂಟಿಂಗ್ ನಡೆದಿದೆ. ಆರ್‌ಡಿ ಬರ್ಮನ್ ಅವರ ಈ ರಿಮ್‌ಜಿಮ್ ಗಿರೇ ಸಾವನ್ ಹಾಡಿಗಿಂತ ಚೆನ್ನಾಗಿ ಮಳೆಯನ್ನು ಬಣ್ಣಿಸಲು ಬೇರೆ ಹಾಡು ಯಾವುದಿದೆ ಎಂದು ಬಾಲಿವುಡ್ ಸಿನಿಮಾ ಪ್ರಿಯರು ಈ ವೀಡಿಯೋ ನೋಡಿ ಕೇಳುತ್ತಿದ್ದಾರೆ.
ನಿಮ್ಮ ಮನೆಲೂ ಅಜ್ಜಿ ತಾತ ಇಷ್ಟೊಂದು ಜೋಶಲ್ಲಿದ್ದಾರಾ... ವೈರಲ್ ವಿಡಿಯೋ
ಇನ್ನು ಈ ಜೋಡಿ ಪ್ರತಿ ದೃಶ್ಯದಲ್ಲೂ ಅಮಿತಾಬ್ ಬಚ್ಚನ್ (Amitabh Bachchan) ಹಾಗೂ ಮೌಸಮಿ ಚಟರ್ಜಿ (Moushumi Chatterjee) ಅವರಂತೆಯೇ ಕಾಸ್ಟ್ಯೂಮ್ ಅನ್ನು ಧರಿಸಿದ್ದು, ಅನೇಕರನ್ನು ಈ ವೀಡಿಯೋ ಹಳೆಯ ನೆನಪುಗಳಿಗೆ ದೂಡಿದೆ. ಒಂದು ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಈ ವೀಡಿಯೋದಲ್ಲಿ ಒಂದು ಸಣ್ಣ ವಿಂಡೋದಲ್ಲಿ ಮೂಲ ಹಾಡನ್ನು ಪ್ಲೇ ಮಾಡಲಾಗಿದೆ. ಅನೇಕರು ಈ ವೀಡಿಯೋ ನೋಡಿ ಭಾವುಕರಾಗಿದ್ದಾರೆ.
ಈ ಹಾಡನ್ನು ನಾನು ತುಂಬಾ ಇಷ್ಟಪಡುತ್ತೇನೆ. ಇದು ಮಾನ್ಸೂನ್ ರೋಮಾನ್ಸ್‌ನ್ನು ಚೆನ್ನಾಗಿ ಬಣ್ಣಿಸಿದೆ. ಹಾಗೂ ಈ ಹಾಡು ಆಗಲೂ ಈಗಲೂ ಯಾವಾಗಲೂ ಎವರ್‌ಗ್ರೀನ್ ಆಗಿರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಜೋಡಿಗೆ ಶುಭವಾಗಲಿ, ಅವರು ಇದೇ ರೀತಿ ಇನ್ನೂ ಹಲವು ಮಾನ್ಸೂನುಗಳನ್ನು ಎಂಜಾಯ್ ಮಾಡಲಿ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಯಾವುದೋ ರೀಲ್ಸ್ ಮೇಕರ್‌ಗಳು ಈ ವೀಡಿಯೋ ಮಾಡದೇ ಹಿರಿಯ ಜೋಡಿಯೊಂದು ಈ ವೀಡಿಯೋವನ್ನು ಮರುಸೃಷ್ಟಿಸಿರುವ ಕಾರಣಕ್ಕೆ ಜನರು ಇದನ್ನು ಇಷ್ಟಪಟ್ಟಿದ್ದಾರೆ. ಈ ಸುಂದರವಾದ ಜೋಡಿಗೆ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಜೋಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮವಾಗಿದ್ದು, ಅವರು ಈ ದಿನವನ್ನು ಸಂಭಮ್ರಿಸಲು ಸಮರ್ಥರಾಗಿದ್ದಾರೆ. ನಿಜವಾಗಿಯೂ ಅದೃಷ್ಟವಂತ ಜೋಡಿಗಳಿವರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಯಸ್ಸು ಕೇವಲ ನಂಬರ್ ಅಷ್ಟೇ ನಿಮ್ಮೊಳಗಿನ ಮಗುವನ್ನು ಜೀವಂತವಾಗಿರಿಸಿ, ಈ ವೀಡಿಯೋ ಇಷ್ಟವಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರನ್ನು ಹಳೆ ಜಮಾನಕ್ಕೆ ಜಾರಿಸಿದೆ.