ಶಿವಮೊಗ್ಗ(ಅ.31): ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನಡೆಸಿದ ಆಡಳಿತ ವೈಖರಿಯ ಪರಿಣಾಮ ರಾಜ್ಯದಲ್ಲಿ ಇಂದು ಕಾಂಗ್ರೆಸ್‌ ಪಕ್ಷ ಸತ್ತು ಹೋಗಿದ್ದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದು ಮುಖ್ಯಮಂತ್ರಿಯಾಗಿದ್ದಾಗ ಎದುರಾದ ಬರ ಮತ್ತು ಜನರ ಸಂಕಷ್ಟದ ಸಂದರ್ಭದಲ್ಲಿ ಜನರ ಜೊತೆ ನಿಲ್ಲಲಿಲ್ಲ. ಆಗಿನ ಸಂದರ್ಭವನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಯಿತು. ಅದರ ಪರಿಣಾಮವೇ ಸರ್ಕಾರ ಸತ್ತು ಹೋಗಿದ್ದು. ಬಹುಶಃ ಅದನ್ನು ನೆನಪು ಮಾಡಿಕೊಳ್ಳುವ ದೃಷ್ಟಿಯಿಂದಲೇ ಸಿದ್ದರಾಮಯ್ಯ ಅವರು ಈಗ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂದು ಜಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

‘ಬಿಜೆಪಿ ಇದ್ರೆ ದೇಶ ಸರ್ವನಾಶ ಆಗೋದು ಗ್ಯಾರಂಟಿ’.

ಆಗ ಮುಖ್ಯಮಂತ್ರಿಗಳಾಗಲೀ, ಉಸ್ತುವಾರಿ ಸಚಿವರಾಗಲೀ ಯಾವುದೇ ಜಿಲ್ಲೆಯ ಕಡೆ ಮುಖ ಮಾಡಲಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ಆ ಬಳಿಕ ಬಂದ ಮೈತ್ರಿ ಸರ್ಕಾರದ ಅವಧಿಯಲ್ಲಿಯೂ ರೈತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಲಿಲ್ಲ. ವಸ್ತು ಸ್ಥಿತಿ ಏನೆಂಬುದನ್ನು ಅರಿಯಲು ಸಿದ್ದರಾಮಯ್ಯ ಹಾಗೂ ಎಚ್‌. ಡಿ. ದೇವೇಗೌಡರು ಒಂದು ಸುತ್ತು ರಾಜ್ಯ ಪ್ರವಾಸ ನಡೆಸುವಂತೆ ಸಲಹೆ ನೀಡಲಾಗಿತ್ತು. ಆದರೆ ಭೇಟಿ ಮಾಡಲಿಲ್ಲ. ಹೀಗಾಗಿಯೇ ಜೆಡಿಎಸ್‌-ಕಾಂಗ್ರೆಸ್‌ ಆಡಳಿತ ವೈಖರಿ ಕಂಡು ಜನತೆ ಬೇಸರಗೊಂಡಿದ್ದರು ಎಂದು ಟೀಕಿಸಿದರು.

ನಾನು ಹಿಂದಿನ ಸರ್ಕಾರಕ್ಕೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ಒಂದಂತು ಸತ್ಯ, ಕಾಂಗ್ರೆಸ್‌ಗೆ ಪುನಃ ಜೀವ ಬರುವ ಹಾಗೂ ಸಿದ್ದರಾಮಯ್ಯ ಪುನಃ ಈ ರಾಜ್ಯದ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಸಿದ್ರಾಮಯ್ಯ ಲೋಕಾಯುಕ್ತವನ್ನು ಕೊಂದು ಹಾಕಿದ್ರು: ಶೋಭಾ...

ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಭೀಕರ ಜಲಪ್ರಳಯವಾಗಿದ್ದ ಸಂದರ್ಭದಲ್ಲಿ ನಾಗರೀಕರು, ಸಂಘಸಂಸ್ಥೆ ಹಾಗೂ ಸರ್ಕಾರ ಜನತೆಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಿದೆ. ಸಂಕಷ್ಟಕ್ಕೀಡಾದವರಿಗೆ ತುರ್ತು ಪರಿಹಾರವಾಗಿ ತಲಾ 10 ಸಾವಿರ ರು. ಬಿಡುಗಡೆ ಮಾಡಿದೆ. ಮನೆ ಕಳೆದುಕೊಂಡವರಿಗೆ 1 ಲಕ್ಷ ರು. ನೀಡಿದ್ದೇವೆ. ಜನರ ನಿರೀಕ್ಷೆ ಮೀರಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದ್ದಾರೆ.