ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿಯಾಗಿದ್ದಾನೆ. ಅಪ್ಪ ಮಗ ಪದೇ ಪದೇ ಜಗಳವಾಡುತ್ತಿದ್ದ ಕಾರಣ ಕುಟುಂಬ ಮೂರು ದಿಕ್ಕಾಗಿತ್ತು. ಒಬ್ಬನೇ ಮಗ ಇದೀಗ ದುರಂತ ಅಂತ್ಯಕಂಡಿದ್ದಾನೆ. 

ಚಿಕ್ಕಮಗಳೂರು (ಜ.04) ಅಪ್ಪ ಮಗನಿಂದ ಪ್ರತಿ ದಿನ ಮನೆಯಲ್ಲಿ ಜಗಳ. ಕುಡಿದು ಬರುತ್ತಿದ್ದ ಅಪ್ಪನ ನಿಯಂತ್ರಿಸಲು ಮಗ ಹೊರಟಿದ್ದರೆ, ಮಗನ ಮೇಲೆ ಸವಾರಿ ಮಾಡುವುದು ಅಪ್ಪನ ಪ್ರತಿನಿತ್ಯದ ಕೆಲಸವಾಗಿತ್ತು. ಹೀಗೆ ಕುಡಿದ ಬಂದ ತಂದೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಮತ್ತಿನಲ್ಲಿ ತಂದೆ ತನ್ನ ಮಗನನ್ನೇ ಹತ್ಯೆಗೈದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ.

ಜಗಳದಿಂದ ಛಿದ್ರವಾದ ಕುಟುಂಬ

ರಮೇಶ್ ಅಚಾರ್ ಕುಟುಂಬ ಛಿದ್ರವಾಗಿದೆ. ಇದ್ದ ಒಬ್ಬ ಮಗ 29 ವರ್ಷದ ಪ್ರದೀಪ್ ಆಚಾರ್ ಬಲಿಯಾಗಿದ್ದಾನೆ. ಇತ್ತ ರಮೇಶ್ ಆಚಾರ್ ಪತ್ನಿ ಇವರಿಬ್ಬರ ಸುದೀರ್ಘ ಜಗಳದಿಂದ ಬೇಸತ್ತು ಮನೆ ಬಿಟ್ಟು ಹೋಗಿ ವರ್ಷಗಳು ಉರುಳಿದೆ. ಒಂದು ಸುಂದರ ಕುಟುಂಬ ಇದೀಗ ಛಿದ್ರವಾಗಿದ್ದು ಮಾತ್ರವಲ್ಲ ಮಗು ಮಸಣ ಸೇರಿದರೆ, ಅಪ್ಪ ಜೈಲು ಸೇರಿದ್ದಾನೆ. ಇತ್ತ ಪತ್ನಿ ತವರು ಸೇರಿದ ದುರಂತ ಕತೆ ಇದೆ.

ಮನೆ ಬಿಟ್ಟು ಹೋದ ಅಮ್ಮ, ತಂದೆ ಜೊತೆ ಪ್ರದೀಪ್ ವಾಸ

ಕ್ಷುಲಕ ಕಾರಣಕ್ಕೆ ಕುಡಿದು ಪದ ಪದೇ ಅಪ್ಪ ಮಗನ ಗಲಾಟೆ ನಡೆಯುತ್ತಿತ್ತು. ಇವರ ಗಲಾಟೆ ಬಿಡಿಸುವಾಗ ಪತ್ನಿಗೂ ಎರಡೇಟು ಸಿಗುತ್ತಿತ್ತು. ಬುದ್ದಿ ಹೇಳಿದರೂ ಕೇಳಲಿಲ್ಲ, ಗದರಿಸಿದರೂ ಆಗಲಿಲ್ಲ. ಹೀಗಾಗಿ ಅಪ್ಪ ಮಗನ ಸಹವಾಸವೇ ಸಾಕು ಎಂದು ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಇತ್ತ ಹಲವು ತಿಂಗಳಿಂದ ಅಪ್ಪ ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು. ಆದರೆ ಜಗಳ ಹಾಗೇ ಮುಂದುವರಿದಿತ್ತು.

ನಿನ್ನೆ ರಾತ್ರಿ (ಜ.03) ಕಂಠಪೂರ್ತಿ ಕುಡಿದು ಬಂದ ರಮೇಶ್ ಆಚಾರ್, ಮಗನ ವಿರುದ್ಧ ರೇಗಾಡಿದ್ದಾರೆ. ಇದರಿಂದ ಮಗ ಕೂಡ ಕೋಪಗೊಂಡಿದ್ದಾನೆ. ಅತನೂ ಕೂಗಾಡಿದ್ದಾನೆ. ಇಬ್ಬರ ಜಗಳ ಶುರುವಾಗಿದೆ. ಪ್ರತಿ ದಿನ ಜಗಳ, ಚೀರಾಟ, ಹೊಡೆದಾಟ ನಡೆಯುತ್ತಿದ್ದ ಕಾರಣ ಅಕ್ಕ ಪಕ್ಕದ ಮನೆಯವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಜಗಳ ನಡೆಯುತ್ತಿರುವುದು ನೆರೆ ಮನೆಯವರಿಗೆ ಕೇಳಿದೆ. ಆದರೆ ಬಿಡಿಸುವವ ಸಾಹಸ ಮಾಡಲಿಲ್ಲ. ಕಾರಣ ಹೀಗೆ ಹಲವು ಬಾರಿ ಜಗಳ ಬಿಡಿಸಿ ಸಂಕಷ್ಟ ಸಿಲುಕಿದ ಉದಾಹರಣೆಗಳಿತ್ತು. ಹೀಗಾಗಿ ಅಪ್ಪ ಮಗನ ಸಹವಾಸವೇ ಬೇಡ ಎಂದು ನೆರೆ ಮನೆಯವರು ನಿರ್ಲಕ್ಷಿಸಿದ್ದರು. ಜಗಳ ತಾರಕಕ್ಕೇರಿದ ಬೆನ್ನಲ್ಲೇ ಅಪ್ಪ ಮಚ್ಚಿನಿಂದ ಮಗನ ಮೇಲೆ ಬೀಸಿದ್ದಾನೆ. ಮಚ್ಚಿನೇಟಿಗೆ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ಕುಡಿತದ ಅಮಲಿನಲ್ಲಿ ತಾನು ಏನು ಮಾಡಿದ್ದೇನೆ ಅನ್ನೋದೇ ಅಪ್ಪ ರಮೇಶ್ ಆಚಾರ್‌ಗೆ ಗೊತ್ತಾಗಿಲ್ಲ. ಮಗನ ಮೇಲೆ ದಾಳಿ ಮಾಡಿ ಅಲ್ಲ ಮಲಗಿದ್ದಾನೆ. ಇತ್ತ ರಕ್ತದ ಮಡುವಿನಲ್ಲಿ ಬಿದ್ದ ಪ್ರದೀಪ್ ಆಚಾರ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

ಮನೆಯ ಹಾಲ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಅಮಲು ಇಳಿದಾಗ ಪರಿಸ್ಥಿತಿ ಕೈಮೀರಿದೆ. ಹೀಗಾಗಿ ರಮೇಶ್ ಆಚಾರ್, ಮಗನ ಮೃತದೇಹವನ್ನು ಹಾಲ್‌ನಿಂದ ವರಾಂಡಕ್ಕೆ ಎಳೆದುಕೊಂಡು ತಂದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಪೊಲೀಸರು ರಮೇಶ್ ಅಚಾರ್ ವಶಕ್ಕೆ ಪಡೆದಿದ್ದಾರೆ. ಇತ್ತ ಪ್ರದೀಪ್ ಆಚಾರ್ ಮೃತದೇಹವವನ್ನುು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಜೀತೇಂದ್ರ ಕುಮಾರ್ ದಯಾಮ ಭೇಟಿ ನೀಡಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.