ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲು ಸಂಚಾರ ಆರಂಭವಾಗಲಿದೆ. ಮಲೆನಾಡು, ತುಮಕೂರು, ಬೆಂಗಳೂರು ಮತ್ತು ಕೋಲಾರ ಭಾಗದ ಭಕ್ತರಿಗೆ ಇದು ಸಿಹಿಸುದ್ದಿಯಾಗಿದೆ. ಪ್ರತಿ ಗುರುವಾರ ತಿರುಪತಿಯಿಂದ ಮತ್ತು ಶುಕ್ರವಾರ ಚಿಕ್ಕಮಗಳೂರಿನಿಂದ ರೈಲು ಸಂಚರಿಸಲಿದೆ.

ಬೆಂಗಳೂರು (ಜೂ.28): ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ.ಸೋಮಣ್ಣ (V Somanna) ರಾಜ್ಯದ ಮಲೆನಾಡು (chikkamagaluru), ತುಮಕೂರು (Tumkur) ಹಾಗೂ ಬೆಂಗಳೂರು (Bengaluru) ಭಾಗದ ತಿರುಪತಿ (tirupati) ತಿಮ್ಮಪ್ಪನ ಭಕ್ತರಿಗೆ ಹೊಸ ರೈಲು (New Weekly Train) ಘೋಷಣೆ ಮಾಡಿದ್ದಾರೆ. ಇದು ಪ್ರತಿ ವಾರ ಸಂಚಾರ ಮಾಡಲಿದೆ ಎಂದು ವಿ.ಸೋಮಣ್ಣ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

'ತಿರುಪತಿಯ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುವ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲಿನ (Weekly Train) ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗುರುವಾರ ತಿರುಪತಿಯಿಂದ ಹಾಗೂ ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ಈ ರೈಲು ಹೊರಡಲಿದೆ. ಈ ಭಾಗದ ಜನತೆ ಈ ರೈಲಿನ ಸೌಲಭ್ಯ ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ.' ಎಂದು ಅವರು ಬರೆದುಕೊಂಡಿದ್ದಾರೆ.

Scroll to load tweet…

ರೈಲು ಸಂಖ್ಯೆ 17423 ಪ್ರತಿ ಗುರುವಾರ ರಾತ್ರಿ 09.00 ಗಂಟೆಗೆ ತಿರುಪತಿಯಿಂದ ಹೊರಡಲಿದ್ದು ಮರುದಿನ ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಚಿಕ್ಕಮಗಳೂರು ತಲುಪಲಿದೆ. ಅದೇ ರೀತಿ ಚಿಕ್ಕಮಗಳೂರು-ತಿರುಪತಿ (ರೈಲು ಸಂಖ್ಯೆ 17424) ಪ್ರತಿ ಶುಕ್ರವಾರ, ಸಂಜೆ 05:30 ಚಿಕ್ಕಮಗಳೂರಿನಿಂದ ಹೊರಡಲಿದ್ದು ಶನಿವಾರ ಬೆಳಿಗ್ಗೆ 07:40ಕ್ಕೆ ತಿರುಪತಿ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಮಾರ್ಗ ಮಧ್ಯದಲ್ಲಿ ಸಿಗುವ ನಿಲ್ದಾಣಗಳಾದ ಚಿತ್ತೂರು, ಕಟ್ಟಾಡಿ, ಕುಪ್ಪಂ, ಬಂಗಾರಪೇಟೆ, ವೈಟ್‌ಫೀಲ್ಡ್, ಕೆ ಆರ್ ಪುರಂ, ಎಸ್‌ಎಂವಿಬಿ ಬೆಂಗಳೂರು, ಚಿಕ್ಕ ಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬಿರೂರು, ಕಡೂರು, ಬಿಸಲೇಹಳ್ಳಿ, ಸಕರಾಯಪಟ್ಟಣದಲ್ಲಿ ನಿಲ್ಲಲಿದೆ ಎಂದು ಮಾಹಿತಿ ನೀಡಿದ್ದು, ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಜನತೆ ಈ ವಾರದ ರೈಲಿನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಭಾಲ್ಕಿಯಲ್ಲಿ ಟ್ರೇನ್‌ ನಿಲುಗಡೆ: ಇದೇ ರೀತಿ ಔರಂಗಾಬಾದ್-ತಿರುಪತಿ ಎಕ್ಸ್‌ಪ್ರೆಸ್‌ ರೈಲಿಗೆ ಬೀದರ್‌ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಿಲುಗಡೆಗೂ ವ್ಯವಸ್ಥೆ ಮಾಡಿದ್ದಾರೆ. ಈ ಭಾಗದ ಜನತೆ ಹಾಗೂ ಜನಪ್ರತಿನಿಧಿಗಳ ಬೇಡಿಕೆಯಂತೆ ಔರಂಗಾಬಾದ್-ತಿರುಪತಿ ಎಕ್ಸ್‌ಪ್ರೆಸ್‌ ರೈಲಿಗೆ (ರೈಲು ಸಂಖ್ಯೆ : 17621/17622) ಭಾಲ್ಕಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಿ ಆದೇಶಿಸಲಾಗಿದ್ದು, ಶೀಘ್ರದಲ್ಲಿಯೇ ಈ ಎಕ್ಸ್‌ಪ್ರೆಸ್‌ ರೈಲು ಭಾಲ್ಕಿಯಲ್ಲಿ ನಿಲುಗಡೆ ನೀಡಲಿದೆ. ಭಾಲ್ಕಿ ಪಟ್ಟಣ ಹಾಗೂ ಸುತ್ತಮುತ್ತಲಿನ ಜನತೆ ಈ ರೈಲು ಸೇವೆಯನ್ನು ಬಳಸಿಕೊಳ್ಳಬೇಕು ಎಂದು ವಿ.ಸೋಮಣ್ಣ ಟ್ವೀಟ್‌ ಮಾಡಿದ್ದಾರೆ.