ಧಾರಾಕಾರ ಮಳೆ: ಕೊಳೆತ ಈರುಳ್ಳಿ ಬೆಳೆ, ಕಣ್ಣೀರಿಟ್ಟ ಅನ್ನದಾತ
ಭಾರೀ ಮಳೆಯ ಪರಿಣಾಮ ಬೆಳೆದ ಈರುಳ್ಳಿ ಬೆಳೆಯೆಲ್ಲ ತುಂಬಿದ ನೀರಲ್ಲಿ ಕೊಳೆತು ನಾರುತ್ತಿದೆ. ಇನ್ನೇನು ಕೈಗೆ ಸೇರಬೇಕಿದ್ದ ಬೆಳೆ ಮಳೆಯಿಂದಾಗಿ ಮಣ್ಣುಪಾಲಾಗಿದೆ. ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ(ನ.05): ಸತತವಾಗಿ ಕಳೆದ ಒಂದು ವಾರ ಸುರಿದ ಧಾರಾಕಾರ ಮಳೆಯ ಅಬ್ಬರಕ್ಕೆ ತಾಲೂಕಿನಲ್ಲಿ ಬೆಳೆಯಲಾಗಿದ್ದ ವಾಣಿಜ್ಯ ಬೆಳೆಗಳು ಸೇರಿದಂತೆ ಇತರೆ ಫಸಲು ನೀರಿನಲ್ಲಿ ಕೊಳೆತು ನಾರುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರು. ನಷ್ಟವಾಗಿದ್ದು, ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಯಳಂದೂರು ತಾಲೂಕಿನ ರಚ್ಚೆಯಿಡಿದ ಮಳೆಯಿಂದ ಕೆರೆ, ಕಟ್ಟೆ, ಕಾಲುವೆಗಳು ತುಂಬಿ ನೀರು ಹರಿಯುತ್ತಿದೆ. ಕಾಲುವೆಗಳಲ್ಲಿ ನೀರು ಹರಿದು ಕಬ್ಬು ಮತ್ತು ಭತ್ತದ ಗದ್ದೆಗಳಲ್ಲಿ ತುಂಬುತ್ತಿದೆ. ಇದರಿಂದ ಬೆಳೆಗಳ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಈ ನಡುವೆ ನಾಟಿ ಮಾಡಿದ ಈರುಳ್ಳಿ, ಕೋಸು, ಬಾಳೆ ಮತ್ತು ಭತ್ತದ ತಾಕುಗಳಲ್ಲಿ ಶೀತ ಹೆಚ್ಚಾಗಿ ಕೊಳೆ ರೋಗಕ್ಕೆ ತುತ್ತಾಗಿವೆ. ಇದರಿಂದ ಕೃಷಿ ಚಟುವಟಿಕೆಗೆ ಲಕ್ಷಾಂತರ ಖರ್ಚುಮಾಡಿ ಬೇಸಾಯ ಮಾಡಿದ ಕೃಷಿಕರು ಬೆಳೆ ನಷ್ಟದಿಂದ ಕಂಗೆಟ್ಟಿದ್ದಾರೆ.
'ಸಿದ್ದರಾಮಯ್ಯನೇ ಮೊದಲ ಅತೃಪ್ತ ಶಾಸಕ': ಸಂಸದ ವಾಗ್ದಾಳಿ
ತಾಲೂಕಿನ ಗೌಡಹಳ್ಳಿಯಲ್ಲಿ 3 ಎಕರೆ ಹೊಲದಲ್ಲಿ ಬೆಳೆದ ಈರುಳ್ಳಿ, 2 ಎಕರೆಯಲ್ಲಿ ಬಿತ್ತನೆ ಮಾಡಿದ ಕೋಸು ಮತ್ತು ಬಾಳೆ ಸಂಪೂರ್ಣ ನೆಲ ಕಚ್ಚಿದೆ. ಈರುಳ್ಳಿ ನೆಲದಲ್ಲೇ ಕೊಳೆತು ಮೊಳಕೆ ಬಂದಿದೆ. ಕೋಸು ಕೆಸರಿಗೆ ಸಿಲುಕಿದೆ. ಎಲೆಚುಕ್ಕೆ ರೋಗ ಬಾಳೆಯನ್ನು ತಿನ್ನುತ್ತಿದೆ.
ಮಿಶ್ರ ಕೃಷಿಯಲ್ಲಿ 5 ಎಕರೆಗೆ ಬಾಳೆ ಜೊತೆ ಈರುಳ್ಳಿ, ಎಲೆ ಕೋಸು ನಾಟಿ ಮಾಡಲಾಗಿತ್ತು. ಈರುಳ್ಳಿ ಕಟಾವು ಮಾಡುವ ಹಂತ ಮುಟ್ಟಿತ್ತು. ತಮಿಳುನಾಡಿನ ಮಧ್ಯವರ್ತಿಗಳಿಗೆ ರು. 1 ಲಕ್ಷಕ್ಕೆ ಈರುಳ್ಳಿ ಮಾರಾಟ ಮಾಡಿ, ರು. 2 ಸಾವಿರ ಮುಂಗಡ ಪಡೆದಿದ್ದೆವು. ಆದರೆ, ಸತತ ಮಳೆಗೆ ಈರುಳ್ಳಿ ಕೊಳೆತು ಮೊಳಕೆ ಬಂದಿದೆ. ಕೋಸು ಗುಣಮಟ್ಟಕಳೆದುಕೊಂಡಿದೆ. ಇದರಿಂದ 2 ಲಕ್ಷ ಬೆಳೆ ನಷ್ಟವಾಗಿದೆ ಎಂದು ಗೌಡಹಳ್ಳಿ ಕೃಷಿಕ ಮಹದೇವಸ್ವಾಮಿ ಅಳಲು ತೋಡಿಕೊಂಡರು.
ಅಗರ ಹೋಬಳಿ ವ್ಯಾಪ್ತಿಯ ಗೌಡಹಳ್ಳಿ ಸುತ್ತಮುತ್ತ ಭತ್ತ ಮತ್ತು ತರಕಾರಿ ವ್ಯವಸಾಯಕ್ಕೂ ಒತ್ತು ನೀಡಲಾಗಿದೆ. ಆದರೆ, ಟೊಮೆಟೊಗೆ ಮಾತ್ರ ಬೆಳೆ ವಿಮೆಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಬೆಳೆಗಳಿಗೆ ವಿಮೆಗೆ ಅವಕಾಶ ಇಲ್ಲ. ಇದರಿಂದ ನಷ್ಟಹೆಚ್ಚಾಗಿದೆ ಎಂದು ರೈತ ಬಸವರಾಜಪ್ಪ ದೂರಿದರು.
ಹುಣಸೂರು ಉಪಚುನಾವಣೆ : ಯೋಗೇಶ್ವರ್ ಸ್ಪರ್ಧೆ ಖಚಿತ?
ತಾಲೂಕಿನ ಗೌಡಹಳ್ಳಿ ಮತ್ತು ಮದ್ದೂರು ಸುತ್ತಮುತ್ತ ಭತ್ತದ ಪೈರಿಗೆ ಬಿಳಿ ಹುಣ್ಣೆ ರೋಗ ಕಾಣಿಸಿಕೊಂಡಿತ್ತು. ಸಣ್ಣ ಹುಳುಗಳು ಭತ್ತದ ಸಸಿಗೆ ಮುತ್ತಿಗೆ ಹಾಕಿದ್ದು, ಹಚ್ಚ ಹಸಿರಾಗಿದ್ದ ಪೈರು ಬಿಳಿ ಬಣ್ಣಕ್ಕೆ ತಿರುಗಿತ್ತು. ಔಷದೋಪಚಾರ ಮಾಡಿ ಬೆಳೆ ರಕ್ಷಣೆ ಮಾಡಿಕೊಂಡಿದ್ದೇವೆ ಎಂದು ರೈತ ಪಟೇಲ್ ರಾಜಪ್ಪ ಹೇಳಿದರು.
ಹಿಂಗಾರು ಮಳೆ ಮತ್ತೆ ಮುಂದುವರೆದರೆ ಚಳಿಗಾಲದ ಬೆಳೆಗಳ ಬೆಳವಣಿಗೆ ಕುಂಟಿತವಾಗಲಿದೆ. ಕೆರೆ, ಕಾಲುವೆ ನೀರು ತಾಕಿನಲ್ಲಿ ನಿಂತರೆ ಕಬ್ಬು, ತೊಗರಿ, ತೆಂಗು ಸಸಿಗಳ ಬೆಳವಣಿಗೆ ಕುಂಟಿತವಾಗಲಿದೆ ಎಂದು ಅಂಬಳೆ ನಂಜಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.