ಉಡುಪಿ: ಗೃಹಿಣಿ ಯುಪಿಎಸ್‌ಸಿ ತೇರ್ಗಡೆ, ಪುಟ್ಟ ಮಗುವಿನ ತಾಯಿಯ ದೊಡ್ಡ ಸಾಧನೆ..!
ಆರಂಭದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದು, ತಮ್ಮ ಬಿಡುವಿನ ಸಮಯವನ್ನು ಯುಪಿಎಸ್‌ಸಿ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತಿದ್ದರು. ಬಳಿಕ ಉದ್ಯೋಗಕ್ಕೆ ನಿವೃತ್ತಿ ನೀಡಿ, ಸಂಪೂರ್ಣವಾಗಿ ಯುಪಿಎಸ್‌ಸಿ ಪರೀಕ್ಷೆ ತಯಾರಿ ನಡೆಸಿ, 2022ರ ಪರೀಕ್ಷೆಯಲ್ಲಿ ತೇರ್ಗಡೆಯಾದ ನಿವೇದಿತಾ ಶೆಟ್ಟಿ
ಉಡುಪಿ(ನ.04): ಬುದ್ದಿವಂತರ ಜಿಲ್ಲೆಯ ಯುವಜನಾಂಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರಲ್ಲಿ ಹಿಂದೆ ಎಂಬ ಮಾತಿದೆ. ಅದರಲ್ಲೂ ಯುಪಿಎಸ್‌ಸಿ ಪರೀಕ್ಷೆಗಳನ್ನು ಬರೆಯುವುದು ವಿರಳಾತಿ ವಿರಳ. ಈ ಅಲಿಖಿತ ನಿಯಮವನ್ನು ಈ ಪ್ರತಿಭಾವಂತೆ, ಮೂರು ವರ್ಷದ ಮಗುವಿನ ತಾಯಿ ಸುಳ್ಳು ಮಾಡಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯನ್ನು ತರಬೇತಿ ಪಡೆಯದೇ, ಬರೆದು ಉತ್ತೀರ್ಣರಾಗಿದ್ದಾರೆ.
ಹೌದು, ನಿವೇದಿತಾ ಶೆಟ್ಟಿ ಮೂಲತಃ ಉಡುಪಿಯವರಾಗಿದ್ದು, ಸದಾನಂದ ಶೆಟ್ಟಿ ಮತ್ತು ಸಮಿತ ಶೆಟ್ಟಿ ದಂಪತಿಗಳ ಪುತ್ರಿ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನಿವೇದಿತಾ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಿಲಾಗ್ರಿಸ್ ಶಾಲೆಯಲ್ಲಿ ಪೂರ್ಣಗೊಳಿಸಿ, ಉಡುಪಿಯ ವಿದ್ಯೋದಯ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಕಾರ್ಕಳದ ನಿಟ್ಟೆಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. ಕೊನೆಯ ವರ್ಷದ ಇಂಜಿನಿಯರಿಂಗ್ ನಲ್ಲಿ ಇರುವಾಗಲೇ ಕ್ಯಾಂಪಸ್ ನಲ್ಲಿ ಉತ್ತಮ ಕಂಪನಿಯಲ್ಲಿ ಕೆಲಸಕ್ಕೆ ಆಯ್ಕೆಗೊಂಡಿದ್ದರು.
ಬೀದರ್: ಲ್ಯಾಬ್ ಟೆಕ್ನಿಶಿಯನ್ ಪುತ್ರನಿಗೆ ಒಲಿದ ಯುಪಿಎಸ್‌ಸಿ ಪದವಿ
ಇವರ ಪತಿ ದಿವಾಕರ ಶೆಟ್ಟಿ, ಓಮನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದು, ತಮ್ಮ ಬಿಡುವಿನ ಸಮಯವನ್ನು ಯುಪಿಎಸ್‌ಸಿ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತಿದ್ದರು. ಬಳಿಕ ಉದ್ಯೋಗಕ್ಕೆ ನಿವೃತ್ತಿ ನೀಡಿ, ಸಂಪೂರ್ಣವಾಗಿ ಯುಪಿಎಸ್‌ಸಿ ಪರೀಕ್ಷೆ ತಯಾರಿ ನಡೆಸಿ, 2022ರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
2022 ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ, ನಿವೇದಿತಾ ಹಾಜರಾಗಿದ್ದು, 6 ನೇ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಮೂರು ವರ್ಷದ ಮಗುವನ್ನು ನೋಡಿಕೊಳ್ಳುವುದರ ಜೊತೆಗೆ ತನ್ನ ಕನಸನ್ನು ನನಸಾಗಿಸಿಕೊಂಡ ನಿವೇದಿತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಿಸ್ ಇಂಡಿಯಾ ಕನಸು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದ ಮಾಡೆಲ್
ಈ ವೇಳೆ ಖುಷಿಹಂಚಿಕೊಂಡು ಮಾತನಾಡಿದ ನಿವೇದಿತಾ ಶೆಟ್ಟಿ, ಯಾವುದೇ ತರಬೇತಿ ಪಡೆಯದೇ ಪರೀಕ್ಷೆಗೆ ತಯಾರಿಸಿ ನಡೆಸಿದ್ದೆ. ಆರಂಭದಲ್ಲಿ ಕೆಲವು ತಪ್ಪು ಪುಸ್ತಕಗಳನ್ನು ಓದಿ ಎಡವಿದ್ದೇನೆ. ಆ ಅನುಭವವೇ ನನಗೆ 6 ನೇ ಪ್ರಯತ್ನದಲ್ಲಿ ಸಫಲವಾಗಲು ಸಾಧ್ಯವಾಯಿತು. ಗರ್ಭಿಣಿಯಾಗಿದ್ದಲೂ ಪರೀಕ್ಷೆಯನ್ನು ಬರೆದು ವಿಫಲವಾಗಿದ್ದು, ನಿರಂತರ 8 ಗಂಟೆಯ ಓದು, ಫಲ ನೀಡಿದೆ. ಪತಿ, ತಂದೆ, ತಾಯಿ ನನ್ನ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಶಾಲೆ, ಕಾಲೇಜಿನಲ್ಲಿ ನನ್ನ ಕನಸಿಗೆ ಧೈರ್ಯವನ್ನು ತುಂಬಿ, ಪ್ರೋತ್ಸಾಹಿಸಿದ ಎಲ್ಲಾ ಅಧ್ಯಾಪಕರಿಗೆ, ಸ್ನೇಹಿತರಿಗೆ ಅನಂತ ಧನ್ಯವಾದಗಳು ಎಂದಿದ್ದಾರೆ.
ವಿದ್ಯೋದಯ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಯುವತಿ, ದೇಶದ ಅತೀ ಕಷ್ಟದ ಸ್ಪರ್ಧಾತ್ಮಕ ಪರೀಕ್ಷೆ ಯು.ಪಿ.ಎಸ್.ಸಿಯನ್ನು ಬರೆದು ಉತ್ತೀರ್ಣರಾಗಿರುವುದು ಹೆಮ್ಮ ತಂದಿದೆ. ಗೃಹಿಣಿಯಾಗಿ ಕನಸನ್ನು ಬಿಡದೇ ಛಲದಿಂದ ಸಾಧಿಸಿರುವುದು ಸಂತೋಷವಾಗಿದೆ. ಇವರ ಸಾಧನೆಯ ಶಿಖರ ಇನ್ನಷ್ಟು ಉತ್ತುಂಗಕ್ಕೇರಲಿ, ಶ್ರೀ ಕೃಷ್ಣನ ಅನುಗ್ರಹ ಸದಾವಿರಲಿ. ಇವರಿಂದ ಸಮಾಜದ ಸೇವೆ ನಡೆಯಲಿ ಎಂದು ಈಕೆ ಕಲಿತ ವಿದ್ಯೋದಯ ಶಾಲೆಯ ಮುಖ್ಯಸ್ಥರಾದ ಶ್ರೀ ವಿಶ್ವಪ್ರಸನ್ನತೀರ್ಥರು ಅಭಿನಂದಿಸಿದ್ದಾರೆ.