ಆರ್‌.ಕೇಶವಮೂರ್ತಿ

ಹಲವು ನಟ, ನಟಿಯರು, ತಂತ್ರಜ್ಞರ ಜತೆ ಕೆಲಸ, ಇಷ್ಟುವರ್ಷಗಳ ಜರ್ನಿ... ಹೇಗನಿಸುತ್ತಿದೆ?

ಎಲ್ಲರ ಜತೆನೂ ಮೈನಸ್‌- ಪ್ಲಸ್‌ ಇರುತ್ತದೆ. ಏನೇ ಇದ್ದರೂ ನನ್ನ ಪಾಲಿಗೆ ಇದೊಂದು ಅದ್ಭುತವಾದ ಪ್ರಯಾಣ ಅಂತಲೇ ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ 35 ವರ್ಷ ಇದ್ದೀನಲ್ಲ ಅದೇ ದೊಡ್ಡ ಖುಷಿ.

ವಿಷ್ಣುವರ್ಧನ್ ಸರ್ ನೆನಪು ಮಾಡಿಸಿದರು ಅನಿರುದ್ಧ್: ಸುಧಾರಾಣಿ 

ನೀವು ಬೇರೆ ಭಾಷೆಗಳಿಗೆ ಹೋಗಲಿಲ್ಲ ಯಾಕೆ?

ನನಗೆ ಇಲ್ಲಿ ಸಿಕ್ಕ ತೃಪ್ತಿ ಬೇರೆ ಕಡೆ ಸಿಗುತ್ತಿರಲಿಲ್ಲ. ಅದರಲ್ಲೂ ಪಾತ್ರಗಳ ವಿಚಾರದಲ್ಲಿ ನಾನು ಲಕ್ಕಿ. ಆರಂಭದಲ್ಲೇ ಸವಾಲಿನ ಪಾತ್ರಗಳು ಸಿಗುತ್ತಿದ್ದವು. ಹೀಗಾಗಿ ನಾನು ಕನ್ನಡದಲ್ಲೇ ಬ್ಯುಸಿ ಆಗಿದ್ದೆ. ಹೀಗಾಗಿ ಬೇರೆ ಭಾಷೆ ಕಡೆ ಗಮನವೂ ಕೊಡಲಿಲ್ಲ. ಆ ಬಗ್ಗೆ ನನಗೆ ಆಸಕ್ತಿ ಇರಲಿಲ್ಲ. ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ನನ್ನ ಜರ್ನಿಯನ್ನು ಒಮ್ಮೆ ಹಿಂತಿರುಗಿ ನೋಡಿದರೆ ನನಗೆ ರಿಗ್ರೆಟ್‌ ಇಲ್ಲ, ಹೆಮ್ಮೆ ಇದೆ.

ಆರಂಭದ ಅಂಥಾ ಸವಾಲಿನ ಚಿತ್ರ ನೆನಪಿಸಿಕೊಂಡರೆ?

‘ಅವನೇ ನನ್ನ ಗಂಡ’ ಸಿನಿಮಾ. ವಿಧವೆಯೊಬ್ಬಳು ಮರು ವಿವಾಹ ಆಗುವ ಪಾತ್ರ ಇದು. ನಟನೆಗೆ ಸ್ಕೋಪ್‌ ಇರುವಂತಹ ಸ್ಟ್ರಾಂಗ್‌ ರೋಲ್‌. ತೀರಾ ಚಿಕ್ಕ ವಯಸ್ಸಿಗೇ ಪ್ರಬುದ್ಧವಾದ ಪಾತ್ರ ಮಾಡಿದ ಖುಷಿ ಇದೆ. ನಾನು ಮಾಡಿದ ಬಹುತೇಕ ಸಿನಿಮಾಗಳು ನಾಯಕಿ- ನಟಿಗೆ ಸ್ಕೋಪ್‌ ಇರುವ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದೇನೆ.

ನಿಮ್ಮ ಈ ಯಶಸ್ಸಿನ ಬಗ್ಗೆ ಹೇಳುವುದಾದರೆ?

ಇದು ನನ್ನ ಶ್ರಮ ಮಾತ್ರವಲ್ಲ, ಚಿತ್ರರಂಗ ನನ್ನ ಸ್ವೀಕರಿಸಿತು. ಜನ ಮೆಚ್ಚಿಕೊಂಡರು. ಪಾರ್ವತಮ್ಮ ಹೇಗೆ ಧೈರ್ಯವಾಗಿ ತಮ್ಮ ನಿರ್ಮಾಣದ ಚಿತ್ರಕ್ಕೆ ನಾಯಕಿಯಾಗಿ ತೆಗೆದುಕೊಂಡು ಚಿತ್ರರಂಗಕ್ಕೆ ಪರಿಚಯಿಸಿದರೋ ಗೊತ್ತಿಲ್ಲ. ಅವರೇ ಹೇಳಬೇಕು. ಪಾರ್ವತಮ್ಮ ರಾಜ್‌ಕುಮಾರ್‌ ಅವರ ನಂತರ ಬೇರೆಯವರು ಧೈರ್ಯ ಮಾಡಿ ನನಗೆ ಅವಕಾಶ ಕೊಟ್ಟರು.

ಆಗಿಂದು ಈಗಿಂದು ಫೋಟೋ ಶೇರ್ ಮಾಡಿಕೊಂಡ ಜೊತೆ ಜೊತೆಯಲಿ ಪುಷ್ಪ! 

ಈಗ ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?

ಪುನೀತ್‌ ರಾಜ್‌ಕುಮಾರ್‌ ಅವರ ಜತೆ ‘ಯುವರತ್ನ’, ರಾಘವೇಂದ್ರ ರಾಜ್‌ಕುಮಾರ್‌ ಜತೆ ‘ಬೆಳಕು’, ಹೊಸಬರ ಚಿತ್ರ ‘ವಾಸಂತಿ ನಲಿದಾಗ’, ಪೃಥ್ವಿ ಅಂಬಾರ್‌ ಜತೆ ‘ಫಾರ್‌ ರಿಜಿಸ್ಪ್ರೇಷನ್‌’ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ.

ಈಗ ನಿಮಗೆ ಯಾವ ರೀತಿಯ ಪಾತ್ರಗಳು ಬರುತ್ತಿವೆ. ನೀವು ಎಂಥ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ?

ನಾನೂ ಈಗಲೂ ಚ್ಯೂಸಿಯಾಗಿದ್ದೇನೆ. ಇಂಥ ಪಾತ್ರವೇ ಬೇಕು ಎನ್ನುವ ಖಚಿತತೆ ಇದೆ. ಈಗ ಕ್ಯಾರೆಕ್ಟರ್‌ ರೋಲ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲ. ಫ್ರೇಮ್‌ ಫಿಲ್ಲಿಂಗ್‌ ಆಗಬಾರದು. ಟಬು ಮಾಡಿದ ‘ಅಂಧಾದುನ್‌’ ರೀತಿಯ ಚಿತ್ರಗಳು ಕನ್ನಡದಲ್ಲೂ ಯಾಕೆ ಬರುತ್ತಿಲ್ಲ ಎನ್ನುವ ಯೋಚನೆ ಇದೆ. ಮುಂದೆ ಬರುತ್ತವೆ ಎನ್ನುವ ಭರವಸೆ ಇದೆ.

ಹೊಸಬರ ಚಿತ್ರಗಳ ಕತೆ ಕೇಳುತ್ತೀರಾ?

ಈಗ ನಾನೇ ಕತೆ ಕೇಳುತ್ತೇನೆ. ಚೆನ್ನಾಗಿಲ್ಲ ಅಂದರೆ ನೇರವಾಗಿಯೇ ಹೇಳುತ್ತೇನೆ. ಮೊದಲಿನಿಂದಲೂ ಹಣವೇ ಮುಖ್ಯ ಅಂತ ಬಂದಿಲ್ಲ. ಬೌನ್ಸ್‌ ಚೆಕ್‌ಗಳು ಒಂದು ಡಬ್ಬಾ ಇವೆ. ರೋಲ್‌ ನೋಡು ಇಲ್ಲ ದುಡ್ಡು ನೋಡು ಅಂತಾರೆ ನನ್ನ ಸೀನಿಯರ್‌ಗಳು. ಆದರೆ, ನಾನು ಪಾತ್ರವೇ ಮುಖ್ಯ ಅಂತೀನಿ. ಪಾತ್ರ, ಕತೆ ಚೆನ್ನಾಗಿದ್ದರೆ ಖಂಡಿತ ನಾನು ಹೊಸಬರ ಚಿತ್ರಗಳಲ್ಲೂ ನಟಿಸುತ್ತೇನೆ. ಇತ್ತೀಚೆಗೆ ನಾನು ನಟಿಸಿದ ಅಂಥ ಸಿನಿಮಾ ‘ತುರ್ತು ನಿರ್ಗಮನ’ ಚಿತ್ರ. ತುಂಬಾ ಚೆನ್ನಾಗಿದೆ.

ನಾಯಕಿ ಆಗಿದ್ದವರು ಈಗ ಪೋಷಕ ನಟಿ ಅಂದಾಗ ಏನನಿಸುತ್ತದೆ?

ರೂಪಾಂತರ ಆಗಲೇಬೇಕು. ಬೇಡಿಕೆ ನಟಿಯಾಗಿದ್ದಾಗಲೂ ನಾನು ಕ್ಯಾರೆಕ್ಟರ್‌ ರೋಲ್‌ ಮಾಡಿದ್ದೇವೆ. ಉದಾಹರಣೆಗೆ ದೇವತಾ ಮನುಷ್ಯ ಚಿತ್ರ. ಆ ಚಿತ್ರಗಳು ತಂದು ಕೊಟ್ಟಹೆಸರು ದೊಡ್ಡದು. ನಾನು ಎಷ್ಟುಕನ್ವಿನ್ಸ್‌ ಆಗಿ ಪಾತ್ರ ಮಾಡುತ್ತೇನೆ ಎಂಬುದು ಮುಖ್ಯ. ಕಿರುತೆರೆಗೂ ಓಪನ್‌ ಆಗಿದ್ದೇನೆ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಿದ್ದೇನೆ. ನಾನು ಯಾವುದೇ ಲೈನ್‌ ಹಾಕಿಕೊಂಡಿಲ್ಲ.

ಲಾಕ್ಡೌನ್ ಮೂಲಕ ಸುಧಾರಿಸಿದ್ದೇನು?: ಸುಧಾರಾಣಿ ಮಾತು 

ನಿಮ್ಮ ಮಗಳು ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಮಾತಿದೆ?

ಆಕೆ ಚಿತ್ರರಂಗಕ್ಕೆ ಬರುತ್ತಾಳೆ ಎಂಬುದು ನನಗೆ ಗೊತ್ತಿಲ್ಲ. ನನಗೂ ಆ ರೀತಿಯ ಐಡಿಯಾ ಇಲ್ಲ. ಅವಳಿಗೆ ಯಾವುದು ಇಷ್ಟಅಂತ ಗೊತ್ತಿಲ್ಲ. ನನಗೆ ಆಕೆ ಚಿತ್ರರಂಗಕ್ಕೆ ಬರುವ ಆಸೆ ಇಲ್ಲ. ಬಲವಂತ ಮಾಡಿ ನಟನೆ ಮಾಡಿಸಲಾಗದು. ಒಳ್ಳೆಯ ಅವಕಾಶ ಬಂದರೆ ಆಕೆಯ ನಿರ್ಧಾರ.

ಈಗ ಮಗಳು ಏನು ಮಾಡುತ್ತಿದ್ದಾರೆ?

ಅವಳು ಈಗ ಲಾ ಓದುತ್ತಿದ್ದಾಳೆ. ಎರಡನೇ ವರ್ಷ. ಮಗಳು ಮನೆಯನ್ನು ನಿಭಾಯಿಸುವಷ್ಟುಪ್ರಬುದ್ಧೆ, ಬುದ್ಧಿವಂತೆ. ನನಗೆ ಅಡುಗೆ ಮಾಡಿ ಇಡುವಷ್ಟುಜವಾಬ್ದಾರಿಯುತ ಮಗಳು. ವಸುಂಧರಾ ಸಂಪತ್‌ ಅವರ ಬಳಿ ಭರತನಾಟ್ಯಂ, ಉಮಾಕುಮಾರ್‌ ಬಳಿ ಕರ್ನಾಟಕ ಸಂಗೀತ ಕಲಿಯುತ್ತಿದ್ದಾಳೆ.