ಎರಡನೇ ಸಿನಿಮಾ ಪಯಣ ಹೇಗಿದೆ?

ಖಂಡಿತ ಚೆನ್ನಾಗಿದೆ. ಒಳ್ಳೆಯ ತಂಡ. ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಈಗಾಗಲೇ ಯಶಸ್ಸು ಕಂಡವರು. ಅವರ ಕಾಂಬಿನೇಷನ್‌ನ ಚಿತ್ರಕ್ಕೆ ನಾನು ನಾಯಕಿ ಆಗಿರುವುದು ಥ್ರಿಲ್ಲಿಂಗ್. ಒಂದು ಬ್ಯುಟಿಫುಲ್ ಪಯಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬುದು ಮತ್ತೊಂದು ಖುಷಿ. ನನ್ನ ಪ್ರಕಾರ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪ್ರತಿಯೊಬ್ಬರ ಮನಸ್ಸಿಗೆ ನಾಟು ಚಿತ್ರವಾಗಲಿದೆ.

ಈ ಚಿತ್ರದ ಶೂಟಿಂಗ್ ಅನುಭವ ಹೇಗಿತ್ತು?

ಮೊದಲನೇ ಚಿತ್ರ ಮಾಡುವಾಗ ಕೊರೋನಾ ಸಂಕಷ್ಟ ಇರಲಿಲ್ಲ. ಈಗ ಎಲ್ಲ ಕಡೆ ಕೊರೋನಾ. ಶೂಟಿಂಗ್ ಸೆಟ್ ತುಂಬಾ ಮಾಸ್‌ಕ್ ಮುಖಗಳ. ಯಾರೂ ಗುಂಪು ಸೇರುತ್ತಿರಲಿಲ್ಲ. ದೂರದಿಂದಲೇ ಎಲ್ಲವನ್ನು ವಿಚಾರಿಸಿಕೊಳ್ಳುತ್ತಿದ್ದರು. ಕಲಾವಿದರು ಕೂಡ ಕ್ಯಾಮೆರಾ ಮುಂದೆ ನಿಂತು ಸೀನ್ ರೆಡಿ ಎಂದಾಗ ಮಾಸ್‌ಕ್ ತೆಗೆಯುತ್ತಿದ್ದರು. ಜಾಸ್ತಿ ಜನ ಇರಲಿಲ್ಲ. ಕೋವಿಡ್ ನಿಯಮಗಳ ಪಾಲನೆ ಇತ್ತು. ಇದು ಎರಡನೇ ಸಿನಿಮಾ ಕೊಟ್ಟ ವಿಭಿನ್ನತೆ ಮತ್ತು ಸಂಕಷ್ಟ. ಆದರೆ, ಸಿನಿಮಾ ಎನ್ನುವ ಪ್ರೀತಿ ಎಲ್ಲ ಸಂಕಷ್ಟಗಳನ್ನು ಮರೆಯುವಂತೆ ಮಾಡುತ್ತದೆ. ಹೀಗಾಗಿ ಯಾವುದೇ ತೊಂದರೆ ಇಲ್ಲದೆ ನನ್ನ ನಟನೆಯ ಎರಡನೇ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ.

ನೀವು ಕಂಡಂತೆ ರಕ್ಷಿತ್ ಶೆಟ್ಟಿ ಹೇಗೆ?

ಸಿನಿಮಾ ಪ್ರೇಮಿ ಎಂಬುದರಲ್ಲಿ ಎರಡು ಮಾತಿನಲ್ಲ. ಗೊತ್ತಿಲ್ಲದ್ದನ್ನು ಹೇಳಿಕೊಡುವ ವ್ಯಕ್ತಿ. ನಾನು ಈ ಚಿತ್ರದಿಂದ ಮತ್ತಷ್ಟು ಕಲಿಯುತ್ತಿದ್ದೇನೆ ಎಂದರೆ ಅದಕ್ಕೆ ರಕ್ಷಿತ್ ಅವರ ನೆರವು ಕೂಡ ಇದೆ. ಚಿತ್ರದ ಪ್ರತಿಯೊಂದು ದೃಶ್ಯದ ಬಗ್ಗೆಯೂ ತುಂಬಾ ಆಸಕ್ತಿ ವಹಿಸುತ್ತಾರೆ. ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಚೆನ್ನಾಗಿದೆ. ನಿದೇಶಕರು ಹೇಳುವ ಕತೆ ಮತ್ತು ರೂಪಿಸುವ ಪಾತ್ರಕ್ಕೆ ತಮ್ಮನ್ನು ಸಂಪೂಣವಾಗಿ ಅರ್ಪಿಸಿಕೊಳ್ಳುವ ನಟ.

ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಬಹು ಮುಖ್ಯ ಕಾರಣ?

ಕತೆ ಹಾಗೂ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವ ತಂಡ. ಸಿನಿಮಾ ಕತೆ ಕೇಳಿದಾಗ ಇದೊಂದು ಫೀಲ್ ಗುಡ್ ಜರ್ನಿ ಕತೆ ಅನಿಸಿತು. ತುಂಬಾ ಎಮೋಷನಲ್ಲಾಗಿ ಸಾಗುವ ಕತೆ ಇಲ್ಲಿದೆ. ಎಲ್ಲರಿಗೂ ಇಂಥ ಕತೆಗಳು ಇಷ್ಟ ಆಗುತ್ತವೆಂಬ ನಂಬಿಕೆ ಇದೆ. ಜತೆಗೆ ಇಂಥ ಚಿತ್ರದಲ್ಲಿ ನಟಿಸುವಾಗ ಪಾತ್ರ ಮತ್ತು ನಟನೆಗೆ ಹೆಚ್ಚು ಸ್ಕೋಪ್ ಇರುತ್ತದೆ. ಕತೆ ಮೇಲೆ ನನಗೆ ತುಂಬಾ ವಿಶ್ವಾಸ ಇದೆ.

10 ಕೆಜಿ ತೂಕ ಇಳಿಸಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ; ಸಪ್ತ ಸಾಗರದಾಚೆ ಎಲ್ಲೋ ಪ್ರೇಮಕತೆಯ ಸಿನಿಮಾ! 

ಚಿತ್ರದಲ್ಲಿ ನಿಮ್ಮ ಪಾತ್ರ ಹೇಗೆ ಮೂಡಿ ಬಂದಿದೆ?

ತೆರೆ ಮೇಲೆ ಪ್ರೇಕ್ಷಕರು ನೋಡಿ ಹೇಳಬೇಕು. ಆದರೆ, ಈ ಚಿತ್ರದಿಂದ ಎಲ್ಲರಿಗೂ ಹೆಸರು ಬರುತ್ತದೆ. ನನ್ನ ಪಾತ್ರ ಖಂಡಿತ ಇಷ್ಟವಾಗುತ್ತದೆ. ಪ್ರತಿಯೊಬ್ಬರಿಗೂ ಕನೆಕ್‌ಟ್ ಆಗುವಂತೆ ಪಾತ್ರಗಳನ್ನು ರೂಪಿಸಿದ್ದಾರೆ ನಿರ್ದೇಶಕರು. ಹೀಗಾಗಿ ಕತೆಗೆ ಪೂರಕವಾಗುವಂತೆ ಪಾತ್ರ ಮೂಡಿ ಬಂದಿದೆ ಎನ್ನುವ ನಂಬಿಕೆಯಂತೂ ಇದೆ.

ನಿಮ್ಮ ನಟನೆ ಬಗ್ಗೆ ನಿಮಗೆ ಎಷ್ಟರ ಮಟ್ಟಿಗೆ ವಿಶ್ವಾಸ ಇದೆ?

ಟೇಕ್ ಓಕೆ ಮಾಡುವಾಗ ನಿರ್ದೇಶಕ ಹೇಮಂತ್ ರಾವ್ ಅವರ ಮುಖದಲ್ಲಿ ಸ್ಮೈಲ್ ನೋಡುತ್ತಿದೆ. ಅವರ ಖುಷಿಯೇ ನನ್ನ ಮೊದಲ ವಿಶ್ವಾಸ ಮತ್ತು ಭರವಸೆ. ನಾನು ಕೂಡ ಒಳ್ಳೆಯ ಅಭಿನಯ ನೀಡುತ್ತಿದ್ದೇನೆ, ಪಾತ್ರವನ್ನು ನಿಭಾಯಿಸುತ್ತಿದ್ದೇನೆ ಎನಿಸುವುದು ಚಿತ್ರದ ನಿರ್ದೇಶಕರು ಈ ಖುಷಿಯಾಗಿದ್ದಾಗ ಅನಿಸುತ್ತದೆ.

ಯಾವ ರೀತಿಯ ಪಾತ್ರಗಳು ಎಂದರೆ ಇಷ್ಟ?

ಇದು ನನಗೆ ಎರಡನೇ ಸಿನಿಮಾ. ಈ ಹಂತದಲ್ಲೇ ನನಗೆ ಇಂಥ ಪಾತ್ರವೇ ಇಷ್ಟ ಎಂದು ಹೇಳುವುದು ಗೊತ್ತಿಲ್ಲ. ಆದರೆ, ಎಲ್ಲ ರೀತಿಯ ಪಾತ್ರಗಳು ಇಷ್ಟ. ಕತೆ ನೀಡುವ ಸವಾಲು, ನಿದೇಶಕ ರೂಪಿಸುವ ಪಾತ್ರ ನನ್ನ ವರೆಗೂ ಬಂದರೆ ಅದಕ್ಕೆ ಜೀವ ತುಂಬಬೇಕು ಎಂಬುದು ನನ್ನ ಕನಸು. ಆ ನಿಟ್ಟಿನಲ್ಲೇ ನಾನು ಯೋಚನೆ ಮಾಡುತ್ತದೆ. ಹೀಗಾಗಿ ಇಂಥದ್ದೇ ಪಾತ್ರ ಬೇಕು ಎನ್ನುವ ಬೇಲಿ ಹಾಕಿಕೊಳ್ಳುವುದಿಲ್ಲ.

ಎಂಥ ಕಂಟೆಂಟ್ ಸಿನಿಮಾಗಳನ್ನು ಹೆಚ್ಚು ನೋಡುತ್ತೀರಿ?

ಡ್ರಾಮ್ಯಾಟಿಕ್ ಹಾಗೂ ಹಾಸ್ಯ ಪ್ರಧಾನ ಸಿನಿಮಾಗಳನ್ನು ಹೆಚ್ಚು ನೋಡುತ್ತೇನೆ. ತೆರೆ ಮೇಲೆ ಡ್ರಾಮಾ ಮತ್ತು ಕಾಮಿಡಿ ಮೂಲಕ ಹೇಳುವ ಕತೆಗಳು ಬಹು ಬೇಗ ನೋಡುಗರನ್ನು ತಲುಪುತ್ತದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನಂತರ ಬೇರೆ ಯಾವ ಚಿತ್ರಗಳು ಇವೆ?

ಸದ್ಯದ ಪರಿಸ್ಥಿತಿ ಎಲ್ಲರಿಗೂ ಗೊತ್ತಿಲ್ಲ. ಹೀಗಾಗಿ ಹೊಸ ಚಿತ್ರಗಳನ್ನು ನಾನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಈಗ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೇಲೆಯೇ ಹೆಚ್ಚು ಗಮನ. ಕೋವಿಡ್-19 ನಂತರ ಉಳಿದ ಚಿತ್ರಗಳ ಕಡೆ ಗಮನ ಕೊಡುತ್ತೇನೆ.