Asianet Suvarna News Asianet Suvarna News

ಇದೊಂದು ಬ್ಯೂಟಿಫುಲ್ ಚಾಲೆಂಜ್: ಕೋಟಿಗೊಬ್ಬ ಕಲಹ ಕುರಿತು ಕಿಚ್ಚ ಮಾತು

ಒಂದು ದಿನ ತಡವಾಗಿಯಾದರೂ ಪ್ರೇಕ್ಷಕರ ಮುಂದೆ ಬಂದ ಕೋಟಿಗೊಬ್ಬ 3(Kotigobba 3) ಚಿತ್ರ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ. ಸಿನಿಮಾ ಬಿಡುಗಡೆಯ ನಂತರ ಮೊದಲ ಬಾರಿಗೆ ನಟ ಸುದೀಪ್(Sudeep) ಅವರು ಮಾತನಾಡಿದ್ದಾರೆ. ಸಿನಿಮಾ ಯಶಸ್ಸು, ಅಭಿಮಾನಿಗಳು ತೋರಿದ ಪ್ರೀತಿ, ಬಿಡುಗಡೆಯ ವಿವಾದ ಎಲ್ಲದರ ಬಗ್ಗೆಯೂ ಕಿಚ್ಚ ಮಾತನಾಡಿದ್ದಾರೆ.

Sandalwood star Kichcha Sudeep exclusive interview actor open up about Kotigobba 3 movie release issue dpl
Author
Bangalore, First Published Oct 18, 2021, 10:47 AM IST
  • ನಿಮ್ಮ ಚಿತ್ರಕ್ಕೇ ಹೀಗಾಗುತ್ತದೆ ಅಂದುಕೊಂಡ್ರಾ?

ನಾನು ಹೀಗೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಕೆಲವೊಂದು ಘಟನೆಗಳು ನಮಗೆ ಕೆಲ ಪಾಠಗಳನ್ನು ಕಲಿಸುತ್ತವೆ. ಇಂಥ ಘಟನೆಗಳು ನಮ್ಮ ಸುತ್ತ ಎಂಥವರು ಇದ್ದಾರೆ ಎಂದು ತೋರಿಸುತ್ತವೆ. ಒಂದಿಷ್ಟು ಸಮಸ್ಯೆಗಳನ್ನು ಕೊನೆ ತನಕ ಇಟ್ಟುಕೊಳ್ಳುವುದೇ ತಪ್ಪು. ನಿರ್ಮಾಪಕರಿಂದ ಆದ ತಪ್ಪು ಇದೊಂದೇ. ಎರಡ್ಮೂರು ದಿನಗಳ ಹಿಂದೆಯೇ ಬಗೆಹರಿಸಿಕೊಳ್ಳಬೇಕಿತ್ತು.

  • ಅ. 14ರಂದು ಕೋಟಿಗೊಬ್ಬ 3 ಶೋ ಆಗಲ್ಲ ಅಂತ ನಿಮಗೇ ಗೊತ್ತಾಗಿದ್ದು ಯಾವಾಗ?

ಹಿಂದಿನ ದಿನದ ರಾತ್ರಿಯೇ ಗೊತ್ತಾಯಿತು. ಆದರೂ ಅ.14ರಂದೇ ಮಧ್ಯಾನ್ಹ ಬರಬದಿತ್ತು. ಅಷ್ಟೊತ್ತಿಗೆ ನಮ್ಮ ಚಿತ್ರ ಬಿಡುಗಡೆಯೇ ಆಗಲ್ಲ ಎಂದು ಕೆಲವರು ಹಬ್ಬಿಸಿದರು. ಸರಿ, ಮರು ದಿನವೇ ಬರೋಣ ಎಂದು ನಾವೇ ನಿರ್ಧರಿಸಿ, ಅ.15ಕ್ಕೆ ಬಿಡುಗಡೆ ಮಾಡಿದ್ವಿ.

  • ಒಂದು ದಿನ ತಡವಾಗಿದ್ದಕ್ಕೆ ಅವಮಾನ ಅಂತ ಭಾವಿಸಿದ್ದೀರಾ?

ಖಂಡಿತ ಇಲ್ಲ. ಯಾಕೆಂದರೆ ಇಂದಕ್ಕಿಂತ ದೊಡ್ಡ ಅವಮಾನಗಳು ಆಗಿವೆ. ಇದು ಯಾವ ಲೆಕ್ಕ. ನನಗೆ ಇದರಿಂದ ಯಾವುದೇ ಅವಮಾನ ಆಗಿಲ್ಲ. ಕೆಲವೊಂದನ್ನು ಕಲಿತೆ. ಇದು ನನ್ನ ಜೀವನ ಪಯಣದಲ್ಲಿ ಎದುರಾದ ಮತ್ತೊಂದು ಸವಾಲು.

  • ಯಾರಿಂದ ತೊಂದರೆ ಆಯಿತು?

ಇದರಲ್ಲಿ ನಿರ್ಮಾಪಕರ ಪಾಲು ಎಷ್ಟು? ಕೆಲವು ವಿತರಕರು ಮೋಸ ಮಾಡಿದ್ದಾರೆ. ಒಬ್ಬ ನಿರ್ಮಾಪಕನಿಗೆ ಅನ್ಯಾಯ ಮಾಡಿದ್ದು, ಆತನಿಗೆ ನಂಬಿಕೆ ದೊ್ರೀಹ ಆಗಿದೆ. ಆದರೆ, ಸಿನಿಮಾ ಬಿಡುಗಡೆ ಆಗದಿರುವುದಕ್ಕೆ ಕಾರಣ ನಿರ್ಮಾಪಕರಲ್ಲ.

  • ನಿಮ್ಮ ಮತ್ತು ನಿರ್ಮಾಪಕ ಸೂರಪ್ಪ ಬಾಬು ನಡುವೆ ಮನಸ್ತಾಪ ಇತ್ತಾ?

ನಮ್ಮಿಬ್ಬರ ಮನಸ್ತಾಪ ಮನೆ ಹಾಳು ಮಾಡುವಂತದ್ದಲ್ಲ. ಸಣ್ಣ ಪುಟ್ಟ ಇದ್ದಿದ್ದೆ. ಒಂದು ಕುಟುಂಬದಲ್ಲಿ ಇರುವ ಮುನಿಸು, ಜಗಳದಂತೆ. ಸೂರಪ್ಪ ಬಾಬು ಕೆಟ್ಟ ವ್ಯಕ್ತಿ ಅಲ್ಲ. ಈ ಹೊತ್ತಿನಲ್ಲಿ ಅವರೊಂದಿಗೆ ನನ್ನ ಮನಸ್ತಾಪ, ಕೋಪ ಮರೆತು ನಿರ್ಮಾಪಕರ ಪರ ನಿಲ್ಲಬೇಕಿರುವುದು ನನ್ನ ಜವಾಬ್ದಾರಿ. ಒಳ್ಳೆಯ ಜನಗಳ ಸಹವಾಸ, ಒಳ್ಳೆಯ ಜನಗಳನ್ನು ಅಕ್ಕಪಕ್ಕ ಇಟ್ಟುಕೊಳ್ಳುವುದು ಎಷ್ಟು ಮುಖ್ಯ ಅಂತ ನಿರ್ಮಾಪಕರಿಗೆ ಈಗಲಾದರೂ ಗೊತ್ತಾಗಿರುತ್ತದೆ ಅಂದುಕೊಳ್ಳುತ್ತೇನೆ.

  • ಒಬ್ಬ ಕಲಾವಿದರಾಗಿ ನೀವು ಕಲಿತಿದ್ದೇನು?

ಮುಂದೆ ಇಂಥ ಘಟನೆಗಳು ಆಗದಂತೆ ಎಚ್ಚರ ವಹಿಸುತ್ತೇನೆ. ಸಿನಿಮಾ ಮಾಡಲು ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಎಷ್ಟು ಸ್ಮಾರ್ಟ್ ಆಗಿರಬೇಕು ಎನ್ನುವುದು ಮತ್ತೆ ಮತ್ತೆ ತಿಳಿದುಕೊಂಡೆ. ಇದೊಂದು ಬ್ಯೂಟಿಫುಲ್ ಚಾಲೆಂಜ್.

  • ಚಿತ್ರದ ಪ್ರಚಾರಕ್ಕೆ ಆರಂಭದಿಂದಲೂ ನೀವು ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ ಯಾಕೆ?

ವಿತರಕರು, ನಿರ್ಮಾಪಕರ ನಡುವಿನ ಕೆಲ ವ್ಯವಹಾರಗಳು ನಡೆಯುತ್ತಿದ್ದವು. ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ನಿರ್ಮಾಪಕರಿಗೂ ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ನಾನು ಬಂದು ಏನು ಮಾಡಲಿ? ಆದರೆ, ಯಾವಾಗ ಬಿಡುಗಡೆ ಪಕ್ಕಾ ತಿಳಿದ ಮೇಲೆ ನನ್ನದೇ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ದೇನೆ.

  • ನೀವು ಸಿನಿಮಾ ನೋಡಿದ್ದೀರಾ, ಏನನಿಸುತ್ತಿದೆ?

ಎರಡುವರೆ ವರ್ಷದ ಹಿಂದೆ ಬರೆದ ಡೈಲಾಗ್‌ಗಳು ಈಗ ಕನೆಕ್ಟ್ ಆಗಿವೆ, ಇವತ್ತು ನನ್ನ ರಿಯಲ್ ಲೈಫ್‌ನಲ್ಲಿ ಆಗಿದ್ದನ್ನು ಸಿನಿಮಾದಲ್ಲಿ ನೋಡಬಹುದು. ಇಂಟ್ರಡಕ್ಷನ್ ಸೀನ್ ಯಾರೂ ಊಹೆ ಮಾಡಿರಲಿಲ್ಲ. ?

  • ಚಿತ್ರದ ಈ ಯಶಸ್ಸಿನ ಸಂಭ್ರಮದ ಬಗ್ಗೆ ಹೇಳುವುದಾದರೆ?

ಈ ಸಿನಿಮಾ ರಿಲೀಸ್ ಆಗಿಲ್ಲ ಅಂದ್ರೂ ಇಡೀ ದಿನ ಸಂಭ್ರಮ ಮಾಡಿದ್ದಾರೆ. ಅದಕ್ಕೆ ನಾನು ಎಲ್ಲರಿಗೂ ಋಣಿ ಆಗಿರಬೇಕು. ಸಿನಿಮಾನಾ ಜೀವಂತವಾಗಿಟ್ಟರು. ಮರು ದಿನ ಚಿತ್ರಮಂದಿರಗಳ ಮುಂದೆ ಪ್ರೇಕ್ಷಕರನ್ನು ನೋಡಿದಾಗ ಕೊರೋನಾ ಕಾಣಲಿಲ್ಲ. ಚಿತ್ರಮಂದಿರಗಳಿಗೆ ಜನ ಬರುತ್ತಾರೆಂಬ ನಂಬಿಕೆ ಮೂಡಿಸಿತು. ಮತ್ತಷ್ಟು ಕತೆ ಬರೆಯಬಹುದು, ಒಳ್ಳೆಯ ಸಿನಿಮಾಗಳನ್ನು ಮಾಡಬಹುದು, ಮಾಡಿದ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬಹುದು ಎನ್ನುವ ಧೈರ್ಯ ಕೊಟ್ಟಿದೆ.

  • ಆದರೆ, ವಿತಕರು ಮತ್ತು ನಿರ್ಮಾಪಕರ ನಡುವೆ ಇನ್ನೂ ಜಗಳ ಮುಗಿದಿಲ್ಲ. ಆಡಿಯೋ ಬಿಡುಗಡೆ ಮಾಡಿದ್ದಾರಲ್ಲಾ?

ಅದು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಸಂಬಂಧಿಸಿದ್ದು. ಅವರು ನೋಡಿಕೊಳ್ಳುತ್ತಾರೆ. ಕೊಟ್ಟ ಮಾತಿನಂತೆ ಹಣ ಕೊಡದೆ ಬಿಡುಗಡೆಗೆ ತೊಂದರೆ ಮಾಡಿ ಈಗ ಆಡಿಯೋ ಬಿಡುಗಡೆ ಮಾಡುವ ಮೂಲಕ ಅವರು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಹೊರಟಿದ್ದಾರೆ. ಇದಕ್ಕೆಲ್ಲ ಸೂರಪ್ಪ ಬಾಬು ಉತ್ತರ ಕೊಡುತ್ತಾರೆ. ಅವರೇನು ಹೊಸ ನಿರ್ಮಾಪಕ ಅಲ್ಲ

Follow Us:
Download App:
  • android
  • ios