ಮಹಿಳೆ, ಪುರುಷ ಎನ್ನೋದು ಬಾತ್‌ರೂಮ್‌ಗೆ ಸೀಮಿತವಾಗಲಿ ಸಾಕು ಎಂದ Sadhguru

ಸದ್ಗುರು ಜಗ್ಗಿ ವಾಸುದೇವ ಅವರನ್ನು ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಸಂದರ್ಶನ ಮಾಡಿದ್ದು, ಇದರಲ್ಲಿ ಮಹಿಳೆ, ಅಂತರಜಾತಿ ವಿವಾಹ ಕುರಿತು ಹಲವಾರು ವಿಷಯಗಳ ಕುರಿತು ಸದ್ಗುರು ಮಾತನಾಡಿದ್ದಾರೆ. ಅವರು ಹೇಳಿರುವುದೇನು? 
 

SADGURU said that women and men should be confined to the bathroom

ಸದ್ಗುರು (Sadhguru) ಎಂದೇ ಖ್ಯಾತಿ ಪಡೆದಿರುವ ಜಗ್ಗಿ ವಾಸುದೇವ ಅವರು ಯಾರಿಗೆ ತಾನೇ ಪರಿಚಯವಿಲ್ಲ? ಮೈಸೂರು ಮೂಲದವರಾಗಿರುವ ಸದ್ಗುರು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಪಡೆದವರು. ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಈಶಾ ಫೌಂಡೇಷನ್‌ ಹಾಗೂ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಉದ್ಘಾಟನೆಗೊಂಡ ಇದರ ಅಂಗಸಂಸ್ಥೆಯ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಸದ್ಗುರು ಅವರು ಯೋಗ, ಧ್ಯಾನದ ಮೂಲಕ ಜಗತ್ತಿನಾದ್ಯಂತ ಪ್ರಸಿದ್ಧರಾದವರು. ಯಾವುದೇ ವಿಷಯಗಳನ್ನು ಸುಲಭವಾಗಿ ಅರ್ಥೈಸುವಲ್ಲಿ ಇವರು ನಿಸ್ಸೀಮರು. ಇನ್ನು  ತೆಲಗು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಗಾಯಕ ಎಂಎಂ ಕೀರವಾಣಿ (MM Keervani) ಹೆಸರು ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. RRR ಚಿತ್ರದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿ ಪಡೆಯುತ್ತಿದ್ದಂತೆಯೇ ಈ ಹಾಡಿನ ಸಂಗೀತ ಸಂಯೋಜನೆ ಮಾಡಿರುವ ಕೀರವಾಣಿ ಈಗ ಮನೆಮಾತಾಗಿದ್ದಾರೆ. ನಿರ್ದೇಶಕ ರಾಜಮೌಳಿ ಮತ್ತು ಇವರು ಜೋಡಿಯಲ್ಲಿ ತೆರೆಕಂಡ `ಮಗಧೀರ',`ಬಾಹುಬಲಿ' ಮುಂತಾದ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಕನ್ನಡದಲ್ಲಿ ಇವರು `ಜಮೀನ್ದಾರು',`ದೀಪಾವಳಿ',`ವೀರ ಮದಕರಿ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 

ಇಂಥ ಇಬ್ಬರು ಖ್ಯಾತನಾಮರ ವಿಷಯ ಇಲ್ಲಿ ಪ್ರಸ್ತಾಪವಾಗಲು ಕಾರಣ, ಕೀರವಾಣಿ ಅವರು ಸದ್ಗುರು ಅವರ ಸಂದರ್ಶನ ಮಾಡಿದ್ದು, ಅದೀಗ ಭಾರಿ ಜನಪ್ರಿಯತೆ ಗಳಿಸುತ್ತಿದೆ. ಕೀರವಾಣಿ ಅವರು ಕೇಳಿದ ವಿಭಿನ್ನ ವಿಷಯಗಳಿಗೆ ಸದ್ಗುರು ಅವರು ತಮ್ಮದೇ ಆದ ಹಾಸ್ಯಮಿಶ್ರಿತ ಧಾಟಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಅದರಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಸದ್ಗುರು ಅವರು ಮಹಿಳೆಯರ (Women) ಕುರಿತ ಪ್ರಶ್ನೆಗೆ ಉತ್ತರಿಸಿರುವ ಪರಿ. ಮಹಿಳೆ ಹಾಗೂ ಸಮಾನತೆಯ  ಕುರಿತು ಕೀರವಾಣಿ ಅವರು ಪ್ರಶ್ನೆ ಕೇಳಿದಾಗ ಸದ್ಗುರು, ಮಹಿಳೆಯರ ವಿಷಯ ಕೇಳಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದೀರಿ ಎಂದು ತಮಾಷೆ ಮಾಡುತ್ತೇ ಗಂಭೀರವಾಗಿ ಈ ವಿಷಯದ ಕುರಿತು ಮಾತನಾಡಿದ್ದಾರೆ. 

ಮನೆಗಳ ನಿರ್ಮಾಣ ವಿಚಾರದಲ್ಲಿ ದೊಡ್ಡ ದುರಂತ ಸಂಭವಿಸುವ ಸೂಚನೆ ನೀಡಿದ ಸದ್ಗುರು!

‘ಎಲ್ಲರೂ ಏಕೆ ಮಹಿಳೆ ಮಹಿಳೆ ಎಂದು ಅವರ ಮೇಲೆಯೇ ಹೆಚ್ಚು ಗಮನ ಕೇಂದ್ರೀಕರಿಸುವುದು ಎನ್ನುವುದೇ ಅರ್ಥವಾಗುತ್ತಿಲ್ಲ“ ಎಂದರು. ‘ಈತ ಪುರುಷ, ಆಕೆ ಮಹಿಳೆ ಎನ್ನುವುದು ಬಾತ್‌ರೂಮ್‌ಗೆ ಸೀಮಿತವಾಗಿರಲಿ ಸಾಕು, ರಸ್ತೆಯಲ್ಲಿ ಹೋಗುವಾಗಲೋ ಅಥವಾ ಇನ್ನಾವುದೇ ಕಡೆಗಳಲ್ಲಿ ಅವರನ್ನು ಒಬ್ಬ ವ್ಯಕ್ತಿಯಾಗಿ ನೋಡಬೇಕು.  ಆದರೆ ಇಂದು ಅದು ಆಗುತ್ತಿಲ್ಲ. ಆದುದರಿಂದಲೇ ಮಹಿಳೆಯರ ಮೇಲೆ ಈ ಪರಿಯ ಅನ್ಯಾಯಗಳು ನಡೆಯುತ್ತಿರುವುದು ಎಂದರು. ನಾನು ಈ ಭೂಮಿಯ ಮೇಲೆ ಇದ್ದೇನೆ ಎಂದರೆ ಅದು ಮಹಿಳೆಯಿಂದಲೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಆದ್ದರಿಂದ ಮಹಿಳೆ ಮತ್ತು ಪುರುಷರಿಗೆ ಪ್ರಕೃತಿ ಅದರದ್ದೇ ಆದ ಸೊಗಸನ್ನು ನೀಡಿದೆ. ಓರ್ವ ಮಹಿಳೆಗೆ ಪ್ರಕೃತಿ ಅದ್ಭುತವಾದ ಕೊಡುಗೆ ನೀಡಿದೆ. ಆದರೆ ಸಮಾನತೆಯ ಧಾವಂತದಲ್ಲಿ ಮಹಿಳೆ, ಪುರುಷರಾಗಲು ಹೊರಟಿರುವುದು ದುರದೃಷ್ಟಕರ‘ ಎಂದರು.

‘ಮಹಿಳೆ ಮಹಿಳೆಯಾಗಿದ್ದರೆ ಚೆನ್ನ, ಪುರುಷ ಪುರುಷನಾಗಿದ್ದರೆ ಚೆನ್ನ. ಒಟ್ಟಿನಲ್ಲಿ ಇಬ್ಬರೂ ಒಂದು ವ್ಯಕ್ತಿಯಾಗಿದ್ದರೆ ಚೆನ್ನ. ಸಮಾನತೆ (Gender Equality) ಬೇಕು ಎಂದು ಪುರುಷ ಮಾಡುವ ಎಲ್ಲಾ ಕಾರ್ಯಗಳನ್ನು ಮಹಿಳೆ ಮಾಡಬೇಕೆಂದೇನೂ ಇಲ್ಲ. ಸಮಾನತೆಯ ಪರಿಕಲ್ಪನೆಯೇ ಬದಲಾಗಿ ಹೋಗಿದೆ. ಸಮಾನತೆಗಾಗಿ ಹೊಡೆದಾಟ ಮಾಡಿದರೆ ಕುಟುಂಬ ಕುಟುಂಬವಾಗಿ ಉಳಿಯುವುದಿಲ್ಲ. ಈಗ ಹೆಚ್ಚಿನ ಕುಟುಂಬಗಳು ಒಡೆಯುತ್ತಿರುವುದಕ್ಕೆ ಕಾರಣವೂ ಇದೆ ಎಂದರು.   ಇಬ್ಬರೂ ಒಂದೇ ಎನ್ನುವುದಾದರೆ ಪ್ರಕೃತಿ ಇಬ್ಬರನ್ನೂ ವಿಭಿನ್ನವಾಗಿ ಸೃಷ್ಟಿ ಮಾಡುತ್ತಿರಲಿಲ್ಲ. ದೇಹದ ಅಂಗಗಳನ್ನು ನೋಡುವ ಪರಿ ನಿಂತು ಇದು ಪ್ರಕೃತಿಯ ಕೊಡುಗೆ ಎಂದು ಅಂದುಕೊಂಡರೆ ಎಲ್ಲರೂ ಸರಿಯಾಗುತ್ತದೆ. ದೇಹದ ಅಂಗ ನೋಡುವ ಬದಲು ಪ್ರತಿಯೊಬ್ಬರಲ್ಲಿ ಇರುವ ಜಾಣ್ಮೆ, ಬುದ್ಧಿವಂತಿಕೆ ಇತ್ಯಾದಿಗಳನ್ನು ನೋಡುವ ಸ್ಥಿತಿ ಭಾರತದಲ್ಲಿಯೂ ಬರಬೇಕಿದೆ‘ ಎಂದು ಸದ್ಗುರು ಹೇಳಿದರು.

ಪ್ರತಿ 5 ಸೆಕೆಂಡಿಗೆ 1 ಫುಟ್‌ಬಾಲ್ ಮೈದಾನದಷ್ಟುಮಣ್ಣು ಮಲಿನ: ಸದ್ಗುರು ಆತಂಕ

ಅಂತರ್ಜಾತಿ ವಿವಾಹದ (Intercaste Marriage) ಬಗ್ಗೆ ಅನಿಸಿಕೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸದ್ಗುರು...‘ನೋಡಿ ಹಿಂದೆಲ್ಲಾ ಒಂದೇ ಜಾತಿಯಲ್ಲಿ ಮದುವೆಯಾದರೆ ಒಳ್ಳೆಯದು ಎನ್ನುತ್ತಿದ್ದರು. ಅದಕ್ಕೆ ಕಾರಣವೂ ಇದೆ. ಉದಾಹರಣೆಗೆ ಚಿನ್ನದ ಕೆಲಸ ಮಾಡುವವರನ್ನು ತೆಗೆದುಕೊಳ್ಳಿ. ಅವರು ಚಿನ್ನದ ಕೆಲಸ ಮಾಡುವುದನ್ನು ಯಾವುದೋ ಕ್ಲಾಸ್‌ಗೆ ಹೋಗಿ ಕಲಿಯುವುದಿಲ್ಲ. ಬದಲಿಗೆ ಅಪ್ಪ, ಅಜ್ಜ ಮನೆಯಲ್ಲಿ ಮಾಡುತ್ತಿರುವ ಕೆಲಸವನ್ನೇ ನೋಡಿ ಕಲಿಯುತ್ತಾರೆ. ಅವರಿಗೆ ಮನೆಯೇ ಶಾಲೆಯಾಗಿರುತ್ತದೆ. ಇಂಥ ವ್ಯಕ್ತಿಗೆ ಏನು ಆಹಾರ ಬೇಕು, ಅವರ ಅಗತ್ಯತೆ ಏನು ಇತ್ಯಾದಿಗಳು ತಿಳಿಯುವುದು ಅದೇ ಜಾತಿಯಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ. ಇಲ್ಲದಿದ್ದರೆ ಪದ್ಧತಿ ವಿಭಿನ್ನವಾದರೆ ಅಗತ್ಯತೆಗಳು ಏನು ಎನ್ನುವುದು ತಿಳಿಯುವುದು ಕಷ್ಟ. ಇದೇ ಕಾರಣಕ್ಕೆ ಒಂದೇ ಜಾತಿಯಲ್ಲಿ ಮದುವೆಯಾಗಿ ಎನ್ನುತ್ತಿದ್ದರು. ಆದರೆ ಈಗ ಸ್ಥಿತಿ ಹಾಗಿಲ್ಲ. ಯಾವುದೇ ಕುಟುಂಬದಲ್ಲಿ ಹುಟ್ಟಿದ ಯಾವುದೇ ಮಕ್ಕಳು ತಮ್ಮ ತಲೆತಲಾಂತರಗಳ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿಲ್ಲ. ಯಾರು ಬೇಕಾದರೂ ಡಾಕ್ಟರ್‌, ಯಾರು ಬೇಕಾದರೂ ಎಂಜಿನಿಯರ್‌ ಸೇರಿದಂತೆ ಬೇರೆ ಬೇರೆ ಉದ್ಯೋಗ ಅರಸುತ್ತಿದ್ದಾರೆ. ಆದ್ದರಿಂದ ಈ ಸನ್ನಿವೇಶದಲ್ಲಿ ಜಾತಿಯಲ್ಲಿಯೇ ಮದುವೆಯಾಗಬೇಕು ಎನ್ನುವ ಮಾತು ಸರಿಯಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕಿದ‘ ಎಂದರು.

Latest Videos
Follow Us:
Download App:
  • android
  • ios