`ಒಂದ್ ಕಥೆ ಹೇಳ್ಲಾ' ಚಿತ್ರದ ನಾಯಕಿ ಪ್ರಣತಿ ಗಾಣಿಗ ಲಾಕ್ಡೌನಲ್ಲಿ ವೈವಾಹಿಕವಾಗಿ ಲಾಕ್‌ ಆಗಿದ್ದಾರೆ! ಅಂದರೆ ಗೆಳೆಯ ಗಣೇಶ್ ಕಿಣಿಯವರೊಂದಿಗೆ ಮದುವೆಯಾಗಿದ್ದು ದಂಪತಿಯಾಗಿದ್ದಾರೆ! ನವದಾಂಪತ್ಯ ಮತ್ತು ಚಿತ್ರ ಬದುಕಿನ ವಿಶೇಷಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರು

ಪ್ರಣತಿಗೆ ಸಿನಿಮಾ ಪ್ರೀತಿ ಶುರುವಾಗಿದ್ದು ಹೇಗೆ?
ನಾನು ಮೂಲತಃ ಶಿವಮೊಗ್ಗದ ಹುಡುಗಿ. ಸ್ಥಳೀಯ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ನಿರೂಪಕಿಯಾಗಿದ್ದೆ. ಆಗಲೇ ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೆ. ನಮ್ಮೂರಿನ ಕಲಾವಿದ ಶಿವಮೊಗ್ಗ ರಾಮಣ್ಣ ಈ ಕಿರುಚಿತ್ರಗಳ ಯೂಟ್ಯೂಬ್ ಲಿಂಕನ್ನು ಬೆಂಗಳೂರಿಗೆ ತಲುಪಿಸಿದರು! ಹಾಗೆ ಕಿರುತೆರೆ ಧಾರಾವಾಹಿ `ಶಾಂತಂ ಪಾಪಂ' ನಿರ್ದೇಶಕರು ಪರಿಚಯವಾದರು. ಅಲ್ಲಿಂದ ಸ್ಟಾರ್ ಸುವರ್ಣ ವಾಹಿನಿಯ `ಸಿಂಧೂರ'ದಲ್ಲಿ ನಟಿಸಿದೆ. ಬಳಿಕ `ಒಂದ್ ಕಥೆ ಹೇಳ್ಲಾ' ಚಿತ್ರದಲ್ಲಿ ನಾಯಕಿಯರಲ್ಲೊಬ್ಬಳಾಗಿ ನಟಿಸುವ ಅವಕಾಶ ದೊರಕಿತು. ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನಿಮಾ `ಫ್ಯಾನ್'ನಲ್ಲಿಯೂ ಒಂದು ಒಳ್ಳೆಯ ಪಾತ್ರ ಲಭಿಸಿತ್ತು.  

ಮುದ್ದು ಮಾತಲ್ಲೇ ಮದ್ದು ನೀಡುವ ನಟಿ

ಲಾಕ್ಡೌನ್ ಸಂದರ್ಭದಲ್ಲೇ ಮದುವೆಯಾಗಿದ್ದೇಕೆ?
ಇದು ಅವಸರದ ಮದುವೆ ಏನಲ್ಲ. ದಿನಾಂಕ ಮೊದಲೇ ಫಿಕ್ಸ್ ಮಾಡಲಾಗಿತ್ತು. ನನ್ನ ಗಂಡ ಕೂಡ ಶಿವಮೊಗ್ಗದವರೇ. ಕ್ಯಾಂಡಿಟ್ ಫೊಟೋಗ್ರಾಫರ್. ನಾಲ್ಕು ವರ್ಷಗಳ ಹಿಂದೆ ಸಂಬಂಧಿಕರ ಮದುವೆಯೊಂದರಲ್ಲಿ ಸಿಕ್ಕಿದ್ದರು. ಮದುವೆ ಫೊಟೋದ ಜತೆಗೆ ನಾನು ನಟಿ ಎಂದು ಗೊತ್ತಾದ ಮೇಲೆ ವಿಶೇಷ ಫೊಟೋ ಶೂಟ್ ಮಾಡಿಸಿಕೊಟ್ಟಿದ್ದರು. ಹಾಗಾಗಿ ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದು ಹೇಳಬಹುದು. ಶಿವಮೊಗ್ಗದ ಪಂಚಮುಖಿ ಆಂಜನೇಯ ಮತ್ತು ಬನಶಂಕರಿ ದೇವಾಲಯದಲ್ಲಿ ವಿವಾಹ ನೆರವೇರಿತು.  ಮದುವೆ ಸರಳವಾಗಿ ನಡೆದಿದ್ದು ನಮ್ಮಿಬ್ಬರ ಕುಟುಂಬದಿಂದ ಹತ್ತಿರದ ಸಂಬಂಧಿಕರ ಮಾತ್ರ ಬಂದಿದ್ದರು. 

ಸಂಜನಾ ಆನಂದ್‌ಗೆ ಐದು ಪ್ರಶ್ನೆಗಳು

ಚಿತ್ರರಂಗಕ್ಕೆಂದು ವಿಶೇಷ ತರಬೇತಿ ಪಡೆದಿಲ್ಲವೇ?

ಇಲ್ಲ. ಆದರೆ ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದೆ. ನನ್ನ ತಾಯಿ ಗಾಯಕಿಯಾಗಿರುವುದರಿಂದ ಸಂಗೀತದಲ್ಲಿ ಕೂಡ ನನಗೆ ಒಲವಿತ್ತು. ಶಾಸ್ತ್ರೀಯವಾಗಿ ಕಲಿತಿಲ್ಲವಾದರೂ ಶಾಲಾ ಕಾಲೇಜು ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಭರತನಾಟ್ಯದ ಬೇಸಿಕ್ ಅಭ್ಯಾಸ ಮಾಡಿರುವುದು ಕೂಡ ಸಿನಿಮಾದಲ್ಲಿ ನನಗೆ ಬಹಳಷ್ಟು ಉಪಯೋಗಕ್ಕೆ ಬಂದಿತ್ತು. ಟಿವಿ ಮಾಧ್ಯಮದಿಂದ ಬಂದ ಕಾರಣ ಕ್ಯಾಮೆರಾ ಎದುರಿಸಲು ಅಂಜಿಕೆ ಇರಲಿಲ್ಲ. `ದೊಡ್ಮನೆ', `ಓಟು', `ಇದು ಗೆಲುವಲ್ಲ' ಮೊದಲಾದ  ನಾನು ನಟಿಸಿದ ಕಿರುಚಿತ್ರಗಳು ನನ್ನಲ್ಲಿನ ಕಲಾವಿದೆಗೆ ತರಬೇತಿ ನೀಡಿ ನಟಿಯಾಗಿಸಿತು ಎನ್ನಬಹುದು.

ವೈರಸ್ ಕಾಟದಿಂದಾಗಿ ಪ್ರಸ್ತುತ ಮನೆಯಲ್ಲೇ ಕುಳಿತ ನಿಮಗೆ ಕಾಡುವ ನೆನಪುಗಳೇನು?
ಸದಾ ಶೂಟಿಂಗ್, ಕೆಲಸ ಎಂದು ಹೊರಗಡೆ ಸುತ್ತಾಡುತ್ತಿದ್ದ ನನಗೆ ಮನೆಯಲ್ಲೇ ಇರಬೇಕಾದಾಗ ಮನೆ ಮತ್ತು ವಾತಾವರಣ ಬಾಲ್ಯದ ನೆನಪುಗಳನ್ನು ಮೂಡಿಸಿತು. ನಾನು ಹುಟ್ಟಿ ಬೆಳೆದಿದ್ದೆಲ್ಲ ದೊಡ್ಡ ಬಳ್ಳಾಪುರದಲ್ಲಿ. ಐದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗ ನಾವೆಲ್ಲ ಕುಟುಂಬ ಸಮೇತವಾಗಿ ನನ್ನ ತಾಯಿಯ ಊರಾದ ಶಿವಮೊಗ್ಗ ಸೇರಿಕೊಂಡೆವು. ಹಾಗಾಗಿ ಆನಂತರವೆಲ್ಲ ಇದೇ ಆಯನೂರಲ್ಲೇ ಕಳೆದಿದ್ದೆ. ಆಚಾರ್ಯ ತುಳಸೀ ನ್ಯಾಶನಲ್ ಕಾಲೇಜ್ ವಿದ್ಯಾರ್ಥಿನಿ ನಾನು. ಆ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿದ್ದವು. ಆದರೆ ಈಗ ಮದುವೆಯ ಗಡಿಬಿಡಿ ಮುಗಿದಿದೆ. ಹಾಗೆ ಸದ್ಯಕ್ಕೆ ಮದುವೆಯ ಗುಂಗಲ್ಲೇ ಇದ್ದೀನಿ ಎನ್ನಬಹುದು.

ಹೊಸ ಪ್ರಾಜೆಕ್ಟ್‌ಗಳು ಯಾವುದು?
ಲಾಕ್ಡೌನ್‌ ಗೆ ಮೊದಲು ಒಂದು ಧಾರಾವಾಹಿಯಿಂದ ಆಫರ್ ಬಂದಿತ್ತು. ಒಪ್ಪಿಕೊಂಡಿರಲಿಲ್ಲ. ಈಗಂತೂ ಎಲ್ಲ ಉದ್ಯಮಗಳು ಮುಚ್ಚಿವೆಯಲ್ಲ? ಹಾಗಾಗಿ ಸಾಧ್ಯವಾದಷ್ಟು ಸ್ಥಳೀಯ ದೇವಸ್ಥಾನಗಳಿಗೆ ಹೋಗುವುದು, ಸಂಬಂಧಿಕರ ಮನೆಗೆ ಹೋಗುವುದರಲ್ಲೇ ಕಾಲ ಕಳೆಯುತ್ತಿದೆ. ಸದ್ಯಕ್ಕೆ ಶಿವಮೊಗ್ಗದಲ್ಲೇ ವಾಸವಿದ್ದೇವೆ. ಮುಂದೆ ಇಬ್ಬರೂ ಬೆಂಗಳೂರಿಗೆ ಶಿಫ್ಟ್ ಆಗುವ ಯೋಜನೆಗಳಿವೆ. ಒಳ್ಳೆಯ ಆಫರ್ ಬಂದರೆ ಮುಂದೆಯೂ ನಟಿಸಲಿದ್ದೇನೆ. ಯಾವುದಕ್ಕೂ ಕೊರೋನ ಸಮಸ್ಯೆಯಿಂದ ನಮ್ಮ ದೇಶ ಆದಷ್ಟು ಬೇಗ ಸುಧಾರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದೇನೆ.