ಮತ್ತೆ ಜನುಮದ ಜೋಡಿ ಕಾಲಕ್ಕೆ ಮರಳಿದಂತಿದೆ : ಶಿವರಾಜ್‌ ಕುಮಾರ್‌ ನೀ ಸಿಗೋವರೆಗೂ ಚಿತ್ರದ ಪಾತ್ರ ಕುರಿತು ಶಿವಣ್ಣ ಮಾತು

- ಮತ್ತೆ ಲವರ್‌ಬಾಯ್‌ ಆಗಿದ್ದೀರಿ?

ಲವರ್‌ಬಾಯ್‌ ಅಂತ ಅಲ್ಲ. ಆದರೆ ಲವ್‌ ಸ್ಟೋರಿ ಇರುವ ಸಿನಿಮಾವಂತೂ ಹೌದು. ನಮ್ಮೊಳಗಿನ ಪ್ರೀತಿ, ನಮ್ಮೊಳಗೆ ನಡೆಯುವ ಕದನ ಎಲ್ಲವನ್ನೂ ವಿಶಿಷ್ಟವಾಗಿ ರಿವೀಲ್‌ ಮಾಡುವ ಪಾತ್ರವಿದು.

- ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೀರಿ?

ಹೌದು. ಇದರಲ್ಲಿ ಆರ್ಮಿ ಆಫೀಸರ್‌ ಆಗಿಯೂ ಕಾಣಿಸಿಕೊಂಡಿದ್ದೇನೆ. ಒಂದು ಕಡೆ ನಮ್ಮೊಳಗೆ ನಡೆಯುವ ಯುದ್ಧ, ಮತ್ತೊಂದೆಡೆ ಹೊರಗೆ ನಡೆಯುವ ಯುದ್ಧ ಎರಡಕ್ಕೂ ಸಾಮ್ಯ ಇದೆ. ಈ ಎಲ್ಲದರ ಬಗೆಗೆ ಸಿನಿಮಾದಲ್ಲಿ ಹೇಳ್ತೀವಿ.

- ಈ ಟೈಟಲ್‌ ಏನು ಹೇಳತ್ತೆ?

ಟೈಟಲ್‌ ನಾನೇ ಕೊಟ್ಟಿದ್ದು. ‘ನೀ ಸಿಗುವವರೆಗೂ’ ಅನ್ನುವಾಗ ಅಲ್ಲಿ ಬಯಸಿದವರು ಸಿಗುತ್ತಾರಾ ಇಲ್ವಾ ಅನ್ನೋದು, ಜೊತೆಗೆ ಸಿಕ್ಕಿದರೆ ಏನಾಗುತ್ತೆ, ಸಿಗದಿದ್ರೆ ಏನು ನಡಿಯುತ್ತೆ ಅನ್ನೋದು ಮುಖ್ಯವಾಗುತ್ತೆ.

- ಆ್ಯಕ್ಷನ್‌ ಇರಲ್ವಾ?

ಖಂಡಿತಾ ಇರುತ್ತೆ. ಆದರೆ ಇದು ಆ್ಯಕ್ಷನ್‌ ಸಿನಿಮಾ ಅಲ್ಲ.

Scroll to load tweet…

- ರೊಮ್ಯಾಂಟಿಕ್‌ ಸಿನಿಮಾ ಮಾಡುವಾಗ ಫೀಲ್‌ ಹೇಗಿದೆ?

ಹೆಚ್ಚೆಚ್ಚು ಆ್ಯಕ್ಷನ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗ ರೊಮ್ಯಾಂಟಿಕ್‌ ಸಿನಿಮಾದಲ್ಲಿ ನಟಿಸೋದು ಬೇರೆ ಥರ ಫೀಲ್‌. ಇದೊಂಥರ ನಮ್ಮೂರ ಮಂದಾರ ಹೂವೆ, ಜನುಮದ ಜೋಡಿ ಇತ್ಯಾದಿ ಚಿತ್ರಗಳ ಕಾಲಕ್ಕೆ ಹೋದಂಗಿದೆ. ಅತಿರಂಜನೆ ಇಲ್ಲದೇ ಸಾಮಾನ್ಯರಿಗೂ ಕನೆಕ್ಟ್ ಆಗುವ ಥರ ಇದೆ. ಈ ವಯಸ್ಸಲ್ಲಿ ಇಂಥದ್ದೊಂದು ಕತೆಗೆ ಜೊತೆಯಾಗೋದು ಭಿನ್ನ ಅನುಭವ.

"

- ನಾಯಕಿ ಮೆಹ್ರಿನ್‌ ಅವರ ಬಗ್ಗೆ ಹೇಳೋದಾದ್ರೆ?

ಅವ್ರದ್ದೂ ಎರಡು ಶೇಡ್‌ ಇರುವ ಪಾತ್ರ. ಆಕೆಯ ಫೋಟೋಜೆನಿಕ್‌ ಫೇಸ್‌, ಬೇರೆ ಸಿನಿಮಾಗಳಲ್ಲಿನ ನಟನೆ ನೋಡಿ ಈ ಪಾತ್ರಕ್ಕೆ ಆಯ್ಕೆ ಮಾಡಿದೆವು. ಅವ್ರು ನೋಡೋಕೆ ಮುಗ್ಧೆ ಥರ ಕಾಣ್ತಾರೆ, ನಟನೆಯ ವಿಚಾರಕ್ಕೆ ಬಂದರೆ ಎಂಥಾ ಪಾತ್ರಗಳನ್ನೂ ನಿಭಾಯಿಸುವ ಛಾತಿ ಇರುವ ಪರ್ಫಾಮರ್‌.

- ಉಳಿದ ಸಿನಿಮಾಗಳ ಕತೆ?

ಭೈರಾಗಿಗೆ ಹತ್ತು ದಿನಗಳ ಶೂಟಿಂಗ್‌ ಬಾಕಿ ಇದೆ. ‘ನೀ ಸಿಗೋವರೆಗೂ’ ಬಳಿಕ ಹರ್ಷ ನಿರ್ದೇಶನದ ‘ವೇದ’ ಕೈಗೆತ್ತಿಕೊಳ್ತೀನಿ.

ನೀ ಸಿಗುವವರೆಗೂ ಮುಹೂರ್ತ: ಕ್ಲಾಪ್‌ ಮಾಡಿದ ಸುದೀಪ್‌

ರಾಮ್‌ ಧೂಲಿಪುಡಿ ನಿರ್ದೇಶನದ ‘ನೀ ಸಿಗುವವರೆಗೂ’ ಸಿನಿಮಾಕ್ಕೆ ಕಿಚ್ಚ ಸುದೀಪ್‌ ಕ್ಲಾಪ್‌ ಮಾಡಿ ಶುಭ ಹಾರೈಸಿದರು.‘ಶಿವಣ್ಣ ಅವರಿಗೆ ಇಂಥ ಕತೆ ಬರೆಯುವವರು ಇರುವವರೆಗೂ ಅವರಿಗೆ ವಯಸ್ಸಾಗಲ್ಲ. ಚಿತ್ರರಂಗಕ್ಕೆ ಕಾಲಿಟ್ಟಹೊಸತರಲ್ಲಿ ಶಿವಣ್ಣ ನಮ್ಮ ಚಿತ್ರಕ್ಕೆ ಕ್ಲಾಪ್‌ ಮಾಡಲು ಬಂದರೆ ರೋಮಾಂಚನವಾಗುತ್ತಿತ್ತು. ಈಗ ಅವರ ಚಿತ್ರಕ್ಕೆ ಕ್ಲಾಪ್‌ ಮಾಡಿದ್ದು ಖುಷಿ ಅನಿಸುತ್ತಿದೆ. ಈಗಿನ ಸಂದರ್ಭದಲ್ಲಿ ಸಿನಿಮಾ ಮಾಡೋಕೆ ಧೈರ್ಯ ಮಾಡೋರು ಕಮ್ಮಿ. ಶಿವಣ್ಣನಂಥವರ ಸಿನಿಮಾ ಬಂದಾಗ ಇನ್ನೂ ಹತ್ತು ಜನರಿಗೆ ಸಿನಿಮಾ ಮಾಡುವ ಧೈರ್ಯ ಬರುತ್ತೆ’ ಅಂದರು.

ನಾಯಕಿ ಮೆಹ್ರಿನ್‌ ಕೌರ್‌ ಪೀರ್‌ಜಾದಾ, ನಿರ್ದೇಶಕ ರಾಮ್‌ ಧೂಲಿಪುಡಿ, ನಿರ್ಮಾಪಕರಾದ ನರಾಲ ಶ್ರೀನಿವಾಸ ರೆಡ್ಡಿ, ಸ್ವಾತಿ ವನಪಲ್ಲಿ, ಶ್ರೀಕಾಂತ್‌ ಧೂಲಿಪುಡಿ ಮತ್ತಿತರರು ಉಪಸ್ಥಿತರಿದ್ದರು.