ಇಂಗ್ಲಿಷ್ ಬಾರದ ಬಿಕಾಂ ಪಾಸ್ ಹುಡುಗನ ಕಥೆ ಇದು!
ಟ್ರೇಲರ್ ಜತೆಗೆ ಹಾಡುಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ‘ನಮ್ ಗಣಿ ಬಿಕಾಂ ಪಾಸ್’ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಹೊಸ ಪ್ರತಿಭೆ ಅಭಿಷೇಕ್ ಶೆಟ್ಟಿ ನಟ ಹಾಗೂ ನಿರ್ದೇಶಕರಾಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿ ನಿರ್ವಹಿಸಿದ್ದರ ಕುರಿತು ಅಭಿಷೇಕ್ ಶೆಟ್ಟಿ ಜತೆಗೆ ಮಾತುಕತೆ.
ನಿಮ್ಮ ಹಿನ್ನೆಲೆ ಏನು?
ಹುಟ್ಟಿದ್ದು ಕುಂದಾಪುರ. ಬೆಳೆದಿದ್ದೆಲ್ಲ ಬೆಂಗಳೂರು. ಸಿನಿಮಾ ಕ್ಷೇತ್ರಕ್ಕೆ ಬರಬೇಕೆನ್ನುವುದು ನನ್ನ ಬಾಲ್ಯದ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಒಂದಷ್ಟು ಕಿರುಚಿತ್ರ ನಿರ್ದೇಶನ ಮಾಡಿದೆ. ಒಂದಷ್ಟು ಚಿತ್ರಗಳಿಗೆ ಡೈಲಾಗ್ ಬರೆದೆ. ಯಾಕೋ ಒಂದು ಸಿನಿಮಾದಲ್ಲೂ ಗುರುತಿಸಿಕೊಳ್ಳಲು ಆಗಲಿಲ್ಲ. ಕೊನೆಗೆ ನಾನೇ ಒಂದು ಸಿನಿಮಾ ಮಾಡೋಣ ಅಂದಾಗ ಶುರುವಾಗಿದ್ದು ‘ನಮ್ ಗಣಿ ಬಿಕಾಂ ಪಾಸ್’ ಚಿತ್ರ.
ಈ ಸಿನಿಮಾದ ವಿಶೇಷತೆ ಏನು?
ಇದು ಮಧ್ಯಮದ ವರ್ಗದ ಒಬ್ಬ ಹುಡುಗನ ಕತೆ. ಹೀರೋಯಿಸಂ ಸಿನಿಮಾ ಅಲ್ಲ. ಕಾಮಿಡಿ, ಸಸ್ಪೆನ್ಸ್ ಹಾಗೂ ಹಾರರ್ ಅಂಶಗಳೂ ಇವೆ. ಅದರ ಜತೆಗೆ ಮೆಟ್ರೋ ಸಿಟಿಯ ಬದುಕನ್ನು ಕಟ್ಟಿ ಕೊಡುವ ಸಿನಿಮಾ.
ಈ ಬಿಕಾಂ ಪಾಸ್ ಆಗುವ ಕತೆ ಏನು?
ಚಿತ್ರ ಕಥಾ ನಾಯಕ ಗಣಿ. ಬಿಕಾಂ ಪಾಸ್ ಆದ ಹುಡುಗ. ಉದ್ಯೋಗ ಇಲ್ಲ. ಇಂಗ್ಲಿಷ್ ಕೂಡ ಬರುವುದಿಲ್ಲ. ಒಂದು ಉದ್ಯೋಗ ಹಿಡಿದು, 10ಲಕ್ಷ ಸಂಪಾದಿಸಬೇಕೆಂದು ಹೊರಡುತ್ತಾನೆ. ಆಗ ಆತ ಏನೆಲ್ಲ ಅವಾಂತರಗಳಿಗೆ ಸಿಲುಕುತ್ತಾನೆ ಎನ್ನುವುದನ್ನು ಕಾಮಿಡಿ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ.
ನಿರ್ದೇಶನದ ಜತೆಗೆ ನಾಯಕ ನಟನಾಗಿದ್ದು ಹೇಗೆ?
ನಿರ್ದೇಶಕ ಆಗಬೇಕೆಂದೇ ಈ ಕತೆ ಬರೆದಿದ್ದೆ. ನಿರ್ಮಾಪಕರೂ ಸಿಕ್ಕರು. ಕತೆಯಲ್ಲಿನ ಹೀರೋ ಪಾತ್ರಕ್ಕೆ ತಕ್ಕಂತೆ 26 ರಿಂದ 30 ರೊಳಗಿನ ನಟರು ಬೇಕಿತ್ತು. ನಾವು ಕೆಲವರನ್ನು ಸಂಪರ್ಕ ಮಾಡಿದೆವು. ಆಡಿಷನ್ ಕೂಡ ಆಯಿತು. ಆ ಪಾತ್ರ ಮತ್ತು ನಮ್ಮ ಬಜೆಟ್‌ಗೆ ಯಾರು ಹೊಂದಾಣಿಕೆ ಆಗಲಿಲ್ಲ. ಕೊನೆಗೊಂದು ದಿನ ನೀವೇ ನಟರಾಗಿ ಅಭಿನಯಿಸಿದರೆ ಹೇಗೆ ಅಂತ ನಿರ್ಮಾಪಕರಾದ ಯು.ಎಸ್.ನಾಗೇಶ್ ಕುಮಾರ್ ಐಡಿಯಾ ಕೊಟ್ಟರು. ಅದರಿಂದಾಗಿ ನಿರ್ದೇಶನದ ಜತೆಗೆ ನಟನಾಗಿ ಕಾಣಿಸಿಕೊಳ್ಳಬೇಕಾಗಿ ಬಂತು.
ಐಶಾನಿ ಶೆಟ್ಟಿ ಅವರ ಪಾತ್ರದ ಬಗ್ಗೆ ಹೇಳಿ..?
ಎರಡು ಶೇಡ್‌ಗಳಿರುವ ಪಾತ್ರ. ಫಸ್ಟ್ ಹಾಫ್ ಒಂದ್ರೀತಿ ಕಾಣಿಸಿಕೊಂಡರೆ, ಸೆಕೆಂಡ್ ಹಾಫ್ ಇನ್ನೊಂದು ರೀತಿಯಲ್ಲಿರುತ್ತಾರೆ. ಆ ಪಾತ್ರದಲ್ಲಿ ಅವರು ಸೊಗಸಾಗಿ ಅಭಿನಯಿಸಿದ್ದಾರೆ.