ಲಾ ಚಿತ್ರದಲ್ಲಿ ನಟಿಸಲು ಕತೆಯೇ ಕಾರಣ ಅಂತಾರೆ ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್!
ಕ್ಲಾಸಿಕಲ್ ಡ್ಯಾನ್ಸರ್ ರಾಗಿಣಿ ಚಂದ್ರನ್ ನಟನೆಯ ಮೊದಲ ಸಿನಿಮಾ ತೆರೆಗೆ ಬರುತ್ತಿದೆ. ಜು.17ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೇಕ್ಷಕರಿಗೆ ತಮ್ಮ ಸಿನಿಮಾ ದರ್ಶನ್ ಕೊಡುತ್ತಿರುವ ಹಿನ್ನೆಲೆಯಲ್ಲಿ ರಾಗಿಣಿ ಚಂದ್ರನ್ ಮಾತನಾಡಿದ್ದಾರೆ.
- ಆರ್ ಕೇಶವಮೂರ್ತಿ
ಮೊದಲ ಚಿತ್ರದ ಬಿಡುಗಡೆಯ ಸಂಭ್ರಮ ಹೇಗಿದೆ?
ತುಂಬಾ ಖುಷಿ ಇದೆ. ಒಬ್ಬ ಹೊಸ ನಟಿ ತನ್ನ ಮೊದಲ ಸಿನಿಮಾ ಬಿಡುಗಡೆ ಆಗುವ ಸಂದರ್ಭವನ್ನು ಹೇಗೆ ಎದುರು ನೋಡುತ್ತಾಳೆ. ಆ ಕಾಯುವಿಕೆಯಲ್ಲಿ ಆಕೆ ಏನೆಲ್ಲ ಸಂಭ್ರಮಗಳನ್ನು ಅಸ್ವಾದಿಸುತ್ತಾಳೋ ಅದೆಲ್ಲವನ್ನೂ ನಾನೇ ನೇರವಾಗಿ ಅನುಭವಿಸುತ್ತಿದ್ದೇನೆ. ಪ್ರಥಮ ಹೆಜ್ಜೆಗಳು, ಮೊದಲ ಸಂಗತಿಗಳು ಜೀವನದಲ್ಲಿ ಎಂದಿಗೂ ಮರೆಯಲಾಗದ ಸಂಗತಿಗಳಾಗಿರುತ್ತವೆ ಎಂಬುದಕ್ಕೆ ನನ್ನ ನಟನೆಯ ಲಾ ಚಿತ್ರವೇ ಸಾಕ್ಷಿ.
ನೀವು ಸಿನಿಮಾ ಕುಟುಂಬದ ಸೊಸೆ ಅಲ್ಲವೇ?
ಹೌದು. ಆದರೆ, ನಾನು ಎಂದೂ ಸಿನಿಮಾಗಳಲ್ಲಿ ನಟಿಸಿಲ್ಲವಲ್ಲ. ಅಲ್ಲದೆ ಪುನೀತ್ ರಾಜ್ ಕುಮಾರ್ ಅವರ ಪಿಆರ್‌ಕೆಯಂತಹ ದೊಡ್ಡ ಬ್ಯಾನರ್ ನಿರ್ಮಾಣದ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಬರುತ್ತಿದ್ದೇನೆ. ಮೊದಲ ಚಿತ್ರದ ಕತೆಯೇ ಬಹಳಷ್ಟುವಿಶೇಷತೆಗಳಿಂದ ಕೂಡಿದೆ. ಹೀಗಾಗಿ ಸಿನಿಮಾ ನಂಟಿನ ಕುಟುಂಬದವಳಾದರೂ ನಟನೆ ಅಂತ ಬಂದಾಗ ಇದು ಮೊದಲ ಸಿನಿಮಾ. ಹೀಗಾಗಿ ಎಲ್ಲ ಹೊಸ ನಟಿಯರಂತೆಯೇ ನಾನೂ ಕೂಡ ಚಿತ್ರಕ್ಕಾಗಿ ಸಂಭ್ರಮದಿಂದ ಕಾಯುತ್ತಿದ್ದೇನೆ.
ಡೈನಾಮಿಕ್ ಸ್ಟಾರ್ ಕೈಲಿ ಭೇಷ್ ಅನ್ನಿಸಿಕೊಂಡೆ ಪತ್ನಿ ರಾಗಿಣಿ ಚಂದ್ರನ್!
ನಿಮ್ಮ ಕುಟುಂಬದವರು ಸಿನಿಮಾ ನೋಡಿದ್ದರೆ ಅವರು ಹೇಳಿದ್ದೇನು?
ಪ್ರಜ್ವಲ್, ಅತ್ತೆ- ಮಾವ ಯಾರೂ ಇನ್ನೂ ನೋಡಿಲ್ಲ. ಕೊರೋನಾ ಕಾರಣಕ್ಕೆ ಎಲ್ಲರೂ ಒಟ್ಟಿಗೆ ಕೂತು ಸಿನಿಮಾ ನೋಡುವ ಅವಕಾಶ ಸಿಗಲಿಲ್ಲ. ನೋಡಿದ ಮೇಲೆ ಯಾರೆಲ್ಲ ಏನು ರಿಯಾಕ್ಟ್ ಮಾಡಬಹುದು ಅನ್ನೋ ಎಕ್ಸೈಟ್‌ಮೆಂಟ್‌ನಲ್ಲಿ ಕಾಯುತ್ತಿದ್ದೇನೆ. ಆದರೆ, ಪುನೀತ್ ರಾಜ್ ಕುಮಾರ್ ಅವರು ಸಿನಿಮಾ ನೋಡಿ ನನಗೆ ಫೋನ್ ಮಾಡಿ, ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದೀರಿ. ಮುಂದೆ ಕೂಡ ನಮ್ಮ ಸಂಸ್ಥೆಯ ಚಿತ್ರಗಳಲ್ಲಿ ಕೆಲಸ ಮಾಡೋಣ ಅಂದ್ರು. ಪುನೀತಣ್ಣ ಮೆಚ್ಚಿಕೊಂಡಿದ್ದು ದೊಡ್ಡ ಭರವಸೆ ಮೂಡಿಸಿದೆ.
ಚಿತ್ರ ತಂಡದ ಹೊರತಾಗಿ ನಟನೆಗೆ ಬೆನ್ನೆಲುಬಾಗಿ ನಿಂತಿದ್ದು ಯಾರು?
ಪ್ರಜ್ವಲ್ ದೇವರಾಜ್. ಶೂಟಿಂಗ್ ಸೆಟ್‌ಗೆ ಬರುತ್ತಿದ್ದರು. ಬಂದಾಗ ಡೈಲಾಗ್ ಡೆಲಿವರಿ ಮಾಡುವುದನ್ನು ನೋಡುತ್ತಿದ್ದರು. ಏನಾದರೂ ತಪ್ಪಾಗಿ ಹೇಳಿದರೆ, ಓವರ್ ಆಗಿ ನಟನೆ ಮಾಡುತ್ತಿದ್ದರೆ ಹತ್ತಿರ ಬಂದು ಹೇಳಿಕೊಡುತ್ತಿದ್ದರು. ನಾನು ಏನೇ ಸಾಧನೆ ಮಾಡುತ್ತೇನೆ ಅಂದರೂ ಅದಕ್ಕೆ ಬೆಂಬಲವಾಗಿ ನಿಲ್ಲುವ ಗಂಡ, ಮಾವ- ಅತ್ತೆ ಸಿಕ್ಕಿದ್ದಾರೆ. ಕ್ಲಾಸಿಕಲ್ ಡ್ಯಾನ್ಸ್ ಸ್ಟುಡಿಯೋ, ಫಿಟ್ನೆಸ್ ಸೆಂಟರ್ ಮಾಡುವಾಗಲೂ ಬೆಂಬಲಿಸಿದರು. ಈಗ ಸಿನಿಮಾ ಮಾಡುತ್ತೇನೆ ಎಂದಾಗ ಖುಷಿಯಿಂದ ಬೆನ್ನು ತಟ್ಟಿದರು. ಈ ಕುಟುಂಬ ಗಾಡ್ ಗಿಫ್ಟ್.
ಸಿನಿಮಾದಲ್ಲಿ ನಟಿಸಲು ನೀವು ಏನೆಲ್ಲ ತಯಾರಿ ಮಾಡಿಕೊಂಡಿದ್ರಿ?
ನನ್ನದು ತುಂಬಾ ಗಂಭೀರವಾದ ಪಾತ್ರ. ಹೀಗಾಗಿ ನಿರ್ದೇಶಕರು ಒಂದು ತಿಂಗಳು ತರಬೇತಿ ಶಿಬಿರ ಮಾಡಿದರು. ಡೈಲಾಗ್ ಹೇಳುವುದರಿಂದ ಎಲ್ಲವನ್ನೂ ಕಲಿಸಿ ಕೊಟ್ಟರು. ಭಾಷೆಯ ಪ್ರಾಮುಖ್ಯತೆ ಕಲಿತೆ.
ನಿಮ್ಮನ್ನು ನೀವು ಸ್ಕ್ರೀನ್ ಮೇಲೆ ನೋಡಿಕೊಂಡಾಗ ಏನನಿಸಿತು?
ನಾನೂ ಕೂಡ ಸಿನಿಮಾ ನೋಡಿಲ್ಲ. ಟ್ರೇಲರ್ ನೋಡಿ ನನ್ನಿಂದ ಇಂಥ ಪಾತ್ರ ಮಾಡಕ್ಕೆ ಸಾಧ್ಯವಾಯಿತೇ ಎನ್ನುವಷ್ಟುಅಚ್ಚರಿಯಾಯ್ತು. ಪ್ರೇಕ್ಷಕರಂತೆ ನಾನೂ ಕೂಡ ಸಿನಿಮಾಗಾಗಿ ಕಾಯುತ್ತಿದ್ದೇನೆ.
ಪ್ರಜ್ವಲ್ ಪತ್ನಿ ರಾಗಿಣಿ ಆನ್‌ಲೈನ್ ವರ್ಕೌಟ್ ಪಾಠ!
ಮುಂದೆ ಕೂಡ ಸಿನಿಮಾಗಳಲ್ಲಿ ನಟಿಸುತ್ತಿರಾ?
ಖಂಡಿತ ಮಾಡುತ್ತೇನೆ. ಒಳ್ಳೆಯ ಕತೆ, ಪಾತ್ರ ಸಿಕ್ಕರೆ ಮಾಡುತ್ತೇನೆ. ಈಗಾಗಲೇ ನನ್ನ ಮತ್ತು ಪ್ರಜ್ವಲ್ ದೇವರಾಜ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುವ ಕತೆಗಳು ಬರುತ್ತಿವೆ.
ಲಾ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಮೊದಲ ಕಾರಣಗಳೇನು?
ಚಿತ್ರದ ಕತೆ, ನಿರ್ದೇಶಕರು ಮತ್ತು ನಿರ್ಮಾಣದ ಸಂಸ್ಥೆ. ನನಗೆ ಮೊದಲು ಇಂಪ್ರೆಸ್ ಆಗಿದ್ದು ಕೂಡ ಈ ಮೂರು ವಿಚಾರಗಳೇ.
ಸಮಯ ಕಳೆಯಲು ಈ ಸ್ಟಾರ್ ದಂಪತಿ ಕಂಡುಕೊಂಡ ಹೊಸ ಉಪಾಯ!
ಚಿತ್ರದಲ್ಲಿ ಅಂಥ ಕತೆ ಏನಿದೆ?
ಅಪರಾಧ ಹಾಗೂ ತನಿಖೆಗಳನ್ನು ಒಳಗೊಂಡ ಕತೆ ಈ ಚಿತ್ರದಲ್ಲಿದೆ. ಸಾಕ್ಷಿಗಳ ಕೊರತೆಯಿಂದ ಅರೋಪಮುಕ್ತಗೊಂಡವರು ಹಾಗೂ ಈ ಅಪರಾಧ ಜಗತ್ತಿನಲ್ಲಿ ಸಿಕ್ಕಿಕೊಳ್ಳುವ ಒಬ್ಬ ಕಾನೂನು ವಿದ್ಯಾರ್ಥಿನಿ ನಂದಿನಿ ಹೆಸರಿನ ಪಾತ್ರ ಅಪರಾಧವೊಂದಕ್ಕೆ ನ್ಯಾಯ ಕೊಡಿಸಲು ಏನೆಲ್ಲ ಮಾಡುತ್ತಾಳೆ ಎಂಬುದು ಚಿತ್ರದ ಕತೆ. ನಾನು ಇಲ್ಲಿ ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.
ಹಾಗಾದರೆ ಇದುವರೆಗೂ ಈ ರೀತಿಯ ಕತೆಗಳು ತೆರೆ ಮೇಲೆ ಬಂದಿಲ್ಲವೇ?
ನನಗೆ ಗೊತ್ತಿಲ್ಲ. ಆದರೆ, ಕತೆಯನ್ನು ನಿರ್ದೇಶಕ ರಘು ಸಮಥ್‌ರ್ ಅವರು ಹೇಳಿರುವ ರೀತಿ ಚೆನ್ನಾಗಿದೆ. ಒಬ್ಬ ಕಾನೂನು ವಿದ್ಯಾರ್ಥಿನಿ ಪಾತ್ರದ ಸುತ್ತ ಕ್ರೈಂ ಥ್ರಿಲ್ಲರ್ ಕತೆಯನ್ನ ಆಸಕ್ತಿಕರವಾಗಿ ನಿರೂಪಣೆ ಮಾಡಿರುವುದು ಈ ಚಿತ್ರದ ಪ್ಲಸ್ ಪಾಯಿಂಟ್. ಈ ಕಾರಣಕ್ಕೆ ಕನ್ನಡಕ್ಕೆ ಲಾ ಹೊಸ ರೀತಿಯ ಸಿನಿಮಾ ಮತ್ತು ಕತೆ ಎನ್ನಬಹುದು.
ಲಾ ಚಿತ್ರದ ತಂಡದ ಬಗ್ಗೆ ಹೇಳುವುದಾದರೆ ?
ರಘು ಸಮಥ್‌ರ್ ನಿರ್ದೇಶಕರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಎಂ.ಗೋವಿಂದ ನಿರ್ಮಾಪಕರು. ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೇರವಾಗಿ ಡಿಜಿಟಲ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಿದು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ 200 ಕ್ಕೂ ಹೆಚ್ಚು ದೇಶಗಳಲ್ಲಿ ಜುಲೈ 17 ರಿಂದ ಸಿನಿಮಾ ನೋಡಬಹುದು.