ಲೂಸ್‌ ಮಾದ ಯೋಗೀಶ್‌, ಸಂಚಾರಿ ವಿಜಯ್‌, ಕಾವ್ಯ ಶೆಟ್ಟಿನಟಿಸಿರುವ ಲಂಕೆ ಸಿನಿಮಾ ಇವತ್ತು ಬಿಡುಗಡೆ. ಈ ಸಿನಿಮಾ ನಿರ್ದೇಶಿಸಿದ್ದು ರಾಮ್‌ಪ್ರಸಾದ್‌. ಮೊದಲ ಸಿನಿಮಾ, ಚಿತ್ರರಂಗದ ಅನುಭವ, ಕತೆ ಕಟ್ಟುವ ಖುಷಿ, ಬಿಡುಗಡೆ ಸಂದರ್ಭದ ಕಳವಳ ಎಲ್ಲದರ ಕುರಿತು ಅವರು ಮಾತನಾಡಿದ್ದಾರೆ.

ರಾಜೇಶ್ ಶೆಟ್ಟಿ 

ಸಿನಿಮಾ ನಂಟು ಹೇಗೆ?

ಹುಟ್ಟಿನಿಂದಲೇ ಸಿನಿಮಾ ಹಿನ್ನೆಲೆ ಇದೆ ನನಗೆ. ನನಗೆ ಪ್ರಸಾದ್‌ ಕುಮಾರ್‌ ಅಂತ ಹೆಸರಿಟ್ಟಿದ್ದರು. ಆ ಸಂದರ್ಭದಲ್ಲಿ ಚಲಿಸುವ ಮೋಡಗಳು ಸಿನಿಮಾ ಬಂದಿತ್ತು. ಅದರಲ್ಲಿ ರಾಜಣ್ಣ ಅವರು ಪುನೀತ್‌ಗೆ ಹೆಸರೇನು ಎಂದು ಕೇಳಿದಾಗ ಅಪ್ಪು ನನ್ನ ಹೆಸರು ರಾಮು ಅಂತ, ದೊಡ್ಡೋನಾದಮೇಲೆ ರಾಮ್‌ಪ್ರಸಾದ್‌ ಅಂತ ಇಟ್ಟುಕೊಳ್ಳುತ್ತೇನೆ ಎಂದು ಹೇಳುವ ದೃಶ್ಯವಿದೆ. ಆ ಸಿನಿಮಾ ನೋಡಿ ಆ ದೃಶ್ಯದಿಂದ ಪ್ರಭಾವಿತರಾದ ತಂದೆಯವರು ನನಗೆ ರಾಮ್‌ಪ್ರಸಾದ್‌ ಅಂತ ಮರು ನಾಮಕರಣ ಮಾಡಿದರು.

ಚಿತ್ರರಂಗಕ್ಕೆ ಬರಲು ಏನು ಸ್ಫೂರ್ತಿ?

ಅಪ್ಪು ಡಾನ್ಸ್‌ ನೋಡಿ ನಾನೂ ಡಾನ್ಸರ್‌ ಆದೆ. ನನ್ನ ಮನೆಯಲ್ಲಿ ಸುಮಾರು 400 ಟ್ರೋಫಿಗಳಿವೆ. 6 ಸಲ ಡಾನ್ಸ್‌ಗೆ ಚಿನ್ನದ ಪದಕ ಗೆದ್ದಿದ್ದೇನೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಂದೇ ವರ್ಷ 52 ಪದಕ ಪಡೆದ ದಾಖಲೆ ನನ್ನ ಹೆಸರಲ್ಲಿದೆ. ಆಗ ವಿಜಯ ರಾಘವೇಂದ್ರ, ನಿರ್ದೇಶಕ ಹರ್ಷ, ಮಯೂರಿ ನನ್ನ ಜೊತೆ ಇದ್ದರು. ಅವರೆಲ್ಲಾ ಸಿನಿಮಾ ರಂಗಕ್ಕೆ ಬಂದು ಸಾಧನೆ ಮಾಡಿದರು. ನಾನೂ ಏನೂ ಮಾಡಿಲ್ಲ ಅನ್ನೋದು ಮನಸ್ಸಲ್ಲಿತ್ತು. ಅದೇ ಸಂದರ್ಭಕ್ಕೆ ಲಂಕೆ ಕತೆ ಹೊಳೆಯಿತು. ಸಿನಿಮಾ ರಂಗಕ್ಕೆ ಬಂದೆ.

ಲಂಕೆ ಕಥಾವಸ್ತು ಏನು?

ನಾನು ಸಮಾಜಶಾಸ್ತ್ರ ವಿದ್ಯಾರ್ಥಿ. ಸಮಾಜವನ್ನು ಗಮನಿಸುವುದೇ ನನ್ನ ಆಸಕ್ತಿ. ಕಾಲಾನುಕ್ರಮದಲ್ಲಿ ವ್ಯಾಪಾರ ಹೇಗೆ ಬದಲಾಗುತ್ತಾ ಬಂದು ಪಿಡುಗಿನ ರೂಪ ಪಡೆಯಿತು ಎಂದು ಯೋಚಿಸುತ್ತಿದ್ದೆ. ಆಗ ನನ್ನ ಊರಿನಲ್ಲಿ ನಡೆದ ಒಂದು ಘಟನೆ ಮನಸ್ಸು ಕಲಕಿತು. ಅದೇ ಥರದ ನಾಲ್ಕೈದು ಸತ್ಯ ಘಟನೆಗಳನ್ನಿಟ್ಟುಕೊಂಡು ಕತೆ ಬರೆದೆ. ಚಿತ್ರಕತೆಯಲ್ಲಿ ರಾಮಾಯಣದ ಅನೇಕ ಅಂಶಗಳು ಪುನಾರಾವರ್ತನೆ ಆಗುತ್ತಿರುವುದು ತಿಳಿಯಿತು. ಅದಕ್ಕೆ ಲಂಕೆ ಅಂತ ಹೆಸರಿಟ್ಟೆ.

ಇದು ನನ್ನ ಮೊದಲ ಸಿನಿಮಾ ಎಂದೆನಿಸುತ್ತಿದೆ: ನಟಿ ಕೃಷಿ ತಾಪಂಡ

ಈ ಸನ್ನಿವೇಶದಲ್ಲಿ ಸಿನಿಮಾ ರಿಲೀಸ್‌ ಮಾಡಲು ಹೇಗೆ ಧೈರ್ಯ ಮಾಡಿದ್ರಿ?

ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡಿಗರು ಯಾವತ್ತೂ ಕೈ ಬಿಡುವುದಿಲ್ಲ. ಅದೇ ನಂಬಿಕೆಯಿಂದಲೇ ಸಿನಿಮಾ ಬಿಡುಗಡೆಮಾಡುತ್ತಿದ್ದೇವೆ. 200 ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಹಲವು ಥಿಯೇಟರ್‌ಗಳು ಮುಚ್ಚಿದ್ದವು. ಅವನ್ನು ತೆರೆಯುತ್ತಿದ್ದೇವೆ. ನಾವೇ ಅನೇಕ ಥಿಯೇಟರ್‌ಗಳನ್ನು ಓಪನ್‌ ಮಾಡಿಸುತ್ತಿದ್ದೇವೆ ಅನ್ನುವುದೇ ನಮಗೆ ಖುಷಿ.

"