ಮಾತೃ ಹೃದಯದ ಹೆಣ್ಣಿನ ಪಾತ್ರಗಳಿಗೆ ಇತ್ತೀಚೆಗೆ ತಾರಾ ಅನುರಾಧ ಜನಪ್ರಿಯರು. ನಿಜ ಜೀವನದಲ್ಲಿ ಕೂಡ ಮಮತಾಮಯಿ ಗುಣಗಳಿಂದ ಮನಸೆಳೆದಿರುವ ತಾರಾ ಅವರು ಇಂದಿಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ತಮ್ಮ ತಾಯಿಯೊಂದಿಗೆ ಕಾಣಿಸಿಕೊಳ್ಳುವುದುಂಟು. ತಾಯಿ ಜತೆಗಿನ ತಮ್ಮ ಪ್ರೀತಿ ಮತ್ತು ತಾವೇ ತಾಯಿಯಾದಾಗಿನ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ತಾರಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಮದರ್ಸ್ ಡೇ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಮ್ ಕಡೆಯಿಂದ ವಿಶೇಷ ಸಂದರ್ಶನ ಇದು.

ಶಶಿಕರ ಪಾತೂರು

ಅಮ್ಮನ ಜತೆಗಿನ ನಿಮ್ಮ ಸಂಬಂಧದ ಬಗ್ಗೆ ಹೇಳಿ

ನನ್ನಮ್ಮನ ಹೆಸರು ಪುಷ್ಪಾ. ನನಗೆ ಎಲ್ಲವೂ ಅವರೇ. ಅದು ಬದುಕಲ್ಲಷ್ಟೇ ಅಲ್ಲ; ವೃತ್ತಿ ಬದುಕಲ್ಲಿಯೂ ಹೌದು. ಯಾಕೆಂದರೆ ಸಿನಿಮಾ ನಟಿಯಾಗುವುದಕ್ಕೆ ನನ್ನ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಯಾಕೆಂದರೆ ನನ್ನ ಮನೆಯವರು, ಸಂಬಂಧಿಕರು ಎಲ್ಲರೂ ಇಂಜಿನಿಯರಿಂಗ್ ಕಲಿತು ಒಳ್ಳೆಯ ಕೆಲಸದಲ್ಲಿದ್ದರು. ನಮ್ಮಮ್ಮ ಕೂಡ ಪಿಯುಸಿ ಕಲಿತಿದ್ದರು. ಹಾಗಾಗಿ ಸಿನಿಮಾರಂಗಕ್ಕೆ ಪ್ರವೇಶ ಮಾಡುವುದು ತಂದೆಗಂತೂ ಇಷ್ಟವೇ ಇರಲಿಲ್ಲ. ನಾನು ಬೇರೆ ಏಳನೇ ತರಗತಿಯಲ್ಲಿದ್ದಾಗಲೇ ಸಿನಿಮಾ ನಟನೆಯ ಅವಕಾಶದ ಹಿಂದೆ ಹೋಗಲು ಬಯಸಿದ್ದೆ. ಆಗ ನಮ್ಮ ತಾತ ಒಂದು ಮಾತು ಹೇಳಿದ್ದರು. "ಏನೋ ಮಗು ಒಂದು ಸಿನಿಮಾ ಮಾಡುತ್ತೆ. ಅದಕ್ಕೆ ಆಸೆ" ಅಂತ. ನನಗೂ ಇದೇ ವೃತ್ತಿ ಬದುಕಾಗುತ್ತೆ ಎನ್ನುವ ಕಲ್ಪನೆ ಎಲ್ಲ ಇರಲಿಲ್ಲ. ಪರದೆ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವುದಷ್ಟೇ ಆಸೆಯಾಗಿತ್ತು. ಆಗ ಸಾಥ್ ನೀಡಿದ್ದು ಅಮ್ಮ. ಶೂಟಿಂಗ್ ಕಡೆಯಿಂದ ಕಳಿಸುವ ಕಾರಲ್ಲಿ ನಾನು ಮತ್ತು ಅಮ್ಮ ಹೋಗುತ್ತಿದ್ದೆವು. ಬದುಕಲ್ಲಿ ಅದುವರೆಗೆ ಕಷ್ಟವೇನೆಂದು ಅರಿತರದ ಅಮ್ಮ ಅಂದಿನಿಂದ ನನ್ನಿಂದಾಗಿ ಕಷ್ಟ ಕಾಣುವಂತಾಯಿತು.

ಸಿನಿ ದುನಿಯಾಕ್ಕೆ ಕಾಲಿಟ್ಟ ನಟಿ ತಾರಾ ಪುತ್ರ!

ನಟಿಯ ತಾಯಿಯಾಗಿ ಅವರಿಗೇನು ಕಷ್ಟ ಅನುಭವಿಸಬೇಕಾಯಿತು?

ಆ ಕಷ್ಟದ ಆಳ ನಿಮಗೆ ಅರಿವಾಗಬೇಕಾದರೆ ನನ್ನಮ್ಮನ ಹಿನ್ನೆಲೆಯ ಬಗ್ಗೆ ನಾನು ನಿಮಗೆ ಹೇಳಲೇಬೇಕು. ನನ್ನ ತಾತನವರು ಅಮಲ್ದಾರರಾಗಿದ್ದವರು. ನನ್ನ ಅತ್ತೆಯ ಹೆಸರು ಶಾರದಾ. ಬೆಂಗಳೂರಿನಲ್ಲಿರುವ ಶಾರದಾ ಚಿತ್ರಮಂದಿರ ಅವರ ಹೆಸರಲ್ಲೇ ನನ್ನ ಮಾವ ಕಟ್ಟಿರುವಂಥದ್ದು. ಈಗ ಡೆಮಾಲಿಷಾಗಿರುವ ಸೆಂಟ್ರಲ್ ಥಿಯೇಟರ್ ನನ್ನ ಇನ್ನೊಬ್ಬ ಮಾವನದ್ದು. ಈಗ ಅಲ್ಲಿ ಅವರದ್ದೇ ಕಾಂಪ್ಲೆಕ್ಸ್ ಕಟ್ಟಲಾಗ್ತಿದೆ. ವಿಂಡ್ಸರ್ ಮ್ಯಾನರ್ ಹೋಟೆಲ್ ಪಕ್ಕದಲ್ಲಿಯೇ  ಒಂದಷ್ಟು ದೊಡ್ಡ ಪ್ರಾಪರ್ಟಿ ನನ್ನ ಮಾವನದ್ದು. ಹೀಗೆ ಸಾಕಷ್ಟು ಶ್ರೀಮಂತಿಕೆ ಇರುವ ಕುಟುಂಬ ನಮ್ಮದು. ದೊಡ್ಡ ಮಾವ  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಡೆಪ್ಯುಟಿ ಚೇರ್ಮನ್ ಆಗಿದ್ದವರು. ಇಂಥದೊಂದು ಕುಟುಂಬದಲ್ಲಿ ತಾತನ ಕೊನೆಯ ಮಗಳಾಗಿ ಹುಟ್ಟಿದ ನನ್ನ ತಾಯಿಗೆ ಕಷ್ಟಗಳ ಬಗ್ಗೆ ಅರಿವೇ ಇಲ್ಲ. ಮದುವೆಯ ಬಳಿಕವೂ ಅಷ್ಟೇ. ನಮ್ಮ ತಂದೆ  ನಿವೃತ್ತಿಯಾಗುವಾಗ ಆಗ್ರೋ ಇಂಡಸ್ಟ್ರೀಸ್ ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿದ್ದರು. ಆದರೆ ಅವರು ಕಷ್ಟಗಳ ಬಗ್ಗೆ ಮೊದಮೊದಲು ಅರಿತುಕೊಂಡಿದ್ದೇ ನನ್ನಿಂದ. ಯಾಕೆಂದರೆ ನಾನು ನಾಯಕಿಯಾಗಿ ಚಿತ್ರರಂಗಕ್ಕೆ ಬಂದವಳಲ್ಲವಲ್ಲ? ಅವಕಾಶ ಕೇಳಿಕೊಂಡು ಬಂದವಳು. ಹಾಗಾಗಿ ಇಂಡಸ್ಟ್ರಿಯಲ್ಲಿ ದೊಡ್ಡದಾದ ಟ್ರೀಟ್ಮೆಂಟ್ ಏನೂ ಇರುತ್ತಿರಲಿಲ್ಲ. ಊಟ ಕೊಡುವಾಗಲೂ ಗುಂಪಲ್ಲಿ ಕೂರಿಸುತ್ತಿದ್ದರು. ಅದೆಲ್ಲವೂ ನನ್ನ ತಾಯಿಗೆ ಹೊಸದಾಗಿತ್ತು.

ಅಂಥದೊಂದು ವಾತಾವರಣದಲ್ಲಿ ತಾಯಿಯ ಪ್ರತಿಕ್ರಿಯೆ ಹೇಗಿತ್ತು?

ನನಗೆ ಒಂದು ಕಡೆ ಅಮ್ಮನ ಪರಿಸ್ಥಿತಿ ನೋಡಿ ಬೇಜಾರಾಗುತ್ತಿತ್ತು. ಆಹಾರದಲ್ಲಿ ವ್ಯತ್ಯಾಸ ಮಾಡುವುದು, ಚಪಾತಿ ಕೊಡದೇ ಇರುವುದು ಎಲ್ಲ ಮಾಡಿದಾಗ ಅಮ್ಮನ ಪರಿಸ್ಥಿತಿ ಕಂಡು ಹೊಟ್ಟೆ ಉರಿಯುತ್ತಿತ್ತು. ಅಯ್ಯೋ ನಮ್ಮಮ್ಮ ನಮ್ಮಮ್ಮ ಅಂತ ಅಂದುಕೊಳ್ಳುತ್ತಿದ್ದೆ. ಬಹಳ ಬೇಸರ ಮಾಡಿಕೊಂಡು ಬಂದು ಮನೆಯಲ್ಲಿ ಹೇಳುತ್ತಿದ್ದರು. ಯಾವಾಗ ನನಗೆ ಸೆಟ್‌ನಲ್ಲಿ ಊಟದ ಜತೆಗೆ ಚಪಾತಿ ಕೊಡುವುದಿಲ್ಲವೆಂದು ಅವರಿಗೆ ಗೊತ್ತಾಯಿತೋ ಆಗ ಅಮ್ಮ ಮನೆಯಿಂದಲೇ ಬುತ್ತಿಯೊಂದಿಗೆ ಹೊರಡಲು ಶುರು ಮಾಡಿದರು!  ನನ್ನ ತಾಯಿ ಮುಗ್ದೆ. ಅವರಿಗೆ ಸಿನಿಮಾರಂಗ ಇಷ್ಟವಿತ್ತು. ಅವರು ಬಾಲ್ಯದಲ್ಲಿ ಡಾನ್ಸ್ ಎಲ್ಲ ಕಲಿತಿದ್ದರು. ಆದರೆ ಅವರು ಕೂಡ ನನ್ನಲ್ಲಿ ಸಿನಿಮಾರಂಗ ಬೇಡ ಎನ್ನಲು ಕಾರಣ  ನಮ್ಮ ತಂದೆಗೆ ಇಷ್ಟವಾಗುತ್ತಿರಲಿಲ್ಲ ಎನ್ನುವುದಕ್ಕಾಗಿ ಮಾತ್ರ. ಆರಂಭದಲ್ಲಿ ಬಹಳಷ್ಟು ಕಾಲ ನನ್ನ ದೊಡ್ಡಮ್ಮ ಕೂಡ ಜತೆಗೆ ಬರುತ್ತಿದ್ದರು. ನನ್ನ ದೊಡ್ಡಪ್ಪ ದೊಡ್ಡಮ್ಮನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವರಿಗೂ ನಾನು ಸ್ವಂತ ಮಗಳಂತೆಯೇ ಇದ್ದೆ. ದೊಡ್ಡಮ್ಮ ಎಲ್ಲವನ್ನು ಧೈರ್ಯದಿಂದ ಎದುರಿಸಲು ಪ್ರೇರೇಪಿಸುತ್ತಿದ್ದರು. 

ನಿಮ್ಮ ವಿಚಾರದಲ್ಲಿ ತಾಯಿಯವರು ತುಂಬ ಖುಷಿಯಾದ ಸಂದರ್ಭ ಯಾವುದು?

ನನಗೆ ಮೊದಲ ಬಾರಿ ರಾಜ್ಯ ಪ್ರಶಸ್ತಿ ಬಂದಾಗ ಅಮ್ಮ ತುಂಬ ಖುಷಿ ಪಟ್ಟಿದ್ದರು. ಅಂದಿನ ಮುಖ್ಯಮಂತ್ರಿಗಳಾದ ಜೆಎಚ್ ಪಟೇಲರ ಕೈಗಳಿಂದ ಪ್ರಶಸ್ತಿ ಪಡೆದುಕೊಂಡಿದ್ದು,  ತಂದೆ ಆಗಲೂ ಬಂದಿರಲಿಲ್ಲ. "ಅನುಗೆ ಎಷ್ಟು ಚೆನ್ನಾಗಿ ಸನ್ಮಾನ ಮಾಡಿದ್ರು, ಅನು ಬಗ್ಗೆ ಎಷ್ಟು ಚೆನ್ನಾಗಿ ರೆಕಾರ್ಡ್ ಹಾಕಿದ್ರು (ಬ್ಯಾಕ್‌ಗ್ರೌಂಡ್‌ ವಾಯ್ಸ್‌ ) ಎಂದು ಅಮ್ಮ ವಿವರಿಸುತ್ತಿದ್ದರೆ ಆಗ ಮಾವ, ಚಿಕ್ಕಪ್ಪಂದಿರಿಗೆಲ್ಲ ಖುಷಿಯಾಯಿತು.  ಆಮೇಲೆ ನಾನು ತಾಯಿಯಾದಾಗ ಅಮ್ಮ ತುಂಬ ಖುಷಿ ಪಟ್ಟಿದ್ದರು. ನಿಜ ಹೇಳಬೇಕೆಂದರೆ ನನಗೂ ಅಷ್ಟೇ, ನಾನು ತಾಯಿಯಾದ ಮೇಲೆಯೇ ತಾಯಿಯ ಬಗ್ಗೆ ಭಾವನಾತ್ಮಕ ಪ್ರೀತಿ ಬಂದಿದ್ದು. ಹೆರಿಗೆ ವೇಳೆ ನಾನು ಸಾವು ಬದುಕಿನ ನಡುವೆ ಹೋರಾಡಿ ಬದುಕಿದಾಗ ಪ್ರೀತಿ ಬಂತು! ಆ ಬಗ್ಗೆ ನೆನಪಿಸಿಕೊಂಡಾಗ ಈಗಲೂ ಕಣ್ಣಲ್ಲಿ ನೀರು ಬರುತ್ತೆ. ಆದರೆ ಮದುವೆಯ ಸಂದರ್ಭದಲ್ಲಿ ಅಮ್ಮನಿಗೆ ಅಷ್ಟು ಖುಷಿ ಇರಲಿಲ್ಲ. ಯಾಕೆಂದರೆ ನಮ್ಮದು ಅಂತರ್ಜಾತಿಯ ವಿವಾಹ ಎನ್ನುವ ಕಾರಣಕ್ಕೆ ಅಷ್ಟು ಖುಷಿ ಇರಲಿಲ್ಲ. ಆದರೆ ಈಗ ನನ್ನ ಜತೆಗಾಗಲೀ, ವೇಣು ಅವರೊಂದಿಗಾಗಲೀ, ಮಗನ ಜತೆಗಾಗಲೀ ತುಂಬ ಖುಷಿಯಿಂದ ಇದ್ದಾರೆ.

ಮನೋರಂಜನ್‌ಗೆ ತಾಯಿಯಾದ ಮಮತಾಮಯಿ ಮಾತು..!

ಇಂದಿಗೂ ನೀವು ಕಾರ್ಯಕ್ರಮಗಳಲ್ಲಿ ಅಮ್ಮನೊಂದಿಗೆ ಕಾಣಿಸಿಕೊಳ್ಳುವುದರ ರಹಸ್ಯವೇನು?! 

ಅಮ್ಮನಿಗೆ ಕಾರ್ಯಕ್ರಮಗಳು ಇಷ್ಟ. ಟಿವಿ ಸೀರಿಯಲ್ ಕಾರ್ಯಕ್ರಮಗಳು ಅಂದರೆ ತುಂಬ ಇಷ್ಟ. ಯಾಕೆಂದರೆ ಅವರು ಎಲ್ಲ ಧಾರಾವಾಹಿಗಳನ್ನು ನೋಡುತ್ತಾರೆ. ಹಾಗಾಗಿ ಆ ಕಲಾವಿದರನ್ನು ನೇರವಾಗಿ ನೋಡಲು ಅವರಿಗೆ ಇಷ್ಟ.  ತಾಯಿ ಈಗಲೂ ಎಲ್ಲವನ್ನು ಎಂಜಾಯ್ ಮಾಡುತ್ತಾರೆ. ಅವರಿಗೆ ವರ್ಷ 69 ಆಗಿರಬಹುದು. ಆದರೆ ಇಂದಿಗೂ ಅಡುಗೆ ಮಾಡಲು ತಯಾರಿರುತ್ತಾರೆ! ನಾನು ರಾಜಕೀಯದ ಪ್ರಚಾರಕ್ಕೆ ಹೋಗುವಾಗಲೂ ಜತೆಗೆ ಬರುತ್ತಿದ್ದರು. ನಾನು ಹೋಗಮ್ಮ ಎನ್ನುತ್ತಿದ್ದೆ. ನನಗಿಂತ ಮುಂಚೆ ಹೋಗಿ ಕಾರಲ್ಲಿ ಕುಳಿತಿರುತ್ತಿದ್ದರು. ನನ್ನ ಮೊದಲ ಜಗಳ, ಮೊದಲ ಮಾತು,  ಮೊದಲ ಪ್ರಿತಿ, ನಗು ಎಲ್ಲವನ್ನೂ ಕಲಿತಿದ್ದು ತಾಯಿಯೊಂದಿಗೆ. ದೊಡ್ಡಮ್ಮ ಹೋಗಿ ಹತ್ತು ವರ್ಷ ಆಗಿದೆ. ಮೊದಲು ಅವರೇ ಹೆಚ್ಚು ಜತಗಿರುತ್ತಿದ್ದರು. ಅವರು ಹೋದಮೇಲೆ ಅಮ್ಮನೇ ಎಲ್ಲದಕ್ಕೂ ಬರತೊಡಗಿದರು. ನನಗೆ ಕೂಡ ಅಷ್ಟೇ, ಟಾಯ್ಲೆಟ್ ಬಾತ್ ರೂಮ್ ಎನ್ನುವ ಎರಡು ಸ್ಥಳ ಬಿಟ್ಟರೆ ನನ್ನ ಜತೆಗೆ ಯಾರಾದರೂ ಇರಲೇಬೇಕು. ಅದು ಅಮ್ಮನೇ ಆಗಿದ್ದರೆ ತುಂಬ ಚೆನ್ನಾಗಿರುತ್ತದೆ. ಇತ್ತೀಚೆಗೆ ರಾತ್ರಿ ಹೊತ್ತು ಮಗನ ಜತೆಗಿದ್ದು ಅಭ್ಯಾಸವಾಗಿದೆ! ಎಲ್ಲಾದರೂ ಒಂದು ರಾತ್ರಿ ಉಳಿಯಬೇಕಾದ ಪರಿಸ್ಥಿತಿ ಬಂದರೆ ನಾನು ಅವನು ಜತೆಗಿರಬೇಕು ಎಂದು ಹಠ ಹಿಡಿಯುತ್ತೇನೆ. ಬಹುಶಃ ನನ್ನ ಮದರ್ ಸೆಂಟಿಮೆಂಟ್ ಬಗ್ಗೆ ನಿಮಗೆ ಈಗ ಅರ್ಥವಾಗಿರಬಹುದು.