ಸದ್ಯ ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿಯರಲ್ಲಿ ಹರ್ಷಿಕಾ ಪೂಣಚ್ಚ ಪ್ರಮುಖರು. ಎರಡು ಭೋಜ್‌ಪುರಿ, ಒಂದು ಹಿಂದಿ ಚಿತ್ರ, ಎರಡು ಕನ್ನಡ ಸಿನಿಮಾ, ಮತ್ತೊಂದು ಕನ್ನಡ ಆಲ್ಬಂನಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ. ಅವರ ಜೊತೆ ಮಾತುಕತೆ.

ಆರ್‌. ಕೇಶವಮೂರ್ತಿ

ಹೊಸ ಫೋಟೋಶೂಟ್‌ ಹಿಂದಿನ ಗುಟ್ಟೇನು?

ಸುಮ್ಮನೆ ಫೋಟೋಶೂಟ್‌ ಮಾಡಿಸಿದ್ದಲ್ಲ. ನನ್ನ ಅಭಿನಯದ ಪರಮ ಸುಂದರಿ ಹಾಡು ಸೂಪರ್‌ ಹಿಟ್‌ ಆಗಿದೆ. ಆ ಹಾಡನ್ನು ಬೇಸ್‌ ಮಾಡಿಕೊಂಡು ಫೋಟೋಶೂಟ್‌ ಮಾಡಿಸಿದ್ದೇನೆ.

ನಟಿಯರಿಗೆ ಫೋಟೋಶೂಟ್‌ಗಳು ಎಷ್ಟುಮುಖ್ಯ?

ಫೋಟೋಶೂಟ್‌ ಮಾಡಿಸಿಕೊಳ್ಳುವುದು ಎಂದರೆ ನಮ್ಮನ್ನ ನಾವು ಹೊಸದಾಗಿ ರೂಪಿಸಿಕೊಳ್ಳುತ್ತಾ ಹೋಗುವುದು. ಪ್ರತಿ ಹಂತದಲ್ಲೂ ಹೊಸದಾಗಿ ಕಾಣಿಸಿಕೊಳ್ಳುವ ಪ್ರಕ್ರಿಯೆ ಇದು. ಈ ಫೋಟೋಶೂಟ್‌ನಲ್ಲಿ ನಾನು ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದೇನೆ.

ಈ ವರ್ಷ ನಿಮ್ಮ ಯಾವ ಚಿತ್ರ ಬಿಡುಗಡೆ ಆಗಲಿದೆ?

ಎರಡು ಭೋಜ್‌ಫುರಿ ಚಿತ್ರಗಳ ಶೂಟಿಂಗ್‌ ಮುಗಿದಿವೆ. ಈ ಪೈಕಿ ಪವನ್‌ ಸಿಂಗ್‌ ಜತೆ ನಟಿಸಿರುವ ‘ಹಮ್‌ ಹೈ ರಾಹಿ ಪ್ಯಾರ್‌ ಕೆ’ ಚಿತ್ರ ಆಗಸ್ಟ್‌ 15ಕ್ಕೆ ಬಿಡುಗಡೆಯಾಗುತ್ತಿದೆ.

ಕನ್ನಡದಲ್ಲಿ ಯಾವೆಲ್ಲ ಚಿತ್ರಗಳು ಇವೆ?

ಕನ್ನಡದಲ್ಲಿ ಮೂರು ಚಿತ್ರಗಳು ಇವೆ. ಈ ಪೈಕಿ ‘ಕಡ್ಲೆ’ ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ. ಲಯ ಕೋಕಿಲ ನಿರ್ದೇಶನದ ‘ತಾಯ್ತ’ ಚಿತ್ರಕ್ಕೆ ಆಗಸ್ಟ್‌ 16ರಿಂದ ಶೂಟಿಂಗ್‌ ಆರಂಭವಾಗಲಿದೆ. ‘ಓ ಪ್ರೇಮ’ ಚಿತ್ರ ಸೆಟ್ಟೇರಬೇಕಿದೆ.

ಹಿಂದಿಯಲ್ಲಿ ನಟಿಸುವ ತಯಾರಿ ಎಲ್ಲಿವರೆಗೂ ಬಂತು?

ಈ ಕುರಿತು ಹೆಚ್ಚಿನ ಮಾಹಿತಿ ನಿರ್ಮಾಣ ಸಂಸ್ಥೆಯೇ ಹೇಳಲಿದೆ. ತುಂಬಾ ವಿಶೇಷವಾದ ಪಾತ್ರ ಈ ಚಿತ್ರದಲ್ಲಿದೆ.

ಹಸುಗೂಸಿಗೆ ನಟಿ ಹರ್ಷಿಕಾ ಪೂಣಚ್ಚ ಹೆಸರಿಟ್ಟ ಸವಸುದ್ದಿ ಗ್ರಾಮದ ಲಕ್ಷ್ಮಣ್!

ಹೊಸ ಆಲ್ಬಂ ಚಿತ್ರೀಕರಣ ಹೇಗಿತ್ತು?

ಈಗಷ್ಟೆಕನ್ನಡದಲ್ಲಿ ಮೈ ಸಿಗ್ನೇಚರ್‌ ಹೆಸರಿನ ಆಲ್ಬಂ ಹಾಡಿನ ಚಿತ್ರೀಕರಣ ಮುಗಿಸಿದ್ದೇನೆ. ಇಡೀ ಹಾಡು ತುಂಬಾ ಚೆನ್ನಾಗಿ ಬಂದಿದೆ. ಡ್ಯಾನ್ಸ್‌ ಎಂದರೆ ನನಗೆ ಪ್ರೀತಿ. ಈ ಕಾರಣಕ್ಕೆ ಈ ಆಲ್ಬಂನಲ್ಲಿ ಹೆಜ್ಜೆ ಹಾಕುವುದಕ್ಕೆ ಖುಷಿ ಕೊಟ್ಟಿದೆ.

ಕೊರೋನಾ ಸಂಕಷ್ಟದಲ್ಲೂ ಬ್ಯುಸಿ ಆಗಿರುವ ನಟಿ ನೀವು?

ಬ್ಯುಸಿ ಅನ್ನೋದಕ್ಕಿಂತ ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಬರುವ ಅವಕಾಶಗಳ ಪೈಕಿ ನನಗೆ ಸೂಕ್ತ ಅನಿಸುವುದನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾ, ಆಲ್ಬಂ, ಜಾಹೀರಾತು ಹೀಗೆ ಎಲ್ಲ ಕಡೆ ತೊಡಗಿಸಿಕೊಳ್ಳಬೇಕು ಎಂಬುದು ನನ್ನ ಆಸೆ. ಹೀಗಾಗಿ ಹಿಂದಿಗಿಂತ ಈಗ ಹೆಚ್ಚು ಕೆಲಸ ಮಾಡುತ್ತಿದ್ದೇನೆ ಅನಿಸುತ್ತಿದೆ.