ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನ ‘ಲಾ’ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್‌. ಮಾಡೆಲ್‌, ಡ್ಯಾನ್ಸರ್‌, ಟ್ರೈನರ್‌ ಆಗಿಯೂ ಗುರುತಿಸಿಕೊಂಡವರು. ಲಾಕ್‌ಡೌನ್‌ ಟೈಮ್‌ ಅವರಿಗೆ ಫ್ಯಾಮಿಲಿ ಟೈಮ್‌ ಆದ ಬಗೆಯನ್ನಿಲ್ಲಿ ವಿವರಿಸಿದ್ದಾರೆ.

- ನಿತ್ತಿಲೆ

ಲಾಕ್‌ಡೌನ್‌ ಟೈಮ್‌ಅನ್ನು ತುಂಬ ಯೂಸ್‌ಫುಲ್‌ ಆಗಿ ಕಳೆಯುತ್ತಿದ್ದಾರೆ ರಾಗಿಣಿ ಚಂದ್ರನ್‌. ಅತ್ತ ತನ್ನ ಡ್ಯಾನ್‌ ಮತ್ತು ಫಿಟ್‌ನೆಸ್‌ ಟ್ರೈನರ್‌ ಕೆಲಸವನ್ನು ಆನ್‌ಲೈನ್‌ ಮೂಲಕ ಜೀವಂತವಾಗಿಡುತ್ತಾ, ಇತ್ತ ಫ್ಯಾಮಿಲಿ ಜೊತೆಗೆ ಮನಸ್ಫೂರ್ತಿಯಾಗಿ ತೊಡಗಿಸಿಕೊಳ್ಳುತ್ತಾ, ನೂರೆಂಟು ಬಗೆ ರೆಸಿಪಿ ರೆಡಿ ಮಾಡುತ್ತಾ ಬೊಂಬಾಟ್‌ ಆಗಿ ದಿನ ದೂಡುತ್ತಿದ್ದಾರೆ. ಈ ಲಾಕ್‌ಡೌನ್‌ ಟೈಮ್‌ನಲ್ಲಿ ರಾಗಿಣಿ ಅವರಿಗೆ ಅವಿಸ್ಮರಣೀಯ ಅನಿಸಿದ ಕ್ಷಣ ಅಂದರೆ ಡೈನಾಮಿಕ್‌ ಸ್ಟಾರ್‌ ಕೈಲಿ ಭೇಷ್‌ ಅನಿಸಿಕೊಂಡಿದ್ದು. ಇದರ ಹಿಂದಿನ ಕತೆ ಇಂಟರೆಸ್ಟಿಂಗ್‌.

View post on Instagram

ಸೊಸೆಮುದ್ದಿನ ಕೈರುಚಿಗೆ ಮನಸೋತ ಡೈನಾಮಿಕ್‌ ಸ್ಟಾರ್‌

‘ಉಳಿದ ದಿನಗಳಲ್ಲಿ ಮನೆಯಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ಕೆಲಸಗಳಲ್ಲಿ ಬ್ಯುಸಿ ಆಗಿ ಬಿಡುತ್ತಾರೆ. ಆದರೆ ಈ ಟೈಮ್‌ನಲ್ಲಿ ಫ್ಯಾಮಿಲಿ ಕ್ಷಣಗಳನ್ನು ಆಪ್ತವಾಗಿ ಸವಿಯೋದು ಸಾಧ್ಯವಾಯ್ತು’ ಅಂತಾರೆ ರಾಗಿಣಿ. ಇವರೋ ರೆಸಿಪಿಯಲ್ಲಿ ಎತ್ತಿದ ಕೈ. ಅತ್ತೆಗೆ ಅದ್ಭುತ ರುಚಿಯ ಮಶ್ರೂಮ್‌ ಸೂಪ್‌ ಮಾಡಿಕೊಟ್ಟಿದ್ದಾರೆ. ಅತ್ತೆ ಮಾಡಿರೋ ಬಿರಿಯಾನಿಯನ್ನು ರುಚಿಕಟ್ಟಾಗಿ ಸವಿದಿದ್ದಾರೆ. ಮಾವ ದೇವರಾಜ್‌ ಹೇಳಿಕೇಳಿ ಡೈನಾಮಿಕ್‌ ಸ್ಟಾರ್‌ ಅಂತ ಗುರುತಿಸಿಕೊಂಡವರು. ಅವರಿಗೆ ತನ್ನ ಸೊಸೆಮುದ್ದಿನ ಅಡುಗೆ ಯಾವ ಪರಿ ಇಷ್ಟಆಗಿದೆ ಅಂದರೆ ‘ಕೊರೋನಾ ಟೈಮ್‌ನಲ್ಲಿ ನನ್ನ ಸೊಸೆ ಮಾಡಿದ ಅಡುಗೆ ಸವಿಯೋ ಭಾಗ್ಯ ಸಿಕ್ಕಿತು’ ಅಂತ ಅವರು ಎಮೋಷನಲ್‌ ಆಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಾಗಿಣಿ ಮುಖದಲ್ಲಿ ಸಂತೃಪ್ತ ನಗುವಿದೆ. ತನ್ನ ಪತಿ ಪ್ರಜ್ವಲ್‌, ಅವರ ತಮ್ಮಂದಿರಿಗೆ ನಿತ್ಯವೂ ರಾಗಿಣಿ ಕೈಯ ಹೆಲ್ದಿ ರೆಸಿಪಿ. ರಾತ್ರಿ ಇವರ್ಯಾರೂ ಊಟ ಮಾಡಲ್ಲ. ರಾಗಿಣಿ ಮಾಡಿ ಬಡಿಸೋ ಥರಾವರಿ ಸಲಾಡ್ಸ್‌ ತಿಂದು ಫಿಟ್‌ ಆಗಿರ್ತಾರೆ. ‘ನಿಶ್ಶಬ್ದವಾಗಿ ಊಟ ಮಾಡ್ತಿದ್ದರೆ ಅಡುಗೆ ನಿಜಕ್ಕೂ ರುಚಿಯಾಗಿದೆ ಅಂತರ್ಥ’ ಅನ್ನೋದು ಇವರ ಪತಿ ಪ್ರಜ್ವಲ್‌ ಯಾವಾಗಲೂ ಹೇಳೋ ಮಾತು. ಇವರು ಅಡುಗೆ ಮಾಡಿದ ದಿನ ಡೈನಿಂಗ್‌ ಟೇಬಲ್‌ ಮುಂದೆ ಅಂಥದ್ದೊಂದು ನಿಶ್ಶಬ್ದ ಆವರಿಸಿರುತ್ತದೆ.

ಸಮಯ ಕಳೆಯಲು ಈ ಸ್ಟಾರ್ ದಂಪತಿ ಕಂಡುಕೊಂಡ ಹೊಸ ಉಪಾಯ!

ಆರು ವರ್ಷದ ಮಗುವಿಂದ ಅರವತ್ತು ವರ್ಷದವರಿಗೂ ಟ್ರೈನಿಂಗ್‌

ಡ್ಯಾನ್ಸ್‌, ಯೋಗ, ಫಿಟ್‌ನೆಸ್‌ ಕಲಿಸಿಕೊಡೋ ರಾಗಿಣಿ ಅವರ ಸ್ಟುಡಿಯೋ ‘ಉರ್ಹಿತ್‌ ಮಿಕ್ಸ್‌’. ಲಾಕ್‌ಡೌನ್‌ನಿಂದ ಸ್ಟುಡಿಯೋ ಕ್ಲೋಸ್‌ ಆದರೂ ಆನ್‌ಲೈನ್‌ ಕ್ಲಾಸ್‌ ನಡೀತಿವೆ. ಆದರೆ ನೇರವಾಗಿ ಕ್ಲಾಸ್‌ ಮಾಡುವ ಎಫೆಕ್ಟ್ ಆನ್‌ಲೈನ್‌ ಕ್ಲಾಸ್‌ನಲ್ಲಿ ಸಿಗಲ್ವಂತೆ. ಮುಖ್ಯವಾಗಿ ತಿದ್ದುವಿಕೆಗೆ ಸಂಬಂಧಿಸಿ ಒಂದಿಷ್ಟುತೊಂದರೆಗಳಾಗುತ್ತವೆ ಅಂತಾರೆ ರಾಗಿಣಿ. ಆದರೆ ಎಲ್ಲ ನೆಗೆಟಿವ್‌ ಅಂಶಗಳನ್ನೂ ಪಕ್ಕಕ್ಕೆ ಸರಿಸಿ ಪಾಸಿಟಿವ್‌ ಆಗಿ ಮುಂದೆ ಹೋಗೋದು ಇವರಿಗಿಷ್ಟ. ಲಾಕ್‌ಡೌನ್‌ ಆರಂಭದ ದಿನಗಳ ಕಸಿವಿಸಿ, ಬೇಸರವನ್ನು ಅವರು ಈ ಮನಸ್ಥಿತಿಯಿಂದಲೇ ದಾಟಿ ಮುಂದೆ ಬಂದಿದ್ದಾರೆ.

ಅಬ್ಬಬ್ಬಾ, ಇದೆಂಥ ಪ್ರಯೋಗ!

ವರ್ಕೌಟ್‌ಗೆ ಸಂಬಂಧಿಸಿ ಏನೇನೆಲ್ಲ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾರೆ ರಾಗಿಣಿ. ವಾಟರ್‌ ಬಾಟಲ್‌ಗಳನ್ನೇ ವೈಟ್‌ ಲಿಫ್ಟಿಂಗ್‌ ಬಳಸಿಕೊಂಡಿದ್ದಾರೆ. ಎರಡು ಲೀಟರ್‌ ವಾಟರ್‌ ಬಾಟಲ್‌ಗೆ ನೀರು ತುಂಬಿಸಿ ಅದರಲ್ಲೇ ವೈಟ್‌ ಲಿಫ್ಟಿಂಗ್‌ ಮಾಡುತ್ತಾರೆ. ಮನೆಯ ಮೆಟ್ಟಿಲುಗಳ ಮೇಲೆ ಏರೋಬಿಕ್ಸ್‌ ಪ್ರಯೋಗ, ದಿಂಬು ಬಳಸಿ, ಟವಲ್‌ ಬಳಸಿ ಸಖತ್‌ ಮಜವಾಗಿ ವರ್ಕೌಟ್‌ ಮಾಡೋದು ಕಲಿಯುತ್ತಿದ್ದಾರೆ.

ಇಂಥಾ ಪ್ರಯೋಗಶೀಲತೆ ನಡುವೆಯೇ ಇವರ ಲಾಕ್‌ಡೌನ್‌ ದಿನಗಳು ಮುಗಿಯುತ್ತಾ ಬರುತ್ತಿವೆ. ಈ ಅವಧಿಯನ್ನು ಒಂಚೂರೂ ವೇಸ್ಟ್‌ ಮಾಡದೆ ಬಳಸಿಕೊಂಡ ತೃಪ್ತಿ ರಾಗಿಣಿ ಅವರಲ್ಲಿದೆ.