'ಹತ್ತು ದಿನಗಳಿಂದ ಮನೆಯಲ್ಲೇ ಇದ್ದೇನೆ. ಮಧ್ಯದಲ್ಲೊಮ್ಮೆ ಸ್ವಲ್ಪ ಬ್ಯಾಕ್ ಪೈನ್ ಇದೆ ಅಂತ ಹಾಸ್ಪಿಟಲ್‌ಗೆ ಹೋಗಿ ಚೆಕಪ್ ಮಾಡ್ಕೊಂಡು ಬಂದೆ. ಉಳಿದಂತೆ ದಿನಾ ಆರುವರೆಗೆ ವಾಕ್ ಹೋಗಿ ಎಳೂವರೆ ಎಂಟಕ್ಕೆ ವಾಪಾಸ್‌ ಬರುತ್ತೇನೆ. ಎಂಟುಗಂಟೆಗೆ ಸ್ನಾನ, ಮನೇಲೇ ಊಟ ಆಮೇಲೆ ಪಿಕ್ಚರ್ ನೋಡಿಕೊಂಡು ಇದ್ದೇನೆ. ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳೇ ಒಂದಷ್ಟು ಇರುವುದರಿಂದಾಗಿ ಹೊಸದಾಗಿ ಕತೆಗಳನ್ನು ಕೂಡ ಕೇಳುತ್ತಿಲ್ಲ. ಆದರೆ ಹೊಸ ಹೊಸ ಸಿನಿಮಾಗಳನ್ನು ನೋಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದೇನೆ. ಕನ್ನಡದಲ್ಲಿ `ಲವ್ ಮಾಕ್ಟೇಲ್' ನೋಡಿದ್ದೀನಿ. ಇವತ್ತು `ದಿಯಾ' ನೋಡಬೇಕಿದೆ ಎಂದರು ಡಾ. ಶಿವರಾಜ್‌ ಕುಮಾರ್‌. ಇದು ಕೊರೊನ ಕುರಿತಾದ ಎಚ್ಚರಿಕೆಯ ಕಾರಣದಿಂದ ಶೂಟಿಂಗ್‌ ಸ್ಥಗಿತವಾದ ಬಳಿಕ ಮನೆಯಲ್ಲಿರುವ ಶಿವಣ್ಣ ಹೇಳಿದ ಮಾತು. ಇದರ ನಡುವೆ ಅವರು ಮಾನವೀಯತೆ ಎನ್ನುವುದು ಎಷ್ಟು ಮುಖ್ಯವಾಗುತ್ತದೆ ಎಂಬುವುದನ್ನು ಕೂಡ ನಮ್ಮೊಂದಿಗೆ ಹಂಚಿಕೊಂಡರು. ಬಿಡುಗಡೆಯಾದ ಎರಡೇ ವಾರದಲ್ಲಿ ಚಿತ್ರಮಂದಿರ ಮುಚ್ಚಲ್ಪಟ್ಟ ಕಾರಣ ಪ್ರದರ್ಶನ ಕಾಣದಂತಾದ  ಚಿತ್ರ `ದ್ರೋಣ'. ಅದೊಂದು  ರಿಮೇಕ್‌ ಚಿತ್ರ ಎನ್ನುವುದನ್ನು ನಿರ್ದೇಶಕರು ಅಡಗಿಸಿದ್ದೇಕೆ ಎನ್ನುವ ಬಗ್ಗೆ ವಿಚಾರಿಸುತ್ತಲೇ ಮಾತು ಶುರು ಮಾಡಿದ ಸುವರ್ಣ ನ್ಯೂಸ್‌.ಕಾಮ್‌ನ ಎಲ್ಲ ಪ್ರಶ್ನೆಗಳಿಗೂ ಶಿವಣ್ಣ ನೀಡಿದ ಉತ್ತರಗಳು ಇಲ್ಲಿವೆ.


- ಶಶಿಕರ ಪಾತೂರು


`ದ್ರೋಣ' ಚಿತ್ರ ರಿಮೇಕ್ ಎನ್ನುವುದನ್ನು ಅಡಗಿಸಬಾರದಿತ್ತು ಅನ್ಸುತ್ತೆ ಅಲ್ಲವೇ?
ನಾನು ಆರಂಭದಿಂದಲೇ ಹೇಳಿದ್ದೆ; ಇದು ತಮಿಳಿನ `ಸಾಟೈ' ಚಿತ್ರದ ರಿಮೇಕ್ ಅಂತ. ಮಾಡೋದೇ ಉಂಟಂತೆ; ಇನ್ನು ಹೇಳಿಕೊಳ್ಳುವುದರಲ್ಲೇನಿದೆ? ಹದಿನೈದು ವರ್ಷದ ಬಳಿಕ ಮೊದಲ ರಿಮೇಕ್ ಮಾಡುವಾಗಲೇ ಹೇಳಿಕೊಂಡೇ ಮಾಡಿದ್ದೆ. `ಕವಚ' ಚಿತ್ರ ಚೆನ್ನಾಗಿಯೇ ಮೂಡಿ ಬಂದಿತ್ತು. ಇತ್ತೀಚೆಗೆ ತೆರೆಕಂಡ ಮೂರು ಚಿತ್ರಗಳು ಕೂಡ ಒಳ್ಳೆಯ ರಿಪೋರ್ಟ್ ಪಡೆದಂಥವು. `ದ್ರೋಣ' ಕೂಡ ರಿಮೇಕ್ ಆದರೂ ಚಿತ್ರದಲ್ಲಿರುವ ಸಬ್ಜೆಕ್ಟ್ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡಂಥ ವಾಸ್ತವಿಕ ವಿಚಾರಗಳು. ಒಂದಷ್ಟು ಶಿಕ್ಷಣ ಸಂಸ್ಥೆಗಳಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಸೆಕೆಂಡ್ ವೀಕಲ್ಲಿ ಇನ್ನೇನು ಚೆನ್ನಾಗಿ ಪಿಕಪ್‌ ಆಗ್ತಿದೆ ಎನ್ನುವಾಗ `ಕರೊನ'ದಿಂದಾಗಿ ಥಿಯೇಟರ್‌ ಮುಚ್ಚಬೇಕಾಯಿತು. ಈಗ ಮತ್ತೆ ಮುಂದಿನ ತಿಂಗಳಿನಿಂದ ಥಿಯೇಟರಲ್ಲಿ ಮುಂದುವರಿಯಲಿದೆ. ಇದೀಗ ಮತ್ತೊಂದು ರಿಮೇಕ್‌ ಆಫರ್ ಬಂದಿದೆ. `ಅಸುರನ್' ಚಿತ್ರದ ಕನ್ನಡ ಅವತರಣಿಕೆ ಬಗ್ಗೆ ಮಾತುಕತೆ ನಡೀತಿದೆ. ನಾನು ರಿಮೇಕ್ ಮಾಡುವುದಾದರೆ ಹೇಳಿಕೊಂಡೇ ಮಾಡುತ್ತೇನೆ. ಯಾಕೆಂದರೆ ನಾನು ರಿಮೇಕ್ ಮಾತ್ರ ಮಾಡುತ್ತಿಲ್ಲವಲ್ಲ? ಎಲ್ಲ ರೀತಿಯ ಚಿತ್ರಗಳನ್ನು ಕೂಡ ಮಾಡುತ್ತಿದ್ದೇನೆ. `ಆರ್.ಡಿ.ಎಕ್ಸ್' ಮತ್ತು `ಭಜರಂಗಿ 2' ಚಿತ್ರಗಳು ಸ್ವಮೇಕ್ ಸಿನಿಮಾಗಳೇ ತಾನೇ?

ತಾಯಿ ಮೃತರಾದರೂ ಕರ್ತವ್ಯ ಬಿಡದ ವೈದ್ಯ

ಇತರ ಸ್ಟಾರ್‌ಗಳಿಗಿಂತ ವಿಭಿನ್ನ ಎನ್ನುವಂತೆ ನಿಮ್ಮಿಂದ ಹೊಸ ನಿರ್ದೇಶಕರುಗಳಿಗೆ ಅವಕಾಶ ನೀಡಲು ಹೇಗೆ ಸಾಧ್ಯವಾಗುತ್ತದೆ?
ನಾನು ಎಲ್ಲರನ್ನು, ಎಲ್ಲವನ್ನು ಗಮನಿಸುತ್ತೇನೆ. ಬೇರೆ ಚಿತ್ರೋದ್ಯಮಗಳಲ್ಲಿ ಕೂಡ ಇದು ನಡೆಯುತ್ತದೆ. ಹಾಗಾಗಿಯೇ ತಮಿಳು, ಮಲಯಾಳಂನಲ್ಲಿ ಹೊಸ ನಿರ್ದೇಶಕ ಪ್ರತಿಭೆಗಳು ಬಂದಿದ್ದಾರೆ ನೋಡಿ, ಯಂಗ್‌ಸ್ಟರ್ಸ್ ಬರಬೇಕು. ಯಾವಾಗಲೂ ಸೇಫ್ ಗೇಮ್ ಆಡಿ ಗೆಲ್ಲುವುದರಲ್ಲಿ ವಿಶೇಷ ಇಲ್ಲ. ಸೂರಿ, ಯೋಗರಾಜ್ ಭಟ್, ಪ್ರಶಾಂತ್ ನೀಲ್, ಸಂತೋಷ್ ಆನಂದರಾಮ್ ಅವರಷ್ಟೇ ಒಳ್ಳೆಯ ಕತೆ ಮಾಡ್ತಾರೆ. ನಾವು ಹೊಸಬರನ್ನು ನಂಬೋ ಹಾಗೆಯೇ ಇಲ್ಲ ಎಂದು ಕುಳಿತುಕೊಳ್ಳುವುದು ತಪ್ಪು. ಹಾಗಂತ ಅದು ನನ್ನ ದೊಡ್ಡತನ ಅಲ್ಲ. ಹೊಸಬರ ಹೊಸ ಶೈಲಿಯಲ್ಲಿ ನನ್ನನ್ನು ಇನ್ನಷ್ಟು ಹೊಸದಾಗಿ ತೋರಿಸಬಹುದೆನ್ನುವ ಆಸೆಯೂ ಇರಬಹುದು. ರಿಮೇಕ್, ಕಾದಂಬರಿ ಆಧಾರಿತ ಎಲ್ಲವೂ ಮಾಡಬೇಕು. ನಮಗೆ ಎಲ್ಲ ವರ್ಗದ ಪ್ರೇಕ್ಷಕರೂ ಬೇಕು. ಎಲ್ಲ ವರ್ಗದ ತಂತ್ರಜ್ಞರೂ ಬೇಕು. ನಮ್ಮ ನಿರ್ಧಾರಗಳಿಂದ  ಒಂದು ವರ್ಗದ ಜನತೆಗೆ ಕೆಲಸ, ಒಂದು ವರ್ಗದ ಥಿಯೇಟರ್‌ಗೆ ಸಿನಿಮಾ ಎಲ್ಲವೂ ಸಿಗುವುದಾದರೆ ಬೇಡ ಎನ್ನಲು ನಾನು ಯಾರು? ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರವನ್ನು ರೀಚ್ ಮಾಡಿಸುವಂಥ ನಿರ್ಮಾಪಕರು ಬೇಕು. ಚಿತ್ರ ಮಾಡುವಾಗ ಏನು ಹುರುಪು ಇರುತ್ತದೋ, ರಿಲೀಸ್ ಮಾಡುವಾಗಲೂ ಆ ಹುರುಪು ಇರಬೇಕು. 


ಬಿಡುಗಡೆಯ ಹಂತ ಬಂದಾಗ ನಿರ್ಮಾಪಕರು  ಆಸಕ್ತಿ ಕಳೆದುಕೊಳ್ಳಲು ಕಾರಣವೇನು?
ನಾವೆಲ್ಲ ಒಂದೊಳ್ಳೆಯ ಕಾಲದಲ್ಲಿ ಬೆಳೆದು ಬಂದವರು. ಆದರೆ ಪ್ರತಿಯೊಂದು ವಿಚಾರಕ್ಕೂ ದುಡ್ಡಿಗೆ ಪ್ರಾಮುಖ್ಯತೆ ಎನ್ನುವಂತಾಗಿದೆ.  ಹಾಗಾಗಿ ಒಂದು ಚಿತ್ರ ಬಿಡುಗಡೆ ಮಾಡಬೇಕಾದರೆ ಕೂಡ ಇಷ್ಟು ದುಡ್ಡು ಇರಲೇಬೇಕು ಎನ್ನುವ ಪರಿಸ್ಥಿತಿ ತಲುಪಿದ್ದೇವೆ. ಕಮರ್ಷಿಯಲ್ ಅಂಶ ಅಂತ ಏನಿವೆ ಅವುಗಳನ್ನು ಬದಿಗಿಟ್ಟು ಕೂಡ ಚಿತ್ರ ಮಾಡುವುದು ನಮ್ಮ ಸಾಮಾಜಿಕ ಕಾಳಜಿ. ಅದೇ ವೇಳೆ ಅಂಥ ಚಿತ್ರಗಳ ಬಗ್ಗೆ ಕಮರ್ಷಿಯಲ್ ಲೆಕ್ಕಾಚಾರ ಬದಿಗಿಟ್ಟು ಪ್ರಚಾರ ನೀಡಬೇಕಿರುವುದು ಮಾಧ್ಯಮಗಳಿಂದ ನಾವು ನಿರೀಕ್ಷಿಸುವಂಥ ಸಾಮಾಜಿಕ ಕಾಳಜಿ. ಬಹುಶಃ ಎರಡು ವರ್ಷಗಳ ಹಿಂದೆ ಇಷ್ಟೇನೂ ಇರಲಿಲ್ಲ. `ಟಗರು' ಚಿತ್ರದ ಬಗ್ಗೆ ನಾವು ಜಾಹೀರಾತು ನೀಡಿರುವುದಕ್ಕಿಂತ ಎಲೆಕ್ಟ್ರಾನಿಕ್ ಮಾಧ್ಯಮಗಳು ಕೊಂಡಾಡಿದ್ದೇ ಹೆಚ್ಚು. ಅದೇ ಒಂದು ಚಿತ್ರದ ಬಗ್ಗೆ ಹೈಪ್ ಇದ್ದಾಗ ಕಂಟೆಂಟ್ ನೋಡದೇ ತಾವಾಗಿಯೇ ಪ್ರಚಾರ ನೀಡುವವರೂ ಇದ್ದಾರೆ. ಹಾಗಾದರೆ ಕಂಟೆಂಟ್ ಚೆನ್ನಾಗಿದ್ದಾಗಲೂ ಅದೇ ರೀತಿಯ ವರ್ತನೆಯನ್ನು ವಾಹಿನಿಗಳೂ ತೋರಿಸಬೇಕಲ್ಲವೇ? ಯಾಕೆಂದರೆ ನಾವೆಲ್ಲ ಒಂದೇ ದೋಣಿಯ ಪಯಣಿಗರು. ಇದು ನನ್ನ ಚಿತ್ರಕ್ಕಾಗಿ ಮಾತ್ರ ನಾನು ಮಾತನಾಡುತ್ತಿಲ್ಲ. ಒಟ್ಟು ಚಿತ್ರೋದ್ಯಮದ ಉತ್ತಮ ಸಿನಿಮಾಗಳ ಪರವಾಗಿ ನನ್ನ  ಅನಿಸಿಕೆ ಹೇಳಿದ್ದೇನೆ ಅಷ್ಟೇ. 

ಕರೋನಾ ಓಡಿಸಲು ಒಂದಾದ 10 ಸಾವಿರ ಮುಸಲ್ಮಾನರು

ನಾಳಿನ `ಜನತಾ ಕರ್ಫ್ಯೂ' ಬಗ್ಗೆ ನಿಮ್ಮ ಅನಿಸಿಕೆ ಏನು?
ಒಳ್ಳೆಯದೇ ಇರಬಹುದು. ನಾನಂತೂ ಹತ್ತು ದಿನಗಳಿಂದ ಮನೆಯಲ್ಲೇ ಇದ್ದೇನೆ. ಆದರೆ ದಿನಗೂಲಿ ಕಾರ್ಮಿಕರ ಬಗ್ಗೆ ಯೋಚಿಸುವಾಗ ಮಾತ್ರ ನೋವಾಗುತ್ತದೆ. ಎಲ್ಲಕ್ಕಿಂತ ಮೊದಲು ಮಾನವೀಯತೆ ಮುಖ್ಯ. ಬಿ ಹ್ಯೂಮನ್. ಅದಕ್ಕೇನೇ ಮೊದಲು ಮಾನವನಾಗು ಅನ್ನೋದು! ನಾನು ಮನೆಯಲ್ಲಿದ್ದೇ ಕೈಲಾದಷ್ಟು ಜನಕ್ಕೆ ಸಹಾಯ ಮಾಡುತ್ತೇನೆ, ಅದು ಹೊರಗಡೆ ಗೊತ್ತಾಗಲ್ಲ. ನಾವು ಮಾಡಿರುವ ಸಹಾಯವನ್ನು ಯಾವತ್ತೂ ಮಾಧ್ಯಮದ ಮುಂದೆ ಅಥವಾ ಇನ್ಸ್ಟಾಗ್ರಾಂನಲ್ಲಿ ಹಾಕುವ ಅಭ್ಯಾಸ ಮಾಡ್ಕೊಂಡಿಲ್ಲ. ಯಾಕೆಂದರೆ ಮಾಧ್ಯಮಗಳಲ್ಲಿ ತೋರಿಸುವ ಮೊದಲೇ ನಾವು ಸಹಾಯ ಮಾಡಿ ಬಲ್ಲವರು. ಅಪ್ಪಾಜಿ ಕಾಲದಿಂದಲೇ `ಬಲಗೈನಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು' ಎನ್ನುವ ನಿಯಮ ಪಾಲಿಸಿದ್ದೇವೆ. ನಾವಷ್ಟೇ ಅಲ್ಲ, ಅಪ್ಪಾಜಿ ಕಾಲದ ಎಲ್ಲ ತಾರೆಗಳಲ್ಲಿಯೂ ಅದೇ ನಂಬಿಕೆಯಿತ್ತು. ಅವರೆಲ್ಲರನ್ನು ನೋಡಿ ಬೆಳೆದವನು ನಾನು. ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದಲೇ ಅಭಿಮಾನಿಗಳು ಕೂಡ ಸಮಾಜ ಸೇವೆ ಮಾಡುತ್ತಾರೆ. ಅವರ ಸೇವೆಗೆ  ಖಂಡಿತವಾಗಿ ಪ್ರಚಾರ ಸಿಗಬೇಕು. ಯಾಕೆಂದರೆ ಅವರು ಅಭಿಮಾನದ ಹೆಸರಲ್ಲಿ ತಮ್ಮ ಕೈಯ್ಯಲ್ಲಾಗುವುದಕ್ಕಿಂತ  ಹೆಚ್ಚು ಸಮಾಜ ಸೇವೆಗೆ ವಿನಿಯೋಗಿಸುವುದನ್ನು ಕಂಡಿದ್ದೇನೆ. ನಮ್ಮ ಸೇವೆಗಳ ಮಾತಿಗಿಂತ ದಿನಗೂಲಿ ಕಾರ್ಮಿಕರ ವಿಚಾರ ಬಂದಾಗ ಅವರಿಗೆ ಸರ್ಕಾರವೇ ಖುದ್ದಾಗಿ ಸಹಾಯ ಹಸ್ತ ಚಾಚುವುದು ಮುಖ್ಯವಾಗುತ್ತದೆ. ಯಾಕೆಂದರೆ ಸ್ಟಾರ್‌ಗಳು ತಮ್ಮ ಸಹಾಯವನ್ನು ಹೇಳಿಕೊಳ್ಳಬೇಕಾದ ಅಗತ್ಯವೇ ಇರುವುದಿಲ್ಲ. ಆದರೆ ಕರ್ನಾಟಕ ಸರ್ಕಾರ ಇಂಥ ಕೆಲಸ ಮಾಡಿದರೆ ಅದು ಕೇಂದ್ರದ ತನಕ ತಲುಪಬಹುದು. ಮಾತ್ರವಲ್ಲ, ಇತರ ರಾಜ್ಯಗಳಿಗೆ ಪ್ರೇರಣೆಯೂ ಆದೀತು.