ಜೀತು ಜೋಸೆಫ್ ನಿರ್ದೇಶನದ `ದೃಶ್ಯಂ' ಚಿತ್ರ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಆಗಿತ್ತು. ಮೂಲ ಸಿನಿಮಾವಾದ ಮಲಯಾಳಂನ `ದೃಶ್ಯಂ' ಚಿತ್ರವನ್ನು ನಿರ್ದೇಶಿಸಿದ್ದ ಜೀತು ಜೋಸೆಫ್ ಅವರದೇ ನಿರ್ದೇಶನದ `ಬಾಡಿ' ಸಿನಿಮಾ ರಿಷಿ ಕಪೂರ್ ಅವರ ಕೊನೆಯ ಚಿತ್ರವಾಗಿತ್ತು. ಪ್ರಸ್ತುತ ಜೀತು ಜೋಸೆಫ್ ಮೋಹನ್ ಲಾಲ್ ಮತ್ತು ತ್ರಿಷಾ ನಟನೆಯ ರಾಮ್ ಚಿತ್ರದ ಶೂಟಿಂಗ್ ಶುರು ಮಾಡಿದ್ದರು. ಅದರ ನಡುವೆ ಲಾಕ್ಡೌನ್ ಮತ್ತು ರಿಷಿ ಕಪೂರ್ ಸಾವು ಮೊದಲಾದ ಘಟನೆಗಳು ಸಂಭವಿಸಿವೆ. ದೃಶ್ಯಂ ಚಿತ್ರವನ್ನು ನೋಡಿ ಮೆಚ್ಚಿದ್ದ ರಿಷಿ ಕಪೂರ್ ಅವರು `ಬಾಡಿ' ಚಿತ್ರದಲ್ಲಿ ನಟಿಸಲು ಒಪ್ಪಿದ ರೀತಿಯ ಬಗ್ಗೆ, ಶೂಟಿಂಗ್ ಅನುಭವಗಳ ಬಗ್ಗೆ ಸ್ವತಃ ನಿರ್ದೇಶಕ ಜೀತು ಜೋಸೆಫ್ ಅವರು ಸುವರ್ಣ ನ್ಯೂಸ್ .ಕಾಮ್ ಜತೆಗೆ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ. 

ಶಶಿಕರ ಪಾತೂರು

ಬಾಡಿ ಚಿತ್ರದಲ್ಲಿ ರಿಷಿ ಕಪೂರ್ ನಟಿಸಬೇಕು ಎನ್ನುವ ತೀರ್ಮಾನ ಯಾರದಾಗಿತ್ತು?

ನಮ್ಮ ಚಿತ್ರತಂಡದಲ್ಲೇ ತುಂಬ ಮಂದಿ ಆ ಪಾತ್ರಕ್ಕೆ ರಿಷಿ ಕಪೂರ್ ಆಗಬಹುದು ಎಂದು ನನಗೆ ಸಲಹೆ ನೀಡಿದ್ದರು. ಹಾಗಾಗಿ ನಾನು ಕೂಡ ಅವರೇ ಬೆಟರ್ ಆಯ್ಕೆ ಆಗಿರಬಹುದು ಎಂದು ಭಾವಿಸಿದೆ.  ಆದರೆ ಅವರ ಅಪಾಯಿಂಟ್ಮೆಂಟ್ ಪಡೆದು ಹೋದಾಗ ನನಗೆ ಭಯ ಇತ್ತು. ಮೊದಲನೆಯದಾಗಿ ಅವರು ಭಾರತೀಯ ಚಿತ್ರರಂಗದಲ್ಲೇ ಹೆಸರಾಗಿರುವ ಕಪೂರ್ ಫ್ಯಾಮಿಲಿಯ ನಟ. ಮಾತ್ರವಲ್ಲ,  ಮಾಲಿವುಡ್ ಬಾಲಿವುಡ್ ನಡುವೆ ತುಂಬ ವ್ಯತ್ಯಾಸ ಇವೆ. ಅವರು ಡ್ರೆಸ್ ಕೋಡ್, ಲುಕ್ ಮೊದಲಾದವುಗಳನ್ನು ಪರಿಗಣಿಸುತ್ತಾರೆ ಎಂದು ಗೊತ್ತಿತ್ತು. ಆದುದರಿಂದ ಆತಂಕದಿಂದಲೇ ಅವರ ಮನೆಗೆ ಹೋಗಿದ್ದೆ. ಫ್ಲ್ಯಾಟ್‌ ನಲ್ಲಿ ಸಿಕ್ಕ ಅವರು ನಾನು ಒಬ್ಬ ಐವತ್ತು ವರ್ಷ ದಾಟಿದ ವ್ಯಕ್ತಿಯನ್ನು ನಿರೀಕ್ಷೆ ಮಾಡುತ್ತಿದ್ದೆ ಎಂದರು. ಅಲ್ಲಿಂದ ಅವರು ತುಂಬ ಸರಳವಾಗಿ ಬೆರೆತರು. 

ಅವರು ಸೆಟ್‌ ನಲ್ಲಿ ಕೋಪಗೊಂಡ ಘಟನೆಗಳು ನಡೆದಿವೆಯೇ?

ಅವರು ಸಣ್ಣದಾಗಿ ಮುಂಗೋಪಿಯಂತೆ ಕಾಣುತ್ತಿದ್ದರು. ಆದರೆ ಯಾಕೋ ನನ್ನಲ್ಲಿ ಮಾತ್ರ ಅವರು ರೇಗಾಡಲೇ ಇಲ್ಲ. ತಾವು ದೊಡ್ಡ ನಟನಾಗಿದ್ದರೂ ನಿರ್ದೇಶಕರನ್ನು ಹೇಗೆ  ಗೌರವಿಸಬೇಕು ಎನ್ನುವುದನ್ನು ಅವರಿಂದ ಕಲಿಯಬಹುದು. ವಯಸ್ಸಾಗಿದ್ದ ಕಾರಣ ಸಂಜೆ ಬೇಗ ಮನೆ ಸೇರಬೇಕು ಮತ್ತು ಬೆಳಗ್ಗಿನ ಹೊತ್ತು ಸ್ವಲ್ಪ ತಡವಾಗಿ ಬರುವುದು ಮಾಡುತ್ತಿದ್ದರು. ಆದರೆ ಬಾಡಿ ಚಿತ್ರಕ್ಕಾಗಿ ಒಂದೆರಡು ದಿನ ರಾತ್ರಿಯಲ್ಲೇ ಚಿತ್ರೀಕರಣ ನಡೆಸಬೇಕಾಗಿತ್ತು. ಆದರೆ ಅವರಲ್ಲಿ ಈ ವಿಚಾರ ತಿಳಿಸಲು ಚಿತ್ರತಂಡ ಭಯಪಟ್ಟಿತ್ತು. ಕೊನೆಗೆ ಅನಿವಾರ್ಯವಾಗಿ ನಾನೇ ಹೋಗಿ ರಾತ್ರಿ ಶೂಟಿಂಗ್‌ ನಲ್ಲಿ ಪಾಲ್ಗೊಳ್ಳಬಹುದೇ ಎಂದು ಕೇಳಿದೆ. ನೋ ಪ್ರಾಬ್ಲಮ್ ಆದರೆ ಜಿತ್ತು ಇದು ನಿನಗಾಗಿ ಮಾತ್ರ ಎಂದಿದ್ದರು. ಮಧ್ಯರಾತ್ರಿ ಎರಡೂವರೆ ಗಂಟೆ ತನಕ ಚಿತ್ರೀಕರಣ ನಡೆಸಿದ್ದೆವು.

ರಿಷಿಯವರು ನಿಮ್ಮೊಂದಿಗೆ ಆತ್ಮೀಯವಾಗಿದ್ದ ಸಂದರ್ಭಗಳು ಇವೆಯೇ?

ಮಾರಿಷಸ್ ನಲ್ಲಿ ನಡೆದ ಚಿತ್ರೀಕರಣದ ವೇಳೆಯಂತೂ ನಾವು ತುಂಬ ಆಪ್ತರಾದೆವು. ಅವರಿದ್ದ ಹೋಟೆಲ್ ನಮ್ಮ ಹೋಟೆಲ್‌ ಗಿಂತ ತುಸು ದೂರದಲ್ಲಿತ್ತು. ಆದರೆ ಅವರು ನಾವಿದ್ದಲ್ಲಿಗೆ ಬಂದು ನನ್ನ ಮತ್ತು ಛಾಯಾಗ್ರಾಹಕರ ಜತೆಗೆ ಮಾತನಾಡಿದ್ದರು. ತಮ್ಮ ಮೊದಲ ಚಿತ್ರದಲ್ಲಿ ನಟಿಸಿದ ಅನುಭವದ ಬಗ್ಗೆ ಎಲ್ಲವೂ ಅವರು ನನ್ನೊಂದಿಗೆ ಮಾತನಾಡುತ್ತಿದ್ದರು. ನಾನು ನಿರ್ದೇಶಿಸಿದ ಕಲಾವಿದರಲ್ಲಿ ನೆನಪಿರಿಸಿಕೊಳ್ಳುವ ಸ್ಟಾರ್ ಅವರಾಗಿದ್ದರು. ಶಾಟ್ ಆದ ಬಳಿಕ ನಾನು ಅವರ ಸನಿಹಕ್ಕೆ ಹೋಗಲು ಬಯಸುತ್ತಿದ್ದೆ. ಅಂಥದೊಂದು ವಾರ್ಮ್ತ್ ಅವರ ಬಳಿಯಲ್ಲಿ ಸಿಗುತ್ತಿತ್ತು. ಅವರು, ತಮಾಷೆಯ ಮಾತುಗಳನ್ನು ಹಂಚಿಕೊಳ್ಳುತ್ತಿದ್ದರು. ನಿಜ ಹೇಳಬೇಕೆಂದರೆ ನನಗೆ ಮೋಹನ್ ಲಾಲ್ ಅವರ ನೆನಪಾಗುತ್ತಿತ್ತು.  ಚಿತ್ರೀಕರಣ ಮುಗಿಸಿ ಪ್ಯಾಚ್ ವರ್ಕ್ಸ್ ಮಾತ್ರ ಬಾಕಿಯಿದ್ದ ಸಂದರ್ಭದಲ್ಲಿ ನಾವು ಒಂದು ಶೆಡ್ಯೂಲ್ ಮುಗಿಸಿದೆವು. ಆಗ ನಾನು ಕೇರಳಕ್ಕೆ ಮರಳುವಾಗ ತಾವು ಕೂಡ ಒಮ್ಮೆ ಬರುವುದಾಗಿ ರಿಷಿ ಸರ್ ನನ್ನಲ್ಲಿ ಹೇಳಿದ್ದರು.

'ನಮ್ಮ ಕಥೆಯ ಕೊನೆ ಕ್ಷಣಗಳಿವು'! ರಿಷಿ ಕಪೂರ್ ಜೊತೆಗಿನ ಖುಷಿಯ ಕ್ಷಣಗಳಿವು!

ರಿಷಿ ಕಪೂರ್ ಅವರ ವಿಚಾರದಲ್ಲಿ ನಿಮ್ಮನ್ನು ಕಾಡುವ ಸಂಗತಿಗಳೇನು?

ಅವರು ಕೇರಳಕ್ಕೆ ಬರುವುದಾಗಿ ಹೇಳಿದ್ದು ಸುಮ್ಮನೆ ಮಾತಿಗಾಗಿ ಹೇಳಿರಬಹುದು ಎಂದುಕೊಂಡಿದ್ದೆ. ಆದರೆ ಒಂದುವಾರದ ಬಳಿಕ ನಿರ್ಮಾಪಕರೇ ಫೋನ್ ಮಾಡಿ ಅವರು ಕೇರಳಕ್ಕೆ ಬರುತ್ತಿರುವುದಾಗಿ ಟಿಕೆಟ್ ಕೂಡ ಬುಕ್ ಮಾಡಿಸಿರುವುದಾಗಿ ತಿಳಿಸಿದರು. ಆದರೆ ಆನಂತರ ಅವರು ಅನಾರೋಗ್ಯದಿಂದ ವಿದೇಶಕ್ಕೆ ತೆರಳಿದ ಸುದ್ದಿ ಸಿಕ್ಕಿತು. ಆಮೇಲೆ ವಾಟ್ಸಾಪ್ ಮೆಸೇಜ್ ಮೂಲಕ ಮಾತ್ರ ಸಂಪರ್ಕದಲ್ಲಿದ್ದೆವು. ಆದರೆ ತಮ್ಮ ಕಾರಣದಿಂದಾಗಿ ನಿರ್ಮಾಪಕರು ಒಂದು ವರ್ಷ ಕಾಯಬೇಕಾಗಿ ಬಂದಿರುವುದಕ್ಕೆ ರಿಷಿ ಸರ್‌ ತುಂಬ ನೊಂದುಕೊಂಡಿದ್ದರು. ಆದರೆ ಅನಾರೋಗ್ಯ ಎನ್ನುವುದು ನಮ್ಮ ಹಿಡಿತದಲ್ಲಿರುವ ವಿಚಾರವಲ್ಲವಲ್ಲ. ಅಷ್ಟಾಗಿಯೂ ಅವರು ತುಂಬ ಪ್ರೊಫೆಶನ್ ಕಲಾವಿದ ಎನ್ನುವುದನ್ನು ನೆನಪಿಸಲೇಬೇಕು. ಅವರ ಅನಾರೋಗ್ಯ ಇಷ್ಟು ಬೇಗ ಅವರನ್ನು ನಮ್ಮಿಂದ ದೂರ ಮಾಡುವುದೆಂದು ನಾನು ಅಂದುಕೊಂಡಿರಲಿಲ್ಲ. ನಲವತ್ತು ದಿನಗಳಿಂದ ಆಪ್ತವಾಗಿದ್ದ ನನಗೆ ಅವರು ಇಷ್ಟೊಂದು ಕಾಡುತ್ತಿರುವಾಗ ನಲವತ್ತು ವರ್ಷಗಳಿಂದ ಆತ್ಮೀಯರಾಗಿರುವ ಬಾಲಿವುಡ್ ಮಂದಿಗೆ ಎಷ್ಟೊಂದು ನೋವಾಗಿರಬಹುದು ಎನ್ನುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.