ಆರಂಭದ ದಿನಗಳನ್ನು ನೆನಪಿಸಿಕೊಂಡಾಗ? 
ಚಿತ್ರರಂಗಕ್ಕೆ ಬಂದಾಗ ನಾನು ತುಂಬಾ ಚಿಕ್ಕವಳು. ಸಿನಿಮಾ ಅಂತ ಬಂದಾಗ ಆಯ್ಕೆಗಳು ಗೊತ್ತಾಗುತ್ತಿರಲಿಲ್ಲ. ನಾನು ಯಾವ ರೀತಿ ಪಾತ್ರ ಮಾಡಬೇಕು, ಎಂಥ ಕತೆ ನನಗೆ ಸೂಕ್ತ ಎನ್ನುವ ವಿಚಾರದಲ್ಲಿ ಸ್ಪಷ್ಟತೆ ಇರಲಿಲ್ಲ. ಈಗ ಆ ತಿಳುವಳಿಕೆ ಇದೆ. ‘ಶಿವಾಜಿ ಸುರತ್ಕಲ್’ ಹಾಗೂ ‘ಭೀಮಸೇನ ನಳಮಹಾರಾಜ’ ಚಿತ್ರಗಳು ಕೊಟ್ಟ ತಿಳುವಳಿಕೆ ಇದು. ನಾನು ಈಗ ಫಸ್‌ಟ್ ಕ್ಲಾಸ್ ಬೆಂಚ್‌ನತ್ತ ಹೋಗುತ್ತಿರುವ ವಿದ್ಯಾರ್ಥಿ. ಉಳಿದಂತೆ ಆರಂಭದ ದಿನಗಳಲ್ಲಿ ಏನೆಲ್ಲ ಸಂಕಷ್ಟಗಳು, ಗೊಂದಲಗಳು ಎಲ್ಲರಿಗೂ ಇರುತ್ತಾವೋ ನನಗೂ ಇದ್ದವು. 

ಖುಷಿ ಕೊಟ್ಟ ಆ ಕ್ಷಣಗಳು ಯಾವುವು?
ಪ್ರತಿಯೊಂದು ಖುಷಿ ಕ್ಷಣಗಳೇ. ಆದರೆ, ‘ದೃಶ್ಯ’ ಚಿತ್ರದ ಸಮಯದಲ್ಲಿ ಇದ್ದಕ್ಕಿದ್ದಂತೆ ಇಳಯರಾಜ ಬಂದು ‘ನೀನು ನನ್ನ ನೋಡಬೇಕು ಅಂದಿದ್ದಿಯಂತೆ. ಅದಕ್ಕೆ ಬೆಂಗಳೂರಿಗೆ ಬಂದೆ’ ಎಂದಿದ್ದು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ಈ ಸಿನಿಮಾ ಮಾಡುವಾಗ ‘ಇಳಯರಾಜ ಅವರನ್ನು ನೋಡಬೇಕು’ ಎಂದು ಹಠ ಮಾಡಿದ್ದೆ. ಅದು ತಿಳಿದು ಅವರು ಬಂದು ನನ್ನ ಮಾತನಾಡಿಸಿದ್ದು, ನಗಿಸಿದ್ದು ಹಾಗೂ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಹೇಳಿಕೊಟ್ಟಿದ್ದು, ರಮೇಶ್ ಅವರಂತಹ ಒಳ್ಳೆಯ ವ್ಯಕ್ತಿಗಳ ಜತೆ ಸಿನಿಮಾ ಮಾಡಿದ್ದು, ಈಗ ‘ಭೀಮಸೇನಾ ನಳಮಹಾರಾಜ’ ಸಿನಿಮಾ ಕೊಟ್ಟ ಯಶಸ್ಸು.

ನಿರೀಕ್ಷೆಯೇ ಇಲ್ಲದೆ ಬಂದ ಸಂಭ್ರಮ? 
ನನ್ನ ವಾಟ್‌ಸ್ಅಪ್ ಡಿಪಿ ನೋಡಿ ‘ದೃಶ್ಯ’ ಚಿತ್ರಕ್ಕೆ ಅವಕಾಶ ಕೊಟ್ಟಿದ್ದು. ಯಾಕೆಂದರೆ ಚಿತ್ರದ ನಾಯಕ ರವಿಚಂದ್ರನ್, ನಿರ್ದೇಶನ ಪಿ ವಾಸು, ದೊಡ್ಡ ತಾರಾಗಣ, ಇಂಥ ಚಿತ್ರದಲ್ಲಿ ನನಗೆ ರವಿಚಂದ್ರನ್ ಮಗಳ ಪಾತ್ರ ಸಿಕ್ಕಿದ್ದು, ನನ್ನ ವಾಟ್‌ಸ್ಅಪ್ ಡಿಪಿಯಿಂದ ಅನ್ನೋದು ಅಚ್ಚರಿ. ಇದನ್ನು ನಾನು ನಿರೀಕ್ಷೆಯೇ ಮಾಡಿರಲಿಲ್ಲ. 

ಸಿಕ್ಕಾಪಟ್ಟೆ ಬೋಲ್ಡ್‌ ಹುಡುಗಿ; ನಟಿ ಆರೋಹಿ 'ವೇದವಲ್ಲಿ' ಆಗಿದ್ದು ಹೇಗೆ? 

ಯಶಸ್ಸಿನ ಸೂತ್ರಗಳೇನು? 
ಹಾರ್ಡ್‌ವರ್ಕ್. ನಮ್ಮನ್ನು ನಾವು ಹೆಚ್ಚು ನಂಬುವುದು. ಬೇರೆಯವರು ನಮ್ಮನ್ನು ನಂಬದಿದ್ದರೂ ಪರ್ವಾಗಿಲ್ಲ, ನಾನು ಈ ಚಿತ್ರದಲ್ಲಿ ಪಾತ್ರ ಮಾಡುವುದಕ್ಕೆ ಸೂಕ್ತ, ನನಗೆ ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸಬಲ್ಲೆ, ನಾನೂ ಕೂಡ ಪ್ರತಿಭಾವಂತೆ ಎನ್ನುವ ಸೆಲ್‌ಫ್ ಕಾನ್ಫಿಡೆನ್‌ಸ್ ಇರಬೇಕು. ಇದು ಯಶಸ್ಸಿನ ಸೂತ್ರ ಅಂದುಕೊಂಡಿದ್ದೇನೆ. 

ನಿಮ್ಮ ಮುಂದಿರುವ ಕನಸುಗಳೇನು?
ಈಗ ಚಿತ್ರರಂಗದಲ್ಲಿ ಇರುವ ಎಲ್ಲ ಸ್ಟಾರ್‌ಗಳ ಜತೆ ಸಿನಿಮಾ ಮಾಡಬೇಕು ಎಂಬುದು ನನ್ನ ದೊಡ್ಡ ಕನಸು. ಅವರ ಎಲ್ಲರ ಜತೆಗೂ ‘ಭೀಮಸೇನಾ ನಳಮಹಾರಾಜ’ ಚಿತ್ರದಂತೆಯೇ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಬೇಕು.