ಶಿವಣ್ಣ ಹೇಳಿದ `ಓಂ' ಹಿಂದಿನ ಇಂದಿನ `ಸತ್ಯ'
ಶಿವರಾಜ್ ಕುಮಾರ್ ಎಂದರೆ ಕನ್ನಡ ಚಿತ್ರರಂಗದ ಸಚಿನ್ ತೆಂಡುಲ್ಕರ್ ಇದ್ದ ಹಾಗೆ. ಯಾಕೆಂದರೆ ಅವರು ಸುಮ್ಮನಿದ್ದರೂ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈ ಮಂಗಳವಾರದಂದು ಅಂದರೆ ಮೇ 19ಕ್ಕೆ ಉಪೇಂದ್ರ ನಿರ್ದೇಶನದಲ್ಲಿ ಅವರು ನಾಯಕರಾಗಿ ನಟಿಸಿದ `ಓಂ' ತೆರೆಕಂಡು 25 ವರ್ಷಗಳಾಗುತ್ತಿವೆ. ಜತೆಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮವೂ ಮನೆ ಮಾಡಿದೆ. ಈ ಎರಡು ವಿಚಾರಗಳ ಬಗ್ಗೆ, `ಓಂ' ಚಿತ್ರದ ಗೆಲುವಿನ ಹಿಂದಿನ ರಹಸ್ಯಗಳ ಬಗ್ಗೆ ಶಿವರಾಜ್ ಕುಮಾರ್ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ವಿಚಾರಗಳು ಇವು.
ಶಿವರಾಜ್ ಕುಮಾರ್ ಎಂದರೆ ಕನ್ನಡ ಚಿತ್ರರಂಗದ ಸಚಿನ್ ತೆಂಡುಲ್ಕರ್ ಇದ್ದ ಹಾಗೆ. ಯಾಕೆಂದರೆ ಅವರು ಸುಮ್ಮನಿದ್ದರೂ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈ ಮಂಗಳವಾರದಂದು ಅಂದರೆ ಮೇ 19ಕ್ಕೆ ಉಪೇಂದ್ರ ನಿರ್ದೇಶನದಲ್ಲಿ ಅವರು ನಾಯಕರಾಗಿ ನಟಿಸಿದ `ಓಂ' ತೆರೆಕಂಡು 25 ವರ್ಷಗಳಾಗುತ್ತಿವೆ. ಎಲ್ಲ ಕಲಾವಿದರ ಹಳೆಯ ಸಿನಿಮಾಗಳಿಗೂ ವರ್ಷಗಳು ತುಂಬುತ್ತಲೇ ಇರುತ್ತವೆ. ಆದರೆ ಶಿವಣ್ಣನ ಈ ಚಿತ್ರ ಇಂದಿಗೂ ಅವರ ವೃತ್ತಿ ಬದುಕಲ್ಲಿ ಮಾತ್ರವಲ್ಲ, ಕನ್ನಡ ಚಿತ್ರರಂಗದಲ್ಲಿಯೂ ಮೈಲುಗಲ್ಲಾಗಿವೆ. ಚಿತ್ರ ಬಿಡುಗಡೆಗೆ 9 ವರ್ಷ ಮೊದಲು ಶಿವರಾಜ್ ಕುಮಾರ್ ಗೀತಾ ಅವರನ್ನು ವಿವಾಹವಾಗಿದ್ದರು. ಹಾಗಾಗಿ ವಿವಾಹ ವಾರ್ಷಿಕೋತ್ಸವದ ಸಂಭ್ರಮವೂ ಮನೆ ಮಾಡಿದೆ. ಈ ಎರಡು ವಿಚಾರಗಳ ಬಗ್ಗೆ, ಓಂ ಚಿತ್ರದ ಗೆಲುವಿನ ಹಿಂದಿನ ರಹಸ್ಯಗಳ ಬಗ್ಗೆ ಶಿವರಾಜ್ ಕುಮಾರ್ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ವಿಚಾರಗಳು ಇವು.
‘ಓಂ’ ನೋಡಿದಾಗ ಬೇಸರ ಆಗಿದ್ದು ಅದೊಂದೇ ಕಾರಣಕ್ಕೆ: ಉಪೇಂದ್ರ
ಶಶಿಕರ ಪಾತೂರು
ಎರಡೆರಡು ಖುಷಿಗಾಗಿ ಫ್ಯಾನ್ಸ್ ನಿಮಗೆ ಶುಭಕೋರುತ್ತಿದ್ದಾರೆ. ಈ ಸಂಭ್ರಮ ಹೇಗಿದೆ?
ಹೌದು; ನನಗೆ ಎರಡೆರಡು ಖುಷಿ ಇದೆ. `ಓಂ' ಚಿತ್ರದ ಬಗ್ಗೆ ಹೇಳಬೇಕೆಂದರೆ, ಈ ಬಾರಿ ಚಿತ್ರೋದ್ಯಮದವರು ಕೂಡ ಅಭಿಮಾನಿಗಳ ಜತೆ ಸೇರಿ ಆಚರಣೆ ಮಾಡುತ್ತಿರುವುದು ತುಂಬ ಖುಷಿ ನೀಡಿದೆ. `ಓಂ' ಮೂಲಕ ನನಗೆ ಉಪೇಂದ್ರ ಹೊಸ ರೂಪ ಕೊಟ್ಟರು. ಪ್ರೇಕ್ಷಕರು ಅದನ್ನು ಒಪ್ಪಿಕೊಂಡರು. ಇಲ್ಲಿ ನಾನು ಮಾತ್ರ ಕಾರಣ ಎಂದು ಹೇಳಲಾಗುವುದಿಲ್ಲ. ಉಪೇಂದ್ರ ಅವರು ಪ್ರಯತ್ನ ದೊಡ್ಡದು. ನಾನು ಇಂದಿಗೂ ಹೊಸಬರ ಹೊಸ ಪ್ರಯತ್ನಕ್ಕೆ ಸದಾ ಬೆಂಬಲಿಸುತ್ತೇನೆ. ನಾನು ಯಾವಾಗಲೂ ಹೇಳೋದು ಏನೆಂದರೆ ಎಲ್ಲವೂ ಕೂಡಿ ಬಂದರೆ ಮಾತ್ರ ಚಿತ್ರ ಚೆನ್ನಾಗಿ ಬರಲು ಸಾಧ್ಯ. ಉದಾಹರಣೆಗೆ ಮೊದಲು ಆ ಚಿತ್ರವನ್ನು ಕುಮಾರ್ ಗೋವಿಂದ್ ಅವರು ಮಾಡಬೇಕಿತ್ತು! ಆದರೆ ಕೊನೆಗೆ ನನ್ನ ಪಾಲಿಗೆ ಬಂತು. ನಾವೆಲ್ಲ ಒಂದು ಯಶಸ್ಸಿನ ನಿಮಿತ್ತ ಮಾತ್ರ. ಚಿತ್ರ ಚೆನ್ನಾಗಿ ಬಂದರೂ ಮುಗಿಯುವುದಿಲ್ಲ; ಜನ ನೋಡಬೇಕು. ಜನ ನೋಡಿದಾಗಲೇ ನಮ್ಮೆಲ್ಲರ ಪರಿಶ್ರಮಕ್ಕೆ ಅರ್ಥ ಬರೋದು. `ಓಂ' ಅವತ್ತು ಸುಪರ್ ಹಿಟ್ ಆಗಿರೋದು ಮಾತ್ರವಲ್ಲ, ಇವತ್ತು ಬಿಡುಗಡೆಯಾದರೂ ಒಂದುವಾರ ಚೆನ್ನಾಗಿಯೇ ಓಡುತ್ತೆ ಅನ್ನೋದು ವಿಶೇಷ. ಹೀಗೆ ಕಾಲ ದಾಟಿಯೂ ಥಿಯೇಟರಲ್ಲಿ ಜನಾಕರ್ಷಣೆ ಪಡೆಯೋ ಸಿನಿಮಾಗಳು ತುಂಬ ಕಡಿಮೆ. ಅವುಗಳಲ್ಲಿ `ಓಂ' ಸೇರಿಕೊಂಡಿದೆ ಎನ್ನುವುದೇ ಖುಷಿ. ಇನ್ನೊಂದು ಖುಷಿ ಏನೆಂದರೆ ನನ್ನ ವಿವಾಹ ವಾರ್ಷಿಕೋತ್ಸವ ಕೂಡ ಹೌದು.
ಈ ಬಾರಿ ಆಚರಣೆಯಲ್ಲಿ ಎಂದಿನ ಅದ್ದೂರಿ ಇಲ್ಲವೆನ್ನುವ ಬಗ್ಗೆ?
ದಾಂಪತ್ಯ ಚೆನ್ನಾಗಿ ಸಾಗುವುದೇ ದೊಡ್ಡ ಆಚರಣೆ. ಆ ವಿಚಾರದಲ್ಲಿ ನಾನು ಅದೃಷ್ಟವಂತ. ಲಾಕ್ಡೌನ್ ಬಳಿಕ ಮನೆಯಲ್ಲೇ ಇರುವ ಗಂಡ ಹೆಂಡತಿಯರ ಜಗಳ ಹೆಚ್ಚಾಗಿದೆ ಎಂದು ಸುದ್ದಿ ನೋಡಿದೆ. ನಮ್ಮಲ್ಲಿ ಅಂಥ ಸಂದರ್ಭವೇ ಇಲ್ಲ. ಯಾಕೆಂದರೆ ನಾನು ಸಾಮಾನ್ಯವಾಗಿ ಸಂಜೆಯಾಗುತ್ತಲೇ ಮನೆ ಸೇರಿರುತ್ತೇನೆ. ಶೂಟಿಂಗ್ ಹೊರತಾಗಿ ಮನೆಯಿಂದ ಹೊರಗೆ ಇರಬೇಕಾಗಿ ಬಂದಾಗೆಲ್ಲ ಗೀತಾ ನನ್ನ ಜತೆಗಿರುತ್ತಾಳೆ. ಇನ್ನು ಆಚರಣೆ ಅಂತ ಹಬ್ಬದ ರೀತಿ ಮಾಡಿದವರೇ ಅಭಿಮಾನಿಗಳು. ಈ ಬಾರಿ ಆಚರಣೆಗೆ ಸಮಯವಲ್ಲ. ಅವರವರ ಮನೆಯಲ್ಲಿದ್ದುಕೊಂಡು ಮನಸಿನಿಂದ ಹಾರೈಸಿದರೆ ಸಾಕು. ದೇಶ ಕೊರೊನ ವೈರಸ್ ಕಾಟದಿಂದ ನಿಧಾನಕ್ಕೆ ಸುಧಾರಿಸಿಕೊಳ್ಳುತ್ತಿದೆ. ನಾನು ನನಗಾಗುವ ರೀತಿಯಲ್ಲಿ ನೊಂದವರಿಗೆ ಸಹಾಯ ಮಾಡಿದ್ದೇನೆ. ನನ್ನ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಅವರ ಸೇವೆ ಮಾಡಿದ್ದಾರೆ. ನಾವು ಎಷ್ಟು ಸಹಾಯ ಮಾಡಿದ್ದೇವೆ ಎನ್ನುವುದಕ್ಕಿಂತ ಎಷ್ಟು ಮಂದಿಗೆ ಅದರಿಂದ ಉಪಯೋಗ ಆಯಿತು ಎನ್ನುವುದು ಮುಖ್ಯ. ವರ್ಷಾಚರಣೆ ಒಂದು ನೆನಪು ಅಷ್ಟೇ. ಅಂಥ ಹಲವು ಒಳ್ಳೆಯ ನೆನಪುಗಳನ್ನು ಉಳಿಸಿಕೊಳ್ಳುವ ಬದುಕು ನಮ್ಮದಾಗಬೇಕು.
'ಓಂ' ಚಿತ್ರಕ್ಕೆ 25ರ ಸಂಭ್ರಮ; ಶಿವಣ್ಣ- ಉಪ್ಪಿ ಮಾತುಕತೆ!
ಲಾಕ್ಡೌನ್ ಬಳಿಕ ತಲೆತುಂಬ ಇದ್ದ ಕೂದಲು ಕಾಟ ನೀಡಿತ್ತೇ?
ಇಲ್ಲ..ಇಲ್ಲ! ನನಗೆ ಕೂದಲು ಉದ್ದಬಿಟ್ಟು ಮೊದಲಿಂದಲೂ ಅಭ್ಯಾಸ ಇತ್ತು. `ಆನಂದ್', `ರಥ ಸಪ್ತಮಿ' ಕಾಲದಿಂದಲೇ ನನ್ನ ಹೇರ್‌ಸ್ಟೈಲ್ ನೀವೇ ನೋಡಿರಬಹುದು. ಯಾವುದೇ ನಿರ್ದೇಶಕರಿಗೂ ನಾನು ಪಾತ್ರಕ್ಕಾಗಿ ಹೇರ್‌ಸ್ಟೈಲ್ ಬದಲಿಸಲು ಬಿಡುತ್ತಿರಲಿಲ್ಲ. ಆದರೆ ಉಪೇಂದ್ರ ಏನೋ ಪ್ರಯೋಗ ಮಾಡ್ತಾರೆ ಎನ್ನುವ ಕಾರಣಕ್ಕೆ `ಓಂ'ನಲ್ಲಿ ಒಪ್ಪಿಕೊಂಡೆ. ಅದು ಹಿಟ್ ಆಯಿತು. ಆಮೇಲೆ ಟ್ರೆಂಡ್‌ಗೆ ತಕ್ಕಂತೆ ಬದಲಾಯಿಸಿಕೊಂಡಿದ್ದೆ. ಲಾಕ್ಡೌನಲ್ಲಿ ಶೂಟಿಂಗ್ ಕೂಡ ಇಲ್ಲದ ಕಾರಣ ಹಾಗೇ ಬಿಟ್ಟು ಬಿಟ್ಟಿದ್ದೆ. ಕಳೆದವಾರ ಮನೆಗೆ ಹೇರ್ ಸ್ಟೈಲಿಸ್ಟ್‌ನ ಕರೆಸಿ ಬದಲಾಯಿಸಿಕೊಂಡೆ. ಲಾಕ್ಡೌನ್ ಒಂದು ರೀತಿ ಮನೆಯೊಳಗಿನ ರುಟೀನ್ ಶೈಲಿಯನ್ನು ಬದಲಾಯಿಸಿದೆ. ಉದಾಹರಣೆಗೆ ಮೊದಲು ನಾನು ಬೆಳಿಗ್ಗೆ ಒಂದು ಹೊತ್ತು ಮಾತ್ರ ವ್ಯಾಯಾಮ ಮಾಡುತ್ತಿದ್ದೆ. ಈಗ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಕೂಡ ವ್ಯಾಯಾಮ ಮಾಡುತ್ತಿದ್ದೇನೆ. ಜಿಮ್ ಮಾಡುತ್ತೇನೆ. ಆರೋಗ್ಯದ ಕಡೆಗೆ ಹೆಚ್ಚು ಸಮಯ ಕೊಡುತ್ತಿದ್ದೇನೆ. ಜತೆಗೆ ತುಂಬ ಒಳ್ಳೆಯ ಸಿನಿಮಾಗಳನ್ನು ನೋಡಿದೆ. ಇತ್ತೀಚೆಗೆ ಹಾಟ್ ಸ್ಟಾರ್ ನಲ್ಲಿ ಒಂದು ವೆಬ್ ಸೀರೀಸ್ ನೋಡಿ ಮುಗಿಸಿದೆ. `ದಿಸ್ ಈಸ್ ಅಸ್' ಎನ್ನುವುದು ಅದರ ಹೆಸರು. ಅದರಲ್ಲಿ ಕುಟುಂಬ ಹೇಗೆ ಒಂದಾಗಿರಬೇಕು ಎನ್ನುವುದನ್ನು ತುಂಬ ಚೆನ್ನಾಗಿ ಹೇಳಿದ್ದಾರೆ. ನಮ್ಮ ಹಳೆಯ ನೆನಪುಗಳನ್ನು ಕಾಡುವಂತೆ ಮಾಡುವ ಕತೆ ಅದರಲ್ಲಿತ್ತು.
ಸಂಭ್ರಮಗಳ ನಡುವೆ ಅಭಿಮಾನಿಗಳಿಗೆ ನೀವು ನೀಡುವ ಸಂದೇಶ ಏನು?
ನಿಜವಾದ ಸಂಭ್ರಮ ಏನಿದ್ದರೂ ಕೊರೊನಾ ಕಾಟ ಸಂಪೂರ್ಣವಾಗಿ ತೊಲಗಿದ ಮೇಲೆ. ಈಗಾಗಲೇ ಧಾರಾವಾಹಿಗಳ ಚಿತ್ರೀಕರಣಕ್ಕೆ ಪರವಾನಗಿ ದೊರಕಿರುವುದಾಗಿ ತಿಳಿಯಿತು. ಸದ್ಯದಲ್ಲೇ ಸಿನಿಮಾ ಕೂಡ ಶುರುವಾಗಬಹುದು. ಆರಂಭಿಸುವುದು ಮುಖ್ಯವಲ್ಲ. ನಾವು ಎಷ್ಟು ಜಾಗರೂಕತೆಯಿಂದ ಕಾರ್ಯನಿರತರಾಗುತ್ತೇವೆ ಎನ್ನುವುದು ಅಷ್ಟೇ ಮುಖ್ಯ. ಎಲ್ಲ ಕಡೆಯೂ ಆದಷ್ಟು ಬೇಗ ನಾರ್ಮಲ್ ಲೈಫ್ ಗೆ ಬಂದರೆ ಸಾಕು. ನಮ್ಮ ಕಾರ್ಮಿಕರು, ರೈತರು ತುಂಬ ಕಷ್ಟ ಪಡುವಂತಾಗಿದೆ. ಆ ದೇವರು ಆದಷ್ಟು ಬೇಗ ಕೊರೊನಾದಿಂದ ಮುಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.