Asianet Suvarna News Asianet Suvarna News

ವಿಷ್ಣುವರ್ಧನ್ ಭೇಟಿ ಮರೆಯಲಾರೆ: ಸತ್ಯನಾರಾಯಣ ಎಚ್ ಎಸ್

ವಿಷ್ಣುವರ್ಧನ್ ಅವರ ಸಿನಿಮಾ ನೋಡಿ ಅಭಿಮಾನಿಗಳಾದವರು ತುಂಬ ಮಂದಿ ಇದ್ದಾರೆ. ಆದರೆ ಅವರು ನಾಯಕನಾದ ಮೊದಲ ಚಿತ್ರದ ಸಂದರ್ಭದಲ್ಲೇ ಭೇಟಿಯಾಗಿ ಮೆಚ್ಚುಗೆ ಸೂಚಿಸಿ, ಬಳಿಕ ಅಭಿಮಾನ ಬೆಳೆಸಿ ಇಂದು ನಟರಾಗಿಯೂ ಗುರುತಿಸಿಕೊಂಡಿರುವವರು ಸತ್ಯನಾರಾಯಣ್ ಎಚ್ ಎಸ್.

Actor Sathyanarayan HS talks about Dr Vishnuvardhan
Author
Bengaluru, First Published Sep 5, 2021, 2:48 PM IST

ಇವರನ್ನು ನೀವು ಜನಪ್ರಿಯ ಚಿತ್ರಗಳ ಪೋಷಕ ಪಾತ್ರಗಳಲ್ಲಿ ನೋಡಿರುತ್ತೀರಿ. ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಮರೆಯಲಾಗದ ಮುಖವಾಗಿ ಕಾಡುವ ಇವರ ಹೆಸರು ಸತ್ಯನಾರಾಯಣ ಎಚ್ ಎಸ್. ಕನ್ನಡ ಚಿತ್ರರಂಗದಲ್ಲಿ ಬಹುತೇಕರಿಂದ ಮೆಚ್ಚಿನ ಸತ್ಯಣ್ಣನಾಗಿ ಗುರುತಿಸಲ್ಪಡುವ ಇವರು ನಿರ್ದೇಶಕ ಯೋಗರಾಜ್ ಭಟ್ಟರಿಗೆ ಹೆಣ್ಣು ಕೊಟ್ಟ ಮಾವ. ಇದುವರೆಗೆ ಸುಮಾರು ಐವತ್ತರಷ್ಟು ಸಿನಿಮಾಗಳಲ್ಲಿ ನಟಿಸಿರುವ ಸತ್ಯಣ್ಣ ಚಿತ್ರರಂಗದ ಮೇಲೆ ತಮಗೆ ಆಸಕ್ತಿ ಮೂಡಿಸಿದಂಥ ವಿಷ್ಣುವರ್ಧನ್  ಅವರ ಬಗ್ಗೆ ಇಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

 - ಶಶಿಕರ ಪಾತೂರು

ನಿಮ್ಮ ಮತ್ತು ಚಿತ್ರರಂಗದ ಸಂಬಂಧ ಆರಂಭವಾಗಿದ್ದು ಹೇಗೆ?

ನಮ್ಮದು ಚಿತ್ರದುರ್ಗ. ವಿಷ್ಣುವರ್ಧನ್ ಅವರ `ನಾಗರಹಾವು’ ಚಿತ್ರೀಕರಣದ ವೇಳೆ ನಾನು ಅಲ್ಲಿಯೇ ಇದ್ದೆ. ನಿರ್ದೇಶಕ ಪುಟ್ಟಣ್ಣನವರು ಶೂಟಿಂಗ್‌ಗೆ ಎಂದು ಅಲ್ಲಿಗೆ ಬಂದಾಗ ನನಗೆ ಚಿತ್ರರಂಗದ ಬಗ್ಗೆ ಮೊದಲ ನಂಟು ಶುರುವಾಯಿತು. ಆದರೆ ಅದು ಮುಂದುವರಿಯಲಿಲ್ಲ ಎನ್ನಬಹುದು. ಪುಟ್ಟಣ್ಣನವರ ಬಾಮೈದ ಕಿಟ್ಟಿ ನಮಗೆ ದೂರದ ಸಂಬಂಧಿ. ಹಾಗಾಗಿ ನಾನು ಚಿತ್ರತಂಡದೊಂದಿಗೆ ಅಲ್ಲೆಲ್ಲ ಓಡಾಡಿದ್ದೇನೆ. ಅದಾಗಲೇ ಪುಟ್ಟಣ್ಣನವರ ಸಿನಿಮಾ ನೋಡಿದ್ದ ಕಾರಣ ಅವರು ದೊಡ್ಡ ನಿರ್ದೇಶಕರೆನ್ನುವ ಅಭಿಮಾನ. ಇತ್ತು ವಿಷ್ಣುವರ್ಧನ್ ಅವರು ಆಗ ಇನ್ನೂ ಸ್ಟಾರ್ ಆಗಿರಲಿಲ್ಲವಲ್ಲ? ಆದರೆ ಜೊತೆಗಿದ್ದು ಚಿತ್ರೀಕರಣ ನೋಡುವುದೇ ಸಂಭ್ರಮವಾಗಿತ್ತು. ಆಗ ಅವರಿದ್ದ ಲಾಡ್ಜ್‌ನಲ್ಲಿ ರಾತ್ರಿ ತನಕ ಇದ್ದು ಮಾತನಾಡಿಸಿಕೊಂಡು ಬರುತ್ತಿದ್ದೆ.

`ಮತ್ತೆ ಮನ್ವಂತರ'ದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ್

ಹಾಗೆ ನೀವು ಜೊತೆಗಿದ್ದ ಚಿತ್ರೀಕರಣಗೊಂಡ ಸಿನಿಮಾ ಮುಂದೆ ಸಾಕಷ್ಟು ದೊಡ್ಡ ಹೆಸರು ಮಾಡಿದಾಗ ನಿಮಗೇನು ಅನಿಸಿತು?

ತುಂಬಾ ಖುಷಿಯಾಯಿತು. ಚಿತ್ರವನ್ನು ಸುಮಾರು ಹತ್ತು ಹನ್ನೆರಡು ಬಾರಿ ಥಿಯೇಟರಲ್ಲೇ ನೋಡಿದ್ದೆ. ನಮ್ಮೂರನ್ನು ತೋರಿಸಿದ್ದಾರೆ ಎನ್ನುವುದರ ಜೊತೆಗೆ ಆ ಚಿತ್ರೀಕರಣದ ತಂಡದ ಜೊತೆಗೆ ನಾನಿದ್ದೆ ಎನ್ನುವುದು ಕೂಡ ನನ್ನ ಖುಷಿಗೆ ಕಾರಣವಾಗಿತ್ತು. ಜೊತೆಗೆ ದಿನ ದಾಟುತ್ತಿದ್ದ ಹಾಗೆ ಆ ಚಿತ್ರ ಮೂಡಿಸಿದ ದಾಖಲೆಯ ಗೆಲುವು; ಎಲ್ಲರ ಬಾಯಿಗಳಿಂದ ಸಿಕ್ಕ ಪ್ರಶಂಸೆ ಎಲ್ಲವೂ ಅದ್ಭುತವಾಗಿತ್ತು. ಆ ಸಿನಿಮಾ ಇಂದಿನ ಕಾಲಘಟ್ಟದಲ್ಲಿ ಕೂಡ ನೆನಪಿಸಿಕೊಳ್ಳುವಂಥ ಐತಿಹಾಸಿಕ ಚಿತ್ರವಾಗಿರುವುದು ಖುಷಿಯ ವಿಷಯ.

`ಕನ್ನಡತಿ'ಯ ಬಿಂದು ವೃತ್ತಿ ಬದುಕಿಗೊಂದು ತಿರುವು: ಮೊಹಿರಾ ಆಚಾರ್ಯ

ಆ ಬಳಿಕ ನೀವು ವಿಷ್ಣುವರ್ಧನ್, ಪುಟ್ಟಣ್ಣ ಅವರನ್ನು ಭೇಟಿಯಾಗಲಿಲ್ಲವೇ?

ಮೊದಲ ಭೇಟಿಯ ವೇಳೆ ನನಗೆ ಟೀನೇಜು. ನನ್ನ ಇಪ್ಪತ್ತನಾಲ್ಕನೇ ವರ್ಷದಲ್ಲಿ ನಾನು ಬೆಂಗಳೂರಿಗೆ ಬಂದು ಟ್ಯಾಕ್ಸಿ ಚಾಲಕನ ವೃತ್ತಿಯಲ್ಲಿದ್ದೆ. ಸುಮಾರು ವರ್ಷ ಕಳೆದ ಮೇಲೆ ಬೆಂಗಳೂರಿನಲ್ಲಿ `ಬೆಂಕಿ ಬಿರುಗಾಳಿ’ ಸಿನಿಮಾದ ಚಿತ್ರೀಕರಣ ನಡೆದಿತ್ತು. ಆಗ ಮತ್ತೊಮ್ಮೆ ವಿಷ್ಣುವರ್ಧನ್ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ನಾನು `ನಾಗರಹಾವು’ ಚಿತ್ರೀಕರಣದ ವೇಳೆ ಆಗಿದ್ದಂಥ ಭೇಟಿಯ ಬಗ್ಗೆ ಹೇಳಿ ಮಾತನಾಡಿಸಿದೆ. ಆನಂತರ `ಋಣಮುಕ್ತಳು’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಪುಟ್ಟಣ್ಣನೂ ಸಿಕ್ಕಿದ್ದರು. ಟ್ಯಾಕ್ಸಿ ಓಡಿಸುವುದರ ನಡುವೆಯೇ ಅವರಲ್ಲಿ ‘ನನಗೊಂದು ಸಣ್ಣ ಪಾತ್ರ ಕೊಡಿ ಸರ್’ ಎಂದು ರಿಕ್ವೆಸ್ಟ್ ಮಾಡಿದ್ದೆ. ಅದಕ್ಕೆ ಅವರು “ಇಲ್ಲೊಂದು ಪೊಲೀಸ್‌ ಪಾತ್ರ ಇದೆ; ಅದಕ್ಕೆ ಸ್ಟೈಲ್ ಆಗಿ ನಡೆಯಬೇಕು..ಆದರೆ ನೀನು ಸೊಟ್‌ ಸೊಟ್ಟಗೆ ನಡೆಯುತ್ತೀ.. ಹಾಗಾಗಿ ಕೊಡಲಾರೆ” ಎಂದಿದ್ದರು!

ಬೆಂಗಳೂರಿನ ಜೀವನದಲ್ಲಿ  ವಿಷ್ಣುವರ್ಧನ್ ಮೇಲಿನ ಅಭಿಮಾನ ಎಲ್ಲ ಹೇಗೆ ಮುಂದುವರಿಯಿತು?

ಹೌದು; ಒಂದು ರೀತಿಯಲ್ಲಿ ನಾನು ಅವರಿಗೆ ಅಭಿಮಾನಿ ಎಂದೇ ಹೇಳಬಹುದು. ಆ ದಿನಗಳಲ್ಲಿ ತೆರೆಗೆ ಬರುತ್ತಿದ್ದ ವಿಷ್ಣು ವರ್ಧನ್ ಅವರ ಸರಿಸುಮಾರು ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಜೊತೆಗೆ ರಾಜ್ ಕುಮಾರ್ ಅವರು ಕನ್ನಡದ ದೊಡ್ಡ ಸ್ಟಾರ್ ಆಗಿದ್ದ ಕಾರಣ ಅವರ ಚಿತ್ರಗಳನ್ನೂ ತಪ್ಪಿಸುತ್ತಿರಲಿಲ್ಲ. ರಾಜ್ ಕುಮಾರ್ ಅವರು ಕಲ್ಪನಾ ಜೊತೆಗೆ ನಟಿಸಿದ್ದ `ಎರಡು ಕನಸು’ ನನ್ನ ಮೆಚ್ಚಿನ ಚಿತ್ರವಾಗಿತ್ತು. ಬಳಿಕ ಬೆಂಗಳೂರಲ್ಲೇ ಸಂಬಂಧಿಕರ ಹುಡುಗಿ ರಾಜೇಶ್ವರಿಯೊಂದಿಗೆ ನನ್ನ ಮದುವೆಯೂ ಆಯಿತು. ಮಗಳೂ ಹುಟ್ಟಿದಳು. ಆಮೇಲೆ ನಾನೇ ಒಂದು ಟ್ರಾವೆಲ್ ಏಜೆನ್ಸಿ ಆರಂಭಿಸಿದೆ. ದೇವಯ್ಯ ಪಾರ್ಕ್ ಬಳಿಯಲ್ಲಿ `ವಿನಯ್ ಟೂರ್ಸ್‌ ಆಂಡ್ ಟ್ರಾವೆಲ್ಸ್‌’ ಅಂತ ನಡೆಸಿದ್ದೆ. ಒಂದಷ್ಟು ವರ್ಷಗಳ ಹಿಂದೆ ಆನಂತರ ಅದರಲ್ಲಿ ಏನೇನೋ ತೊಂದರೆಗಳಾಗಿ ಆ ವ್ಯವಹಾರಕ್ಕೆ ಕೊನೆ ಹಾಡಿದೆ. ಅಷ್ಟರಲ್ಲಿ ಕಾಲೇಜು ಮುಗಿಸಿ ವೃತ್ತಿಪರ ತರಬೇತಿ ಪಡೆಯುತ್ತಿದ್ದ ಮಗಳು ರೇಣುಕಾ ಮದುವೆಯೂ ಆಯಿತು.

ಮಗಳನ್ನು ನಿಮಗೆ ದೊಡ್ಡ ಮಟ್ಟದ ಪರಿಚಯವಿರದ ಸಿನಿಮಾ ಕ್ಷೇತ್ರದಲ್ಲಿರುವ ಯೋಗರಾಜ್‌ ಭಟ್ಟರಿಗೆ ನೀಡುವಾಗ ನಿಮಗೇನಾದರೂ ಆತಂಕವಿತ್ತೇ?

ಆಗ ಯೋಗರಾಜ್ ಭಟ್ ಇನ್ನೂ ಸಿನಿಮಾದಲ್ಲಿ ಹೆಸರು ಮಾಡಿರಲಿಲ್ಲ. ನಟ ರಮೇಶ್ ಪಂಡಿತ್ ಪತ್ನಿ ನಟಿ ಸುನೇತ್ರಾ ಇದ್ದಾರಲ್ಲ? ಆಕೆ ನನ್ನ ಪತ್ನಿಯ ಕಡೆಯಿಂದ ನಮಗೆ ಸಂಬಂಧಿಕಳಾಗಬೇಕು. ಅವರು ಬಿ ಸುರೇಶ್ ಅವರ ನಿರ್ದೇಶನದ `ಸಾಧನೆ’ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರ ಸಂಭಾಷಣೆ ಮತ್ತು ಸಂಚಿಕೆ ನಿರ್ದೇಶನ ಮಾಡುತ್ತಿದ್ದವರೇ ಯೋಗರಾಜ್ ಭಟ್. “ನಮ್ಮ ಜಾತಿಯಲ್ಲಿ ಹುಡುಗೀನೇ ಸಿಗುತ್ತಿಲ್ಲ” ಎಂದು ಅವರು ಸುನೇತ್ರಾ ಅವರಲ್ಲಿ ಹೇಳಿಕೊಂಡಿದ್ದರಂತೆ! ಆಕೆಗೆ ತಕ್ಷಣ ನಮ್ಮ ಮಗಳು ರೇಣುಕಾ ನೆನಪಾಗಿ ನಮ್ಮಲ್ಲಿ ಮಾತನಾಡಿದ್ದರು. ನಮಗಿದ್ದ ಬೆಂಗಳೂರಿನ ಸಂಬಂಧಿಕರೆಲ್ಲ ಭಟ್ಟರಿಗೆ ಸಾಹಿತ್ಯದ ಮೇಲಿರುವ ಒಲವು, ಓದಿನ ಆಸಕ್ತಿಯ ಬಗ್ಗೆ ಮಾತನಾಡಿದ್ದ ಕಾರಣ ನಮಗೂ ಇಷ್ಟವಾಗಿತ್ತು. ಅಷ್ಟೇ ಅಲ್ಲ, `ಸಾಧನೆ’ ಧಾರಾವಾಹಿ ಕೂಡ ಆಗ ಒಳ್ಖೆಯ  ಹೆಸರು ಮಾಡಿತ್ತು. ಅದು ಬಿಟ್ಟು ಸಿನಿಮಾದವರು ಎನ್ನುವ ಯೋಚನೆ ನನಗೇನೂ ಬಂದಿರಲಿಲ್ಲ.

`ರಾಬರ್ಟ್' ನಿರ್ಮಾಪಕ ಕರ್ನಾಟಕದಲ್ಲಿ ಸಿನಿಮಾ ಸಿಟಿ ನಿರ್ಮಿಸಲು ಮುಂದಾಗಿದ್ದೇಕೆ?!

ಸಿನಿಮಾ ನಟನೆಯಲ್ಲಿ ನಿಮ್ಮ ಕನಸುಗಳು ಇನ್ನೂ ಉಳಿದಿವೆಯೇ? 

ಖಂಡಿತವಾಗಿ. ಆರಂಭದಲ್ಲಿ ನಾನು ಸೂರಿಯನ್ನು ಕೇಳಿ ಅವಕಾಶ ಪಡೆದುಕೊಂಡೆ. ಹಾಗೆ `ಕಡ್ಡಿಪುಡಿ’ಯಲ್ಲಿ ಪ್ರಥಮವಾಗಿ ನಟಿಸಿದೆ. ಭಟ್ಟರು ನನಗೆ ಪಾತ್ರ ನೀಡಿದ್ದು ನಮ್ಮದೇ ನಿರ್ಮಾಣದಲ್ಲಿ ತೆರೆಕಂಡ ‘ವಾಸ್ತು ಪ್ರಕಾರ’ದ ಮೂಲಕ. ಇದುವರೆಗೆ ನಟಿಸಿರುವುದರಲ್ಲಿ ಆಕ್ಟ್ ನೈಂಟಿನ್ ಸೆವೆಂಟಿ ಎಯ್ಟ್ ನನಗೆ ತುಂಬ ಇಷ್ಟವಾಗಿದೆ. ನಿವೃತ್ತನಾಗಲಿರುವ ವ್ಯಕ್ತಿಯ ಪಾತ್ರವೊಂದನ್ನು ಮಾಡಿದ್ದು ತುಂಬ ಖುಷಿಯಾಗಿದೆ. ಆ ಪಾತ್ರದ ಜೊತೆಗೆ ಚಿತ್ರೀಕರಣದ ವೇಳೆ ಇದ್ದ ವಾತಾವರಣ, ಕಚೇರಿಯಲ್ಲಿ ಭಾಗಿಯಾಗಿದ್ದ ಪಾತ್ರಧಾರಿಗಳೆಲ್ಲ ಒಟ್ಟಾಗಿದ್ದೆವು ಎನ್ನುವುದು ತುಂಬ ಆತ್ಮೀಯವಾದ ವಲಯ ಸೃಷ್ಟಿಯಾದ ಹಾಗಿತ್ತು. ಭಟ್ಟರ ಶಿಷ್ಯರೆಲ್ಲ ಇವತ್ತು ದೊಡ್ಡ ನಿರ್ದೇಶಕರಾಗಿದ್ದಾರೆ. ತಾವು ಸಿನಿಮಾ ಮಾಡುವಾಗ ನನ್ನ ನೆನಪಿಸಿಕೊಂಡು ಒಂದು ಪಾತ್ರ ನೀಡುತ್ತಾರೆ. ನಾನು ನಟನಲ್ಲ. ಆಸಕ್ತಿಯಿಂದ ಪಾತ್ರ ಮಾಡುತ್ತೇನೆ. ಹಾಗಾಗಿ ಹೇಳಿಕೊಟ್ಟರೆ ಒಂದೊಳ್ಲೆಯ ಕೌಟುಂಬಿಕ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಬೇಕು ಎನ್ನುವ ಕನಸು ಇದೆ.

Follow Us:
Download App:
  • android
  • ios