Asianet Suvarna News Asianet Suvarna News

ತೆಲಂಗಾಣ: ಹೊಂಡಗುಂಡಿಯ ರಸ್ತೆಲಿ ಏಳುತ್ತಾ ಬೀಳುತ್ತಾ ಸಾಗಿದ ರೆಡ್ ಬ್ಯೂಟಿ ಲ್ಯಾಂಬೋರ್ಗಿನಿ : ವೀಡಿಯೋ ವೈರಲ್‌

ತೆಲಂಗಾಣದ ಹೊಂಡ ಗುಂಡಿಗಳ ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಸಾಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ರಸ್ತೆ ತೆರಿಗೆ ಹಣ ಏನಾಗುತ್ತಿದೆ ಎಂಬ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. 

Viral Video: Lamborghini Struggles on Pothole Ridden Telangana Streets
Author
First Published Sep 26, 2024, 7:31 PM IST | Last Updated Sep 26, 2024, 7:31 PM IST

ಲ್ಯಾಂಬೋರ್ಗಿನಿ ಐಷಾರಾಮಿ ಕಾರು, ಉಬ್ಬು ತಗ್ಗು ಹೊಂಡ ಗುಂಡಿಗಳಿಲ್ಲದ ರಸ್ತೆಯಲ್ಲಿ ಇದು ಸಾಗುವುದ ನೋಡೋದೇ ಒಂದು ಖುಷಿ. ಆದರೆ ಹೊಂಡ ಗುಂಡಿಗಳಿಲ್ಲದ ರಸ್ತೆ ಎಲ್ಲಿದೆ? ಲ್ಯಾಂಬೋರ್ಗಿನಿ   ಕಾರೊಂದು ಹೊಂಡ ಗುಂಡಿಯಿಂದ ಕೂಡಿದ ತೆಲಂಗಾಣದ ರಸ್ತೆಯಲ್ಲಿ ಎಳುತ್ತಾ ಬೀಳುತ್ತಾ ಆಮೆಯಂತೆ ಸಾಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಎಷ್ಟು ತೆರಿಗೆ ಕಟ್ಟಿದರೇನು ಉಪಯೋಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

@WhateverVishal ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು,  ಈ ಕಾರಿನ ಮಾಲೀಕ ಕನಿಷ್ಠ 62 ಲಕ್ಷ ರೂಪಾಯಿ ರಸ್ತೆ ತೆರಿಗೆಯನ್ನು ಪಾವತಿ ಮಾಡಿರುತ್ತಾನೆ. ವಿಶ್ವಗುರುವಿನ ಸಂಪೂರ್ಣ ರಾಜ್ಯ ಎಂದು ಬರೆದುಕೊಂಡಿದ್ದಾರೆ. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಇದೇ ಕಾರಣಕ್ಕೆ ಕಾಮೆಂಟ್ ಸೆಕ್ಷನ್‌ನಲ್ಲಿ ಕಾಂಗ್ರೆಸ್ ಸರ್ಕಾರ, ಬಿಜೆಪಿ ಕೇಂದ್ರ ಸರ್ಕಾರ ಎಂಬ ಬಡಿದಾಟವಿದೆ. 

ದುಬಾರಿ ಲ್ಯಾಂಬೋರ್ಗಿನಿ ಮೇಲೆ ಹತ್ತಿ ಡ್ಯಾನ್ಸ್, ರೀಲ್ಸ್ ಹುಚ್ಚಿಗೆ ಒಡೆದೋಯ್ತು ಕಾರಿನ ಗಾಜು!

ವೀಡಿಯೋದಲ್ಲಿ ಕಾಣಿಸುವಂತೆ ವಾಹನಸಂದಣಿಯಿಂದ ಕೂಡಿದ ರಸ್ತೆಯಲ್ಲಿ ಸ್ಕೂಟರ್, ಟೆಂಪೋ, ಆಟೋ ರಿಕ್ಷಾಗಳ ನಡುವೆ ಇತರ ಹಲವು ವಾಹನಗಳು ನೀರಿನಿಂದ ತುಂಬಿದ ಹೊಂಡ ಗುಂಡಿಯಿಂದ ಕೂಡಿದ ರಸ್ತೆಯಲ್ಲಿ ಕಷ್ಟಪಡುತ್ತಾ ಸಂಚರಿಸುತ್ತಿವೆ. ಇವುಗಳ ಮಧ್ಯೆಯೇ ಒಂದು ಕೆಂಪು ಬಣ್ಣದ  ಲ್ಯಂಬೋರ್ಗಿನಿ ಕಾರು ಸಂಚರಿಸುತ್ತಿದ್ದು, ಹೊಂಡ ಗುಂಡಿಯಿಂದ ತುಂಬಿದ ರಸ್ತೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಕಷ್ಟಪಡುತ್ತಿದೆ. ಅಲ್ಲಿರುವ ಕೆಲವರು ತಮ್ಮ ಫೋನ್‌ನಲ್ಲಿಈ ಐಷಾರಾಮಿ ಕಾರಿನ ವೀಡಿಯೋ ಮಾಡಿಕೊಳ್ಳುತ್ತಿದ್ದಾರೆ. ಈ ವೀಡಿಯೋ ನೋಡಿದ ಜನರು ಕೂಡ ಈ ಕೆಟ್ಟ ರಸ್ತೆ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ರೀತಿಯ ಐಷಾರಾಮಿ ದುಬಾರಿ ಕಾರುಗಳ ಮಾಲೀಕರು ರಸ್ತೆಗಿಳಿಯುವ ಮೊದಲು ದುಬಾರಿ ರೋಡ್ ಟ್ಯಾಕ್ಸ್ ಕಟ್ಟಿರುತ್ತಾರೆ. ಆದರೆ ದುರಾದೃಷ್ಟ ಎಂದರೆ ಇಲ್ಲಿ ರಸ್ತೆಯಂತಹ ಮೂಲಭೂತ ಸೌಲಭ್ಯಗಳು ಹೇಗಿದೆ ಎಂದರೆ ಲ್ಯಾಂಬೋರ್ಗಿನಿ ಯಂತಹ ಐಷಾರಾಮಿ ಕಾರುಗಳು ಈ ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗದಂತಹ ದುಸ್ಥಿತಿಯಲ್ಲಿದೆ ಎಂಬ ವಿಚಾರವನ್ನು ವೀಡಿಯೋ ನೋಡಿದ ಅನೇಕರು ಪ್ರಸ್ತಾಪಿಸಿದ್ದಾರೆ.  

ಹಣ ಬಾಕಿ: 1 ಕೋಟಿ ಮೊತ್ತದ ಐಷಾರಾಮಿ ಲಂಬೋರ್ಗಿನಿ ಗಲ್ಲಾರ್ಡೊ ಕಾರಿಗೆ ಬೆಂಕಿ

ಈ ಕಾರಿಗೇನಾದರೂ ಜೀವವಿದ್ದಿದ್ದಾರೆ ಧೀರ್ಘಕಾಲದ ಡಿಪ್ರೆಶನ್‌ಗೆ ಜಾರುತ್ತಿತ್ತು. ಹಾಗೂ ನರಕದಂತಹ ರಸ್ತೆಯಲ್ಲಿ ಇರಲು ಬಯಸದೇ ಸ್ವರ್ಗಕ್ಕೆ ಹೋಗಲು ಬಯಸುತ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರೋಡ್ ಟ್ಯಾಕ್ಸ್‌ಗಳು ಚರಂಡಿಯಲ್ಲಿ ಕೊಚ್ಚಿ ಹೋಗಿವೆ ಎಂದು ಒನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಕರುಣೆ ಇಲ್ಲದ ಟ್ಯಾಕ್ಸ್ ವಸೂಲಿ ಮಾಡ್ತಾರೆ ಆದರೆ ಅದಕ್ಕೆ ಪ್ರತಿಯಾಗಿ ಯಾವ ಮೂಲಭೂತ ಸೌಲಭ್ಯವನ್ನು ಕೂಡ ಸರಿಯಾಗಿ ಒದಗಿಸುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ರಸ್ತೆಗೆ ಈ ಕಾರುಗಳು ಅರ್ಹವಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ರೋಡ್ ಟ್ಯಾಕ್ಸ್ ಅಥವಾ ಮೋಟಾರ್ ವೆಹಿಕಲ್ ಟ್ಯಾಕ್ಸನ್ನು ಭಾರತದಲ್ಲಿ ರಾಜ್ಯ ಸರ್ಕಾರಗಳಿಗೆ ಪಾವತಿ ಮಾಡಲಾಗುತ್ತದೆ. ರಸ್ತೆ ತೆರಿಗೆಯನ್ನು ವಾಹನದ ಬೆಲೆಯ ಆಧಾರದ ಶೇಕಡಾವಾರು ಪ್ರಮಾಣದಲ್ಲಿ ವಿಧಿಸಲಾಗುತ್ತದೆ. . ವಾಹನಗಳಿಗೆ ಸಂಬಂಧಿಸಿದಂತೆ ತೆರಿಗೆ ಪ್ರಕ್ರಿಯೆಯೂ ಒಂದು ರಾಜ್ಯದಿಂದ ಇನ್ನೊಂರು ರಾಜ್ಯಕ್ಕೆ ಭಿನ್ನವಾಗಿರುತ್ತದೆ.

 

 

Latest Videos
Follow Us:
Download App:
  • android
  • ios