ಸಿಎಂ ಕುರ್ಚಿ ಸಿಕ್ಕ ಬೆನ್ನಲ್ಲೇ 1 ಕೋಟಿ ರೂಪಾಯಿ ಕಾರು ಖರೀದಿಸಿದ ಸಿದ್ದರಾಮಯ್ಯ, ಏನಿದರೆ ವಿಶೇಷತೆ?
ಸಿದ್ದರಾಮಯ್ಯ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ವೇದಿಕೆ ಸಿದ್ಧವಾಗಿದೆ. ಆದರೆ ಸಿಎಂ ಪಟ್ಟ ಸಿಕ್ಕ ಬೆನ್ನಲ್ಲೇ ಸಿದ್ದು, ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಟೋಯೋಟಾ ವೆಲ್‌ಫೈರ್ ಕಾರು ಖರೀದಿಸಿದ್ದಾರೆ. ಈ ಕಾರಿನ ವಿಶೇಷತೆ ಏನು?
ಬೆಂಗಳೂರು(ಮೇ.19): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಳೆ ಹೊಸ ಸರ್ಕಾರ ರಚನೆ ಮಾಡಲಿದೆ. ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರ ಜೊತೆಗೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ ಕೆಲ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಿಎಂ ಕುರ್ಚಿಗಾಗಿ ನಡೆದ ಜಟಾಪಟಿಯಲ್ಲಿ ಸಿದ್ದು ಕೈ ಮೇಲಾಗಿದೆ. ದೆಹಲಿಯಲ್ಲಿ ಸಿಎಂ ಪಟ್ಟ ಘೋಷಣೆಯಾಗುತ್ತಿದ್ದಂತೆ, ಇತ್ತ ಸಿದ್ದರಾಮಯ್ಯ 1 ಕೋಟಿ ರೂಪಾಯಿ ಟೋಯೋಟಾ ವೆಲ್‌ಫೈರ್ ಕಾರು ಖರೀದಿಸಿದ್ದಾರೆ.
ಟೋಯೋಟಾ ವೆಲ್‌ಫೈರ್ ಕಾರು ಅತ್ಯಂತ ಜನಪ್ರಿಯ ಕಾರಾಗಿದೆ. ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಹೆಚ್ಚಾಗಿ ಈ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರ ಬೆಲೆ 96.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ವಿಮೆ, ರಿಜಿಸ್ಟ್ರೇಶನ್ ಸೇರಿದಂತೆ ಆನ್ ರೋಡ್ ಬೆಲೆ ಸರಿಸುಮಾರು 1.20 ಕೋಟಿ ರೂಪಾಯಿ.
ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ,ರಹಸ್ಯ ಬಯಲು ಮಾಡಿದ ಹೈಕಮಾಂಡ್!
ಟೊಯೋಟಾ ವೆಲ್‌ಫೈರ್ ಕಾರು ಆರಾಮದಾಯಕ ಪ್ರಯಾಣ ನೀಡಲಿದೆ. ಲೆಗ್‌ರೂಂ ಸ್ಪೇಸ್, ಹೆಡ್‌ರೂಂ ಸ್ಥಳವಕಾಶ ಅತ್ಯುತ್ತಮವಾಗಿದೆ. ಈ ಕಾರಿನಲ್ಲಿ ಅದೆಷ್ಟೇ ದೂರ ಪ್ರಯಾಣಿಸಿದರೂ ಆಯಾಸವಾಗಲ್ಲ. ಇನ್ನು ಈ ಕಾರನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಫಿಕೇಶನ್ ಮಾಡಿಸಿಕೊಳ್ಳಲು ಸಾಧ್ಯವಿದೆ. ಸೆಲೆಬ್ರೆಟಿಗಳು, ಸಿನಿಮಾ ನಟ ನಟಿಯರು ಈ ಕಾರನ್ನು ಕ್ಯಾರವಾನ್ ಆಗಿ ಬಳಕೆ ಮಾಡುತ್ತಾರೆ. ನೂತನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ರಾಜ್ಯದ ಮೂಲೆ ಮೂಲೆಗೆ ಓಡಾಡಬೇಕಿದೆ.ಹೀಗಾಗಿ ಸುಖಕರ ಪ್ರಯಾಣಕ್ಕೆ ದುಬಾರಿ ವೆಲ್‌ಫೈರ್ ಕಾರು ಖರೀದಿಸಿದ್ದಾರೆ.
ಟೋಯೋಟಾ ವೆಲ್‌ಫೈರ್ ಕಾರು ಗರಿಷ್ಠ ಸುರಕ್ಷತೆ ನೀಡಲಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಡ್ರೈವರ್, ಪ್ಯಾಸೆಂಜರ್, ಸೈಡ್ ಸೇರಿದಂತೆ ಒಟ್ಟು 7 ಏರ್‌ಬ್ಯಾಗ್ ಈ ಕಾರಿನಲ್ಲಿದೆ. ಎಬಿಎಸ್ ಬ್ರೇಕಿಂಕ್, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಫೀಚರ್ಸ್ ಹೊಂದಿದೆ. ಚೈಲ್ಡ್ ಸೇಫ್ಟಿ ಲಾಕ್, ಪಾರ್ಕಿಂಗ್ ಸೆನ್ಸಾರ್, ಕ್ರಾಶ್ ಸೆನ್ಸಾರ್, ಎಂಜಿನ್ ಚೆಕ್ ವಾರ್ನಿಂಗ್, ಸೈಡ್ ಇಂಪಾಕ್ಟ್ ಬೀಮ್ಸ್, ಡೋರ್ ವಾರ್ನಿಂಗ್, ಸೀಟ್ ಬೆಲ್ಟ್ ಅಲರಾಂ, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಯಡಿಯೂರಪ್ಪ ಖರೀದಿಸಿದ 1 ಕೋಟಿ ಬೆಲೆಯ ಟೋಯೋಟಾ ವೆಲ್‌ಫೈರ್ ಕಾರಿನ ವಿಶೇಷತೆ ಏನು?
ಟೋಯೋಟಾ ವೆಲ್‌ಫೈರ್ ಕಾರು ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. 2494 cc ಎಂಜಿನ್, 4 ಸಿಲಿಂಡರ್, 4 ವೇಲ್ವ್ ಹೊಂದಿದೆ. ಕಾರು 141 bhp ಪವರ್( @ 4500 rpm) ಹಾಗೂ 198 Nm ಪೀಕ್ ಟಾರ್ಕ್( @ 2800 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಹೈಬ್ರಿಡ್ ಕಾರಾಗಿರುವ ಕಾರಣ ಒಂದು ಲೀಟರ್‌ಗೆ 16.35 ಕಿಲೋಮೀಟರ್ ಮೈಲೇಜ್ ನೀಡಲಿದೆ. BS 6 ಎಮಿಶನ್ ಎಂಜಿನ್ ಹೊಂದಿದ್ದು, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ವೆಲ್‌ಫೈರ್ 5 ಡೋರ್ ಕಾರಾಗಿದೆ. 7 ಮಂದಿ ಆರಾಮವಾಗಿ ಪ್ರಯಾಣಿಸಲು ಸಾಧ್ಯವಿದೆ.
ನೂತನ ಕಾರು ಸರ್ಕಾರದ ಕಾರಲ್ಲ. ಈ ಕಾರನ್ನು ಸಿದ್ದರಾಮಯ್ಯ ಖರೀದಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅದೇನೇ ಆದರೂ ಸಿದ್ದರಾಮಯ್ಯ ಹೊಸ ಕಾರು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. 2ನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸರ್ಕಾರಿ ಕಾರು ಲಭ್ಯವಾಗಲಿದೆ. ಆದರೆ ಸಿದ್ದು ತಮ್ಮ ದೂರ ಪ್ರಯಾಣದ ಅನುಕೂಲತೆ, ಆರೋಗ್ಯ ದೃಷ್ಟಿಯಿಂದ ಟೋಯೋಟಾ ವೆಲ್‌ಫೈರ್ ಕಾರು ಬಳಸುವ ಸಾಧ್ಯತೆ ಹೆಚ್ಚಿದೆ.