ರೆನಾಲ್ಟ್ ಕಂಪನಿಯು ಅಕ್ಟೋಬರ್ 17ರಂದು ಹೊಸ ಡಸ್ಟರ್ 'ಸ್ಟ್ರಾಂಗ್ ಹೈಬ್ರಿಡ್' ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಡೀಸೆಲ್ ಎಂಜಿನ್ ಕೈಬಿಟ್ಟು, 1.8 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳ ಸಂಯೋಜನೆಯೊಂದಿಗೆ ಪ್ರತಿ ಲೀಟರ್‌ಗೆ 26 ಕಿ.ಮೀ ಮೈಲೇಜ್ ನೀಡುವ ಗುರಿಯನ್ನು ಹೊಂದಿದೆ. ಈ ಕಾರು ಮಾರುತಿ ಗ್ರಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ನಂತಹ ಹೈಬ್ರಿಡ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ರೆನಾಲ್ಟ್ ಕಂಪನಿಯು ಭಾರತದ ವಾಹನ ಮಾರುಕಟ್ಟೆಗೆ ಹೊಸ ಹೈಬ್ರಿಡ್ ಎಸ್‌ಯುವಿ ತರುತ್ತಿದೆ. ಗ್ರಾಹಕರು ಬಹಳ ದಿನಗಳಿಂದ ಕಾಯುತ್ತಿದ್ದ ಹೊಸ ಡಸ್ಟರ್‌ನ 'ಸ್ಟ್ರಾಂಗ್ ಹೈಬ್ರಿಡ್' ಆವೃತ್ತಿಯನ್ನು ಕಂಪನಿಯು ಅಕ್ಟೋಬರ್ 17ರಂದು ಬಿಡುಗಡೆ ಮಾಡುತ್ತಿದೆ. ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳೆರಡೂ ಸೇರಿ ಕೆಲಸ ಮಾಡುವುದರಿಂದ ಈ ಕಾರು ಅತ್ಯುತ್ತಮ ಮೈಲೇಜ್ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ವರದಿಗಳ ಪ್ರಕಾರ, ಈ ಕಾರು ಪ್ರತಿ ಲೀಟರ್‌ಗೆ ಬರೋಬ್ಬರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆಯಂತೆ.

ಮಾತು ಉಳಿಸಿಕೊಂಡ ರೆನಾಲ್ಟ್ ಕಂಪನಿ

ರೆನಾಲ್ಟ್ ಕಂಪನಿಯು ಹಬ್ಬದ ಸೀಸನ್‌ನಲ್ಲಿ ಹೊಸ ಹೈಬ್ರಿಡ್ ಕಾರು ತರುವುದಾಗಿ ಈ ಹಿಂದೆಯೇ ಭರವಸೆ ನೀಡಿತ್ತು. ಈಗ ಆ ಮಾತನ್ನು ಉಳಿಸಿಕೊಂಡಿದೆ. 'ಇ-ಟೆಕ್ ಸ್ಟ್ರಾಂಗ್ ಹೈಬ್ರಿಡ್' ತಂತ್ರಜ್ಞಾನವನ್ನು ಭಾರತದ ಡಸ್ಟರ್ ಕಾರುಗಳಿಗೆ ಅಳವಡಿಸುತ್ತಿರುವುದನ್ನು ಕಂಪನಿ ಖಚಿತಪಡಿಸಿದೆ. ಅಕ್ಟೋಬರ್ 17ರಂದು ಇದರ ಅಧಿಕೃತ ಲಾಂಚ್ ನಡೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ 1.0 ಲೀಟರ್ ಮತ್ತು 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳ ಜೊತೆಗೆ ಈ ಹೊಸ ಹೈಬ್ರಿಡ್ ಆವೃತ್ತಿಯೂ ಸೇರ್ಪಡೆಯಾಗಲಿದೆ.

ರೆನಾಲ್ಟ್ ಕಂಪನಿಯು ಹೊಸ ಡಸ್ಟರ್ ಸ್ಟ್ರಾಂಗ್ ಹೈಬ್ರಿಡ್ ಕಾರಿನಲ್ಲಿ 1789 ಸಿಸಿ ಸಾಮರ್ಥ್ಯದ, 4-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ 1.8 ಲೀಟರ್ ಪೆಟ್ರೋಲ್ ಎಂಜಿನ್ ಬಳಸಿದೆ. ಇದರ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಹಾಗೂ ಮಲ್ಟಿ-ಮೋಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಇರಲಿದೆ. ಒಟ್ಟಾರೆಯಾಗಿ ಈ ಕಾರು 160 hp ಪವರ್ ಮತ್ತು 172 Nm ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು ಹೈಬ್ರಿಡ್ ಸಿಸ್ಟಮ್‌ಗೆ ಶಕ್ತಿ ತುಂಬಲು 1.4 kWh ಬ್ಯಾಟರಿ ಪ್ಯಾಕ್ ನೀಡಿದೆ. ಭಾರತದ ಮಾರುಕಟ್ಟೆಗಾಗಿಯೇ 1.8 ಲೀಟರ್ ಎಂಜಿನ್ ಮತ್ತು ಬ್ಯಾಟರಿ ಸಿಸ್ಟಮ್ ಒಳಗೊಂಡ 'ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್ 160' ತಂತ್ರಜ್ಞಾನವನ್ನು ಬಳಸುವುದಾಗಿ ರೆನಾಲ್ಟ್ ಮೊದಲೇ ತಿಳಿಸಿತ್ತು.

ಸಿಟಿ ಟ್ರಾಫಿಕ್‌ಗೆ ಹೇಳಿ ಮಾಡಿಸಿದ ಕಾರು

ಸಿಟಿ ಟ್ರಾಫಿಕ್‌ನಲ್ಲಿ (ಬೆಂಗಳೂರಿನ ಟ್ರಾಫಿಕ್‌ನಂತೆ) ಓಡಿಸುವಾಗ ಶೇಕಡಾ 80ರಷ್ಟು ಪ್ರಯಾಣವನ್ನು ಕೇವಲ ಎಲೆಕ್ಟ್ರಿಕ್ ಮೋಡ್‌ನಲ್ಲೇ ಮಾಡಬಹುದು ಎಂದು ರೆನಾಲ್ಟ್ ಹೇಳಿಕೊಂಡಿದೆ. ಆದರೆ ರಸ್ತೆಯ ದಟ್ಟಣೆ, ಬ್ಯಾಟರಿ ಚಾರ್ಜ್ ಮತ್ತು ಡ್ರೈವಿಂಗ್ ಶೈಲಿಗೆ ತಕ್ಕಂತೆ ಮೈಲೇಜ್ ಬದಲಾಗಬಹುದು. ಈ ಹೈಬ್ರಿಡ್ ಕಾರನ್ನು ಹೊರಗಿನಿಂದ ಪ್ಲಗ್ ಹಾಕಿ ಚಾರ್ಜ್ ಮಾಡುವ ಅಗತ್ಯವಿಲ್ಲ. ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳು ಸಂದರ್ಭಕ್ಕೆ ತಕ್ಕಂತೆ ತಾವಾಗಿಯೇ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತವೆ. ಬ್ರೇಕ್ ಹಾಕಿದಾಗ ಉತ್ಪತ್ತಿಯಾಗುವ ಶಕ್ತಿಯನ್ನು (ರೀಜನರೇಟಿವ್ ಬ್ರೇಕಿಂಗ್) ಬಳಸಿ ಬ್ಯಾಟರಿ ತಾನಾಗಿಯೇ ಚಾರ್ಜ್ ಆಗುತ್ತದೆ. ಕಾರು ಲಾಂಚ್ ಆದಾಗ ಅಧಿಕೃತ ಮೈಲೇಜ್ ವಿವರವನ್ನು ಕಂಪನಿ ಬಿಡುಗಡೆ ಮಾಡಲಿದೆ.

ಹೊಸ ಡಸ್ಟರ್‌ನಲ್ಲಿ ಇನ್ನು ಮುಂದೆ ಡೀಸೆಲ್ ಎಂಜಿನ್ ಆಯ್ಕೆ ಇರುವುದಿಲ್ಲ. ಹಳೆಯ ಡಸ್ಟರ್ ಕಾರುಗಳು ಡೀಸೆಲ್ ಎಂಜಿನ್‌ನಿಂದಲೇ ಭಾರಿ ಜನಪ್ರಿಯತೆ ಗಳಿಸಿದ್ದವು. ಹೀಗಿರುವಾಗ ರೆನಾಲ್ಟ್‌ನ ಈ ಹೊಸ ಹೈಬ್ರಿಡ್ ನಡೆ ಕುತೂಹಲ ಮೂಡಿಸಿದೆ. "ಪ್ರಿಯ ಡೀಸೆಲ್, ಇಷ್ಟು ದಿನದ ಪಯಣಕ್ಕೆ ಧನ್ಯವಾದ. ಇನ್ಮುಂದೆ ನಾವು ಈ ಪಯಣವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುತ್ತೇವೆ" ಎಂಬ ಸಂದೇಶದೊಂದಿಗೆ ರೆನಾಲ್ಟ್ ಹೊಸ ಟೀಸರ್ ಬಿಡುಗಡೆ ಮಾಡಿದೆ. ಡೀಸೆಲ್ ಎಂಜಿನ್ ಕೈಬಿಟ್ಟು, ಹೆಚ್ಚು ಮೈಲೇಜ್ ಕೊಡುವ ಹೈಬ್ರಿಡ್ ತಂತ್ರಜ್ಞಾನದತ್ತ ಕಂಪನಿ ಮುಖ ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಹೊಸ ಡಸ್ಟರ್ ಹೈಬ್ರಿಡ್ ಕಾರು ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಮಾರುತಿ ಸುಜುಕಿ ವಿಕ್ಟೋರಿಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನಂತಹ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಿಗೆ ನೇರ ಪೈಪೋಟಿ ನೀಡಲಿದೆ. ಸದ್ಯ ಹೈರೈಡರ್ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಗಳ ಎಕ್ಸ್-ಶೋರೂಮ್ ಬೆಲೆ ಅಂದಾಜು 16.5 ಲಕ್ಷ ರೂ. ನಿಂದ 20 ಲಕ್ಷ ರೂ. ವರೆಗೆ ಇದೆ. ಡಸ್ಟರ್ ಹೈಬ್ರಿಡ್ ಬೆಲೆಯನ್ನು ರೆನಾಲ್ಟ್ ಇನ್ನೂ ಪ್ರಕಟಿಸಿಲ್ಲ. ಪ್ರಸ್ತುತ ಡಸ್ಟರ್ ಕಾರಿನ ಎಕ್ಸ್-ಶೋರೂಮ್ ಬೆಲೆ 10.49 ಲಕ್ಷ ರೂ. ನಿಂದ 18.69 ಲಕ್ಷ ರೂ. ವರೆಗೆ ಇದೆ. ಟರ್ಬೊ ಪೆಟ್ರೋಲ್ ಆವೃತ್ತಿಗಳಿಗೆ ಹೋಲಿಸಿದರೆ, ಹೊಸ ಹೈಬ್ರಿಡ್ ಕಾರಿನ ಪರ್ಫಾರ್ಮೆನ್ಸ್, ಮೈಲೇಜ್ ಮತ್ತು ಬೆಲೆ ಗ್ರಾಹಕರನ್ನು ಎಷ್ಟರಮಟ್ಟಿಗೆ ಸೆಳೆಯಲಿದೆ ಕಾದು ನೋಡಬೇಕಿದೆ.