Maruti 800 Car : ಮೊದಲ ಸ್ನೇಹಿತ, ಮೊದಲ ಮನೆ, ಮೊದಲ ಕೆಲಸ ಹಾಗೇ ಮೊದಲ ವಾಹನವನ್ನು ಮರೆಯೋದು ಕಷ್ಟ. ಅದು ಸೈಕಲ್ ಆಗಿರಲಿ ಇಲ್ಲ ಬೈಕ್, ಕಾರ್ ಆಗಿರಲಿ. ಅದ್ರ ಮೇಲೆ ವಿಶೇಷ ಮೋಹವಿರುತ್ತೆ. ಇಲ್ಲೊಬ್ಬ ಬೆಂಗಳೂರಿನ ಉದ್ಯಮಿ, ತಾವು ಹಿಂದೆ ಮಾರಾಟ ಮಾಡಿದ್ದ ಹಳೆ ಕಾರನ್ನು ಈಗ ಮತ್ತೆ ಖರೀದಿ ಮಾಡಿದ್ದಾರೆ.

ಭಾರತದ ಲಕ್ಷಾಂತರ ಜನರು ಮಾರುತಿ 800 ಕಾರಿನ ಜೊತೆ ವಿಶೇಷ ನಂಟನ್ನು ಹೊಂದಿದ್ದಾರೆ. ಅವರಿಗೆ ಅದು ಕೇವಲ ಒಂದು ಕಾರಾಗಿರಲಿಲ್ಲ. ಅವರ ಕನಸು. ಭಾರತದ ಮಧ್ಯಮ ವರ್ಗದ ಜನರು ಮೊದಲ ಕಾರನ್ನು ಕೇವಲ ವಾಹನವಾಗಿ ನೋಡೋದಿಲ್ಲ. ಅದನ್ನು ತಮ್ಮ ಗುರುತಾಗಿ ನೋಡ್ತಾರೆ. ಮಾರುತಿ 800 ಕಾರೆಂಬ ಕನಸಿನ ಜೊತೆ ಅವರು ಭಾವನಾತ್ಮಕ ಸಂಬಂಧ ಹೊಂದಿರ್ತಾರೆ. ಇದಕ್ಕೆ ಈಗ ಮತ್ತೊಬ್ಬರು ಉದಾಹರಣೆಯಾಗಿ ಸಿಕ್ಕಿದ್ದಾರೆ. ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಡಾ. ಸಿ.ಜೆ. ರಾಯ್, 31 ವರ್ಷಗಳ ನಂತ್ರ ಮತ್ತೆ ತಮ್ಮ ಹಳೆ ಮಾರುತಿ 800 ಕಾರನ್ನು ಮರು ಖರೀದಿಸಿದ್ದಾರೆ.

ಮೊದಲ ಸಂಪಾದನೆಯಲ್ಲಿ ಮಾರುತಿ 800 ಖರೀದಿಸಿದ್ದ ರಾಯ್

ಡಾ. ರಾಯ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅಂದ್ರೆ 1994 ರಲ್ಲಿ ಮಾರುತಿ 800 ಕಾರನ್ನು ಖರೀದಿಸಿದ್ದರು. ಇದು ಅವರ ಜೀವನದಲ್ಲಿ ಬರೀ ಕಾರಾಗಿರಲಿಲ್ಲ. ಅದೊಂದು ಮೈಲಿಗಲ್ಲಾಗಿತ್ತು. ಈ ಕಾರ್ ಜೊತೆ ಅವರ ಆಳವಾದ ನಂಟು ಹೊಂದಿದ್ದರು. ಈಗ್ಲೂ ಕಾರಿನೊಂದಿಗೆ ತೆಗೆದ ಫೋಟೋ ಅವರ ಕಚೇರಿಯಲ್ಲಿದೆ. ಅವರ ಬ್ಯುಸಿನೆಸ್ ಬೆಳೆದಂತೆ ಅವರು ಮಾರುತಿ 800 ಕಾರನ್ನು ಮಾರಾಟ ಮಾಡಿದ್ದರು. ಆದ್ರೆ ಮಾರಾಟ ಮಾಡಲು ಅವರಿಗೆ ಸಂಪೂರ್ಣ ಮನಸ್ಸಿರಲಿಲ್ಲ. ಈಗ ಅದೇ ಕಾರನ್ನು ವಾಪಸ್ ಖರೀದಿ ಮಾಡಿದ್ದಾರೆ.

ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ

ಮಾರುತಿ 800 ಜೊತೆ ನಂಟು 

ವರ್ಷಗಳು ಕಳೆದಂತೆ ರಾಯ್ ಅನೇಕ ಕಾರುಗಳನ್ನು ಬದಲಿಸಿದ್ದಾರೆ. ಮರ್ಸಿಡಿಸ್, ಬೆಂಟ್ಲಿ ಮತ್ತು ರೋಲ್ಸ್ ರಾಯ್ಸ್ನಂತಹ ಕಾರುಗಳು ಅವರ ಗ್ಯಾರೇಜ್ಗೆ ಬಂದಿವೆ. ಆದ್ರೆ ಮಾರುತಿ 800 ಪಡೆದಿದ್ದ ಜಾಗವನ್ನು ಯಾವುದೇ ಕಾರು ಪಡೆಯಲಿಲ್ಲ. ಮಾರುತಿ 800 ಕಾರು ಅವರ ಹೋರಾಟ ಮತ್ತು ಉದಯೋನ್ಮುಖ ವೃತ್ತಿಜೀವನಕ್ಕೆ ಸಾಕ್ಷಿಯಾಗಿತ್ತು. ಅದೇ ಕಾರನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ರಾಯ್ ಬಂದಿದ್ದರು. ಹುಡುಕಾಟ ಪ್ರಾರಂಭವಾಯಿತು. ಕಾರ್ ಸಂಖ್ಯೆ, ಹಳೆ ದಾಖಲೆ ಮೂಲಕ ಅವರು ಕಾರನ್ನು ಪತ್ತೆ ಮಾಡಿದ್ರು. ಅನೇಕ ಹುಡುಕಾಟದ ನಂತ್ರ ರಾಯ್ ತಮ್ಮ ಕಾರನ್ನು ವಾಪಸ್ ಪಡೆದಿದ್ದಾರೆ.

10 ಲಕ್ಷಕ್ಕೆ ಕನಸಿನ ಕಾರ್ ಖರೀದಿ

ವ್ಯಕ್ತಿಯೊಬ್ಬರು ಈ ಕಾರನ್ನು ಜೋಪಾನ ಮಾಡಿದ್ದರು. ಆದ್ರೆ ಕಾರು ಹಳೆಯದಾಗಿದೆ ಎಂದು ರಾಯ್ ಗೆ ತಿಳಿಸಿದ್ದರು. ಎಷ್ಟೇ ಹಳೆಯದಾದ್ರೂ ಅದನ್ನು ಮರುಪಡೆಯುವ ಬಯಕೆಯಲ್ಲಿ ರಾಯ್ ಅದಕ್ಕೆ 10 ಲಕ್ಷ ರೂಪಾಯಿ ನೀಡಿದ್ದಾರೆ. ರಾಯ್ ಅದನ್ನು 1.10 ಲಕ್ಷಕ್ಕೆ ಹಿಂದೆ ಖರೀದಿಸಿದ್ದರು. ಇದು ರೋಲ್ಸ್ ರಾಯ್ಸ್ಗಿಂತ ಹೆಚ್ಚು ಅಮೂಲ್ಯವಾಗಿದೆ. ಇದು ನಾನು ಪ್ರಾರಂಭಿಸಿದ ನನ್ನ ಪ್ರಯಾಣದ ಸಂಕೇತ ಎಂದು ರಾಯ್ ಹೇಳಿದ್ದಾರೆ.

ಭಾರತದಲ್ಲಿ ಈ ವರ್ಷ ಗರಿಷ್ಠ ಮಾರಾಟವಾದ ಕಾರ್‌ಗಳ ಲಿಸ್ಟ್‌, ಮಾರುತಿಗೆ ಸಾಟಿಯೇ ಇಲ್ಲ!

ಮಾರುತಿ 800 

ಭಾರತದಲ್ಲಿ ಕಾರಿನ ಸಂಸ್ಕೃತಿಯನ್ನು ಬದಲಿಸಿದ್ದು ಮಾರುತಿ 800. ಈ ಕಾರು 1980 ರಿಂದ 2000 ರವರೆಗೆ ಭಾರತೀಯ ಮಧ್ಯಮ ವರ್ಗದ ಕುಟುಂಬಗಳ ಮೊದಲ ಆಯ್ಕೆಯಾಗಿತ್ತು. ಮೊದಲ ಕೆಲಸ, ವ್ಯವಹಾರದಿಂದ ಗಳಿಸಿದ ಹಣದಿಂದ ಮಾರುತಿ 800 ಕಾರನ್ನು ಜನರು ಖರೀದಿಸುತ್ತಿದ್ದರು. ಈ ಕಾರಿನ ಸ್ಟೀರಿಂಗ್ ಮೊದಲು ಹಿಡಿದಾಗ ರೋಮಾಂಚಗೊಳ್ತಿದ್ದರು. ಕುಟುಂಬದ ಜೊತೆ ಮಾರುತಿ 800 ನಲ್ಲಿ ಪ್ರವಾಸ ಮರೆಯಲಾಗದ ಪ್ರಯಾಣಚವೆನ್ನಿಸ್ತಿತ್ತು. ಕುಟುಂಬದ ಒಬ್ಬ ಸದಸ್ಯನಂತೆ ಇದನ್ನು ಅವರು ನೋಡ್ತಿದ್ದರು. ರಾಯ್ ಕೂಡ 800 ಕಾರಿನ ಜೊತೆ ವಿಶೇಷ ಬಂಧ ಹೊಂದಿದ್ದಾರೆ. ಜೀವನದಲ್ಲಿ ಅತ್ಯಂತ ಅಮೂಲ್ಯವಾದ ವಸ್ತುಗಳು ಚಿಕ್ಕದಾಗಿ ಕಾಣುತ್ತವೆ ಆದರೆ ಹೃದಯಕ್ಕೆ ಬಹಳ ಹತ್ತಿರವಾಗಿರುತ್ತವೆ ಅಂತ ರಾಯ್ ಹೇಳ್ತಾರೆ.