ಸದ್ಯ ಕುಟುಂಬಸ್ಥರು ದೂರ ಪ್ರಯಾಣ ಮಾಡುವಾಗ ನಾಯಿಯನ್ನು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಾರೆ. ಆದರೆ ಸಾಕು ಪ್ರಾಣಿಗಳಿಗೆ ಕಾರಿನಲ್ಲಿ ಪ್ರತ್ಯೇಕ ಸ್ಥಳವಿಲ್ಲ. ಇದೀಗ ಸಾಕು ಪ್ರಾಣಿಗಳನ್ನು ಕಾರಿನಲ್ಲಿ ವಿಶೇಷ ಜಾಗದಲ್ಲಿ ಅರಾಮವಾಗಿ ಕರೆದೊಯ್ಯಲು ಕಾರು ಬಿಡುಗಡೆಯಾಗುತ್ತಿದೆ.
ನಾಯಿ, ಬೆಕ್ಕುಗಳನ್ನು ಬಹುತೇಕರು ಹೆಚ್ಚಾಗಿ ಪ್ರೀತಿಸುತ್ತಾರೆ, ಅತೀವ ಆರೈಕೆ ಮಾಡುತ್ತಾರೆ. ಹಲವರು ಮಕ್ಕಳಿಗಿಂತ ಸಾಕು ಪ್ರಾಣಿಗಳೇ ಸಾಕು ಎಂದು ಜೀವನ ಸಾಗಿಸುವವರೂ ಇದ್ದಾರೆ. ಪ್ರವಾಸ ಸಂದರ್ಭ, ತುರ್ತು ಸಂದರ್ಭಗಳಲ್ಲಿ ಪ್ರಯಾಣ ಮಾಡುವಾಗ ಸಾಕು ಪ್ರಾಣಿಗಳನ್ನು ಮನೆಯಲ್ಲೇ ಬಿಟ್ಟು ಹೋಗಲು ಆಗದೆ ತಮ್ಮ ಕಾರಿನಲ್ಲೇ ಕರೆದೊಯ್ಯುತ್ತಾರೆ. ತಮ್ಮ ಕಾರುಗಳಲ್ಲಿ ಹಿಂಬದಿ ಆಸನದಲ್ಲಿ ನಾಯಿ ಅಥವಾ ಬೆಕ್ಕನ್ನು ಇಟ್ಟು ಪ್ರಯಾಣ ಮಾಡುತ್ತಾರೆ. ಈ ಸಾಕು ಪ್ರಾಣಿಗಳನ್ನು ಕಾರಿನಲ್ಲಿ ಕರೆದೊಯ್ಯಲು ಪ್ರತ್ಯೇಕ ಸೀಟಿನ ವ್ಯವಸ್ಥೆಯಾಗಲಿ, ಜಾಗವಾಗಲಿ ಇಲ್ಲ. ಇದೀಗ ಪ್ರಾಣಿ ಪ್ರಿಯರಿಗಾಗಿ ಹೊಸ ಕಾರು ಬಿಡುಗಡೆಯಾಗುತ್ತಿದೆ. ಈ ಕಾರಿನಲ್ಲಿ ಸಾಕು ಪ್ರಾಣಿಗಳಿಗೆ ವಿಶೇಷ ಆಸನದ ವ್ಯವಸ್ಥೆ ಇದೆ. ಪ್ರತ್ಯೇಕ ಜಾಗವಿದೆ. ಇದರಿಂದ ಸಾಕು ಪ್ರಾಣಿಗಳು ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ.
ವಿಶ್ವದ ಪ್ರಸಿದ್ಧ ಆಟೋಮೊಬೈಲ್ ಬ್ರ್ಯಾಂಡ್ ಪೆಜೊ(Peugeot) ನಾಯಿ ಪ್ರಿಯರಿಗಾಗಿ ಪೆಜೋ ಇ-5008 ಡಾಗ್ ಎಡಿಷನ್' (Peugeot E-5008 Dog Edition) ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಿದೆ. ಇದು ಸಾಕು ನಾಯಿಗಳನ್ನು ಕುಟುಂಬದ ಜೊತೆಗೆ ಪ್ರಯಾಣ ಮಾಡಲು ಅನುಕೂಲವಾಗುವಂತೆ ವಿನ್ಯಾಸಗೊಳಿಸುವ ಕಾರು. ಸಾಮಾನ್ಯ ಕಾರುಗಳಲ್ಲಿ ನಾಯಿ ಜೊತೆ ಪ್ರಯಾಣ ಮಾಡುವ ಎದುರಾಗುವ ಸವಾಲುಗಳು, ಅಡಚಡೆಗಳನ್ನು ಮುಖ್ಯವಾಗಿಟ್ಟುಕೊಂಡು ಪರಿಹಾರ ರೂಪವಾಗಿ ಈ ಕಾರು ವಿನ್ಯಾಸ ಮಾಡಲಾಗಿದೆ. ಈ ಕಾರಿನಲ್ಲಿ ಸಾಕು ಪ್ರಾಣಿಗಳಿಗೆ ಹಲವು ಸೌಲಭ್ಯಗಳನ್ನು ಈ ಕಾರು ನೀಡುತ್ತದೆ.
ನಾಯಿಗಳ ಇಷ್ಟದ ಕಲರ್
ಈ ಕಾರಿನಲ್ಲಿ ನಾಯಿಗೆ ಪ್ರತ್ಯೇಕ ಕ್ಯಾಬಿನ್ ನೀಡಲಾಗಿದೆ.ಈ ಕ್ಯಾಬಿನ್ ನಾಯಿಯ ಇಷ್ಟದಂತೆ ಇದೆ. ನಾಯಿಗಳು ಬಣ್ಣಗಳನ್ನು ಗ್ರಹಿಸುವ ಹಾಗೂ ನೋಡುವ ವಿಧಾನ ಮನುಷ್ಯರಿಗಿಂತ ಬೇರೆ. ಅವುಗಳಿಗೆ ಆರಾಮವಾಗುವ, ಯಾವುದೇ ಆತಂಕ ನೀಡದ ಬಣ್ಣಗಳ ಮೂಲಕ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಈ ಬಣ್ಣಗಳು ನಾಯಿಗೆ ಹೆಚ್ಚು ಸುರಕ್ಷಿತ ಅನುನಭವ ನೀಡಲಿದೆ. ಜೊತೆಗೆ ಈ ಬಣ್ಣ ನಾಯಿಗೆ ಯಾವುದೋ ಹೊಸ ಲೋಕಕ್ಕೆ ಬಂದ ಹಾಗೆ ಅನಿಸದೆ, ಪರಿಚಿತ ವಾತಾವರಣದ ಫೀಲ್ ನೀಡಲಿದೆ.ಕಾರು ಚಲಿಸುವಾಗ ಟರ್ನ್ ಮಾಡುವಾಗ ನಾಯಿ ಜಾರದಂತೆ ಕ್ಯಾಬಿನ್‌ನಲ್ಲಿ ನಾನ್ ಸ್ಲಿಪ್ ಮೆಟಿರಿಯಲ್ ಬಳಸಲಾಗಿದೆ.
ನಾಯಿಗಳ ಕೂದಲು ಹರಡದಂತೆ ವಿಧಾನ
ಈ ಕಾರಿನ ಪ್ರಮುಖ ಆಕರ್ಷಣೆಯೆಂದರೆ ಅದರ ಹಿಂಭಾಗದ ಸೀಟುಗಳು ಅಥವಾ ಲಗೇಜ್ ಜಾಗದಲ್ಲಿ ಅಳವಡಿಸಬಹುದಾದ 'ಮೋಡುಲರ್ ಮ್ಯಾಟ್ರೆಸ್' (Modular Mattress). ಇದು ಕೇವಲ ಸೀಟ್ ಪ್ರೊಟೆಕ್ಟರ್ ಆಗಿ ಮಾತ್ರವಲ್ಲದೆ, ನಾಯಿಗಳ ಮೈಮೇಲಿನ ಕೂದಲುಗಳು ಕಾರಿನ ಇತರೆಡೆ ಹರಡದಂತೆ ಸಂಗ್ರಹಿಸುವ ಹೇರ್ ಕಲೆಕ್ಟರ್ ಆಗಿಯೂ ಕೆಲಸ ಮಾಡುತ್ತದೆ. ಪ್ರಯಾಣ ಮುಗಿದ ನಂತರ ಇದನ್ನು ಸುಲಭವಾಗಿ ಹೊರಗೆ ತೆಗೆದು ನಾಯಿಯ ಬೆಡ್ ಆಗಿ ಮಾರ್ಪಡಿಸಬಹುದು. ಕಾರಿನಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ಹೊರಗೆ ಮುಖ ಹಾಕಿ ಗಾಳಿ ಸವಿಯುವುದು ನಾಯಿಗಳಿಗೆ ಅತ್ಯಂತ ಇಷ್ಟವಾದ ಹವ್ಯಾಸ. ಇದಕ್ಕಾಗಿ ಕಿಟಕಿಯ ಗಾಜಿನ ಬಳಿ ಪ್ರತ್ಯೇಕವಾದ ಸಾಫ್ಟ್ ಹಳದಿ ಬಣ್ಣದ ಕುಶನ್ ಮಾದರಿಯ 'ವಿಂಡೋ ಹೆಡ್‌ರೆಸ್ಟ್' ನೀಡಲಾಗಿದ್ದು, ನಾಯಿಗಳು ಕಿಟಕಿಯ ಹೊರಗೆ ನೋಡುವಾಗ ತಮ್ಮ ತಲೆಯನ್ನು ಅದರ ಮೇಲೆ ಆರಾಮವಾಗಿ ಇಟ್ಟುಕೊಳ್ಳಬಹುದು.
ನಾಯಿ ಮಳೆಯಲ್ಲಿ ನೆನೆದರೂ ಇದೆ ಪರಿಹಾರ
ಕಾರಿನೊಳಗೆ ಇಂಟಿಗ್ರೇಟೆಡ್ ಆಹಾರದ ಪಾತ್ರೆಗಳು, ವೇಸ್ಟ್ ಬ್ಯಾಗ್‌ಗಳು, ಕನೆಕ್ಟೆಡ್ ಹಾರ್ನೆಸ್ ಮತ್ತು ಆಟಿಕೆಗಳನ್ನು ಇಡಲು ಪ್ರತ್ಯೇಕ ಜಾಗವನ್ನು ನೀಡಲಾಗಿದೆ. ವಾಹನದ ಬ್ಯಾಟರಿಯಿಂದಲೇ ಕಾರ್ಯನಿರ್ವಹಿಸುವ (V2L Powered) ಪ್ರೆಶರ್ ಪ್ರೆಸ್ಡ್ 'ಪೆಟ್ ಡ್ರೈಯರ್' (Pet Dryer) ಅನ್ನು ಸಹ ಲಗೇಜ್ ಫ್ಲೋರ್ ಅಡಿಯಲ್ಲಿ ಜೋಡಿಸಲಾಗಿದೆ. ನಾಯಿಗಳು ಮಳೆಯಲ್ಲಿ ಅಥವಾ ನೀರಿನಲ್ಲಿ ನೆನೆದಾಗ ಇದು ಅತ್ಯಂತ ಉಪಯುಕ್ತವಾಗುತ್ತದೆ.
ನ್ಯಾವಿಗೇಷನ್ ಸಿಸ್ಟಮ್ ಕೂಡ ಭಿನ್ನವಾಗಿದ್ದು, ಪ್ರಯಾಣದ ಹಾದಿಯಲ್ಲಿ ನಾಯಿಗಳನ್ನು ವಾಕಿಂಗ್ ಕರೆದೊಯ್ಯಲು ಸೂಕ್ತವಾದ ಪಾರ್ಕ್‌ಗಳು ಮತ್ತು ಆಟದ ಮೈದಾನಗಳಿರುವ ಜಾಗದ ಹತ್ತಿರದಲ್ಲೇ ಇವಿ (EV) ಚಾರ್ಜಿಂಗ್ ಸ್ಟೇಷನ್‌ಗಳನ್ನು ಹುಡುಕಿಕೊಡುತ್ತದೆ. ಕಾರಿನಲ್ಲಿ 'ಡಾಗ್ ಗಾರ್ಡಿಯನ್ ಮೋಡ್' (Dog Guardian Mode) ಸೌಲಭ್ಯವಿದ್ದು, ಮಾಲೀಕರು ಅಲ್ಪ ಸಮಯದವರೆಗೆ ಕಾರನ್ನು ಬಿಟ್ಟು ಹೊರಗೋದಾಗ ಕಾರಿನೊಳಗಿನ ತಾಪಮಾನವನ್ನು ನಾಯಿಗಳಿಗೆ ಪೂರಕವಾಗಿ ಕಾಯ್ದುಕೊಳ್ಳುತ್ತದೆ


