ಕಾರ್ ಪೂಲಿಂಗ್ ನಿಷೇಧಿಸಿಲ್ಲ, ಆದರೆ ಕಂಡೀಷನ್ ಅನ್ವಯ; ಸಚಿವ ರಾಮಲಿಂಗಾ ರೆಡ್ಡಿ!
ಬೆಂಗಳೂರಿನಲ್ಲಿ ಕಾರ್ ಪೂಲಿಂಗ್ ನಿಷೇಧಿಸಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಕೆಲ ಷರತ್ತಗಳು ಅನ್ವಯಿಸಲಿದೆ ಎಂದಿದ್ದಾರೆ. ಅಕ್ಟೋಬರ್ 3 ರಂದು ಈ ಕುರಿತು ಮಹತ್ವದ ಸಭೆ ನಡೆಯಲಿದೆ.
ಬೆಂಗಳೂರು(ಅ.03) ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಕಾರ್ ಪೂಲಿಂಗ್ ನಿಷೇಧಿಸಲಾಗಿದೆ ಎಂಬ ವರದಿಗಳು ಭಾರಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಬೆಂಗಳೂರಿನಲ್ಲಿ ಕಾರ್ ಪೂಲಿಂಗ್ ನಿಷೇಧಿಸಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಕಾರ್ ಪೂಲಿಂಗ್ ನಿಷೇಧ ಕುರಿತು ಯಾವುದೇ ಅಧಿಕೃತ ನೋಟಿಸ್ ನೀಡಿಲ್ಲ. ಈ ಕುರಿತು ಸರ್ಕಾರದಿಂದ ಯಾವುದೇ ಆದೇಶ ನೀಡಿಲ್ಲ. ಕಾರ್ ಪೂಲಿಂಗ್ ಕುರಿತು ಅಕ್ಚೋಬರ್ 3 ರಂದು ಮಹತ್ವದ ಸಭೆ ನಡೆಸಲಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ ಪೂಲಿಂಗ್ ಆ್ಯಪ್‌ಗಳು ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗಿ ಪಡೆದುಕೊಂಡಿಲ್ಲ. ಅನುಮತಿ ಇಲ್ಲದ ಕಾರ್ ಪೂಲಿಂಗ್ ಸಂಸ್ಥೆಗಳನ್ನು ಕಾನೂನು ಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಇದೇ ವೇಳೆ ಕಾರ್ ಪೂಲಿಂಗ್‌ಗೆ ಕೆಲ ಷರತ್ತುಗಳು ಅನ್ವಯವಾಗಲಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಓಲಾ, ಉಬರ್ ಕಾರ್‌ಪೂಲಿಂಗ್ ನಿಷೇಧಿಸಿದ ಸರ್ಕಾರ!
ಬೆಂಗಳೂರಿನಲ್ಲಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು ಕಾರ್ ಪೂಲಿಂಗ್ ಉತ್ತಮ ಮಾರ್ಗವಾಗಿದೆ. ಗೆಳೆಯರು, ನೆರೆಹೊರೆಯವರು, ಆಪ್ತರು, ಸಹದ್ಯೋಗಿಗಳು ಕಾರ್ ಪೂಲಿಂಗ್ ಮಾಡಲು ಅವಕಾಶವಿದೆ. ಆದರೆ ಇದೇ ಕಾರ್ ಪೂಲಿಂಗ್‌ನ್ನು ಉದ್ಯಮವಾಗಿ ಬಳಸಲು ಅನುಮತಿ ಕಡ್ಡಾಯವಾಗಿದೆ. ಆ್ಯಪ್ ಅಭಿವೃದ್ಧಿಪಡಿಸಿ ಕಾರ್ ಪೂಲಿಂಗ್‌ನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಪದ್ಧತಿಗೆ ಅವಕಾಶವಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಹೀಗೆ ಉದ್ಯಮವಾಗಿ, ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದಾದರೆ ಸರ್ಕಾರದ ಅನುಮತಿ ಕಡ್ಡಾಯ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಅಕ್ಟೋಬರ್ 3 ರಂದು ಕಾರ್ ಪೂಲಿಂಗ್ ಕುರಿತು ಚರ್ಚಿಸಲು ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಾರ್ ಪೂಲಿಂಗ್ ಅನುಮತಿ, ಉದ್ಯಮ, ವಾಣಿಜ್ಯ ಉದ್ದೇಶಕ್ಕೆ ಬಳಕೆ, ವೈಟ್ ಬೋರ್ಡ್ ವಾಹನದಲ್ಲಿ ಕಾರ್ ಪೂಲಿಂಗ್, ಯೆಲ್ಲೋ ಬೋರ್ಡ್ ವಾಹನದಲ್ಲಿ ಕಾರ್ ಪೂಲಿಂಗ್ ವಿಚಾರ ಚರ್ಚೆಯಾಗಲಿದೆ. ಖಾಸಗಿ ಬಳಕೆ ಹೊರತು ಪಡಿಸಿ ಇನ್ನುಳಿದ ಎಲ್ಲಾ ರೀತಿಯ ವಾಣಿಜ್ಯ ಉದ್ದೇಶಕ್ಕೆ ವಾಹನ ಬಳಕೆ ಮಾಡಲು ಯೆಲ್ಲೋ ಬೋರ್ಡ್ ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಹೀಗಾಗಿ ಈ ವಿಚಾರಗಳು ಚರ್ಚೆಯಾಗಲಿದೆ. ಇದೇ ವೇಳೆ ಫುಡ್ ಡೆಲವಿರ, ಆನ್‌ಲೈನ್ ಶಾಪಿಂಗ್ ಡೆಲಿವರಿ ಸೇರಿದಂತೆ ಹಲವು ಡೆಲಿವರಿ ಬಾಯ್ ಬೈಕ್ ಕುರಿತು ಚರ್ಚೆಯಾಗಲಿದೆ.
ಸಾರಿಗೆ ಇಲಾಖೆ 13 ಸಾವಿರ ಉದ್ಯೋಗ ನೇಮಕಾತಿಗೆ ಶೀಘ್ರ ಚಾಲನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರಿಲ್ಲಿ ಮೋಟಾರು ವಾಹನ ನಿಯಮ ಹಲವು ಉದ್ಯಮಗಳು ಉಲ್ಲಂಘಿಸಿದೆ. ನಿಯಮದ ಪ್ರಕಾರ ಫುಡ್ ಡೆಲಿವರಿ, ಶಾಪಿಂಗ್ ಡೆಲವರಿಗಳನ್ನು ವೈಟ್ ಬೋರ್ಡ್ ದ್ವಿಚಕ್ರ ವಾಹನದಲ್ಲಿ ಮಾಡುವಂತಿಲ್ಲ. ಆದರೆ ನಗರದಲ್ಲಿ ಬಹುತೇಕ ವೈಟ್ ಬೋರ್ಡ್ ಬೈಕ್, ಸ್ಕೂಟರ್ ಮೂಲಕವೇ ಮಾಡಲಾಗುತ್ತಿದೆ. ಬೈಕ್ ಟ್ಯಾಕ್ಸಿಗೂ ವೈಟ್ ಬೋರ್ಡ್ ನಂಬರ್ ಪ್ಲೇಟ್ ವಾಹನ ಬಳಕೆ ಮಾಡುವಂತಿಲ್ಲ.
ನಿಯಮದ ಪ್ರಕಾರ ಗೆಳೆಯರು, ಆಪ್ತರು ವ್ಯಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡು ಕಾರ್ ಪೂಲಿಂಗ್ ಬಳಸಬಹುದು. ಇದನ್ನು ಹೊರತುಪಡಿಸಿ ಆ್ಯಪ್, ಉದ್ಯಮವಾಗಿ ಬಳಕೆ ಮಾಡುವಂತಿಲ್ಲ.