ಜಪಾನ್‌ನ ಹೋಂಡಾ ಕಂಪನಿಯು ತನ್ನ ಹೊಚ್ಚಹೊಸ 3-ಸಾಲಿನ ಎಸ್‌ಯುವಿ 'ಅವಾನ್ಸಿಯರ್' ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಕಾರು ನೂತನ ಲೋಗೋ, ಹೈಬ್ರಿಡ್ ಸಿಸ್ಟಮ್ ಮತ್ತು ಹೈಟೆಕ್ ಫೀಚರ್‌ಗಳನ್ನು ಹೊಂದಿದ್ದು, ಟೊಯೋಟಾ ಫಾರ್ಚುನರ್‌ಗೆ ಪೈಪೋಟಿ ನೀಡಲಿದೆ.

ಬೆಂಗಳೂರು (ನ.20): ಜಪಾನ್ ಮೂಲದ ವಾಹನ ತಯಾರಕ ದಿಗ್ಗಜ ಹೋಂಡಾ (Honda) ತನ್ನ ಹೊಚ್ಚಹೊಸ ಬೃಹತ್ ಎಸ್‌ಯುವಿ 'ಅವಾನ್ಸಿಯರ್' (Honda Avancier) ಮೇಲಿನ ಪರದೆಯನ್ನು ಸರಿಸಿದೆ. ಬ್ರ್ಯಾಂಡ್‌ನ ನೂತನ 'H' ಲೋಗೋ ಮತ್ತು ಇತ್ತೀಚಿನ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬರುತ್ತಿರುವ ಕಂಪನಿಯ ಮೊದಲ ಪ್ರೊಡಕ್ಷನ್-ರೆಡಿ (Production-ready) ಕಾರು ಇದಾಗಿದ್ದು, ಟೊಯೋಟಾ ಫಾರ್ಚುನರ್‌ಗೆ ನೇರ ಪೈಪೋಟಿ ನೀಡಲು ಸಜ್ಜಾಗಿದೆ.

ಹೋಂಡಾ ಅವಾನ್ಸಿಯರ್ ಮೂರು-ಸಾಲಿನ (Three-row) ಎಸ್‌ಯುವಿ ಆಗಿದ್ದು, ಆರಂಭಿಕ ಹಂತದಲ್ಲಿ ಥೈಲ್ಯಾಂಡ್, ಚೀನಾ ಮತ್ತು ಜಪಾನ್‌ನಂತಹ ಮಾರುಕಟ್ಟೆಗಳಲ್ಲಿ ಕಂಪನಿಯು ಇದನ್ನು ಮಾರಾಟ ಮಾಡಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಈ ಸ್ಪೋರ್ಟಿ ಲುಕ್‌ನ ಬೃಹತ್ ಎಸ್‌ಯುವಿಯ ಭಾರತೀಯ ಬಿಡುಗಡೆಯ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಯಾವೆಲ್ಲಾ ದಿಗ್ಗಜ ಕಾರುಗಳಿಗೆ ಹೋಂಡಾ ಅವಾನ್ಸಿಯರ್ ಪೈಪೋಟಿ ನೀಡಲಿದೆ?

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಳಿಕ ಹೋಂಡಾ ಅವಾನ್ಸಿಯರ್ ಈ ಕೆಳಗಿನ ಪ್ರಮುಖ ಎಸ್‌ಯುವಿಗಳೊಂದಿಗೆ ನೇರ ಸ್ಪರ್ಧೆ ನಡೆಸಲಿದೆ. ಟೊಯೋಟಾ ಫಾರ್ಚುನರ್‌(Toyota Fortuner), ಎಂಜಿ ಮೆಜೆಸ್ಟರ್ (MG Majestor), ಕಿಯಾ ಸೊರೆಂಟೊ (Kia Sorento), ಫೋಕ್ಸ್‌ವ್ಯಾಗನ್ ಟೈರಾನ್ (Volkswagen Tayron), ಸ್ಕೋಡಾ ಕೊಡಿಯಾಕ್ (Skoda Kodiaq)

'ಗ್ರ್ಯಾಂಡ್ ಜರ್ನಿ' ಕಾನ್ಸೆಪ್ಟ್ ಮತ್ತು ಆಕರ್ಷಕ ಎಕ್ಸ್‌ಟೀರಿಯರ್ ವಿನ್ಯಾಸ

ಅವಾನ್ಸಿಯರ್ ಕಾರನ್ನು ಕಂಪನಿಯು 'ಗ್ರ್ಯಾಂಡ್ ಜರ್ನಿ ಕಾನ್ಸೆಪ್ಟ್' (Grand Journey Concept) ಅಡಿಯಲ್ಲಿ ಬಿಡುಗಡೆ ಮಾಡಿದ್ದು, ದೂರದ ಪ್ರಯಾಣದ ಆರಾಮ (Long-distance comfort), ವಿಶಾಲವಾದ ಕ್ಯಾಬಿನ್ ಸ್ಥಳಾವಕಾಶ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಕಾರಿನ ಮುಂಭಾಗದಲ್ಲಿ ತೆಳುವಾದ ಮಲ್ಟಿ-ಫಂಕ್ಷನ್ ಲೈಟ್‌ಗಳು (Thin multi-function lights), ಬೃಹತ್ ಮತ್ತು ಬೋಲ್ಡ್ ಫ್ರಂಟ್ ಗ್ರಿಲ್ ಹಾಗೂ ಸ್ಟೈಲಿಶ್ ಏರ್ ಇನ್‌ಟೇಕ್ ನೀಡಲಾಗಿದೆ. ಇದರಲ್ಲಿ ಫ್ಲಶ್ ಡೋರ್ ಹ್ಯಾಂಡಲ್‌ಗಳು (Flush door handles), ಬ್ಲ್ಯಾಕ್ ಅಲಾಯ್ ವೀಲ್‌ಗಳು ಮತ್ತು ಇಂಟಿಗ್ರೇಟೆಡ್ ರಿಯರ್ ಸ್ಪಾಯ್ಲರ್ ಅಳವಡಿಸಲಾಗಿದೆ. ಸೈಡ್ ಪ್ರೊಫೈಲ್ ನೋಡಲು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಕಿಯಾ ಸೊರೆಂಟೊ ಕಾರನ್ನು ನೆನಪಿಸುತ್ತದೆ. ಹಿಂಭಾಗದಲ್ಲಿ ಚೌಕಾಕಾರದ-C ಆಕಾರದ (Squared-C) ಟೈಲ್ ಲೈಟ್ ಸೆಟಪ್ ನೀಡಲಾಗಿದೆ.

ಐಷಾರಾಮಿ ಇಂಟೀರಿಯರ್ ಮತ್ತು ಹೈಟೆಕ್ ಫೀಚರ್‌ಗಳ ಪಟ್ಟಿ

ದೊಡ್ಡ ಸೆಂಟ್ರಲ್ ಡಿಸ್‌ಪ್ಲೇ ಹೊಂದಿರುವ ಡ್ಯುಯಲ್-ಸ್ಕ್ರೀನ್ ಡ್ಯಾಶ್‌ಬೋರ್ಡ್. ಸೆಂಟ್ರಲ್ ಸ್ಕ್ರೀನ್‌ನಲ್ಲೇ ಹಲವು ಫೀಚರ್‌ಗಳನ್ನು ಅಳವಡಿಸಿರುವುದರಿಂದ ಭೌತಿಕ ಬಟನ್‌ಗಳ ಸಂಖ್ಯೆ ಕಡಿಮೆಯಾಗಿದೆ. ಎರಡನೇ ಸಾಲಿನಲ್ಲಿ (Second row) ದೊಡ್ಡ ಆರ್ಮ್‌ರೆಸ್ಟ್, ವೆಂಟಿಲೇಷನ್ (Ventilation) ಮತ್ತು ಹೀಟಿಂಗ್ (Heating) ಆಯ್ಕೆಗಳು ಲಭ್ಯವಿವೆ.ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟ್ಸ್, ವಾಯ್ಸ್ ಅಸಿಸ್ಟೆಂಟ್, ಆಪ್ಟಿಮೈಸ್ಡ್ ಬಾಗಿಲುಗಳು ಮತ್ತು 12 ಸ್ಪೀಕರ್‌ಗಳ ಆಡಿಯೋ ಸಿಸ್ಟಮ್ ಹೊಂದದೆ. ಹೋಂಡಾದ ಹೊಸ ಎರಡು-ಮೋಟಾರ್ ಹೈಬ್ರಿಡ್ ಸಿಸ್ಟಮ್ (Two-motor hybrid setup) ಹಾಗೂ ಇ-ಆಲ್ ವೀಲ್ ಡ್ರೈವ್ (e-All Wheel Drive) ತಂತ್ರಜ್ಞಾನ ಇದರಲ್ಲಿದೆ.

ಮಾರ್ಚ್ 2030ರ ವೇಳೆಗೆ 15 ಹೈಬ್ರಿಡ್ ಮಾದರಿಗಳ ಗುರಿ

ಹೊಸ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವ ಹೋಂಡಾದ ಮೊದಲ ಕಾರು ಅವಾನ್ಸಿಯರ್ ಆಗಿದೆ. ಕಂಪನಿಯು ಮಾರ್ಚ್ 2030ರ ವೇಳೆಗೆ ಬರೋಬ್ಬರಿ 15 ಹೈಬ್ರಿಡ್ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬೃಹತ್ ಯೋಜನೆ ರೂಪಿಸಿದೆ. ಈ ನೂತನ ಪ್ಲಾಟ್‌ಫಾರ್ಮ್ ಅನ್ನು ಹಲವು ವಾಹನಗಳಲ್ಲಿ ಬಳಸಲಾಗುತ್ತಿದ್ದು, ವಿಭಿನ್ನ ಬಾಡಿ ಸ್ಟೈಲ್‌ಗಳ ವಾಹನಗಳ ನಡುವೆ ಬಿಡಿಭಾಗಗಳ ಹಂಚಿಕೆ (Part sharing) ಕಂಡುಬರಲಿದೆ ಎಂದು ಹೋಂಡಾ ತಿಳಿಸಿದೆ.