ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರೆನ್ಸ್ 7-ಸೀಟರ್ ಎಂಪಿವಿ ಹೊಸ ಮಾರಾಟ ದಾಖಲೆ ಬರೆದಿದೆ. ತನ್ನ ಪ್ರೀಮಿಯಂ ಫೀಚರ್‌ಗಳು, ಆಕರ್ಷಕ ವಿನ್ಯಾಸ ಮತ್ತು ಇತ್ತೀಚೆಗೆ ಬಿಡುಗಡೆಯಾದ 'ಮೇಡ್ ಇನ್ ಇಂಡಿಯಾ' ಕ್ಲಾವಿಸ್ ಇವಿ ಮಾದರಿಯೊಂದಿಗೆ, ಇದು ಮಾರುತಿ ಎರ್ಟಿಗಾ ಮತ್ತು ಟೊಯೋಟಾ ಇನ್ನೋವಾಗೆ ಸ್ಪರ್ಧೆ ನೀಡುತ್ತಿದೆ.

ಬೆಂಗಳೂರು (ಜೂ.13): ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ 7 ಸೀಟರ್ ಕಾರುಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ಹೊತ್ತಿನಲ್ಲಿ ಫ್ಯಾಮಿಲಿ ಗ್ರಾಹಕರ ನೆಚ್ಚಿನ ಎಂಪಿವಿ (MPV) ಆಗಿರುವ 'ಕಿಯಾ ಕಾರೆನ್ಸ್' (Kia Carens) ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. ಸದ್ಯ ಈ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಎರ್ಟಿಗಾ ಮತ್ತು ಟೊಯೋಟಾ ಇನ್ನೋವಾದಂತಹ ದೈತ್ಯ ಕಾರುಗಳ ಸವಾಲನ್ನು ಮೀರಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಕಾರಿನ ಮಾರಾಟದ ಅಂಕಿ-ಅಂಶಗಳೇ ಅದರ ಜನಪ್ರಿಯತೆಗೆ ಸಾಕ್ಷಿಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫೆಬ್ರವರಿ 2022 ರಲ್ಲಿ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದ್ದ 'ಕಿಯಾ ಕಾರೆನ್ಸ್', ಮೇ 2026 ರ ವೇಳೆಗೆ ದೇಶೀಯ ಮಾರುಕಟ್ಟೆಯೊಂದರಲ್ಲೇ ಬರೋಬ್ಬರಿ 3,01,657 ಯುನಿಟ್‌ಗಳಷ್ಟು ದಾಖಲೆಯ ಮಾರಾಟ ಕಂಡಿದೆ. ಇದರೊಂದಿಗೆ 32 ಸಾವಿರಕ್ಕೂ ಹೆಚ್ಚು ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ಕಿಯಾ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಇದು ಮೂರನೇ ಸ್ಥಾನ ಪಡೆದುಕೊಂಡಿದೆ.

ವಿಶೇಷವೆಂದರೆ, ಈ ಕಾರಿನ ಮಾರಾಟದ ವೇಗ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಆರಂಭದಲ್ಲಿ ಮೊದಲ 1 ಲಕ್ಷ ಕಾರುಗಳು ಮಾರಾಟವಾಗಲು 16 ತಿಂಗಳಿಗಿಂತ ಹೆಚ್ಚು ಸಮಯ ತಗುಲಿತ್ತು. ಆದರೆ, ನಂತರದ 1 ಲಕ್ಷ ಯುನಿಟ್‌ಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಮಾರಾಟವಾಗಿವೆ. ಕಾರೆನ್ಸ್ ಕಾರಿನ ಈ ಜನಪ್ರಿಯತೆ ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ, ಸಣ್ಣ ನಗರಗಳು ಹಾಗೂ ಗ್ರಾಮೀಣ ಭಾಗಗಳಲ್ಲೂ ಇದಕ್ಕೆ ಭಾರಿ ಬೇಡಿಕೆ ಇದೆ. ಇದರ ಅತ್ಯಾಕರ್ಷಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ಅಡ್ವಾನ್ಸ್ಡ್ ಫೀಚರ್ಸ್ ಮತ್ತು ಮಲ್ಟಿಪಲ್ ಇಂಜಿನ್ ಆಯ್ಕೆಗಳು ಗ್ರಾಹಕರನ್ನು ಸತತವಾಗಿ ಆಕರ್ಷಿಸುತ್ತಿವೆ.

ಕ್ಲಾವಿಸ್ ಮತ್ತು ಇವಿ (EV) ಮಾಡೆಲ್‌ಗಳ ಭರ್ಜರಿ ಎಂಟ್ರಿ

ಕಿಯಾ ಕಂಪನಿಯು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿರುವ ಕಾರೆನ್ಸ್ ಕ್ಲಾವಿಸ್ (Carens Clavis) ಮತ್ತು ಕಾರೆನ್ಸ್ ಕ್ಲಾವಿಸ್ ಇವಿ (Carens Clavis EV) ಮಾಡೆಲ್‌ಗಳು ಕಿಯಾ ಬ್ರ್ಯಾಂಡ್‌ಗೆ ಮತ್ತಷ್ಟು ಮಾರುಕಟ್ಟೆ ಬಲವನ್ನು ತಂದುಕೊಟ್ಟಿವೆ. ಹಬ್ಬ ಹರಿದಿನಗಳ ಸೀಸನ್‌ನಲ್ಲಿಯೂ ಈ ಮಾಡೆಲ್‌ಗಳಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಮೇ 2025 ರಲ್ಲಿ ಕಿಯಾ ಕಂಪನಿಯು ಕಾರೆನ್ಸ್ ಕ್ಲಾವಿಸ್ ಮತ್ತು ಅದರ ಬೆನ್ನಲ್ಲೇ ಕ್ಲಾವಿಸ್ ಇವಿ ಮಾದರಿಯನ್ನು ಲಾಂಚ್ ಮಾಡಿತ್ತು. ಇವು ಕಾರೆನ್ಸ್ ಬ್ರ್ಯಾಂಡ್‌ಗೆ ಹೊಸ ಗುರುತು ತಂದುಕೊಟ್ಟಿವೆ. ಕ್ಲಾವಿಸ್ ಮಾಡೆಲ್‌ನಲ್ಲಿ ಅಪ್ಡೇಟೆಡ್ ಸ್ಟೈಲಿಂಗ್, ಹೆಚ್ಚಿನ ವೇರಿಯೆಂಟ್‌ಗಳು, 6 ಮತ್ತು 7 ಸೀಟರ್‌ಗಳ ಆಯ್ಕೆ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳ ಆಪ್ಷನ್ ನೀಡಲಾಗಿದೆ.

ಭಾರತದಲ್ಲೇ ತಯಾರಾದ ಮೊದಲ ಎಲೆಕ್ಟ್ರಿಕ್ ಎಂಪಿವಿ; ಮೈಲೇಜ್ ಎಷ್ಟು?

ಎಲ್ಲಕ್ಕಿಂತ ಮುಖ್ಯವಾಗಿ 'ಕ್ಲಾವಿಸ್ ಇವಿ' (Clavis EV) ಕಂಪನಿಯ ಮೊದಲ 'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಎಂಪಿವಿ (Electric MPV) ಕಾರ್ ಆಗಿದೆ. ಇದನ್ನು ಒಂದೇ ಬಾರಿ ಫುಲ್ ಚಾರ್ಜ್ ಮಾಡಿದರೆ ಬರೋಬ್ಬರಿ 404 ಕಿಲೋಮೀಟರ್‌ನಿಂದ 490 ಕಿಲೋಮೀಟರ್‌ವರೆಗೆ ಮೈಲೇಜ್ (ರೇಂಜ್) ನೀಡುತ್ತದೆ ಎಂದು ಕಂಪನಿ ಇತ್ತೀಚೆಗೆ ಹೇಳಿದೆ.

ಪ್ರೀಮಿಯಂ ಫೀಚರ್ಸ್ ಹಾಗೂ ಸುರಕ್ಷತೆ

ದೊಡ್ಡ ಕುಟುಂಬಗಳಿಗೆ ಆರಾಮದಾಯಕ ಮತ್ತು ಫೀಚರ್ ಲೋಡೆಡ್ ಕಾರು ಬೇಕು ಅಂದುಕೊಳ್ಳುವವರಿಗೆ ಕಿಯಾ ಕಾರೆನ್ಸ್ ಮೊದಲ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಇದರಲ್ಲಿರುವ ಪ್ರಮುಖ ಪ್ರೀಮಿಯಂ ಫೀಚರ್‌ಗಳನ್ನು ನೋಡೋದಾದರೆ, ಪ್ಯಾನೋರಮಿಕ್ ಸನ್‌ರೂಫ್ (Panoramic Sunroof), ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS ತಂತ್ರಜ್ಞಾನ), ವೆಂಟಿಲೇಟೆಡ್ ಸೀಟುಗಳು (Ventilated Seats), ಸಂಪೂರ್ಣ ಡಿಜಿಟಲ್ ಫೀಚರ್ಸ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಅಡ್ವಾನ್ಸ್ಡ್ ಸೇಫ್ಟಿ ಟೆಕ್ನಾಲಜಿ (ಸುರಕ್ಷತಾ ಏರ್‌ಬ್ಯಾಗ್‌ಗಳು) ಇದರಲ್ಲಿದೆ.

ತನ್ನ ಅತ್ಯಾಧುನಿಕ ಫೀಚರ್‌ಗಳು ಮತ್ತು ಎಲೆಕ್ಟ್ರಿಕ್ ತಂತ್ರಜ್ಞಾನದ ಬಲದೊಂದಿಗೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಕಿಯಾ ಕಾರೆನ್ಸ್, ಸದ್ಯ ಮಾರುತಿ ಎರ್ಟಿಗಾ ಮತ್ತು ಟೊಯೋಟಾ ಇನ್ನೋವಾ ಕಾರುಗಳ ಸಾಮ್ರಾಜ್ಯಕ್ಕೆ ಬಿಗ್ ಚಾಲೆಂಜ್ ಆಗಿ ಪರಿಣಮಿಸಿದೆ.