ದೊಡ್ಡ ಆಕಾರ, ಶಕ್ತಿ ಅಪಾರ ಸಿಟ್ರಾಯನ್ ಸಿ3 ಕಾರಿನ ಟೆಸ್ಟ್ ಡ್ರೈವ್!
1.2ಲೀ ಪೆಟ್ರೋಲ್ ಇಂಜಿನ್ ಹೊಂದಿರುವ ನೂತನ ಕಾರಿನ ಗುಣ, ವಿನ್ಯಾಸ ಆಕರ್ಷಕವಾಗಿದೆ. ನೂತನಸಿಟ್ರಾಯನ್ ಸಿ3 ಕಾರಿನಲ್ಲಿ ಪ್ರಯಾಣ ಹೇಗಿದೆ? ಕಾರಿನ ಪರ್ಫಾಮೆನ್ಸ್, ಮೈಲೇಜ್ ಸೇರಿದಂತೆ ಎಲ್ಲಾ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಫ್ರೆಂಚ್ ಕಾರು ತಯಾರಿಕಾ ಕಂಪನಿ ಸಿಟ್ರಾಯನ್ ಭಾರತಕ್ಕೆ ಬಂದ ತಕ್ಷಣ ಕೊಟ್ಟ ಮೊದಲ ಕಾರು ಸಿಟ್ರಾಯನ್ ಸಿ5 ಏರ್‌ಕ್ರಾಸ್. ಈಗ ಹೆಚ್ಚು ಹೆಚ್ಚು ಜನರನ್ನು ತಲುಪುವ ತವಕದಲ್ಲಿರುವ ಕಂಪನಿ ಸಿಟ್ರಾಯನ್ ಸಿ3 ಕಾರನ್ನು ದೇಶದ ಜನರಿಗೆ ಅರ್ಪಿಸಿದೆ. ಕೊಂಚ ಸಿ5 ಏರ್‌ಕ್ರಾಸ್ ವಿನ್ಯಾಸವನ್ನೇ ಹೋಲುವಂತಿದ್ದರೂ ಆಕಾರ, ಎತ್ತರ, ದೃಢಕಾಯ, ವಿನ್ಯಾಸ ಎಲ್ಲದರಲ್ಲೂ ಸಿ3 ವಿಭಿನ್ನ, ವಿಶಿಷ್ಟ, ಆಕರ್ಷಕ.
ಸಿಟ್ರಾಯನ್ ಸಿ3 ಕಾರು ಎಸ್‌ಯುವಿ ಎಂದು ಹೇಳಲ್ಪಡದ ಎಸ್‌ಯುವಿ. 3,981 ಮಿಮೀ ಉದ್ದ, 1733 ಮಿಮೀ ಅಗಲ ಮತ್ತು 1604 ಮಿಮೀ ಎತ್ತರ ಇರುವ ಸಿ3 ದೈತ್ಯ ದೇಹಿ. ಎರಡು ಬಣ್ಣಗಳಲ್ಲಿ ರಾರಾಜಿಸುವ ಸಿ೩ಯ ಹೊರಾಂಗಣ ವಿನ್ಯಾಸ ಸೊಗಸಾಗಿದೆ. ಒಳಾಂಗಣ ವಿಶಾಲವಾಗಿದ್ದು, 5 ಮಂದಿ ಆರಾಮ ಪ್ರಯಾಣ ಮಾಡಬಹುದು. ಹಿಂದಿನ ಸೀಟಿನಲ್ಲಿ ಆರಡಿ ಕಟೌಟ್‌ಗಳು ಕುಳಿತರೂ ಕಾಲು ಉಸಿರಾಡುವಂತೆ ಕೂರುವಷ್ಟು ಸಾಮರ್ಥ್ಯ ಇದೆ. ದೂರದೂರಿಗೆ ಮತ್ತು ಸ್ವಂತ ಊರಿಗೆ ಆಗಾಗ ಪ್ರಯಾಣ ಬೆಳೆಸುವವರಿಗೆ ಇದು ಎಕ್ಷ್ಟ್ರಾ ಖುಷಿ ಕೊಡುತ್ತದೆ. 315ಲೀ ಡಿಕ್ಕಿ ಜಾಗವಲ್ಲದೆ ಹಿಂದಿನ ಸೀಟನ್ನು ಮಡಚಿದರೆ ಎರಡು ಬಾಳೆಗೊನೆ, 10 ತೆಂಗಿನಕಾಯಿ ಜಾಸ್ತಿಯೇ ಇಡಬಹುದು.
ಫ್ರೆಂಚ್ ಕಾರು ಈಗ ಬೆಂಗಳೂರಿನಲ್ಲಿ; ಮಿಲ್ಲರ್ಸ್ ರಸ್ತೆಯಲ್ಲಿ ಸಿಟ್ರೊಯನ್ ಶೋ ರೂಂ ಆರಂಭ!
1.2ಲೀ ಪೆಟ್ರೋಲ್ ಇಂಜಿನ್ ಮತ್ತು 1.2 ಲೀ ಟರ್ಬೋ ಪೆಟ್ರೋಲ್ ಇಂಜಿನ್ ಎಂಬ ಎರಡು ಮಾದರಿಯಲ್ಲಿ ಈ ಕಾರು ಲಭ್ಯ. 1.2 ಲೀ ಸಾಮರ್ಥ್ಯದ ಸಾಮಾನ್ಯ ಪೆಟ್ರೋಲ್ ಇಂಜಿನ್‌ನಲ್ಲಿ 5 ಗೇರ್ ಇದೆ. ಈ ಮಾದರಿಯಲ್ಲಿ 5 ಹಂತದ ಕಾರುಗಳು ಸಿಗುತ್ತವೆ. ಮೊದಲೆರಡು ಹಂತದ ಸಿ3 2ಪಿ ಲೈವ್ ವೇರಿಯಂಟ್‌ಗಳು ಪ್ರಾರಂಭಿಕ ಹಂತದವು. ಇನ್ನುಳಿದ ಮೂರು ಸಿ3 2ಪಿ ಫೀಲ್ ಎಂಬ ಹೆಸರಿನ ವೇರಿಯಂಟ್‌ಗಳು ಸ್ವಲ್ಪ ಅಡ್ವಾನ್ಸ್ ಡ್ ವೇರಿಯಂಟ್‌ಗಳು. ಟರ್ಬೋ ಪೆಟ್ರೋಲ್ ಇಂಜಿನ್‌ನಲ್ಲಿ ಒಂದು ಮಾದರಿ ಮಾತ್ರ ಇದ್ದು, ಈ ಕಾರಲ್ಲಿ 6 ಗೇರ್ ಇದೆ. ಇದರ ಪವರ್ ಕೂಡ ಜಾಸ್ತಿ.
ಹೊರಾಂಗಣ ವಿನ್ಯಾಸ ನೋಡುವುದಾದರೆ, ಕಾರಿನ ಕೆಳಭಾಗದಲ್ಲಿ ಸುತ್ತಲೂ ಕಪ್ಪು ಬಣ್ಣದ ಫೈಬರ್ ಬಳಸಲಾಗಿದೆ. ಕಲ್ಲು ಮಣ್ಣು ರಸ್ತೆಯಲ್ಲಿ ಸುತ್ತಾಡುವವರಿಗೆ ಈ ವಿನ್ಯಾಸದಿಂದ ಬಹು ಉಪಕಾರ ಆಗಲಿದೆ. ಪದೇ ಪದೇ ಸ್ಕ್ರಾಚ್ ಆಗುವುದು ತಪ್ಪುತ್ತದೆ. ಒಳಾಂಗಣದಲ್ಲಿ ಮನರಂಜನೆಗೆ 10 ಇಂಚಿನ ಇನ್ ಫೋಟೇನ್‌ಮೆಂಟ್ ಉಪಕರಣ ಇದೆ. ಬ್ಲೂಟೂಥ್ ಸುಲಭವಾಗಿ ಕನೆಕ್ಟ್ ಆಗುತ್ತದೆ ಎನ್ನುವುದು ಇದರ ಪ್ಲಸ್ಸು. ಕ್ಯಾಮೆರಾ ಇಲ್ಲ ಅನ್ನುವುದು ಮೈನಸ್ಸು. ಹಿಂದಿನ ಸೀಟಿನ ಗ್ಲಾಸು ಇಳಿಸುವ ಅಧಿಕಾರವನ್ನು ಡ್ರೈವರ್‌ರಿಂದ ಕಸಿದುಕೊಂಡು ಹಿಂದಿನ ಸೀಟಲ್ಲಿ ಕುಳಿತವರಿಗೆ ಸುಲಭವಾಗಿ ಎಟುಕುವಂತೆ ಮುಂದಿನ ಸೀಟಿನ ಮಧ್ಯಭಾಗದಲ್ಲಿ ಇಡಲಾಗಿದೆ. ಈ ಅನುಕೂಲದಿಂದ ಡ್ರೈವರ್‌ಗೆ ಕಿರಿಕಿರಿ ಜಾಸ್ತಿ.
ಫ್ರಾನ್ಸ್ ಮೂಲದ ಸಿಟ್ರೊಯೆನ್ SUV ಕಾರು ಭಾರತದಲ್ಲಿ ಬಿಡುಗಡೆ!
ದೊಡ್ಡದಾದ, ವಿಶಾಲವಾದ, ಚಂದದ ಎಸ್‌ಯುವಿ ಮಾದರಿಯ ಈ ಕಾರಿನ ಆರಂಭಿಕ ಬೆಲೆ (ಎಕ್ಸ್ ಶೋರೂಮ್) ರು. 5,70,500 ಲಕ್ಷ. ಆನ್‌ರೋಡ್ ಬರುವಾಗ ಎಷ್ಟಾಗುತ್ತದೆ ಎಂಬುದು ಅಂದಾಜು ಲೆಕ್ಕ ಹಾಕಿದರೂ ಸಿಟ್ರಿಯಾನ್ ಮಾಸ್‌ಗೆ ತಲುಪಲು ಯತ್ನಿಸುತ್ತಿರುವುದು ಹೊಳೆಯುತ್ತದೆ. ಅಲ್ಲದೇ ಅಟೋಮ್ಯಾಟಿಕ್ ವರ್ಷನ್ ಕೂಡ ಸಿಟ್ರಿಯಾನ್ ಬಿಟ್ಟಿಲ್ಲ. ಸಾಂಪ್ರದಾಯಿಕ ಡ್ರೈವಿಂಗ್ ಮೆಚ್ಚುವ ಮಂದಿಯ ಒಲವನ್ನು ಸಂಪಾದಿಸುವುದೇ ಸಿಟ್ರಿಯಾನ್ ಸಿ3 ಧ್ಯೇಯ ಇದ್ದಂತಿದೆ. ಡ್ರೈವಿಂಗ್, ಆರಾಮ, ಜಾಗ ಎಲ್ಲವನ್ನೂ ಗಮನಿಸಿದರೆ ಆ ಉದ್ದೇಶದಲ್ಲಿ ಸಿಟ್ರಿಯಾನ್ ಸಿ3 ಸಫಲವಾಗಿದೆ.